* ಚೊಚ್ಚಲ ಆವೃತ್ತಿಯ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ ಕ್ಷಣಗಣನೆ
* ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ನಲ್ಲಿ 8 ತಂಡಗಳು ಭಾಗಿ
* ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನಡೆಯಲಿರುವ ಟೂರ್ನಿ
ಬೆಂಗಳೂರು(ಆ.12): ಚೊಚ್ಚಲ ಆವೃತ್ತಿಯ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ಗೆ ಶುಕ್ರವಾರ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಬಂಡೀಪುರ ಟಸ್ಕರ್ಸ್ ಹಾಗೂ ಮಂಡ್ಯ ಬುಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ನಗರದ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಪಂದ್ಯಗಳು ನಡೆಯಲಿದ್ದು, 8 ತಂಡಗಳು ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.
ಶುಕ್ರವಾರ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಕೊಡಗು ಟೈಗರ್ಸ್ ತಂಡ ಮಂಗಳೂರು ಶಾರ್ಕ್ಸ್ ವಿರುದ್ಧ ಆಡಲಿದೆ. ಟೂರ್ನಿಯನ್ನು ತಲಾ 4 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ತಂಡ 3 ಪಂದ್ಯಗಳನ್ನಾಡಲಿದೆ. ಇದರಲ್ಲಿ ಎರಡೂ ಗುಂಪುಗಳಿಂದ ಅಗ್ರ 4 ತಂಡಗಳು 2ನೇ ಸುತ್ತು ಪ್ರವೇಶಿಸಲಿದ್ದು, ಅದರಲ್ಲಿ ಪ್ರತೀ ತಂಡ 3 ಪಂದ್ಯಗಳನ್ನಾಡಲಿದೆ. ಅಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಆಗಸ್ಟ್ 21ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಕಾಮನ್ವೆಲ್ತ್‌ಗೆ ತೆರಳಿದ್ದ ಇಬ್ಬರು ಪಾಕ್ ಬಾಕ್ಸರ್‌ಗಳು ನಾಪತ್ತೆ!
ಕರಾಚಿ: ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ಪಾಕಿಸ್ತಾನ ಬಾಕ್ಸಿಂಗ್ ಫೆಡರೇಷನ್(ಪಿಬಿಎಫ್) ಮಾಹಿತಿ ನೀಡಿದೆ. ಬಾಕ್ಸರ್‌ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ಕೂಟ ಮುಗಿದ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಪಾಸ್‌ಪೋರ್ಚ್, ಮತ್ತಿತರ ದಾಖಲೆಗಳು ಫೆಡರೇಷನ್ ಅಧಿಕಾರಿಗಳ ಬಳಿ ಇದೆ ಎಂದು ಪಿಬಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಇಂಗ್ಲೆಂಡ್‌ನಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ತನಿಖೆಗೆ ನಾಲ್ವರ ತಂಡವನ್ನೂ ರಚಿಸಲಾಗಿದೆ. ಕ್ರೀಡಾಕೂಟ ಸೋಮವಾರ ಮುಕ್ತಾಯಗೊಂಡಿತ್ತು.
ಡೈಮಂಡ್ ಲೀಗ್: ಶ್ರೀಶಂಕರ್‌ಗೆ 6ನೇ ಸ್ಥಾನ
ಮೊನಾಕೊ: ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಭಾರತದ ತಾರಾ ಲಾಂಗ್ ಜಂಪ್ ಪಟು ಮುರಳಿ ಶ್ರೀಶಂಕರ್ ಮೊನಾಕೊ ಡೈಮಂಡ್ ಲೀಗ್‌ನಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಮುರಳಿ 5ನೇ ಪ್ರಯತ್ನದಲ್ಲಿ 7.94 ಮೀ. ದೂರ ಜಿಗಿದರು.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಗ ಗೆದ್ದ ಪದಕವನ್ನು ಹರಿದ ಸೀರೆಯಲ್ಲಿ ಕಟ್ಟಿಟ್ಟ ತಾಯಿ!
ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ಕಾಮನ್‌ವೆಲ್ತ್‌ನಲ್ಲಿ 8.08 ಮೀ. ದೂರ ಜಿಗಿದಿದ್ದ ಶ್ರೀಶಂಕರ್ ಈ ಬಾರಿ ಒಮ್ಮೆಯೂ 8 ಮೀ. ಗಡಿ ದಾಟಲಿಲ್ಲ. ಶ್ರೀಶಂಕರ್ ಅವರ ಈ ಆವೃತ್ತಿಯ ಮತ್ತು ವೈಯಕ್ತಿಕ ಶ್ರೇಷ್ಠ ಪ್ರದರ್ಶನ 8.36 ಮೀ. ಆಗಿದ್ದು, ಅದೇ ಪ್ರದರ್ಶನ ತೋರಿದ್ದರೆ ಚಿನ್ನದ ಪದಕ ಲಭಿಸುತ್ತಿತ್ತು. ಕ್ಯೂಬಾದ ಮೈಕಲ್ ಮಾಸೊ 8.35 ಮೀ. ದೂರ ಜಿಗಿದು ಚಿನ್ನ ಗೆದ್ದರೆ, ಗ್ರೀಸ್‌ನ ಮಿಲ್ಟಿಯಾಡಿಸ್(8.31 ಮೀ.) ಬೆಳ್ಳಿ, ಅಮೆರಿಕದ ಮಾರ್ಕಸ್ ಡೆಂಡಿ(8.31 ಮೀ.) ಕಂಚು ಜಯಿಸಿದರು.
ಖೋಖೋ ಲೀಗ್: ರಾಜ್ಯದ ಪ್ರಜ್ವಲ್ ಯೋಧಾಸ್ ನಾಯಕ
ನವದೆಹಲಿ: ಆಗಸ್ಟ್ 14ರಿಂದ ಪುಣೆಯಲ್ಲಿ ಆರಂಭವಾಗಲಿರುವ ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್‌ನ ತೆಲುಗು ಯೋಧಾಸ್ ತಂಡಕ್ಕೆ ಕರ್ನಾಟಕದ ಪ್ರಜ್ವಲ್ ಕೆ.ಎಚ್. ನಾಯಕನಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಫ್ರಾಂಚೈಸಿಯು ಬುಧವಾರ ಮಾಹಿತಿ ನೀಡಿದ್ದು, ಆಲ್ರೌಂಡರ್ ಪ್ರತೀಕ್ ವಾಯಿಕಾರ್ ಉಪನಾಯಕನಾಗಿ ಕಾರ‍್ಯನಿರ್ವಹಿಸಲಿದ್ದಾರೆ ಎಂದಿದೆ.
ಪ್ರಜ್ವಲ್ ಈಗಾಗಲೇ ಕರ್ನಾಟಕ ತಂಡವನ್ನು ಹಲವು ಟೂರ್ನಿಗಳಲ್ಲಿ ಮುನ್ನಡೆಸಿದ್ದಾರೆ. 2013-14ರ ಫೆಡರೇಶನ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಹಾಗೂ ಕಳೆದ ವರ್ಷ ಹಿರಿಯರ ರಾಷ್ಟ್ರೀಯ ಟೂರ್ನಿಯಲ್ಲಿ ರಾಜ್ಯ ತಂಡವನ್ನು 3ನೇ ಸ್ಥಾನಕ್ಕೇರಿಸಿದ್ದರು.