ಕ್ರಿಕೆಟ್'ನ ನಿಯಮಗಳಲ್ಲಾಗಿದೆ ಮಹತ್ವದ ಬದಲಾವಣೆಗಳು; ಇಲ್ಲಿದೆ ನೂತನ ನಿಯಮಗಳ ಪಟ್ಟಿ

By Suvarna Web DeskFirst Published Sep 26, 2017, 9:10 PM IST
Highlights

ಬ್ಯಾಟ್ಸ್'ಮ್ಯಾನ್ ಔಟಾಗಿ ಪೆವಿಲಿಯನ್'ಗೆ ಮರಳಿದರೂ ವಾಪಸ್ ಕರೆಸಿಕೊಳ್ಳುವ ಅಧಿಕಾರ ಅಂಪೈರ್'ಗೆ ಇರುತ್ತದೆ. ಬ್ಯಾಟ್ಸ್'ಮ್ಯಾನ್ ಔಟಾದ ನಂತರ ಮತ್ತೊಂದು ಬಾಲ್ ಎಸೆಯುವ ಮುನ್ನ ವಾಪಸ್ ಕರೆಸಿಕೊಳ್ಳಬಹುದು. ಫೀಲ್ಡರ್'ಗಳು ತಮ್ಮ ಅಪೀಲನ್ನು ಹಿಂಪಡೆಯಬಹುದು; ಅಥವಾ ಅಂಪೈರ್'ಗಳು ತಮ್ಮ ನಿರ್ಧಾರ ಬದಲಿಸಬಹುದು. ಈ ಮುಂಚೆಯಾದರೆ, ಬ್ಯಾಟ್ಸ್'ಮ್ಯಾನ್ ಮೈದಾನ ದಾಟಿಬಿಟ್ಟರೆ ಮತ್ತೆ ವಾಪಸ್ ಬರುವಂತಿರಲಿಲ್ಲ.

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್'ನ ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ನೋಬಾಲ್, ರನ್ನೌಟ್, ಕ್ಯಾಚ್, ರಿವ್ಯೂ ಇತ್ಯಾದಿ ವಿಚಾರಗಳಲ್ಲಿ ನಿಯಮ ತಿದ್ದುಪಡಿ ಮಾಡಲಾಗಿದೆ. ಐಸಿಸಿ ಪರಿಶೀಲಿಸಿರುವ ಈ ನೂತನ ನಿಯಮಗಳು ಸೆ. 28ರಿಂದ, ಅಂದರೆ ಗುರುವಾರದಿಂದ ಜಾರಿಗೆ ಬರಲಿವೆ.

ನೂತನ ಕ್ರಿಕೆಟ್ ನಿಯಮಗಳು:

1) ಟೆಸ್ಟ್ ಕ್ರಿಕೆಟ್'ನಲ್ಲಿ ಪ್ರತೀ ತಂಡವು 6 ಸಬ್'ಸ್ಟಿಟ್ಯೂಟ್'ಗಳು ಅಥವಾ ಬದಲೀ ಆಟಗಾರರನ್ನು ಬಳಸಬಹುದು. ಈ ಮೊದಲು 4 ಆಟಗಾರರಿಗೆ ಮಾತ್ರ ಸೀಮಿತವಾಗಿತ್ತು.

2) ಬ್ಯಾಟುಗಳ ಅಳತೆಯಲ್ಲಿ ಕೆಲ ನಿರ್ಬಂಧಗಳನ್ನು ತರಲಾಗಿದೆ. ಬ್ಯಾಟುಗಳ ಎತ್ತರದಲ್ಲಿ ವ್ಯತ್ಯಾಸ ಮಾಡಿಕೊಳ್ಳಬಹುದು. ಆದರೆ, ಬ್ಯಾಟಿನ ಅಗಲವು ಗರಿಷ್ಠ 108 ಮಿ.ಮೀ. ಮಾತ್ರ ಇರಬಹುದು. ಬ್ಯಾಟ್'ನ ತುದಿ 40 ಮಿಮೀಗಿಂತ ಹೆಚ್ಚು ದಪ್ಪ ಇರಬಾರದು. ಬ್ಯಾಟ್'ನ ಬೇರಾವುದೇ ಭಾಗವು 67 ಮಿಮೀ ಗಿಂತ ಹೆಚ್ಚು ದಪ್ಪ ಇರಬಾರದು. ಈ ಅಳತೆಯನ್ನು ಪರಿಶೀಲಿಸುವ ಉಪಕರಣವು ಅಂಪೈರ್'ಗೆ ಲಭ್ಯವಿರುತ್ತದೆ.

