ತಾಯಿಯಾದ ಬಳಿಕ ಗ್ರ್ಯಾಂಡ್‌ಸ್ಲಾಂ ಗೆಲ್ಲೋ ಸೆರೆನಾ ಕನಸು ಭಗ್ನ-ಕೆರ್ಬರ್‌ಗೆ ಚಾಂಪಿಯನ್ ಪಟ್ಟ

By Suvarna NewsFirst Published Jul 15, 2018, 12:15 PM IST
Highlights

ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಮೇರಿಕಾದ ಟೆನಿಸ್ ಟಾರೆ ಸೆರೆನಾ ವಿಲಿಯಮ್ಸ್ ಮುಗ್ಗರಿಸಿದ್ದಾರೆ.  ಆದರೆ ಜರ್ಮನಿಯ ಆ್ಯಂಜಿಲಿಕ್ ಕೆರ್ಬರ್ ಚಾಂಪಿಯನ್ ಪಟ್ಟ ಅಲಂಕರಿಸೋ ಮೂಲಕ ಇತಿಹಾಸ ರಚಿಸಿದ್ದಾರೆ. ಈ ರೋಚಕ ಹೋರಾಟದ ಡಿಟೇಲ್ಸ್ ಇಲ್ಲಿದೆ.

ಲಂಡನ್(ಜು.15): ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಸೆರೆನಾ ವಿಲಿಯಮ್ಸ್ ಕನಸು ಭಗ್ನಗೊಂಡಿದೆ. ಶನಿವಾರ ಇಲ್ಲಿ ನಡೆದ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಸೆರೆನಾ, ಜರ್ಮನಿಯ ಆ್ಯಂಜಿಲಿಕ್ ಕೆರ್ಬರ್ ವಿರುದ್ಧ 3-6,3-6 ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. 

ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟ ಕೆರ್ಬರ್ 1996ರ (ಸ್ಟೆಫಿ ಗ್ರಾಫ್) ಬಳಿಕ ವಿಂಬಲ್ಡನ್ ಟ್ರೋಫಿ ಗೆದ್ದ ಜರ್ಮನಿಯ ಮೊದಲ ಆಟಗಾರ್ತಿ ಎನ್ನುವ ದಾಖಲೆ ಬರೆದರು. ಈ ಸೋಲಿನೊಂದಿಗೆ ದಾಖಲೆಯ 8ನೇ ಬಾರಿಗೆ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅಮೆರಿಕದ ಟೆನಿಸ್ ತಾರೆ ಕನಸು ಈಡೇರಲಿಲ್ಲ. 

23 ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದಿರುವ ಸೆರೆನಾ, ತಮ್ಮ ಗ್ರ್ಯಾಂಡ್‌ಸ್ಲಾಂ ಜಯದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರು. ಆದರೆ ಫೈನಲ್‌ನಲ್ಲಿ ಜರ್ಮನಿಯ ಎಡಗೈ ಆಟಗಾರ್ತಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. 

ಅಗ್ರ 10 ಶ್ರೇಯಾಂಕಿತ ಆಟಗಾರ್ತಿಯರು ಕ್ವಾರ್ಟರ್ ಫೈನಲ್‌ಗೂ ಮೊದಲೇ ಹೊರಬಿದ್ದ ಕಾರಣ, ಸೆರೆನಾಗೆ ಕ್ವಾರ್ಟರ್ ಫೈನಲ್, ಸೆಮಿಫೈನಲ್‌ಗಳಲ್ಲಿ ಸುಲಭ ಎದುರಾಳಿಗಳು ಸಿಕ್ಕರು. ಆದರೆ ಫೈನಲ್‌ನಲ್ಲಿ ಈ ಮೊದಲೇ 2 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದ ಕೆರ್ಬರ್ ವಿರುದ್ಧ ಹೋರಾಡುವುದು ಸೆರೆನಾಗೆ ಕಷ್ಟವಾಯಿತು.

ತಾಯಿಯಾದ ಬಳಿಕ ಈ ಹಿಂದಿನ ವೇಗ, ಅಂಕಣದಲ್ಲಿ ಪಾದರಸದಂತೆ ಓಡಾಡುವ ಕಲೆಯನ್ನು ಕಳೆದುಕೊಂಡಿರುವ ಸೆರೆನಾ, ಎಡಗೈ ಆಟಗಾರ್ತಿಯ ವೇಗದ ಮುಂದೆ ಮಂಕಾದರು. ಮೊದಲ ಸೆಟ್‌ನ ಆರಂಭದಲ್ಲೇ ಸೆರೆನಾಗಿದು ಕಠಿಣ ಪಂದ್ಯವಾಗಲಿದೆ ಎನ್ನುವುದು ಖಚಿತಗೊಂಡಿತು. ನಿರೀಕ್ಷೆಯಂತೆಯೇ ಕೆರ್ಬರ್ 6-3 ಗೇಮ್‌ಗಳಲ್ಲಿ ಸೆಟ್ ತಮ್ಮದಾಗಿಸಿಕೊಂಡರು.

 

The secret to 's success lies in the stats… take an in-depth look into how the German reigned supreme on Centre Court pic.twitter.com/gkUEyyzAlL

— Wimbledon (@Wimbledon)

 

ದ್ವಿತೀಯ ಸೆಟ್‌ನಲ್ಲಿ ಪುಟಿದೆದ್ದು ಸೆರೆನಾ ಸಮಬಲ ಸಾಧಿಸಬಹುದು ಎನ್ನುವ ನಿರೀಕ್ಷೆ  ಅಭಿಮಾನಿಗಳಲ್ಲಿ ಇತ್ತಾದರೂ, ಅದು ಅಸಾಧ್ಯ ಎನಿಸಿತು. ಮೊದಲ ಗೇಮ್‌ನಲ್ಲಿ ಸಾಧಿಸಿದ್ದ ಪ್ರಾಬಲ್ಯವನ್ನು ದ್ವಿತೀಯ ಗೇಮ್‌ನಲ್ಲೂ ಮುಂದುವರಿಸಿದ ಕೆರ್ಬರ್, ಪಂದ್ಯದ ಮೇಲೆ ಹಿಡಿತ ಕಳೆದುಕೊಳ್ಳಲಿಲ್ಲ. 6-3 ಅಂತರದಲ್ಲಿ 2ನೇ ಸೆಟ್ ಜಯಿಸಿದ ಕೆರ್ಬರ್, ಕೇವಲ 1 ಗಂಟೆ 5 ನಿಮಿಷಗಳಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿದರು.  
 

click me!