
ಮುಂಬೈ(ಜು.16): ರವಿಶಾಸ್ತ್ರಿ ಕೋಚ್ ಆಗ್ಬೇಕು ಅಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಹಠ ಸಾಧಿಸಿಕೊಂಡ್ರು. ಆದ್ರೆ ಇದೇ ಶಾಸ್ತ್ರಿ ಗರಡಿಯಲ್ಲಿ ಪಳಗಿದ್ದ ಟೀಂ ಇಂಡಿಯಾ, ಕೆಲ ಹೀನಾಯ ಸೋಲುಗಳನ್ನು ಕಂಡಿದೆ. ಅದನ್ನು ನೋಡಿದವರ್ಯಾರಿಗೂ ಶಾಸ್ತ್ರಿ ಕೋಚ್ ಆಗಿರುವುದು ಒಳ್ಳೆಯದು ಅಂತ ಹೇಳಲ್ಲ. ಯಾಕೆಂದರೆ ಭಾರತ ಅಂತ ಸೋಲುಗಳನ್ನ ಅವರ ಮುಂದಾಳತ್ವದಲ್ಲಿ ಸೋತಿದೆ.
5 ಶಾಕ್ ನೋಡಿದ್ಮೇಲೆ ಹೇಳಿ ಶಾಸ್ತ್ರಿ ಬೇಕೋ ಬೇಡವೋ..?
ಕೇವಲ ನಾಯಕ ವಿರಾಟ್ ಕೊಹ್ಲಿಗೆ ಅಡ್ಜೆಸ್ಟ್ ಆಗುತ್ತಾರೆ ಎನ್ನುವ ಒಂದೇ ಒಂದು ಕಾರಣಕ್ಕೆ ರವಿಶಾಸ್ತ್ರಿಯನ್ನು ಟೀಂ ಇಂಡಿಯಾ ಚೀಫ್ ಕೋಚ್ ಆಗಿ ನೇಮಿಸಲಾಯಿತು. ಕೊಹ್ಲಿ ಒಲ್ಲೆ ಅಂದಿದ್ದರೆ, ಶಾಸ್ತ್ರಿ ಎಂಬ ಮಹಾಶಯ ಕೋಚ್ ರೇಸ್'ನಲ್ಲೇ ಇರುತ್ತಿರಲಿಲ್ಲ. ರವಿಶಾಸ್ತ್ರಿ ಡೈರೆಕ್ಟರ್ ಆಗಿದ್ದಾಗ ಟೀಂ ಇಂಡಿಯಾ ಸಾಧನೆ ಆಗಿದೆ ಹೀಗಿದೆ ಅಂತ ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ 2 ವರ್ಷ ಅವರು ಡೈರೆಕ್ಟರ್ ಆಗಿದ್ದಾಗ ಟೀಂ ಇಂಡಿಯಾ ಸೋತಿರುವುದನ್ನು ನೋಡಿದರೆ ನೀವೂ ಶಾಕ್ ಆಗ್ತಿರಾ.
ಶಾಕ್-1 : 2015ರ ಏಕದಿನ ವಿಶ್ವಕಪ್ ಸೆಮಿಸ್'ನಲ್ಲಿ ಸೋಲು
2011ರ ಏಕದಿನ ವರ್ಲ್ಡ್ಕಪ್ ಗೆದ್ದಿದ್ದ ಭಾರತ, 2015ರಲ್ಲೂ ಗೆಲ್ಲುವ ವಿಶ್ವಾಸದೊಂದಿಗೆ ಕಾಂಗರೂ ನಾಡಿಗೆ ಹೋಗಿತ್ತು. ಆದ್ರೆ ಭಾರತೀಯರ ಅಭಿಯಾನ ಸೆಮಿಫೈನಲ್'ನಲ್ಲೇ ಅಂತ್ಯಗೊಂಡಿತು. ವರ್ಲ್ಡ್ಕಪ್ಗಾಗಿ ವಿಶೇಷ ತಯಾರಿ, ತಿಂಗಳು ಮುಂಚೆಯೇ ಆಸ್ಟ್ರೇಲಿಯಾಗೆ ಹೋಗಿದ್ದು. ಹೀಗೆ ಏನೆಲ್ಲಾ ಕಸರತ್ತು ಮಾಡಿಸಿದ್ರೂ ಏನೂ ಆಗಲಿಲ್ಲ. ಆಗ ರವಿಶಾಸ್ತ್ರಿಯೇ ಡೈರೆಕ್ಟರ್ ಆಗಿದ್ದರು. ಅಷ್ಟೇ ಅಲ್ಲ, ಶಾಸ್ತ್ರಿಯ ಪಟಾಲಂ ಸಹ ಜೊತೆಯಲ್ಲಿತ್ತು.
