
ಬೆಂಗಳೂರು(ಮಾ.23): ಬಿಸಿಸಿಐ ಬುಧವಾರವಷ್ಟೇ 2016-17ನೇ ಸಾಲಿಗೆ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ಘೋಷಿಸಿದೆ. ಪ್ರತಿಬಾರಿಯಂತೆ ಮೂರು ದರ್ಜೆಯ ಗುತ್ತಿಗೆಯನ್ನು ಘೋಷಿಸಲಾಗಿದ್ದು 2010ರ ನಂತರ ಇದೇ ಮೊದಲ ಬಾರಿಗೆ ಶೇ.100ರಷ್ಟು ಆಟಗಾರರ ಸಂಭಾವನೆಯನ್ನು ಹೆಚ್ಚಿಸಲಾಗಿದೆ.
ಅದ್ಭುತ ಫಾರ್ಮ್'ನಲ್ಲಿರುವ ರವೀಂದ್ರ ಜಡೇಜಾ ಎ ಗ್ರೇಡ್'ಗೆ ಬಡ್ತಿ ಪಡೆದರೆ ಸುರೇಶ್ ರೈನಾ, ಹರ್ಭಜನ್ ಸಿಂಗ್ ಅವರಂತಹ ಆಟಗಾರರು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.
ಈ ಬಾರಿಯ ಗುತ್ತಿಗೆ ಪದ್ದತಿಯಲ್ಲಿ ಟೆಸ್ಟ್ ಪರಿಣಿತರಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರ ಜತೆಗೆ ನೂತನವಾಗಿ 9 ಆಟಗಾರರನ್ನು ಇದೇ ಮೊದಲ ಬಾರಿಗೆ ಬಿಸಿಸಿಐ ಕೇಂದ್ರ ಗುತ್ತಿಗೆಗೆ ಸೇರ್ಪಡೆಗೊಂಡಿದ್ದಾರೆ. ಅವರಲ್ಲಿ ಓರ್ವ ಆಟಗಾರ ಬಿ ದರ್ಜೆಯ ಸ್ಥಾನಮಾನ ಪಡೆದರೆ, ಉಳಿದ ಎಂಟು ಆಟಗಾರರು ಸಿ ದರ್ಜೆಯ ಗುತ್ತಿಗೆಗೆ ಒಳಪಟ್ಟಿದ್ದಾರೆ.
ಶಾರ್ದೂಲ್ ಠಾಕೂರ್ - ಸಿ ಗ್ರೇಡ್
ಮುಂಬೈ ರಣಜಿ ತಂಡದ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಈ ಬಾರಿಯ ಬಿಸಿಸಿಐ ಸಿ ಗ್ರೇಡ್ ಗುತ್ತಿಗೆಗೆ ಒಳಪಟ್ಟಿದ್ದಾರೆ.
25 ವರ್ಷದ ಠಾಕೂರ್ ಜಿಂಬಾಬ್ವೆ ಹಾಗೂ ವೆಸ್ಟ್'ಇಂಡೀಸ್ ಪ್ರವಾಸದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರೂ ಪಾದಾರ್ಪಣೆ ಮಾಡಲು ವಿಫಲರಾಗಿದ್ದರು. ಮುಂಬೈ ಪರ 49 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಠಾಕೂರ್ 169 ವಿಕೆಟ್ ಪಡೆದಿದ್ದಾರೆ.
ಜಸ್ಪ್ರೀತ್ ಬುಮ್ರಾ- ಬಿ ಗ್ರೇಡ್
ಯಾರ್ಕರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ 23 ವರ್ಷದ ಗುಜರಾತ್ ವೇಗಿ ಜಸ್ಪ್ರೀತ್ ಬುಮ್ರಾ ನೇರವಾಗಿ ಬಿ ಗ್ರೇಡ್ ಗುತ್ತಿಗೆಗೆ ಆಯ್ಕೆಯಾಗಿದ್ದಾರೆ.
2016ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿದ ಬುಮ್ರಾ 11 ಏಕದಿನ ಮತ್ತು 24 ಟಿ20 ಪಂದ್ಯಗಳಲ್ಲಿ ಕಮಾಲ್ ಮಾಡಿದ್ದಾರೆ. ನಿಗದಿತ ಓವರ್'ಗಳ ಪಂದ್ಯದಲ್ಲಿ ಕ್ರಮವಾಗಿ 22 ಮತ್ತು 33 ವಿಕೆಟ್ ಪಡೆದು ಎದುರಾಳಿ ತಂಡದ ನೆಮ್ಮದಿ ಕೆಡಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಲಸಿತ್ ಮಾಲಿಂಗ ಜೊತೆ ದಾಳಿ ನಡೆಸುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದ ಬುಮ್ರಾ ಡೆತ್ ಓವರ್'ಗಳಲ್ಲೂ ಮಾರಕ ದಾಳಿ ನಡೆಸುವ ಕ್ಷಮತೆ ಹೊಂದಿದ್ದಾರೆ. ಈ ಬಾರಿಯ ಗುತ್ತಿಗೆ ಪ್ರಕ್ರಿಯೆಯಲ್ಲಿ ಬಿ ಗ್ರೇಡ್ ಗುತ್ತಿಗೆಗೆ ಒಳಪಟ್ಟ ಏಕೈಕ ಆಟಗಾರ ಎಂಬ ಹಿರಿಮೆಯೂ ಬುಮ್ರಾ ಪಾಲಾಗಿದೆ.
ಕರುಣ್ ನಾಯರ್- ಸಿ ಗ್ರೇಡ್
ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್'ನಲ್ಲಿ ಭರ್ಜರಿ ತ್ರಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್ ಬಿಸಿಸಿಐನ ಸಿ ಗ್ರೇಡ್ ಗುತ್ತಿಗೆ ಒಳಪಟ್ಟಿದ್ದಾರೆ.
