(Video) ನ.1ಕ್ಕೆ ಕ್ರಿಕೆಟ್‌ಗೆ ನೆಹ್ರಾ ಗುಡ್‌ಬೈ

By Suvarna Web DeskFirst Published Oct 11, 2017, 11:34 PM IST
Highlights

ಮೊಹಮದ್ ಅಜರುದ್ದೀನ್ ನಾಯಕತ್ವದಲ್ಲಿ 1999ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟ ನೆಹ್ರಾ ಈ ವರೆಗೂ 17 ಟೆಸ್ಟ್, 120 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 44, ಏಕದಿನದಲ್ಲಿ 157 ಹಾಗೂ ಟಿ20ಯಲ್ಲಿ 34 ವಿಕೆಟ್ ಕಬಳಿಸಿದ್ದಾರೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಡರ್ಬನ್‌ನಲ್ಲಿ 23 ರನ್‌ಗೆ 6 ವಿಕೆಟ್ ಕಬಳಿಸಿದ್ದು ನೆಹ್ರಾ ಅವರ ಅತಿಶ್ರೇಷ್ಠ ಪ್ರದರ್ಶನವಾಗಿದೆ.

ನವದೆಹಲಿ(ಅ.11): ಭಾರತ ತಂಡದ ಹಿರಿಯ ವೇಗದ ಬೌಲರ್ ಆಶಿಶ್ ನೆಹ್ರಾ ನವೆಂಬರ್ 1ರಂದು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸುವುದಾಗಿ ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ನವೆಂಬರ್ 1ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದ್ದು, ಪಂದ್ಯದ ಬಳಿಕ ನೆಹ್ರಾ ನಿವೃತ್ತಿ ಪಡೆಯಲಿದ್ದಾರೆ.

ತವರು ಮೈದಾನದಲ್ಲೇ ಡೆಲ್ಲಿ ವೇಗಿಗೆ ನಿವೃತ್ತಿ ಘೋಷಿಸುವ ಅವಕಾಶ ಸಿಗುತ್ತಿರುವುದು ವಿಶೇಷ. ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ನಿವೃತ್ತಿ ವಿಚಾರವನ್ನು ನೆಹ್ರಾ ಈಗಾಗಲೇ ಪ್ರಧಾನ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಸಕ್ರಿಯರಾಗಿರುವ ನೆಹ್ರಾ, 2018ರಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಸದಿರುವುದರಿಂದ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಬೇಕು ಎನ್ನುವ ಕಾರಣದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್‌ನಲ್ಲೂ ನೆಹ್ರಾ ಪಾಲ್ಗೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.

1999ರಲ್ಲಿ ಪಾದಾರ್ಪಣೆ:

ಮೊಹಮದ್ ಅಜರುದ್ದೀನ್ ನಾಯಕತ್ವದಲ್ಲಿ 1999ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟ ನೆಹ್ರಾ ಈ ವರೆಗೂ 17 ಟೆಸ್ಟ್, 120 ಏಕದಿನ ಹಾಗೂ 26 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 44, ಏಕದಿನದಲ್ಲಿ 157 ಹಾಗೂ ಟಿ20ಯಲ್ಲಿ 34 ವಿಕೆಟ್ ಕಬಳಿಸಿದ್ದಾರೆ. 2003ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಡರ್ಬನ್‌ನಲ್ಲಿ 23 ರನ್‌ಗೆ 6 ವಿಕೆಟ್ ಕಬಳಿಸಿದ್ದು ನೆಹ್ರಾ ಅವರ ಅತಿಶ್ರೇಷ್ಠ ಪ್ರದರ್ಶನವಾಗಿದೆ.

2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ನೆಹ್ರಾ, ಕೈಬೆರಳು ಗಾಯದಿಂದಾಗಿ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ನೆಹ್ರಾ ಐಪಿಎಲ್‌ನಲ್ಲಿ ಆಡದಿದ್ದರೂ, ಟಿ20ಯಲ್ಲಿ ಅವರಿಗಿರುವ ಅನುಭವವನ್ನು ಬಳಸಿಕೊಳ್ಳಲು ಕೆಲ ತಂಡಗಳು ಅವರನ್ನು ಬೌಲಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುವಂತೆ ಪ್ರಸ್ತಾಪಿಸಿವೆ ಎನ್ನಲಾಗಿದೆ.

click me!