ಇಂದಿನಿಂದ ಕರ್ನಾಟಕ ಮಿನಿ ಒಲಿಂಪಿಕ್ಸ್‌ ಆರಂಭ

By Kannadaprabha NewsFirst Published May 16, 2022, 11:31 AM IST
Highlights

* 2ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ಗೆ ಸೋಮವಾರ ಚಾಲನೆ

* ಕೋವಿಡ್‌ ಕಾರಣದಿಂದ ಕಳೆದ ವರ್ಷ ಮುಂದೂಡಲ್ಪಟ್ಟಿದ್ದ ಟೂರ್ನಿ

* ರಾಜ್ಯದ ವಿವಿಧ ಕಡೆಗಳಿಂದ ಸುಮಾರು 5ರಿಂದ 6 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ

ಬೆಂಗಳೂರು(ಮೇ.16): ಕೋವಿಡ್‌ ಕಾರಣದಿಂದ (COVID 19) ಕಳೆದ ವರ್ಷ ಮುಂದೂಡಲ್ಪಟ್ಟಿದ್ದ 2ನೇ ಆವೃತ್ತಿಯ ಕರ್ನಾಟಕ ಮಿನಿ ಒಲಿಂಪಿಕ್ಸ್‌ಗೆ (Karnataka Mini Olympics) ಸೋಮವಾರ ಚಾಲನೆ ಸಿಗಲಿದೆ. ಸಂಜೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ (Thawar Chand Gehlot) ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಉದ್ಘಾಟಿಸಲಿದ್ದಾರೆ. ಮೇ 22ಕ್ಕೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (Karnataka Olympics Association) (ಕೆಒಎ) ಜಂಟಿಯಾಗಿ ಗೇಮ್ಸ್‌ ಆಯೋಜಿಸುತ್ತಿದ್ದು, ರಾಜ್ಯದ ವಿವಿಧ ಕಡೆಗಳಿಂದ ಸುಮಾರು 5ರಿಂದ 6 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. 2.5 ಕೋಟಿ ರು. ಬಜೆಟ್‌ನಲ್ಲಿ ಗೇಮ್ಸ್‌ ನಡೆಯಲಿದೆ ಎಂದು ಕೆಒಎ ಮಾಹಿತಿ ನೀಡಿದೆ.

ಅಥ್ಲೆಟಿಕ್ಸ್‌, ಆರ್ಚರಿ, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫುಟ್ಬಾಲ್‌, ಈಜು, ಶೂಟಿಂಗ್‌, ವೇಟ್‌ಲಿಫ್ಟಿಂಗ್‌, ಖೋಖೋ, ಹಾಕಿ ಸೇರಿದಂತೆ 21 ಕ್ರೀಡೆಗಳು ನಡೆಯಲಿವೆ. ಕಂಠೀರವ ಕ್ರೀಡಾಂಗಣದ ಜತೆಗೆ ಬಸವನಗುಡಿಯ ಈಜುಕೇಂದ್ರ, ಶಾಂತಿನಗರ ಹಾಕಿ ಕ್ರೀಡಾಂಗಣ ಸೇರಿದಂತೆ ಇನ್ನೂ ಹಲವೆಡೆ ಸ್ಪರ್ಧೆಗಳು ನಡೆಯಲಿವೆ. ಮಿನಿ ಒಲಿಂಪಿಕ್ಸ್‌ ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ 2020ರಲ್ಲಿ ನಡೆದಿತ್ತು.

ಮಿನಿ ಒಲಿಂಪಿಕ್ಸ್‌ಗೆ ಹುಬ್ಬಳ್ಳಿಯ 10 ಶೂಟರ್‌ಗಳು ಆಯ್ಕೆ

ಹುಬ್ಬಳ್ಳಿ: ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಮೇ 16ರಿಂದ ನಡೆಯಲಿರುವ 14 ವಯೋಮಿತಿಯ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿಯ 10 ಶೂಟರ್‌ಗಳು ಆಯ್ಕೆಯಾಗಿದ್ದಾರೆ. ಕ್ರೀಡಾಕೂಟದಲ್ಲಿ ಶೂಟಿಂಗ್‌ ಸೇರಿ 14 ಕ್ರೀಡೆಗಳು ನಡೆಯಲಿವೆ. ಪಿಸ್ತೂಲ್‌ ಶೂಟರ್‌ಗಳಾದ ಜಿಫರ್‌ ಅರಳಿ, ಕೀರ್ತಿ ಬಾಲೆಹೊಸೂರ, ಸುಶೋಬನಾ ಜಾಲಿಹಾಳ, ಸಿದ್ಧಾಥ್‌ರ್‍ ಬದನಿ (ಗದಗ) ರೈಫಲ್‌ ಶೂಟರ್‌ಗಳಾದ ಹರ್ಷಾ ಭದ್ರಾಪುರ, ಸುಶಾಂತ ನಿಂಬನ್ನವರ, ಪೃಥ್ವಿರಾಜ್‌ ಬಾಲೇಹೊಸೂರ, ಸಮೀಕ್ಷಾ ಶೆಟ್ಟಿ, ಮಾನ್ವಿತಾ ಬಡ್ನಿ (ಗದಗ) ಮತ್ತು ಅಮೃತಾ ಕಬಾಡೆ ಮಿನಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.

ಯಶಸ್ವಿಯಾಗಿ ಮುಕ್ತಾಯವಾದ ಕಪಿಲ್ ಕ್ರಿಕೆಟ್ ಕ್ಲಬ್ ತರಬೇತಿ ಶಿಬಿರ!

ಮಿಷನ್‌ ಒಲಿಂಪಿಕ್ಸ್‌ನತ್ತ ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿ ನಡೆದಿರುವ ಈ ಹೆಜ್ಜೆ ಹುಬ್ಬಳ್ಳಿ ಶೂಟರ್‌ಗಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಲಿದೆ ಎಂದು ತರಬೇತುದಾರ ರವಿಚಂದ್ರ ಬಾಲೇಹೊಸೂರ ಹೇಳಿದ್ದಾರೆ. ಈ ಬಾರಿ ಹುಬ್ಬಳ್ಳಿಯ ಶೂಟರ್‌ಗಳು ಕರ್ನಾಟಕಕ್ಕೆ ಹೆಚ್ಚಿನ ಕೀರ್ತಿ ತರಲಿ ಎಂದು ಹುಬ್ಬಳ್ಳಿ ಶೂಟಿಂಗ್‌ ಅಕಾಡೆಮಿ ಅಧ್ಯಕ್ಷ ಶಿವಾನಂದ ಬಾಲೇಹೊಸೂರ ಹಾರೈಸಿದ್ದಾರೆ.

click me!