
ನವದೆಹಲಿ(ಅ.05): ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ ಭಾರತದ ಶೂಟರ್ಗಳನ್ನು ಮಾಜಿ ಶೂಟರ್ ಅಭಿನವ್ ಬಿಂದ್ರಾ ನೇತೃತ್ವದ ಎನ್ಆರ್ಎಐ ಸಮಿತಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಶೂಟರ್ಗಳ ವೈಫಲ್ಯದ ಹಿಂದಿನ ಕಾರಣವನ್ನು ಪತ್ತೆಹಚ್ಚಲು ಒಲಿಂಪಿಕ್ಸ್‌ನಲ್ಲಿ ಶೂಟರ್ಗಳ ವೈಫಲ್ಯದ ಬೆನ್ನಲ್ಲೇ ಭಾರತೀಯ ರೈಫಲ್ಸ್ ಸಂಸ್ಥೆ (ಎನ್ಆರ್ಎಐ) ವತಿಯಿಂದ ಸಮಿತಿ ರಚಿಸಿತ್ತು. ನಾಲ್ವರು ಸದಸ್ಯರ ಈ ಸಮಿತಿಗೆ ಮಾಜಿ ಶೂಟರ್ ಅಭಿನವ್ ಬಿಂದ್ರಾ ಅಧ್ಯಕ್ಷರಾಗಿದ್ದರು. ಇದೀಗ, ಸಂಸ್ಥೆಯ ಪ್ರತಿಯೊಬ್ಬ ಶೂಟರ್ನ ವೈಫಲ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಎನ್ಆರ್ಎಐಗೆ ತನ್ನ ವರದಿ ಸಲ್ಲಿಸಿದೆ. ಅಲ್ಲದೆ, ಗುರಿಕಾರರ ತರಬೇತುದಾರರು ಹಾಗೂ ರಾಷ್ಟ್ರೀಯ ರೈಫಲ್ ಸಂಸ್ಥೆಗೂ ಮಾತಿನ ಬರೆ ಎಳೆದಿರುವ ಸಮಿತಿ, ಶೂಟರ್ಗಳನ್ನು ತರಬೇತಿಗೊಳಿಸುವ, ದೊಡ್ಡ ಕ್ರೀಡಾಕೂಟಗಳಿಗೆ ಅಣಿಗೊಳಿಸುವ ವ್ಯವಸ್ಥೆಯೇ ಬದಲಾಗಬೇಕೆಂಬ ಸಲಹೆಯನ್ನೂ ನೀಡಿದೆ.
‘‘ರಿಯೊ ಒಲಿಂಪಿಕ್ಸ್‌ಗಾಗಿ ಯಾವ ರೀತಿಯಲ್ಲಿ ತಯಾರಿ ನಡೆಸಬೇಕಿತ್ತೋ ಆ ಮಟ್ಟಕ್ಕೆ ಸಿದ್ಧಗೊಳ್ಳುವಲ್ಲಿ ಶೂಟರ್ಗಳು ಎಡವಿದ್ದಾರೆ. ವಾಸ್ತವ ಮರೆತು ಕೇವಲ ಅದೃಷ್ಟದ ಮೇಲೆಯೇ ಅವಲಂಬಿಸಿರುವುದು ರಿಯೊ ಸ್ಪರ್ಧೆಗಳ ಫಲಿತಾಂಶಗಳು ಹೇಳುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅಲ್ಲಲ್ಲಿ ಕೆಲ ಯಶಸ್ಸುಗಳನ್ನು ಕೆಲವಾರು ಶೂಟರ್ಗಳು ದಾಖಲಿಸಿದ್ದರೂ ರಿಯೊ ಒಲಿಂಪಿಕ್ಸ್‌ನಲ್ಲಿ ಅವರೆಲ್ಲರೂ ಪೇಲವ ಎನಿಸಿದ್ದು ವಿಪರ್ಯಾಸ’’ ಎಂದು ಹೇಳಿದೆ. ಮುಖ್ಯವಾಗಿ ಸರ್ಕಾರದ ಹಣವೆಂದರೆ ಹೇಗೆ ಬೇಕಾದರೂ ಚೆಲ್ಲಾಡಬಹುದು ಎಂಬ ಮನಸ್ಥಿತಿಯಲ್ಲೇ ಆಟಗಾರರು ಇದ್ದರೆಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
ಹೀನಾ ಸಿಧುಗೂ ಛೀಮಾರಿ :
ಸರ್ಕಾರ ಉನ್ನತ ಮಟ್ಟದ ತರಬೇತಿಗಾಗಿ ನೀಡಿದ ಹಣದಲ್ಲಿ ಉತ್ತಮ ತಯಾರಿ ನಡೆಸುವ ಬದಲಿಗೆ ತನ್ನ ಪತಿ ರೋನಕ್ ಪಂಡಿತ್ ಅವರನ್ನು ಕೋಚ್ ಆಗಿಸಿಕೊಂಡಿದ್ದ ಮಹಿಳಾ ಶೂಟರ್ ಹೀನಾ ಸಿಧು ಬಗ್ಗೆಯೂ ಸಮಿತಿ ತೀವ್ರ ವಾಗ್ದಾಳಿ ನಡೆಸಿದೆ. ಒಲಿಂಪಿಕ್ಸ್‌ನಂಥ ದೊಡ್ಡ ಕ್ರೀಡಾಕೂಟ ಮುಂದಿದ್ದರೂ ಈ ಸವಾಲನ್ನು ಅರ್ಥ ಮಾಡಿಕೊಳ್ಳದ ಸಿಧು, ರಾಷ್ಟ್ರೀಯ ಕೋಚ್ ಪಾವೆಲ್ ಸ್ಮಿರ್ನೊವ್ ಮಾರ್ಗದರ್ಶನವನ್ನು ನಿರ್ಲಕ್ಷಿಸಿದ್ದು ಅಕ್ಷಮ್ಯ’’ ಎಂದು ಸಮಿತಿಯು ಹೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.