ವೆಸ್ಟ್ಇಂಡೀಸ್ ವಿರುದ್ದ ವಿಶ್ವಇಲೆವೆನ್ ತಂಡಕ್ಕೆ ಸೋಲಿನ ಕಹಿ

First Published Jun 1, 2018, 10:55 AM IST
Highlights

ವಿಶ್ವಇಲೆವನ್ ತಂಡದ ವಿರುದ್ಧದ ಏಕೈಕ ಟಿ-ಟ್ವೆಂಟಿ ಸಹಾಯಾರ್ಥ ಪಂದ್ಯದಲ್ಲಿ ವೆಸ್ಟ್ಇಂಡೀಸ್ 72 ರನ್‌ಗಳ ಗೆಲುವು ದಾಖಲಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಏಕೈಕ ಟಿ-ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ದಾಳಿಗೆ ವಿಶ್ವಇಲೆವೆನ್ ತಂಜ ತತ್ತರಿಸಿತು.

ಲಂಡನ್(ಜೂನ್.1) ವಿಶ್ವಇಲೆವೆನ್ ವಿರುದ್ಧ ನಡೆದ ಐಸಿಸಿ ಸಹಾಯಾರ್ಥ ಏಕೈಕ ಟಿ-ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ಇಂಡೀಸ್ ಜಯಭೇರಿ ಬಾರಸಿದೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶೇಷ ಪಂದ್ಯದಲ್ಲಿ ವೆಸ್ಟ್ಇಂಡೀಸ್ 72 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಬ್ಬರ ಕೇವಲ18 ರನ್‌ಗಳಿಗೆ ಅಂತ್ಯವಾಯಿತು. ಇವಿನ್ ಲಿವಿಸ್ ಅರ್ಧಶತಕ ಸಿಡಿಸಿ ವಿಂಡೀಸ್ ತಂಡಕ್ಕೆ ಆಸರೆಯಾದರು.  ಲಿವೀಸ್ 58 ರನ್‌ಗಳ ಕಾಣಿಕೆ ನೀಡಿದರು. 87 ರನ್‌ಗಳಿಗೆ ವಿಂಡೀಸ್ 2 ವಿಕೆಟ್ ಕಳೆದುಕೊಂಡಿತು. ನಂತರ ಕಣಕ್ಕಿಳಿದ ಆಂಡ್ರೆ ಫ್ಲೆಚರ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ,. ಕೇವಲ 7 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು. 

ಮರ್ಲಾನ್ ಸಾಮ್ಯುಯೆಲ್ಸ್ ಹಾಗು ದಿನೇಶ್ ರಾಮ್ದಿನ್ ಜೊತೆಯಾಟದಿಂದ ವೆಸ್ಟ್ಇಂಡೀಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಸಾಮ್ಯುಯೆಲ್ಸ್ 22 ಎಸೆತದಲ್ಲಿ 43 ರನ್ ಚಚ್ಚಿದರು. ಸಾಮ್ಯುಯೆಲ್ಸ್ ವಿಕೆಟ್ ಪತನದ ನಂತರ ದಿನೇಶ್ ರಾಮ್ದಿನ್ ಹಾಗೂ ಆಂಡ್ರೆ ರಸೆಲ್ ಅಬ್ಬರಿಸಿದರು. ರಾಮ್ದಿನ್ 25 ಎಸೆತದಲ್ಲಿ ಅಜೇಯ 44 ರನ್ ಸಿಡಿಸಿದರು. ಇನ್ನು ರಸೆಲ್ 10 ಎಸೆತದಲ್ಲಿ 3 ಸಿಕ್ಸರ್ ನೆರವಿನಿಂದ ಅಜೇಯ 21 ರನ್ ಬಾರಿಸಿದರು. ಹೀಗಾಗಿ  ವೆಸ್ಟ್ಇಂಡೀಸ್ ನಿಗಧಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಪೇರಿಸಿತು. ವಿಶ್ವಇಲೆವೆನ್ ಪರ ರಶೀದ್ ಖಾನ್ 2 , ಶೋಯಿಬ್ ಮಲ್ಲಿಕ್ ಹಾಗೂ ಶಾಹಿದ್ ಆಫ್ರಿದಿ ತಲಾ 1 ವಿಕೆಟ್ ಪಡೆದು ಮಿಂಚಿದರು.

