ಭಾರತ ಡೇವಿಸ್ ಕಪ್ ತಂಡ 55 ವರ್ಷಗಳ ಬಳಿಕ ಟೆನಿಸ್ ಆಡಲು ಪಾಕಿಸ್ತಾನಕ್ಕೆ ತೆರಳಲು ಸಜ್ಜಾಗಿದೆ. 1964 ರ ಮಾರ್ಚ್ ಬಳಿಕ ಇದೇ ಮೊದಲ ಬಾರಿಗೆ ಭಾರತ ನೆರೆಯ ದೇಶದಲ್ಲಿ ಟೆನಿಸ್ ಆಡಲಿದೆ, ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ(ಜು.29): ಡೇವಿಸ್ ಕಪ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದನ್ನು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ (ಎಐಟಿಎ) ಪ್ರಧಾನ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ ಭಾನುವಾರ ಖಚಿತ ಪಡಿಸಿದ್ದಾರೆ. ಭಾರತ ಡೇವಿಸ್ ಕಪ್ ತಂಡ 55 ವರ್ಷಗಳ ಬಳಿಕ ಕೈಗೊಳ್ಳುತ್ತಿರುವ ಮೊದಲ ಪಾಕಿಸ್ತಾನ ಪ್ರವಾಸ ಇದಾಗಿದೆ.
ಡೇವಿಸ್ ಕಪ್: ಪಾಕಿಸ್ತಾನಕ್ಕೆ ಭಾರತ ತಂಡ?
‘ನಾವು ಪಾಕಿಸ್ತಾನಕ್ಕೆ ಹೋಗುತ್ತಿದ್ದೇವೆ. ಇದು ದ್ವಿಪಕ್ಷೀಯ ಸರಣಿಯಲ್ಲ, ಇದು ವಿಶ್ವಕಪ್ ಆಗಿರುವ ಕಾರಣ ನಾವು ಹೋಗಬೇಕಾಗಿದೆ. ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತೇವೆ. ಈ ಹಿನ್ನೆಲೆಯಲ್ಲಿ ಪಾಕ್ ಪ್ರವಾಸ ಕುರಿತು ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ’ ಎಂದು ಚಟರ್ಜಿ ಹೇಳಿದ್ದಾರೆ.
1964 ರ ಮಾರ್ಚ್'ನಿಂದ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಡೇವಿಸ್ ಕಪ್ ಆಟಗಾರ ಕೂಡ ಪಾಕಿಸ್ತಾನಕ್ಕೆ ತೆರಳಿಲ್ಲ. 1964ರಲ್ಲಿ ಲಾಹೋರ್‌ನಲ್ಲಿ ನಡೆದಿದ್ದ ಡೇವಿಸ್ ಕಪ್‌ನಲ್ಲಿ ಭಾರತ ತಂಡ 4-0 ಯಿಂದ ಪಾಕಿಸ್ತಾನವನ್ನು ಮಣಿಸಿತ್ತು. ಈ ಹಿಂದೆ ಇಟಲಿ ವಿರುದ್ಧ ಆಡಿದ್ದ ತಂಡವನ್ನೆ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಚಟರ್ಜಿ ಹೇಳಿದ್ದಾರೆ. ವೀಸಾ ಪ್ರಕ್ರಿಯೆಗೆ ಹಲವು ದಿನಗಳು ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಈಗಿನಿಂದಲೇ ಆಟಗಾರರ ವೀಸಾ ಪ್ರಕ್ರಿಯೆಗೆ ಮುಂದಾಗಲಿದ್ದೇವೆ ಎಂದರು.
ವಾರದಲ್ಲಿ ಭಾರತ ತಂಡದ ಆಯ್ಕೆ:
ಮುಂದಿನ ಸೆಪ್ಟೆಂಬರ್ 14, 15 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಏಷ್ಯಾ/ಒಶಿನಿಯಾ ಗುಂಪು ಹಂತದ ಡೇವಿಸ್ ಕಪ್ ಟೂರ್ನಿಗೆ ಆಗಸ್ಟ್ 5 ರಂದು ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ಎಐಟಿಎ ಪ್ರಧಾನ ಕಾರ‍್ಯದರ್ಶಿ ಹಿರಣ್ಮಯಿ ಚಟರ್ಜಿ ಭಾನುವಾರ ಹೇಳಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಭಾರತದ ನಂ.1 ಆಟಗಾರ ಪ್ರಜ್ನೇಶ್ ಗುಣೇಶ್ವರನ್ ಮತ್ತು ರಾಮ್ ಕುಮಾರ್ ರಾಮನಾಥನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು, ಯೂಕಿ ಭಾಂಬ್ರಿ ಮತ್ತು ಸುಮಿತ್ ನಗಾಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಆಡುವುದು ಬಹುತೇಕ ಖಚಿತವಾಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಡೇವಿಸ್ ಕಪ್‌ನಲ್ಲಿ 1-3 ರ ಅಂತರದಲ್ಲಿ ಭಾರತ ಸೋಲುಂಡಿತ್ತು. ಆ ಬಳಿಕ ಆಟವಾಡದ ನಾಯಕ ಮಹೇಶ್ ಭೂಪತಿ ಮತ್ತು ಕೋಚ್ ಜೀಶನ್ ಅಲಿ ಅವರ ಒಪ್ಪಂದ ಪೂರ್ಣಗೊಂಡಿತ್ತು. ಇದೀಪ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗೂ ಭಾರತ ತಂಡದ ಜತೆ ಇವರನ್ನೆ ಕಳುಹಿಸುವ ಸಾಧ್ಯತೆಯಿದೆ.