
ನವದೆಹಲಿ (ಸೆ.26): ಅಜಯ್ ಠಾಕೂರ್(13 ಅಂಕ) ಅವರಂತಹ ಆಟಗಾರ ಯಾವ ಕ್ಷಣದಲ್ಲಾದರೂ ಪಂದ್ಯವನ್ನು ಜಯದತ್ತ ಕೊಂಡೊಯ್ಯಬಲ್ಲರು ಎನ್ನುವುದಕ್ಕೆ ಗುಜರಾತ್ ಫಾರ್ಚೂನ್’ಜೈಂಟ್ಸ್ ಪಂದ್ಯವೇ ಸಾಕ್ಷಿ. ಕೊನೆ ನಿಮಿಷದಲ್ಲಿ ಅಜಯ್ ಠಾಕೂರ್ ನಡೆಸಿದ ಮಿಂಚಿನ ದಾಳಿಯಿಂದಾಗಿ ತಮಿಳ್ ತಲೈವಾಸ್ 35-34 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಕೊನೆ 1 ನಿಮಿಷದಲ್ಲಿ ಪ್ರೇಕ್ಷಕರನ್ನು ತುದಿಗಾಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ತಮಿಳ್ ತಲೈವಾಸ್ ತಂಡಕ್ಕೆ ಮತ್ತೊಮ್ಮೆ ಸೂಪರ್ ಮ್ಯಾನ್ ಆಗಿದ್ದು ಅಜಯ್ ಠಾಕೂರ್.
ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು 35-34 ಅಂಕಗಳಿಂದ ಮಣಿಸುವಲ್ಲಿ ತಮಿಳ್ ತಲೈವಾಸ್ ಯಶಸ್ವಿಯಾಯಿತು. ಮೊದಲಾರ್ಧದ 7ನೇ ನಿಮಿಷದಲ್ಲಿ ಸುಕೇಶ್ ಹೆಗ್ಡೆ ನೇತೃತ್ವದ ಗುಜರಾತ್ ಫಾರ್ಚೂನ್’ಜೈಂಟ್ಸ್ 7-6 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. 11ನೇ ನಿಮಿಷದಲ್ಲಿ ತಮಿಳ್ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿದ ಗುಜರಾತ್ 13-6ಕ್ಕೆ ಅಂಕ ಹೆಚ್ಚಿಸಿಕೊಂಡಿತು. ಗುಜರಾತ್ ಪರ ಮಿಂಚಿನ ದಾಳಿ ನಡೆಸಿದ ಯುವ ಆಟಗಾರ ಸಚಿನ್ ತಂಡಕ್ಕೆ ನೆರವಾದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಗುಜರಾತ್ ಫಾರ್ಚೂನ್’ಜೈಂಟ್ಸ್ 20-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧದಲ್ಲಿ ಉಂಟಾಗಿದ್ದ ಹಿನ್ನಡೆಯನ್ನು ಮೆಟ್ಟಿನಿಲ್ಲಲು ಅಜಯ್ ಪಡೆ ಆರಂಭದಲ್ಲಿ ಪ್ರಯತ್ನಿಸಿತಾದರೂ ಇದಕ್ಕೆ ಗುಜರಾತ್ ಅವಕಾಶ ಮಾಡಿಕೊಡಲಿಲ್ಲ. ಪರಿಣಾಮ ದ್ವಿತಿಯಾರ್ಧದ 5ನೇ ನಿಮಿಷದಲ್ಲಿ ತಮಿಳ್ ತಲೈವಾಸ್ ಮತ್ತೊಮ್ಮೆ ಆಲೌಟ್ ಆಯಿತು. ಈ ವೇಳೆ ಸುಕೇಶ್ ಪಡೆ 27-15 ಅಂಕಗಳ ಮುನ್ನಡೆ ಸಾಧಿಸಿತ್ತು. ಪ್ರಪಂಜನ್ ಕೆಲವು ಅಂಕ ಕಲೆಹಾಕುವ ಮೂಲಕ ತಲೈವಾಸ್’ಗೆ ನೆರವಾದರು.