3) ವಿಕೆಟ್'ನಿಂದ ಬೇಲ್ ಹೊರಸಿಡಿದು ಆಟಗಾರರಿಗೆ ಗಾಯವಾಗುವುದನ್ನು ತಪ್ಪಿಸಲು ಐಸಿಸಿ ಹೊಸ ಸುರಕ್ಷಾ ನಿಯಮ ರಚಿಸಿದೆ. ಅದರಂತೆ, ಸ್ಟಂಪ್'ಗೆ ಜೋಡಿತವಾಗಿಯೇ ಇರುವ ಬೇಲ್'ಗಳನ್ನು ಬಳಸುವ ಅವಕಾಶ ನೀಡಲಾಗಿದೆ. ವಿಕೆಟ್'ಗೆ ಬಾಲ್ ತಾಕಿದಾಗ ಸ್ಟಂಪ್'ನಿಂದ ಬೇಲ್'ಗಳು ಮೇಲೇಳುತ್ತವಾದರೂ, ದೂರಕ್ಕೆ ಹೋಗಿ ಬೀಳುವುದಿಲ್ಲ. ಇಂಥ ಸ್ಟಂಪ್'ಗಳ ಬಳಕೆಯು ಆಯಾ ಕ್ರಿಕೆಟ್ ಮಂಡಳಿಗಳ ವಿವೇಚನೆಗೆ ಬಿಟ್ಟಿದ್ದು.

4) ಟೆಸ್ಟ್ ಕ್ರಿಕೆಟ್'ನಲ್ಲಿ ಸೆಷೆನ್ ಮುಕ್ತಾಯಕ್ಕೆ ಮೂರು ನಿಮಿಷ ಮೊದಲು ವಿಕೆಟ್ ಪತನವಾದಲ್ಲಿ ವಿರಾಮ ತೆಗೆದುಕೊಳ್ಳಬಹುದು. ಈಗಿರುವ ನಿಯಮ ಪ್ರಕಾರ ಇದರ ಅವಧಿ ಎರಡು ನಿಮಿಷ.

5) ಟಿ20 ಕ್ರಿಕೆಟ್’ನಲ್ಲಿ ಇನ್ನಿಂಗ್ಸ್’ವೊಂದು 10 ಓವರ್’ಗಿಂತ ಕಡಿಮೆಗೆ ಸೀಮಿತಗೊಂಡರೆ ಒಬ್ಬ ಬೌಲರ್ 2 ಓವರ್ ಬೌಲ್ ಮಾಡಬಹುದು. ಉದಾಹರಣೆಗೆ, 5 ಓವರ್’ನ ಇನ್ನಿಂಗ್ಸ್’ನಲ್ಲಿ ಇಬ್ಬರು ಬೌಲರ್’ಗಳು ಎರಡೆರಡು ಓವರ್ ಬೌಲ್ ಮಾಡಬಹುದು.

6) ಚೆಂಡು ಬೌಂಡರಿ ಗೆರೆಯನ್ನು ದಾಟುವ ಸಂದರ್ಭದಲ್ಲಿ ಗೆರೆಯ ಒಳಗಿಂದ ಫೀಲ್ಡರ್ ನೆಗೆದು ಹಿಡಿಯಬಹುದು. ಬೌಂಡರಿ ಗೆರೆಯ ಹೊರಗಿನಿಂದ ಬಂದು ಚೆಂಡನ್ನು ಹಿಡಿದಾಗ ಚೆಂಡು ಬೌಂಡರಿ ಗೆರೆ ದಾಟಿತೆಂದು ಪರಿಗಣಿಸಲಾಗುತ್ತದೆ. ಬಾಲನ್ನು ಹಿಡಿದ ಫೀಲ್ಡರ್ ಬೌಂಡರಿ ಗೆರೆಯ ಹೊರಗಿರುವ ಯಾವುದೇ ವಸ್ತು ಅಥವಾ ಸಹಆಟಗಾರನಿಗೆ ತಾಕಿಸಿಕೊಂಡಲ್ಲಿ ಅದನ್ನೂ ಬೌಂಡರಿ ಎಂದೇ ಪರಿಗಣಿಸಲಾಗುತ್ತದೆ.

