ಫುಟ್ಬಾಲ್: ಕಾಂಬೋಡಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ

Published : Mar 23, 2017, 09:35 AM ISTUpdated : Apr 11, 2018, 01:02 PM IST
ಫುಟ್ಬಾಲ್: ಕಾಂಬೋಡಿಯಾ ವಿರುದ್ಧ ಭಾರತಕ್ಕೆ ರೋಚಕ ಜಯ

ಸಾರಾಂಶ

ಸೌಹರ್ಧಯುತ ಪಂದ್ಯದಲ್ಲಿ ಆತಿಥೇಯರಿಗೆ ಸೋಲು | ಹನ್ನೆರಡು ವರ್ಷಗಳ ಬಳಿಕ ವಿದೇಶದಲ್ಲಿ ಜಯ ಕಂಡ ಭಾರತೀಯರು

ನಾಮ್ ಪೆನ್(ಕಾಂಬೋಡಿಯಾ): ದ್ವಿತೀಯಾರ್ಧದ ಆಟದಲ್ಲಿ ಮೂಡಿಬಂದ ಎರಡು ಅದ್ಭುತ ಗೋಲುಗಳ ನೆರವಿನಿಂದ ಭಾರತ ತಂಡ, ಕಾಂಬೋಡಿಯಾ ವಿರುದ್ಧದ ಸೌಹಾರ್ಧಯುತ ಪಂದ್ಯದಲ್ಲಿ 3-2 ಗೋಲುಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್‌ ಫೈನಲ್ಸ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಮ್ಯಾನ್ಮಾರ್‌ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಫುಟ್ಬಾಲ್‌ ತಂಡ, ವಿದೇಶಿ ನೆಲದಲ್ಲಿ ನಡೆದ ಅಂತರಾಷ್ಟ್ರೀಯ ಸೌಹರ್ಧಪಂದ್ಯದಲ್ಲಿ ಗೆಲುವು ಪಡೆದಿದೆ. ಈ ಹಿಂದೆ 2005ರ ಜೂನ್‌'ನಲ್ಲಿ ನಡೆದಿದ್ದ ಸೌಹರ್ಧಯುತ ಪಂದ್ಯವೊಂದರಲ್ಲಿ ಭಾರತ ತಂಡ ಜಯಿಸಿತ್ತು. ಆ ಬಳಿಕ ವಿದೇಶದಲ್ಲಿ ನಡೆದ ಯಾವುದೇ ಸೌಹರ್ಧಯುತ ಪಂದ್ಯಗಳಲ್ಲಿ ಭಾರತ ಗೆದ್ದಿರಲಿಲ್ಲ. 

ಇಲ್ಲಿನ ಒಲಿಂಪಿಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ಸುನೀಲ್‌ ಛೆಟ್ರಿ 36ನೇ ನಿ., ಜೆಜೆ ಲಾಲ್‌ಪೆಕುಲಾ 50ನೇ ನಿ., ಸಂದೇಶ್‌ ಜಿಂಗಾನ್‌ 54ನೇ ನಿಮಿಷದಲ್ಲಿ ಗೋಲುಗಳಿಸಿದರು. ಇನ್ನು ಕಾಂಬೋಡಿಯಾ ತಂಡದ ಪರ ಕೂನ್‌ ಲಾಬ್ರೋವಿ 37ನೇ ನಿ., ಚನ್‌ ವತಾನಕಾ 62ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 

ಪಂದ್ಯದ ಆರಂಭದಿಂದಲೂ ಪ್ರಭಾವಿ ಆಟಕ್ಕೆ ಮುಂದಾದ ಭಾರತ ತಂಡ, ಅಂತಿಮವಾಗಿ ಪ್ರಾಬಲ್ಯ ಮೆರೆಯುವಲ್ಲಿ ಸಫಲವಾಯಿತು. ಭಾರತ ತಂಡದ ಆಟಗಾರರು ಆರಂಭದಲ್ಲಿ ಗೋಲುಗಳಿಸುವ ಮೂಲಕ ಎದುರಾಳಿ ಕಾಂಬೋಡಿಯಾ ತಂಡಕ್ಕೆ ಒತ್ತಡ ಹೇರುವ ತಂತ್ರಗಾರಿಕೆಯಲ್ಲಿ ಕಣಕ್ಕಿಳಿದಿದ್ದರು. ಅದೇ ಲೆಕ್ಕಚಾರದಲ್ಲಿ ಕಣಕ್ಕಿಳಿದ ಪ್ರವಾಸಿ ಭಾರತ ತಂಡಕ್ಕೆ ಸ್ಟಾರ್‌ ಆಟಗಾರ ಸುನೀಲ್‌ ಛೆಟ್ರಿ ಗೋಲಿನ ಖಾತೆ ತೆರೆದರು. 

