
ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಮುಂದುವರಿಯಲು ಹಾಲಿ ಕೋಚ್ ಅನಿಲ್ ಕುಂಬ್ಳೆ ಆಸಕ್ತಿ ತೋರಿದ್ದು, ಮೇ 25ರಂದು ಪ್ರಕ್ರಿಯೆ ಆರಂಭಗೊಂಡ ಕೂಡಲೇ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ತಮ್ಮ ಅರ್ಜಿಯ ಜತೆ ಸಂಪೂರ್ಣ ಸ್ವವಿವರ. ಭಾರತ ತಂಡದ ಭವಿಷ್ಯದ ಮಾರ್ಗಸೂಚಿಯನ್ನೂ ಕುಂಬ್ಳೆ ಸಲ್ಲಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.
ಭಾರತ ತಂಡದ ಕೋಚ್ ಆಗಿ ತಾವು ಸಾಧಿಸಿರುವ ಯಶಸ್ಸು, ತಂಡದಲ್ಲಿ ಆಗಿರುವ ಬದಲಾವಣೆಗಳು. ಆಕ್ರಮಣಕಾರಿ ಆಟದಿಂದ ಸಿಗುತ್ತಿರುವ ಫಲಿತಾಂಶಗಳ ಕುರಿತು ಕುಂಬ್ಳೆ ವಿವರಿಸಿದ್ದಾರೆ. ಜೂನ್ 18ಕ್ಕೆ ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಳ್ಳಲಿದ್ದು ಅದಕ್ಕೂ ಮೊದಲೇ ಹೊಸ ಕೋಚ್ ಪ್ರಕಟಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೇ ಭಾರತ, ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳಲಿದೆ.
ಅರ್ಜಿ ಸಲ್ಲಿಸುವ ಅವಶ್ಯಕತೆಯೇ ಇರಲಿಲ್ಲ: ಒಂದು ವರ್ಷದ ಅವಧಿಗೆ ಭಾರತ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದ ಕುಂಬ್ಳೆಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಆದರೂ ಸಂಪೂರ್ಣ ವಿವರಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಿರುವುದು, ಅವರು ಕೋಚ್ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಕುಂಬ್ಳೆಗೆ ಅಗತ್ಯ ಅರ್ಹತೆಗಳು ಇಲ್ಲದಿದ್ದರೂ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಅವರನ್ನು ಆಯ್ಕೆ ಮಾಡಿತ್ತು. ಆದರೆ ಕೇವಲ ಒಂದು ವರ್ಷದ ಅವಧಿಯಲ್ಲಿ ತಂಡದ ಯಶಸ್ಸು ಸಾಧಿಸಿದ್ದರೂ ಆಟಗಾರರ ಜತೆ ಉತ್ತಮ ಸಂಬಂಧ ಉಳಿಸಿಕೊಳ್ಳುವಲ್ಲಿ ಅವರು ವಿಫಲರಾಗಿದ್ದಾರೆ ಎನ್ನುವ ವರದಿಗಳು ಸಾಕಷ್ಟುಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, ‘ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಮನಸ್ತಾಪ ಇರುವುದೇ ಆದಲ್ಲಿ ಅದನ್ನು ಅವರಿಬ್ಬರು ಬಗೆಹರಿಸಿಕೊಂಡು ಮುನ್ನಡೆಯಬೇಕು. ಈಗಾಗಲೇ ಸಚಿನ್ ಹಾಗೂ ಗಂಗೂಲಿ, ಕೊಹ್ಲಿಯೊಂದಿಗೆ ಮಾತನಾಡಿದ್ದಾರೆ. ಆದರೆ ಕುಂಬ್ಳೆಯನ್ನು ಸಂದರ್ಶನ ನಡೆಯುವ ವರೆಗೂ ಸಂಪರ್ಕಿಸುವುದಿಲ್ಲ. ಹೊಸ ಕೋಚ್ ಆಯ್ಕೆ ಅವಶ್ಯಕತೆ ಬರದಿದ್ದರೆ ಉತ್ತಮ' ಎಂದಿದ್ದಾರೆ.
ಈಗಾಗಲೇ ಸಚಿನ್, ಗಂಗೂಲಿ, ಲಕ್ಷ್ಮಣ್ ಸಭೆ ನಡೆಸಿದ್ದು, ಆಯ್ಕೆ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ಸದಸ್ಯರ ಸಂದರ್ಶನ ನಡೆಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
10 ಆಟಗಾರರಿಗೆ ಕುಂಬ್ಳೆ ಮತ್ತೆ ಕೋಚ್ ಆಗುವುದು ಇಷ್ಟವಿಲ್ಲ?
ಭಾರತೀಯ ಕ್ರಿಕೆಟ್ ಮಂಡಳಿ ಮೂಲಗಳ ಪ್ರಕಾರ ಕನಿಷ್ಠ 10 ಆಟಗಾರರಿಗೆ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎನ್ನಲಾಗಿದೆ. ಕುಂಬ್ಳೆ ಸದಾ ಅಧಿಕಾರ ಚಲಾಯಿಸುತ್ತಾರೆ. ಅಲ್ಲದೇ ಆಟಗಾರರ ಒಳಿತಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಆಟಗಾರರ ಸಲಹೆಗಳಿಗೆ ಕಿವಿಗೊಡುವುದಿಲ್ಲ ಎಂಬ ಆರೋಪ ಕೇಳಿಬಂದಿದೆ. ‘ಬಳಲಿಕೆ ಹಾಗೂ ಗಾಯದ ಸಮಸ್ಯೆಯಿದ್ದಾಗಲೂ ಕುಂಬ್ಳೆ ಆಟಗಾರರನ್ನು ಆಡುವಂತೆ ಒತ್ತಾಯಿಸುತ್ತಾರೆ. ಅವರ ಒತ್ತಾಯದಿಂದ ಕಣಕ್ಕಿಳಿದು ಒಬ್ಬ ಆಟಗಾರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು' ಎಂದು ಬಿಸಿಸಿಐ ಮೂಲ ವೊಂದು ತಿಳಿಸಿದೆ. ತಂಡದಲ್ಲಿರುವ ಕೇವಲ ಒಬ್ಬ ಆಟಗಾರ ಮಾತ್ರ ಕುಂಬ್ಳೆಗೆ ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಕ್ರಿಕೆಟ್ ನಿರ್ದೇಶಕ ಎಂ.ವಿ.ಶ್ರೀಧರ್ ಆಟಗಾರರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.