7) ಬೌಲರ್ ಎಸೆದ ಚೆಂಡು ಬ್ಯಾಟ್ಸ್’ಮ್ಯಾನ್’ನ ಕ್ರೀಸ್ ತಲುಪುವ ವೇಳೆ ಒಂದಕ್ಕಿಂತ ಹೆಚ್ಚು ಬಾರಿ ಬೌನ್ಸ್ ಆದರೆ ಅದನ್ನು ನೋಬಾಲ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಚೆಂಡು ಡಬಲ್ ಪಿಚ್ ಆದರೆ ಅದು ನೋಬಾಲ್ ಆಗುತ್ತದೆ. ಈಗಿರುವ ನಿಯಮದ ಪ್ರಕಾರ, ಚೆಂಡು ಡಬಲ್ ಪಿಚ್ ಆಗುವ ಅವಕಾಶವಿತ್ತು.

8) ಬೌಲರ್ ಎಸೆದ ಚೆಂಡು ಪಿಚ್’ನ ಹೊರಗೆ ಬಿದ್ದರೆ ಅದು ನೋಬಾಲ್

9) ಬೌಲರ್ ಎಸೆದ ಚೆಂಡು ಬ್ಯಾಟುಗಾರನನ್ನು ತಲುಪವ ಮೊದಲೇ ಫೀಲ್ಡರ್ ತಡೆದಲ್ಲಿ ಅದು ನೋಬಾಲ್ ಅಥವಾ ಡೆಡ್ ಬಾಲ್ ಆಗುತ್ತದೆ.

10) ನೋಬಾಲ್’ನಿಂದ ಬೈಸ್ ಅಥವಾ ಲೆಗ್’ಬೈಸ್ ಬಂದಲ್ಲಿ ಆ ರನ್’ಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಅಂದರೆ, ನೋಬಾಲ್ ಮತ್ತು ಬೈಸ್ ಎರಡನ್ನೂ ಪ್ರತ್ಯೇಕವಾಗಿ ಎಣಿಸಲಾಗುತ್ತದೆ. ಈ ಮುಂಚೆಯಾದರೆ, ನೋಬಾಲ್’ನಿಂದ ಬರುವ ಬೈಸ್ ಮತ್ತು ಲೆಗ್’ಬೈಸ್ ರನ್’ಗಳನ್ನು ನೋಬಾಲ್ ಸ್ಕೋರ್’ಗಳೆಂದೇ ಪರಿಗಣಿಸಲಾಗುತ್ತಿತ್ತು.

11) ಇದು ಮಹತ್ವದ ನಿಯಮ ಬದಲಾವಣೆ... ಬ್ಯಾಟುಗಾರ ರನ್ ಓಡುವಾಗ ಬೇಲ್ ಎಗರುವ ಮುನ್ನ ಕ್ರೀಸ್ ದಾಟಿ, ನಂತರ ಬ್ಯಾಟ್ ಮೇಲೆದಿದ್ದರೂ ಆತ ಸೇಫ್. ಈ ಮೊದಲಾದರೆ, ಬೇಲ್ ಎಗರುವ ಸಂದರ್ಭದಲ್ಲಿ ಬ್ಯಾಟುಗಾರ ದೇಹ ಅಥವಾ ಬ್ಯಾಟು ಕ್ರೀಸ್’ನೊಳಗಿನ ನೆಲಕ್ಕೆ ತಾಗಿದೆಯಾ ಎಂಬುದನ್ನು ಪರಿಶೀಲಿಸಲಾಗುತ್ತಿತ್ತು. ಕೆಲ ಸಂದರ್ಭಗಳಲ್ಲಿ ಬ್ಯಾಟುಗಾರ ಕ್ರೀಸ್ ಮುಟ್ಟಿದರೂ ಔಟ್ ಆಗಿಹೋಗುತ್ತಿದ್ದುದುಂಟು.

