ಈ ಬಾರಿ 15 ಚಿನ್ನ ಸೇರಿದಂತೆ ಒಟ್ಟು 69 ಪದಕಗಳನ್ನು ಭಾರತದ ಕ್ರೀಡಾಪಟುಗಳು ಕೊರಳಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ನವದೆಹಲಿ[ಸೆ.02]: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಹಿಂದೆಂದಿಗಿಂತಲೂ ಅಧಿಕ ಪದಕಗಳನ್ನು ಈ ಬಾರಿ ಕೂಟದಲ್ಲಿ ಬಾಚಿಕೊಂಡಿದ್ದಾರೆ. ಅಲ್ಲದೇ ಸ್ವರ್ಣ ಪದಕ ಗಳಿಕೆಯಲ್ಲೂ ತನ್ನದೇ ದಾಖಲೆಯನ್ನು ಭಾರತ ಸರಿಗಟ್ಟಿದೆ. ಈ ಬಾರಿ 15 ಚಿನ್ನ ಸೇರಿದಂತೆ ಒಟ್ಟು 69 ಪದಕಗಳನ್ನು ಭಾರತದ ಕ್ರೀಡಾಪಟುಗಳು ಕೊರಳಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇಂದು ಅಧಿಕೃತ ತೆರೆ: 18ನೇ ಏಷ್ಯಾಡ್ ಕ್ರೀಡಾಕೂಟಕ್ಕೆ ಭಾನುವಾರ ಅಧಿಕೃತ ತೆರೆ ಬೀಳಲಿದ್ದು, ಭಾರತದ ಸ್ಪರ್ಧಿಗಳ ಪಾಲಿಗೆ ಶನಿವಾರವೇ ಕೊನೆಯ ದಿನವಾಗಿತ್ತು. ಏಕೆಂದರೆ ಭಾನುವಾರ ಕೇವಲ ಟ್ರಯಾಥ್ಲಾನ್ ಸ್ಪರ್ಧೆ ಮಾತ್ರ ನಡೆಯಲಿದ್ದು, ಇದರಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಕೂಟದಲ್ಲಿ ಭಾರತದ ಸ್ಪರ್ಧೆಗೆ ಶನಿವಾರವೇ ತೆರೆಬಿದ್ದಿತು
ಏಷ್ಯನ್ ಗೇಮ್ಸ್ 18ನೇ ಆವೃತ್ತಿಗೆ ಇಂದು ತೆರೆ ಬೀಳಲಿದ್ದು, ಸಮಾರೋಪದಲ್ಲಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಧಜ್ವಧಾರಿಯಾಗಿ ಭಾರತ ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸಲಿದ್ದಾರೆ.
‘ಭಾರತ ಹಾಕಿ ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಲಿದ್ದಾರೆ’ ಎಂದು ಭಾರತ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ. ಉದ್ಘಾಟನೆ ಸಮಾರಂಭದಲ್ಲಿ ಜಾವೆಲಿನ್ ಚಿನ್ನ ವಿಜೇತ ನೀರಜ್ ಚೋಪ್ರಾ ಧ್ವಜಧಾರಿಯಾಗಿದ್ದರು.