36ನೇ ನ್ಯಾಷನಲ್ ಗೇಮ್ಸ್‌ನಲ್ಲಿ ಹೊರಗುಳಿಯಲು ನಿರ್ಧರಿಸಿದ ನೀರಜ್ ಚೋಪ್ರಾ
36ನೇ ನ್ಯಾಷನಲ್ ಗೇಮ್ಸ್ ಸೆಪ್ಟೆಂಬರ್ 27ರಿಂದ ಗುಜರಾತ್‌ನಲ್ಲಿ ಆರಂಭ
ಗುಜರಾತ್‌ನ 6 ನಗರಗಳಲ್ಲಿ ನಡೆಯಲಿರುವ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟ
ನವದೆಹಲಿ(ಸೆ.10): ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಗುಜರಾತ್‌ನಲ್ಲಿ ನಡೆಯಲಿರುವ 36ನೇ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ. ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಂಡು 2023ರಲ್ಲಿ ನಡೆಯಲಿರುವ ಮಹತ್ವದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ನ್ಯಾಷನಲ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳದಿರಲು ನೀರಜ್ ಚೋಪ್ರಾ ತೀರ್ಮಾನಿಸಿದ್ದಾರೆ.
36ನೇ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟವು ಗುಜರಾತ್‌ನಲ್ಲಿ ನವೆಂಬರ್ 27ರಿಂದ ಅಕ್ಟೋಬರ್ 10ರ ವರೆಗೆ ನಡೆಯಲಿದೆ. ಗುಜರಾಥ್‌ನ 6 ನಗರಗಳಾದ ಗಾಂಧಿನಗರ, ಅಹಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್ ಹಾಗೂ ಭಾವ್‌ನಗರಗಳಲ್ಲಿ ಈ ಬಾರಿಯ ನ್ಯಾಷನಲ್ ಗೇಮ್ಸ್ ಚಾಂಪಿಯನ್‌ಶಿಪ್ ಜರುಗಲಿದೆ. 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿಂದ 36 ವಿವಿಧ ಸ್ಪರ್ಧೆಗಳಿಗೆ ಸುಮಾರು 8,000ಕ್ಕೂ ಅಧಿಕ ಕ್ರೀಡಾಪಟುಗಳು ಈ ಬಾರಿಯ ನ್ಯಾಷನಲ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಗುರುವಾರವಷ್ಟೇ ನೀರಜ್ ಚೋಪ್ರಾ, ಝೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ ಸ್ಪರ್ಧೆಯಲ್ಲಿ 88.84 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಇದರೊಂದಿಗೆ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿ ಈ ಸಾಧನೆಗೈದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.
13 ತಿಂಗಳಲ್ಲಿ 3 ಪ್ರತಿಷ್ಠಿತ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ
ಈ ವರ್ಷಾರಂಭಕ್ಕೂ ಮುನ್ನ ನನ್ನ ಪ್ಲಾನ್ ಪ್ರಕಾರ ಇದು ಈ ಆವೃತ್ತಿಯ ಕೊನೆಯ ಸ್ಪರ್ಧೆಯಾಗಿದೆ. ನಾನು ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅದು ಮುಂದೂಡಲ್ಪಟ್ಟಿದೆ. ಹೀಗಾಗಿ ಝೂರಿಚ್ ಸ್ಪರ್ಧೆಯೊಂದಿಗೆ ನನ್ನ ಈ ಸೀಸನ್ ಅಂತ್ಯವಾಗಿದೆ. ನ್ಯಾಷನಲ್ ಗೇಮ್ಸ್ ಆರಂಭದ ವೇಳಾಪಟ್ಟಿ ಇತ್ತೀಚೆಗಷ್ಟೇ ಪ್ರಕಟವಾಗಿದೆ. ಈ ಕುರಿತಂತೆ ನಾನು ನನ್ನ ಕೋಚ್ ಜತೆ ಸಮಾಲೋಚನೆ ನಡೆಸಿದಾಗ, ಅವರು ನ್ಯಾಷನಲ್ ಗೇಮ್ಸ್‌ನಿಂದ ಹೊರಗುಳಿದು, ಕೆಲಕಾಲ ವಿಶ್ರಾಂತಿ ಪಡೆದು, ಮುಂದಿನ ವರ್ಷದ ಮಹತ್ವದ ಟೂರ್ನಿಗಳಿಗೆ ಸಜ್ಜಾಗಲು ಸಲಹೆ ನೀಡಿದ್ದಾರೆ ಎಂದು ನೀರಜ್ ಚೋಪ್ರಾ ತಿಳಿಸಿದ್ದಾರೆ.
ಕಳೆದ 13 ತಿಂಗಳಲ್ಲಿ ಮೂರು ಮಹತ್ವದ ಪದಕ ಜಯಿಸಿರುವ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಕಳೆದ 13 ತಿಂಗಳಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. 2021ರ ಆಗಸ್ಟ್ 7ರಂದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ನೀರಜ್, ಕಳೆದ ತಿಂಗಳು ಅಮೆರಿಕದ ಯೂಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಶಿಪ್ ಬಳಿಕ ಅತಿಹೆಚ್ಚು ಮಹತ್ವ ಪಡೆದಿರುವ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.