12) ಬ್ಯಾಟ್ಸ್'ಮ್ಯಾನ್ ಔಟಾಗಿ ಪೆವಿಲಿಯನ್'ಗೆ ಮರಳಿದರೂ ವಾಪಸ್ ಕರೆಸಿಕೊಳ್ಳುವ ಅಧಿಕಾರ ಅಂಪೈರ್'ಗೆ ಇರುತ್ತದೆ. ಬ್ಯಾಟ್ಸ್'ಮ್ಯಾನ್ ಔಟಾದ ನಂತರ ಮತ್ತೊಂದು ಬಾಲ್ ಎಸೆಯುವ ಮುನ್ನ ವಾಪಸ್ ಕರೆಸಿಕೊಳ್ಳಬಹುದು. ಫೀಲ್ಡರ್'ಗಳು ತಮ್ಮ ಅಪೀಲನ್ನು ಹಿಂಪಡೆಯಬಹುದು; ಅಥವಾ ಅಂಪೈರ್'ಗಳು ತಮ್ಮ ನಿರ್ಧಾರ ಬದಲಿಸಬಹುದು. ಈ ಮುಂಚೆಯಾದರೆ, ಬ್ಯಾಟ್ಸ್'ಮ್ಯಾನ್ ಮೈದಾನ ದಾಟಿಬಿಟ್ಟರೆ ಮತ್ತೆ ವಾಪಸ್ ಬರುವಂತಿರಲಿಲ್ಲ.

13) ಬ್ಯಾಟ್ಸ್'ಮ್ಯಾನ್ ಹೊಡೆದ ಚೆಂಡು ನೆಲಕ್ಕೆ ಬೀಳುವ ಮುನ್ನ ಕ್ಯಾಚ್ ಹಿಡಿಯುವ ಫೀಲ್ಡರ್ ಬೌಂಡರಿಯೊಳಗೆಯೇ ಇರಬೇಕು. ಅಥವಾ, ಚೆಂಡನ್ನು ಮೊದಲು ಮುಟ್ಟುವ ಮುನ್ನ ಫೀಲ್ಡರ್ ಬೌಂಡರಿ ಗೆರೆಯ ಒಳಗಿರಬೇಕು. ಅಂದರೆ, ಬೌಂಡರಿ ಗೆರೆಯೊಳಗಿಂದ ಚೆಂಡನ್ನು ತಾಗಿಸಿ ಗೆರೆಯಾಚೆ ಹೋಗಿ ಮತ್ತೆ ಸಾವರಿಸಿಕೊಂಡು ವಾಪಸ್ ಜಿಗಿದು ಚೆಂಡು ಹಿಡಿದುಕೊಂಡರೆ ಅದು ಕ್ಯಾಚ್ ಎಂದು ಪರಿಗಣಿಸಲಾಗುತ್ತದೆ.

14) ಫೀಲ್ಡರ್ ತೊಟ್ಟಿರುವ ಹೆಲ್ಮೆಟ್'ಗೆ ಚೆಂಡು ತಾಗಿ ಅದನ್ನು ಹಿಡಿದುಕೊಂಡರೆ ಕ್ಯಾಚ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ವಿಕೆಟ್'ಕೀಪರ್'ನ ಹೆಲ್ಮೆಟ್'ಗೆ ಚೆಂಡು ಬಡಿದು ಬ್ಯಾಟ್ಸ್'ಮ್ಯಾನ್'ನನ್ನು ರನ್'ಔಟ್ ಅಥವಾ ಸ್ಟಂಪ್ ಔಟ್ ಮಾಡಬಹುದು.

