
ನವದೆಹಲಿ(ಅ.14): ನ್ಯಾ. ಲೋಧಾ ಸಮಿತಿಯ ಶಿಫಾರಸುಗಳ ವಿಚಾರವಾಗಿ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಮುಂದಿನ ವಾರ ಸಲ್ಲಿಸಲಿರುವ ಪ್ರಮಾಣಪತ್ರದ ಇದೀಗ ಎಲ್ಲರ ಗಮನವನ್ನು ಸೆಳೆದಿದೆ.
ಅ. 17ರಂದು ಸರ್ವೋಚ್ಛ ನ್ಯಾಯಾಲಯದ ಪೀಠದ ಮುಂದೆ ಲೋಧಾ ಸಮಿತಿ-ಬಿಸಿಸಿಐ ನಡುವಿನ ಪ್ರಕರಣ ಮರುವಿಚಾರಣೆಗೆ ಬರಲಿದೆ. ಕಳೆದ ವಿಚಾರಣೆಯಲ್ಲಿ ಲೋಧಾ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲೇಬೇಕೆಂದು ಸರ್ವೋಚ್ಛ ನ್ಯಾಯಪೀಠ ಕಟ್ಟುನಿಟ್ಟಾದ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ತನ್ನ ಅಧೀನದಲ್ಲಿರುವ ಎಲ್ಲಾ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಗಳ ಜತೆ ಸಮಾಲೋಚನೆ ನಡೆಸಲು ಅ. 15ರಂದು ಬಿಸಿಸಿಐ ವಿಶೇಷ ಸಭೆ ಕರೆದಿದೆ. ಆದರೆ, ಅದಕ್ಕೂ ಮಿಗಿಲಾಗಿ ಬಿಸಿಸಿಐ ವತಿಯಿಂದ ಸಲ್ಲಿಕೆಯಾಗಲಿರುವ ಪ್ರಮಾಣ ಪತ್ರದ ಬಗ್ಗೆ ಎಲ್ಲರ ಗಮನ ನೆಟ್ಟಿದೆ.
ಪ್ರಮಾಣಪತ್ರವೇಕೆ?
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡೇವ್ ರಿಚರ್ಡ್ಸನ್ ಅವರು, ಮಾಧ್ಯಮಗಳಿಗೆ ಹೇಳಿಕೆ ನೀಡಿ, ‘‘ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು, ಐಸಿಸಿಗೆ ಪತ್ರ ಬರೆದು, ನ್ಯಾ. ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನದಿಂದ ಬಿಸಿಸಿಐನಲ್ಲಿ ಸರ್ಕಾರದ ಹಸ್ತಕ್ಷೇಪವಾಗಲಿದೆ. ಇದನ್ನು ಆಕ್ಷೇಪಿಸಿ ಐಸಿಸಿಯು ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಪತ್ರ ಬರೆದು ಈ ಕ್ರಮ ಕೈಗೊಳ್ಳದಂತೆ ಮನವಿ ನೀಡಬೇಕೆಂದು ಕೋರಿದ್ದರು’’ ಎಂದು ಹೇಳಿದ್ದರು.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ವೋಚ್ಛ ನ್ಯಾಯಾಲಯವು, ಈ ಬಗ್ಗೆ ಬಿಸಿಸಿಐನಿಂದ ಸ್ಪಷ್ಟೀಕರಣವನ್ನು ಕೋರಿದೆ. ಅಲ್ಲದೆ, ತಮ್ಮ ಹೇಳಿಕೆಯ ಔಚಿತ್ಯದ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸುವಂತೆಯೂ ಸೂಚಿಸಿದೆ.
ಠಾಕೂರ್ ರಣತಂತ್ರವೇನು?
ಸುಪ್ರೀಂ ಕೋರ್ಟ್ ಆಣತಿಯ ಮೇರೆಗೆ ಪ್ರಮಾಣ ಪತ್ರ ತಯಾರಿಯಲ್ಲಿ ತೊಡಗಿರುವ ಬಿಸಿಸಿಐ ಕಾನೂನು ಸಲಹಾ ಮಂಡಳಿ, ಅನುರಾಗ್ ಠಾಕೂರ್ ಅವರು ಈ ಹಿಂದಿನ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೀಡಿದ್ದ ಹೇಳಿಕೆಯನ್ನೇ ಪುನರಾವರ್ತಿಸಿದ್ದಾರೆಂದು ಸಾಬೀತುಪಡಿಸಲು ನಿರ್ಧರಿಸಿದೆ. ಈ ಹಿಂದೆ, ಶಶಾಂಕ್ ಅವರು, ನ್ಯಾ. ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ, ಬಿಸಿಸಿಐನಲ್ಲಿ ಈಗಿರುವ ಕಾರ್ಯಕಾರಿ ಸಮಿತಿಯನ್ನು ವಜಾಗೊಳಿಸಿ ಅಪೆಕ್ಸ್ ಕೌನ್ಸಿಲ್ ಅನ್ನು ಸ್ಥಾಪಿಸಿದ್ದೇ ಆದಲ್ಲಿ, ಸರ್ಕಾರದ ಹಸ್ತಕ್ಷೇಪ ಶುರುವಾಗಲಿದೆ ಎಂದಿದ್ದರು. ಅಪೆಕ್ಸ್ ಕೌನ್ಸಿಲ್‌ನಲ್ಲಿ ಭಾರತದ ಕಾಂಪ್‌ಟ್ರೋಲರ್ ಹಾಗೂ ಆಡಿಟರ್ ಜನರಲ್ (ಸಿಎಜಿ) ಅವರನ್ನು ಸದಸ್ಯರನ್ನಾಗಿ ನೇಮಿಸುವಂತೆ ಲೋಧಾ ಸಮಿತಿಯು ಸೂಚಿಸಿರುವುದರಿಂದ ಇದು ಬಿಸಿಸಿಐ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದಿದ್ದರು.
ಇದೀಗ, ಮನೋಹರ್ ಅವರ ಮಾತನ್ನೇ ಅನುರಾಗ್ ಠಾಕೂರ್ ಐಸಿಸಿಗೆ ಬರೆದಿದ್ದ ಪತ್ರದಲ್ಲಿ ಪುನರುಚ್ಛರಿಸಿದ್ದಾರಷ್ಟೇ ಎಂಬುದನ್ನು ಸಾಬೀತುಪಡಿಸಲು ಬಿಸಿಸಿಐ ಕಾನೂನು ಸಲಹಾ ಮಂಡಳಿ, ಪ್ರಮಾಣಪತ್ರದ ಪ್ರತಿಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.