200 ರನ್‌ಗಳ ಬೃಹತ್ ಗುರಿ ನೋಡಿ ಬೆಚ್ಚಿಬಿದ್ದ ವಿಶ್ವಇಲೆವೆನ್ ತಂಡ, ವಿಂಡೀಸ್ ದಾಳಿಗೆ ತತ್ತರಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ತಮೀಮ್ ಇಕ್ಬಾಲ್ 2 ರನ್‌ ಗಳಿಸಿ ನಿರ್ಗಮಿಸಿದರೆ, ಲ್ಯೂಕ್ ರೊಂಚಿ ಶೂನ್ಯ ಸುತ್ತಿದರು. ದಿನೇಶ್ ಕಾರ್ತಿಕ್ ಕೂಡ ನಿರಾಸೆ ಅನುಭವಿಸಿದರು. ಕಾರ್ತಿಕ್ ಡಕೌಟ್ ಆದರು. ಸ್ಯಾಮ್ ಬಿಲ್ಲಿಂಗ್ಸ್ ಕೇವಲ 4 ರನ್ ಗಳಿಸಿ ನಿರ್ಗಮಿಸಿದರು. ವಿಶ್ವಇಲೆವೆನ್ ತಂಡ 8 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಶೋಯಿಬ್ ಮಲ್ಲಿಕ್ 12 ರನ್ ಕಾಣಿಕೆ ನೀಡಿದರೆ, ತಿಸರಾ ಪರೇರಾ ಏಕಾಂಗಿ ಹೋರಾಟ ನೀಡಿದರು. ಆದರೆ ಪರೇರಾಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ವಿಂಡೀಸ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಪರೇರಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ನಾಯಕ ಶಾಹಿದ್ ಆಫ್ರಿದಿ 12 ರನ್ ಗಳಿಸಿ ಔಟಾದರು. ಇನ್ನು ತಿಸರಾ ಪರೇರಾ 61 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.  ಬಾಲಂಗೋಚಿಗಳಾದ ರಶೀದ್  ಖಾನ್ 9 ರನ್ ಗಳಿಸಿ ಔಟಾದರು. ನೇಪಾಳಿ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅಜೇಯ 4 ರನ್ ಸಿಡಿಸಿದರೆ, ಮಿಚೆಲ್ ಮೆಕ್ಲೆನಾಘನ್ 10 ರನ್  ಬಾರಿಸಿ ಔಟಾದರು. ಈ ಮೂಲಕ ವಿಶ್ವಇಲೆವೆನ್ 16.4 ಓವರ್ ಗಳಲ್ಲಿ 127 ರನ್‌ಗಳಿಸಿ ಆಲೌಟ್ ಆಯಿತು. ವಿಂಡೀಸ್ ಪರ ಕೆಸ್ರಿಕ್ ವಿಲಿಯಮ್ಸ್ 3, ಆಂಡ್ರೆ ರಸೆಲ್ 2 ಹಾಗೂ ಸಾಮ್ಯುಯೆಲ್ ಬದ್ರಿ 2 ವಿಕೆಟ್ ಪಡೆದರು. ಇನ್ನು ಕೀಮೋ ಪೌಲ್ ಹಾಗು ನಾಯಕ ಕಾರ್ಲೋಸ್ ಬ್ರಾಥ್ವೈಟ್ ತಲಾ 1 ವಿಕೆಟ್ ಪಡೆದರು.

58 ರನ್ ಸಿಡಿಸಿ ವೆಸ್ಟ್ಇಂಡೀಸ್ ಗೆಲುವಿಗೆ ರೂವಾರಿಯಾದ ಇವಿನ್ ಲಿವಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸಹಾಯಾರ್ಥ ಪಂದ್ಯದಲ್ಲಿ ವೆಸ್ಟ್ಇಂಡೀಸ್ 72 ರನ್‌ಗಳ ಗೆಲುವಿನೊಂದಿಗೆ ಸಂಭ್ರಮಾಚರಿಸಿತು.

click me!