ಛೆಟ್ರಿ 36ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಬೇಧಿಸಿದ್ದಲ್ಲದೇ, ಆಕರ್ಷಕ ಗೋಲುಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ನಂತರದ ಕ್ಷಣದಲ್ಲೇ ಆತಿಥೇಯ ಕಾಂಬೋಡಿಯಾ ತಂಡದ ಸ್ಟೆ್ರೖಕರ್‌ ಕೂನ್‌ ಲಾಬ್ರೋವಿ ತಂಡದ ಖಾತೆ ತೆರೆಯುವ ಮೂಲಕ 1-1ಗೋಲಿನಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಈ ವೇಳೆಯಲ್ಲಿ ಭಾರತ ತಂಡ ಮುನ್ನಡೆ ಪಡೆಯುವುದಕ್ಕಾಗಿ ಸಾಕಷ್ಟುಬಾರಿ ಯತ್ನಿಸಿತಾದರೂ ಅದು ಸಾಧ್ಯವಾಗಲಿಲ್ಲ. ಆಟಗಾರರ ಕೆಲವೊಂದು ತಪ್ಪುಗಳು ತಂಡದ ಗೋಲುಗಳಿಕೆಗೆ ಹಿನ್ನಡೆಗೆ ಕಾರಣವಾಯಿತು. ಮೊದಲ ಅವಧಿಯ ಆಟದಲ್ಲಿ ಎರಡು ತಂಡಗಳ ಆಟಗಾರರು ತಲಾ 1 ಗೋಲುಗಳಿಸಿದ್ದವು. 

ದ್ವಿತೀಯಾರ್ಧದ ಆಟ ಆರಂಭವಾಗಿ 5 ನಿಮಿಷಗಳ ಬಳಿಕ ಭಾರತ ತಂಡದ ಆಟಗಾರ ಜೆಜೆ ಲಾಲ್‌ಪೆಕುಲಾ, ಕಾಂಬೋಡಿಯಾ ತಂಡದ ಗೋಲ್‌ಕೀಪರ್‌ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡಕ್ಕೆ 2-1ರಿಂದ ಮುನ್ನಡೆ ನೀಡಿದರು. ಇದಾದ 4 ನಿಮಿಷಗಳ ಬಳಿಕ ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಆಕರ್ಷಕ ಫೀಲ್ಡ್‌ ಗೋಲು ದಾಖಲಿಸಿ ತಂಡಕ್ಕೆ 3-1ರ ಮುನ್ನಡೆ ತಂದುಕೊಟ್ಟರು. ಆತಿಥೇಯ ಕಾಂಬೋಡಿಯಾ ತಂಡದ ಮೇಲೆ ಭಾರತದ ಆಟಗಾರರ ಒತ್ತಡ ಹೇರಿದರು. ನಂತರದ 8 ನಿಮಿಷಗಳಲ್ಲಿ ಕಾಂಬೋಡಿಯಾದ ಮಿಡ್‌ಫೀಲ್ಡರ್‌ ಚನ್‌ ವತಾನಕಾ 62ನೇ ನಿಮಿಷದಲ್ಲಿ ಗೋಲುಗಳಿಸಿ ತಂಡಕ್ಕೆ 2ನೇ ಗೋಲು ತಂದುಕೊಟ್ಟರು. ಅಂತಿಮ ಅವಧಿಯವರೆಗೂ ಇದೇ ಅಂತರವನ್ನು ಕಾಯ್ದುಕೊಂಡ ಭಾರತ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಸಫಲವಾಯಿತು. 

ಇದೇ ತಿಂಗಳ 28ರಂದು ಎಎಫ್'ಸಿ ಏಷ್ಯನ್ ಕಪ್'ನ ಅಂತಿಮ ಕ್ವಾಲಿಫೈರ್'ನಲ್ಲಿ ಭಾರತ ತಂಡವು ಮಯನ್ಮಾರ್'ನ ಸವಾಲನ್ನು ಎದುರಿಸಲಿದೆ. ಎ ಗುಂಪಿನಲ್ಲಿರುವ ಭಾರತದೊಂದಿಗೆ ಮಯನ್ಮಾರ್, ಕಿರ್ಗಿಜ್ ಗಣರಾಜ್ಯ ಮತ್ತು ಮೆಕಾವು ತಂಡಗಳಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?