ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಸಿಂಧು ಪ್ರಶಸ್ತಿ ಫೇವರಿಟ್‌

By Web DeskFirst Published Mar 6, 2019, 10:01 AM IST
Highlights

ಬರೋಬ್ಬರಿ 18 ವರ್ಷಗಳಿಂದ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿರುವ ಭಾರತೀಯ ಬ್ಯಾಡ್ಮಿಂಟನ್ ಪಟುಗಳು ಈ ಬಾರಿ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಲ್ಲಿದೆ. ಸೈನಾ, ಸಿಂಧು ಹಾಗೂ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಾರೆಗಳೆನಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌[ಮಾ.06]: ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ ಬುಧವಾರದಿಂದ ಆರಂಭಗೊಳ್ಳಲಿದ್ದು, ಸೈನಾ ನೆಹ್ವಾಲ್‌ ಹಾಗೂ ಪಿ.ವಿ.ಸಿಂಧುಗೆ ಕಠಿಣ ಸವಾಲು ಎದುರಾಗಲಿದೆಯಾದರೂ, ಭಾರತದ ತಾರಾ ಶಟ್ಲರ್‌ಗಳಿಬ್ಬರು 18 ವರ್ಷದ ಪ್ರಶಸ್ತಿ ಬರವನ್ನು ನೀಗಿಸುವ ವಿಶ್ವಾಸದಲ್ಲಿದ್ದಾರೆ. ಸೈನಾ ಹಾಗೂ ಸಿಂಧುರ ಮಾರ್ಗದರ್ಶಕ ಹಾಗೂ ಹಾಲಿ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌, 2001ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ ಭಾರತೀಯರು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ.

ರಾಷ್ಟ್ರೀಯ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್, ಸೌರಭ್‌ ಚಾಂಪಿಯನ್‌

ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌’ನಲ್ಲಿನ ಅಗ್ರ 32 ಸ್ಥಾನಗಳಲ್ಲಿರುವ ಆಟಗಾರರಿಗೆ ಮಾತ್ರ ಟೂರ್ನಿಗೆ ನೇರ ಪ್ರವೇಶ ಸಿಗಲಿದ್ದು, ಕೇವಲ ಮೂವರು ಭಾರತೀಯರಿಗೆ ಶ್ರೇಯಾಂಕ ಸಿಕ್ಕಿದೆ. ಸೈನಾ, ಸಿಂಧು ಜತೆ ಕಿದಂಬಿ ಶ್ರೀಕಾಂತ್‌ (7ನೇ ಶ್ರೇಯಾಂಕ) ಪುರುಷರ ಸಿಂಗಲ್ಸ್‌ನಲ್ಲಿ ಶ್ರೇಯಾಂಕ ಪಡೆದಿದ್ದಾರೆ.

5ನೇ ಶ್ರೇಯಾಂಕಿತೆ ಸಿಂಧು, ಬುಧವಾರ ನಡೆಯಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ವಿಶ್ವ ನಂ.2 ದ.ಕೊರಿಯಾದ ಸುಂಗ್‌ ಜಿ ಹ್ಯುನ್‌ ವಿರುದ್ಧ ಸೆಣಸಲಿದ್ದಾರೆ. 8ನೇ ಶ್ರೇಯಾಂಕಿತೆ ಸೈನಾ, ಸ್ಕಾಟ್ಲೆಂಡ್‌ನ ಕ್ರಿಸ್ಟಿಗಿಲ್ಮೋರ್‌ರನ್ನು ಎದುರಿಸಲಿದ್ದಾರೆ. ಶ್ರೀಕಾಂತ್‌ಗೆ ಮೊದಲ ಸುತ್ತಲ್ಲಿ ಫ್ರಾನ್ಸ್‌ನ ಬ್ರೈಸ್‌ ಲೆವೆರೆಡ್ಜ್‌ ವಿರುದ್ಧ ಆಡಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ, ಬಿ.ಸಾಯಿ ಪ್ರಣೀತ್‌, ಎಚ್‌.ಎಸ್‌.ಪ್ರಣಯ್‌ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ಹಾಗೂ ಸಿಂಧು ಇಬ್ಬರಿಗೇ ಅವಕಾಶ ಸಿಕ್ಕಿದೆ. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಸುಮಿತ್‌ ರೆಡ್ಡಿ ಜೋಡಿ ಆಡಿದರೆ, ಮಹಿಳಾ ಡಬಲ್ಸ್‌ನಲ್ಲಿ ಮೇಘನಾ-ಪೂರ್ವಿಶಾ ಹಾಗೂ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಆಡಲಿದೆ. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಚೋಪ್ರಾ-ಸಿಕ್ಕಿ ರೆಡ್ಡಿ ಜೋಡಿ ಕಣಕ್ಕಿಳಿಯಲಿದೆ.

49.37 ಲಕ್ಷ ರುಪಾಯಿ ಬಹುಮಾನ

ಪುರುಷ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಆಟಗಾರರಿಗೆ 70000 ಅಮೆರಿಕನ್‌ ಡಾಲರ್‌ ಅಂದರೆ 49.37 ಲಕ್ಷ ರುಪಾಯಿ ಬಹುಮಾನ ಸಿಗಲಿದೆ. ಡಬಲ್ಸ್‌ನಲ್ಲಿ ಗೆಲ್ಲುವ ಜೋಡಿಗೆ ಒಟ್ಟು 52.15 ಲಕ್ಷ ರುಪಾಯಿ ಬಹುಮಾನ ಮೊತ್ತ ಸಿಗಲಿದೆ.

click me!