ಶಾಕ್-2: 2016ರ ಟಿ20 ವಿಶ್ವಕಪ್ ಸೆಮಿಸ್ನಲ್ಲಿ ಪರಾಭವ
2007ರಲ್ಲಿ ಚೊಚ್ಚಲ ಟಿ20 ವರ್ಲ್ಡ್ಕಪ್ ಗೆದ್ದ ಮೇಲೆ ಭಾರತ ಮತ್ತೆ ಟಿ20 ವರ್ಲ್ಡ್ಕಪ್ ಗೆಲ್ಲಲೇ ಇಲ್ಲ. 2016ರಲ್ಲಿ ಭಾರತದಲ್ಲೇ ನಡೆದ ಟಿ20 ವಿಶ್ವಕಪ್ ಗೆಲ್ಲೋ ಫೇವರಿಟ್ ಆಗಿತ್ತು. ರವಿಶಾಸ್ತ್ರಿ ಗರಡಿಯಲ್ಲಿ ಭಾರತ ಟಿ20 ಚಾಂಪಿಯನ್ ಆಗುತ್ತೆ ಅನ್ನೋ ಕನಸು ಕಂಡಿದ್ದರು. ಆದ್ರೆ ನಮ್ಮವರ ಅಭಿಯಾನ ಇಲ್ಲೂ ಸೆಮಿಫೈನಲ್ಗೆ ಕೊನೆಗೊಂಡಿತು. ರವಿಶಾಸ್ತ್ರಿಯಿಂದ ತವರಿನಲ್ಲೇ ವಿಶ್ವಕಪ್ ಗೆಲ್ಲಿಸಿಕೊಡಲಾಗಲಿಲ್ಲ. ಇನ್ನು ಇಂಗ್ಲೆಂಡ್ನಲ್ಲಿ ನಡೆಯುವ 2019ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡ್ತಾರಾ..?
ಶಾಕ್-3: ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಸೋಲು
ತವರಿನಲ್ಲಿ ಇಂಡಿಯಾ ಸಾಧನೆ ಅದ್ಭುತವಾಗಿದೆ. ಆದರೆ ವಿದೇಶದಲ್ಲಿ ಮಾತ್ರ ಕಳಪೆಯಾಗಿದೆ. ವಿದೇಶದಲ್ಲೂ ಸರಣಿ ಗೆಲ್ಲಬೇಕು ಎಂದು ಶಾಸ್ತ್ರಿಯನ್ನ ಕೋಚ್ ಮಾಡಲಾಯ್ತು. ಆದರೆ ಅವರ ಗರಡಿಯಲ್ಲಿ 2014-15ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯರು ಹೀನಾಯವಾಗಿ ಸರಣಿ ಸೋತು ಬಂದ್ರು. ಟೆಸ್ಟ್, ಒಂಡೇ, ಟಿ20 ಮೂರು ಸರಣಿಗಳನ್ನೂ ಸೋತಿದ್ರು.
ಶಾಕ್-4: ಕಾಂಗರೂ ನಾಡಲ್ಲಿ ಮುಖಭಂಗ
ಮಹೇಂದ್ರ ಸಿಂಗ್ ಧೋನಿ, ಸರಣಿ ಮಧ್ಯೆ ಟೆಸ್ಟ್ ಕ್ರಿಕೆಟ್'ಗೆ ಗುಡ್ ಬೈ ಹೇಳಿದಾಗ ಇದೇ ರವಿಶಾಸ್ತ್ರಿ ಡೈರೆಕ್ಟರ್ ಆಗಿದ್ದರು. 2014-15ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಗಳೆರಡನ್ನೂ ಭಾರತ ಸೋತು ಬಂದಿತ್ತು. ಒಂಡೇ ವರ್ಲ್ಡ್ಕಪ್ಗೂ ಮುನ್ನ ಸರಣಿ ಸೋತು ತನ್ನ ಆತ್ಮವಿಶ್ವಾಸವನ್ನೇ ಭಾರತ ಕಳೆದುಕೊಂಡಿತ್ತು. ಆನಂತರ ವಿಶ್ವಕಪ್ ಸೆಮಿಸ್ನಲ್ಲಿ ಸೋತಿದ್ದು ಈಗ ಇತಿಹಾಸ.
ಶಾಕ್-5: ಬಾಂಗ್ಲಾ ವಿರುದ್ಧ ಸರಣಿ ಸೋಲು
ಇದಕ್ಕಿಂತ ಭಾರತಕ್ಕೆ ಮುಖಭಂಗ ಇನ್ನೊಂದಿಲ್ಲ. ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದ್ದು ರವಿಶಾಸ್ತ್ರಿ ಸಮ್ಮುಖದಲ್ಲೇ. 2015ರಲ್ಲಿ ಬಾಂಗ್ಲಾದಲ್ಲೇ ಏಕದಿನ ಸರಣಿ ಸೋತು ಬಂದಿತ್ತು ಭಾರತ. ತಮ್ಮ ಗರಡಿಯಲ್ಲಿ ಟೀಂ ಇಂಡಿಯಾ ಸಾಧನೆ ಮಾಡಿದೆ ಅಂತ ಕೊಚ್ಚಿಕೊಳ್ಳುವ ಶಾಸ್ತ್ರಿ, ಬಾಂಗ್ಲಾದಲ್ಲಿ ಅಂದು ತಲೆ ತಗ್ಗಿಸಿ ನಿಂತಿದ್ದರು.
ಇಷ್ಟೆಲ್ಲಾ ಕಳಪೆ ದಾಖಲೆ ಹೊಂದಿರುವ ರವಿಶಾಸ್ತ್ರಿ ಪರ ಇಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮುಂದೆ ನಾನು ಕ್ರಿಕೆಟ್ ದೇವರು ಆಗ್ತೀನಿ ಅಂತ ಕನಸು ಕಾಣುತ್ತಿರುವ ವಿರಾಟ್ ಕೊಹ್ಲಿ ಲಾಭಿ ಮಾಡಿದ್ದಾರೆ. ಈ ಲಾಭಿಯಿಂದಲೇ ಶಾಸ್ತ್ರಿ ಇಂದು ಟೀಂ ಇಂಡಿಯಾ ಕೋಚ್ ಆಗಿರುವುದು. ಇನ್ನು ಮೇಲೆ ಟೀಂ ಇಂಡಿಯಾವನ್ನ ಆ ದೇವರೇ ಕಾಪಾಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.