ಕರ್ನಾಟಕದ ಯುವ ಬೈಕ್ ರೇಸರ್ ಅನೀಶ್ ಶೆಟ್ಟಿ ಶೈನಿಂಗ್
ರಾಷ್ಟ್ರೀಯ ಮಟ್ಟದ ಹಲವು ರೇಸ್‌ಗಳಲ್ಲಿ ಚಾಂಪಿಯನ್ ಆಗಿರುವ ಕನ್ನಡಿಗ ಅನೀಶ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗುತ್ತಿರುವ ಹುಬ್ಬಳ್ಳಿ ಹುಡುಗ
- ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಆ.12): ರೇಸಿಂಗ್ ಬಗ್ಗೆ ಏನೇನೂ ಗೊತ್ತಿಲ್ಲದೆ ಗ್ಯಾರೇಜಲ್ಲಿ ಕೆಲ ರೇಸರ್‌ಗಳಿಂದ ಪಡೆದ ಸ್ಫೂರ್ತಿಯೇ ತಮ್ಮನ್ನು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಗುರುತಿಸುತ್ತೆ ಎಂದು ಕರ್ನಾಟಕದ ಯುವ ಬೈಕ್ ರೇಸರ್ ಅನೀಶ್ ಶೆಟ್ಟಿ ನಿರೀಕ್ಷಿಸಿರಲಿಕ್ಕಿಲ್ಲ. ಆದರೆ ತಮ್ಮ ಹಳೆಯ ಬೈಕನ್ನೇ ಮಾರ್ಪಡಿಸಿ ರೇಸಿಂಗ್ ಬೈಕನ್ನಾಗಿ ಮಾಡಿದ ಅವರು ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಹುಬ್ಬಳ್ಳಿ ಮೂಲದ, ಸದ್ಯ ಕಾಸರಗೋಡು ಭಾಗದಲ್ಲಿ ನೆಲೆಸಿರುವ ಅನೀಶ್ ಈಗಾಗಲೇ ರಾಷ್ಟ್ರೀಯ ಮಟ್ಟದ ಹಲವು ರೇಸ್‌ಗಳಲ್ಲಿ ಚಾಂಪಿಯನ್ ಆಗಿದ್ದು, ವಿಶ್ವ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.
2011ರಲ್ಲಿ ಮೊದಲ ಬಾರಿ ರೇಸಿಂಗ್ ಬೈಕೇರಿದ ಹುಬ್ಬಳ್ಳಿಯ ಉದ್ಯಮಿ ಪಟ್ಲ ದಾಮೋದರ ಶೆಟ್ಟಿ-ವೀಣರತ್ನ ಶೆಟ್ಟಿದಂಪತಿಯ ಪುತ್ರನಾಗಿರುವ 24 ವರ್ಷದ ಅನೀಶ್ 2012ರಲ್ಲಿ ರಾಜ್ಯ ಮಟ್ಟದ ಸ್ಟಂಟ್ ಚಾಂಪಿಯನ್ ಆದರು. 2013ರಲ್ಲಿ ಆಫ್ ರೋಡ್ ರೇಸಿಂಗ್‌ನಲ್ಲಿ ಕಣಕ್ಕಿಳಿದ ಅನೀಶ್, 2015ರಲ್ಲಿ ಕೊಯಂಬತ್ತೂರಿನಲ್ಲಿ ನಡೆದ ಸಕ್ರ್ಯೂಟ್ ರೇಸಿಂಗ್‌ನಲ್ಲಿ ಗೆದ್ದರು. ನಂತರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಳ್ಗೊಂಡ ಅವರು 2016, 2017, 2020ರಲ್ಲಿ ರನ್ನರ್-ಆಪ್ ಆದರು.
ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್ ಇಂದಿನಿಂದ ಆರಂಭ
2018, 2019ರಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟಗೆದ್ದರು. ಬಳಿಕ 2021ರಲ್ಲಿ ಚೊಚ್ಚಲ ಆವೃತ್ತಿಯ ಜಿಟಿ ಕಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಲ್ಲದೇ ಏಷ್ಯಾ ರೋಡ್ ರೇಸಿಂಗ್ ಕೂಟದಲ್ಲೂ ಅಂಕ ಗಳಿಸಿದ ಮೊದಲ ಭಾರತೀಯ ಎಂಬ ಹಿರಿಮೆಯೂ ಅನೀಸ್ ಅವರಿಗಿದೆ. ಹೊಸದಾಗಿ ರೇಸಿಂಗ್ ಶಾಲೆಯನ್ನೂ ತೆರೆದಿರುವ ಅವರು ಯುವ ಪ್ರತಿಭೆಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇ-ಸ್ಕೂಟರ್ ರೇಸಿಂಗ್‌ನಲ್ಲಿ ಸ್ಪರ್ಧೆ
ಸದ್ಯ ಅಂತಾರಾಷ್ಟ್ರೀಯ ಮಟ್ಟದ ಇ ಸ್ಕೂಟರ್ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಅನೀಶ್ ಏಷ್ಯಾದಿಂದ ಪಾಲ್ಗೊಳ್ಳುತ್ತಿರುವ ಏಕೈಕ ರೇಸರ್ ಎನಿಸಿಕೊಂಡಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 6 ರೇಸ್‌ಗಳಿದ್ದು, ಜಾಗತಿಕ ಮಟ್ಟದ 30 ವೃತ್ತಿಪರ ರೇಸರ್‌ಗಳ ಜೊತೆ ಅನೀಶ್ ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ. ಈಗಾಗಲೇ ಮೊದಲ ರೇಸಿಂಗ್ ಮುಗಿದಿದ್ದು, ಕೊನೆ ಹಂತದ ರೇಸ್ ಅಕ್ಟೋಬರ್‌ನಲ್ಲಿ ನಡೆಯಲಿದೆ. ಫ್ರಾನ್ಸ್, ಇಟಲಿ, ಸ್ಪೇನ್ ಹಾಗೂ ಅಮೆರಿಕದಲ್ಲಿ ರೇಸ್ ನಡೆಯಲಿದೆ.
‘ದೇಶದಲ್ಲಿ ರೇಸಿಂಗ್ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಸಂಪನ್ಮೂಲದ ಕೊರತೆ, ದುಬಾರಿ ವೆಚ್ಚ, ಪೋಷಕರ ಪ್ರೋತ್ಸಾಹದ ಕೊರತೆಯಿಂದ ಯುವ ಪ್ರತಿಭೆಗಳು ರೇಸಿಂಗ್‌ನತ್ತ ಮುಖ ಮಾಡುತ್ತಿಲ್ಲ. ಆದರೆ ಕಳೆದ 7 ವರ್ಷಗಳಲ್ಲಿ ರೇಸಿಂಗ್ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿದೆ. ತುಂಬಾ ಬದಲಾವಣೆ ಕೂಡಾ ಆಗಿದೆ’- ಅನೀಶ್, ಬೈಕ್ ರೇಸರ್