2016ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಕರುಣ್ ನಾಯರ್ 51ರ ಸರಾಸರಿಯಂತೆ 3000 ರನ್ ಬಾರಿಸಿದ್ದಾರೆ.
ಮನೀಶ್ ಪಾಂಡ್ಯೆ- ಸಿ ದರ್ಜೆ
ಕರುಣ್ ನಾಯರ್ ಜೊತೆಗೆ ಬಿಸಿಸಿಐ ಗುತ್ತಿಗೆಗೆ ಒಳಪಟ್ಟ ಮತ್ತೊಬ್ಬ ಕರ್ನಾಟಕ ಆಟಗಾರ ಮನೀಶ್ ಪಾಂಡೆ.
2015ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಪಾಂಡೆ 2016ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ತಂಡಕ್ಕೆ ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದರು.
ಏಕದಿನ ಕ್ರಿಕೆಟ್'ನಲ್ಲಿ 40ರ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡಿರುವ ಪಾಂಡೆ ಟೀಂ ಇಂಡಿಯಾದಲ್ಲಿ ಭದ್ರವಾಗಿ ನೆಲೆಯೂರುವ ಇರಾದೆ ಹೊಂದಿದ್ದಾರೆ.
ಹಾರ್ಧಿಕ್ ಪಾಂಡ್ಯ- ಸಿ ಗ್ರೇಡ್
ಕೇವಲ 23 ವರ್ಷದ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗಾಗಲೇ ಟೀಂ ಇಂಡಿಯಾದಲ್ಲಿ ಭರವಸೆ ಮೂಡಿಸಿರುವ ಹೊಸ ಪ್ರತಿಭೆ.
ಈಗಾಗಲೆ 7 ಏಕದಿನ ಹಾಗೂ 19 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಪಾಂಡ್ಯ ತಂಡದ ಅವಿಭಾಜ್ಯ ಅಂಗವಾಗುವತ್ತ ಹೆಜ್ಜೆಯಿಡುತ್ತಿದ್ದಾರೆ.
ಮನ್ದೀಪ್ ಸಿಂಗ್- ಸಿ ಗ್ರೇಡ್
ಪಂಜಾಬ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್'ಮನ್ ಮನ್ದೀಪ್ ಸಿಂಗ್ ಸಿ ದರ್ಜೆಯ ಗುತ್ತಿಗೆಗೆ ಸೇರ್ಪಡೆಗೊಂಡಿದ್ದಾರೆ.
ಆರ್'ಸಿಬಿ ತಂಡದಲ್ಲಿ ಸಂಚಲನ ಮೂಡಿಸಿದ್ದ ಮನ್ದೀಪ್ ನಾಯಕ ಕೊಹ್ಲಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇವರ ಬ್ಯಾಟಿಂಗ್ ಶೈಲಿ ಗಮನಿಸಿದರೆ ಟಿ20 ಸ್ಪೆಷಲಿಸ್ಟ್ ಆಗುವತ್ತ ರೂಪುಗೊಳ್ಳುತ್ತಿದ್ದು ಇಲ್ಲಿಯವರೆಗೆ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.
ರಿಶಬ್ ಪಂತ್ - ಸಿ ಗ್ರೇಡ್
ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ದೆಹಲಿ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸಿ ಗ್ರೇಡ್ ಗುತ್ತಿಗೆಗೆ ಆಯ್ಕೆಯಾಗಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಅದ್ಭುತ ಪ್ರದರ್ಶನ ತೋರಿರುವ 19 ವರ್ಷದ ಯುವ ಪ್ರತಿಭೆ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲೂ ಮಿಂಚು ಹರಿಸುವ ವಿಶ್ವಾಸ ಮೂಡಿಸಿದ್ದಾರೆ. ಐಪಿಎಲ್'ನಲ್ಲಿ ರಿಶಬ್ ಪಂತ್ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಜಯಂತ್ ಯಾದವ್ - ಸಿ ಗ್ರೇಡ್
ಹರ್ಯಾಣ ತಂಡದ ಜಯಂತ್ ಯಾದವ್ 2016ರ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ತಾವಾಡಿದ ಕೇವಲ 4 ಪಂದ್ಯಗಳಲ್ಲಿಯೇ 11 ವಿಕೆಟ್ ಕಬಳಿಸುವುದರ ಜೊತೆಗೆ ಒಂದು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿ ಭರವಸೆಯ ಆಟಗಾರ ಎನಿಸಿಕೊಂಡಿದ್ದಾರೆ.
ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಯಾದವ್ ಸಿ ದರ್ಜೆಯ ಗುತ್ತಿಗೆಗೆ ಒಳಪಟ್ಟಿದ್ದಾರೆ.
ಯಜುವೇಂದ್ರ ಚಾಹಲ್ - ಸಿ ಗ್ರೇಡ್
ಹರ್ಯಾಣದ ಲೆಗ್'ಸ್ಪಿನ್ನರ್ ಯಜುವೇಂದ್ರ ಚಾಹಲ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 25 ರನ್'ಗಳಿಗೆ 6 ವಿಕೆಟ್ ಕಬಳಿಸಿ ಕ್ರಿಕೆಟ್ ಅಭಿಮಾನಿಗಳ ಹೀರೋ ಆಗಿ ವಿಜೃಂಬಿಸಿದರು.
ಸೀಮಿತ ಓವರ್'ಗಳ ಕ್ರಿಕೆಟ್'ನಲ್ಲಿ ಭರವಸೆ ಮೂಡಿಸಿರುವ ಯುವ ಸ್ಪಿನ್ನರ್ ಪ್ರಸ್ತುತ ಆರ್'ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.