ಪಂದ್ಯ ಮುಕ್ತಾಯಕ್ಕೆ ಕೊನೆಯ 4 ನಿಮಿಷಗಳಿದ್ದಾಗ 34-24 ಅಂಕಗಳೊಂದಿಗೆ 10 ಅಂಕಗಳ ಹಿನ್ನಡೆಯಲ್ಲಿದ್ದ ತಲೈವಾಸ್’ಗೆ ಆ ಬಳಿಕ ನಾಯಕ ಅಜಯ್ ಆಸರೆಯಾದರು. ಪಂದ್ಯ ಮುಕ್ತಾಯಕ್ಕೆ ಕೇವಲ 1 ನಿಮಿಷವಿದ್ದಾಗ 34-30 ಅಂಕಗಳಿಂದ ಮುಂದಿದ್ದ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಆಲೌಟ್ ಮಾಡಿದ ತಲೈವಾಸ್ ಅಂಕವನ್ನು 34-32ಕ್ಕೆ ಹೆಚ್ಚಿಸಿಕೊಂಡಿತು. ಕೊನೆಯ 30 ಸೆಕೆಂಡ್’ಗಳಿದ್ದಾಗ ಮಿಂಚಿನ ದಾಳಿ ನಡೆಸಿದ ಠಾಕೂರ್ ಮೂರು ಅಂಕಗಳನ್ನು ಕಲೆಹಾಕುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಕಳೆದ ಬೆಂಗಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಕೊನೆಯ 6 ಸೆಕೆಂಡ್ ಬಾಕಿಯಿದ್ದಾಗ ಮಿಂಚಿನ ದಾಳಿ ನಡೆಸುವ ಮೂಲಕ ಹೀರೋ ಆಗಿದ್ದ ಅಜಯ್ ಮತ್ತೊಮ್ಮೆ ಗುಜರಾತ್ ವಿರುದ್ಧ ತಂಡಕ್ಕೆ ಸ್ಮರಣೀಯ ಗೆಲುವನ್ನು
ತಂದಿತ್ತರು.
ಟರ್ನಿಂಗ್ ಪಾಯಿಂಟ್:
ಪಂದ್ಯದ ಆರಂಭದಿಂದಲೂ ಹಿನ್ನಡೆಯಲ್ಲಿದ್ದ ತಮಿಳ್ ತಲೈವಾಸ್ ಕೊನೆಯ ಒಂದು ನಿಮಿಷದಲ್ಲಿ ನಾಯಕ ಅಜಯ್ ಠಾಕೂರ್ ಚುರುಕಿನ ದಾಳಿ ನಡೆಸುವ ಮೂಲಕ ಗೆಲುವು ತಮ್ಮ ಪರ ವಾಲುವಂತೆ ಮಾಡಿದರು. ಕೊನೆ ಒಂದು ನಿಮಿಷದಲ್ಲಿ ಸೂಪರ್ ರೈಡಿಂಗ್ ಹಾಗೂ ಟ್ಯಾಕಲ್ ಮಾಡುವ ಮೂಲಕ 5 ಅಂಕ ಗಳಿಸಿದ ಠಾಕೂರ್ ಕೊನೆ ಕ್ಷಣದಲ್ಲಿ ಪಂದ್ಯದ ಫಲಿತಾಂಶವನ್ನೇ ಬದಲಿಸಿದರು.
ಶ್ರೇಷ್ಠ ರೈಡರ್: ಅಜಯ್ ಠಾಕೂರ್(13 ಅಂಕ)
ಶ್ರೇಷ್ಠ ಡಿಫೆಂಡರ್: ಫಜಲ್ ಅತ್ರಾಚಲಿ(5 ಅಂಕ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.