15) ಬ್ಯಾಟ್ ಮಾಡುವಾಗ ಚೆಂಡು ಸ್ಟಂಪ್'ಗೆ ಬಡಿಯುವ ಮುನ್ನ ಬ್ಯಾಟ್ಸ್'ಮ್ಯಾನ್ ತನ್ನ ಕೈಯಿಂದ ಚೆಂಡನ್ನು ತಡೆದರೆ ಅದನ್ನು ಔಟೆಂದು ಪರಿಗಣಿಸುವ ನಿಯಮವನ್ನು ತೆಗೆದುಹಾಕಲಾಗಿದೆ. ಹೀಗಾದರೆ, ಅಂಪೈರು ಬ್ಯಾಟುಗಾರನಿಗೆ ಎಚ್ಚರಿಕೆ ಕೊಡಬಹುದು, ಔಟ್ ಕೊಡಲಾಗುವುದಿಲ್ಲ.

16) ಫೀಲ್ಡಿಂಗ್ ತಂಡವು ಬ್ಯಾಟುಗಾರನಿಗೆ ಉದ್ದೇಶಪೂರ್ವಕವಾಗಿ ವಂಚನೆ ಮಾಡುವಂತಿಲ್ಲ. ಉದಾಹರಣೆಗೆ, ಸುಳ್ಳು ಫೀಲ್ಡಿಂಗ್ ತಂತ್ರಗಳಿಂದ ಬ್ಯಾಟುಗಾರನ ಗಮನ ತಪ್ಪಿಸುವುದು; ಬ್ಯಾಟ್ ಮಾಡುವ ಸಂದರ್ಭದಲ್ಲಿ ಬೇಕಂತಲೇ ಕಮೆಂಟ್ ಮಾಡುವುದು ಇತ್ಯಾದಿ. ಇಂಥ ಸಂದರ್ಭದಲ್ಲಿ ಫೀಲ್ಡಿಂಗ್ ತಂಡಕ್ಕೆ ಅಂಪೈರ್ ದಂಡ ಹಾಕಬಹುದು.

17) ಬೌಲರ್ ಬೇಕಂತಲೇ ನೋಬಾಲ್ ಎಸೆದದ್ದು ಗೊತ್ತಾದಲ್ಲಿ ಆ ಇನ್ನಿಂಗ್ಸ್'ನಿಂದಲೇ ಆತನಿಗೆ ಗೇಟ್'ಪಾಸ್ ಕೊಡಬಹುದು.

18) ಬ್ಯಾಟ್ಸ್'ಮ್ಯಾನ್ ತನ್ನ ಕ್ರೀಸ್'ನಿಂದ ತುಂಬೂ ದೂರ ಹೋಗಿ ಚೆಂಡನ್ನು ಎದುರಿಸಲು ನಿಲ್ಲುವಂತಿಲ್ಲ.

19) ಆಟಗಾರನ ನಡತೆ ಸರಿಯಿಲ್ಲ ಎಂದು ಅಂಪೈರ್'ಗೆ ಅನಿಸಿದರೆ, ಆತನನ್ನು ಪಂದ್ಯ ಮುಗಿಯುವವರೆಗೂ ಆಡದಂತೆ ನಿಷೇಧಿಸಬಹುದು.

20) ಅಂಪೈರ್ ನಿರ್ಣಯದ ವಿರುದ್ಧ ತಂಡವು ಮೂರನೇ ಅಂಪೈರ್'ಗೆ ರಿವ್ಯೂ ಹೋದಾಗ, ಫೀಲ್ಡ್ ಅಂಪೈರ್'ನ ನಿರ್ಧಾರವನ್ನ ಸರಿ ಎಂದೇ ಬಂದಲ್ಲಿ, ತಂಡಕ್ಕೆ ರಿವ್ಯೂ ನಷ್ಟವಾಗುವುದಿಲ್ಲ. ಈ ಮುಂಚೆಯಾದರೆ, ತಂಡ ಮಾಡಿದ ರಿವ್ಯೂ ಅಪೀಲ್ ವಿಫಲವಾದಲ್ಲಿ ಒಂದು ರಿವ್ಯೂಗಳನ್ನು ಮೈನಸ್ ಮಾಡಲಾಗುತ್ತಿತ್ತು. ಹೀಗಾಗಿ, ತಂಡಗಳು ಅಂಪೈರ್ ನಿರ್ಧಾರದ ವಿರುದ್ಧವಾಗಿ ರಿವ್ಯೂ ಹೋಗಲು ಬಹಳ ಯೋಚಿಸುವಂತಾಗುತ್ತಿತ್ತು.

click me!