ಕ್ರಿಕೆಟ್ ಜಗತ್ತಿನ 5 ಅನಿರೀಕ್ಷಿತ ದಾಖಲೆಗಳಿವು; ಇವುಗಳಲ್ಲಿ ಒಂದಕ್ಕಿಂತ ಮತ್ತೊಂದು ವಿಶೇಷ

First Published Jun 30, 2018, 8:23 PM IST
Highlights

ಕ್ರಿಕೆಟ್’ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಯಾರು ಯಾವ ಸಂದರ್ಭದಲ್ಲಿ ದಾಖಲೆ ನಿರ್ಮಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ದಾಖಲೆಗಳಿರುವುದೇ ಮುರಿಯೋದಕ್ಕೆ ಎಂದು ಆಡುವ ಆಟಗಾರರನ್ನು ನಾವು ಕಂಡಿದ್ದೇವೆ. ಆದರೆ ಕೆಳಗಿನ ದಾಖಲೆಗಳು ಒಂದಕ್ಕಿಂತ ಮತ್ತೊಂದು ವಿಶೇಷ. ಏನವು ದಾಖಲೆಗಳು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿವೆ ಉತ್ತರ..

ಬೆಂಗಳೂರು[ಜೂ.30]: ಕ್ರಿಕೆಟ್’ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಯಾರು ಯಾವ ಸಂದರ್ಭದಲ್ಲಿ ದಾಖಲೆ ನಿರ್ಮಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ದಾಖಲೆಗಳಿರುವುದೇ ಮುರಿಯೋದಕ್ಕೆ ಎಂದು ಆಡುವ ಆಟಗಾರರನ್ನು ನಾವು ಕಂಡಿದ್ದೇವೆ. ಆದರೆ ಕೆಳಗಿನ ದಾಖಲೆಗಳು ಒಂದಕ್ಕಿಂತ ಮತ್ತೊಂದು ವಿಶೇಷ. ಏನವು ದಾಖಲೆಗಳು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿವೆ ಉತ್ತರ..

1. ರಾಹುಲ್ ದ್ರಾವಿಡ್: ಟೆಸ್ಟ್’ನಲ್ಲಿ ಅತಿಹೆಚ್ಚು ಕ್ಲೀನ್ ಬೌಲ್ಡ್


ಟೀಂ ಇಂಡಿಯಾ ಪಾಲಿನ ಆಪತ್ಭಾಂದವ, ’ದ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ರಕ್ಷಣಾತ್ಮಕ ಆಟವಾಡುವ ಮೂಲಕ ಹಲವಾರು ಬಾರಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ. ಆದರೆ ರಾಹುಲ್ ದ್ರಾವಿಡ್ ತಮ್ಮ 16 ವರ್ಷಗಳ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಅದರಲ್ಲೂ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಬಾರಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದಾರೆ. ಅದರಲ್ಲೂ ದ್ರಾವಿಡ್ ಆಡಿದ ಕೊನೆಯ 13 ಇನ್ನಿಂಗ್ಸ್’ಗಳಲ್ಲಿ 9 ಬಾರಿ ಕ್ಲೀನ್ ಬೌಲ್ಡ್ ಆಗಿದ್ದರು ಎಂದರೆ ನಿಜಕ್ಕೂ ಅಚ್ಚರಿಯೇ ಸರಿ.

2. ಫಾಲೋ ಆನ್ ಹೇರಿಯೂ ಮೂರು ಬಾರಿ ಸೋತ ಆಸೀಸ್:


ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ಎದುರಾಳಿ ತಂಡಕ್ಕೆ ಫಾಲೋ ಆನ್ ಹೇರಿ ಸೋತ ಕುಖ್ಯಾತಿಗೆ ಆಸ್ಟ್ರೇಲಿಯಾ ತಂಡ ಪಾತ್ರವಾಗಿದೆ. ಮೊದಲೆರಡು ಬಾರಿ ಸಾಂಪ್ರಾದಾಯಿಕ ಎದುರಾಳಿ ಇಂಗ್ಲೆಂಡ್ ಎದುರು ಸೋತಿದ್ದರೆ, ಕೊನೆಯ ಬಾರಿ 2001ರಲ್ಲಿ ಭಾರತದೆದುರು ಸೋಲು ಕಂಡು ಆಘಾತ ಎದುರಿಸಿತ್ತು.
ಈಡನ್’ಗಾರ್ಡನ್ ಮೈದಾನದಲ್ಲಿ ನಡೆದ ಐತಿಹಾಸಿಕ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅದ್ಭುತ ಜತೆಯಾಟವಾಡುವ ಮೂಲಕ ತಂಡಕ್ಕೆ ಸ್ಮರಣಿಯ ಜಯ ತಂದಿತ್ತರು.

3 ಶೇನ್ ವಾರ್ನ್’ಗಿಂತ ಏಕದಿನ ಕ್ರಿಕೆಟ್’ನಲ್ಲಿ ಸಚಿನ್ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ: 


ಇದಂತೂ ನಿಜಕ್ಕೂ ನಂಬೋದು ಕಷ್ಟ. ವಿಶ್ವಕ್ರಿಕೆಟ್’ನ ಅಧ್ಭುತ ಸ್ಪಿನ್ನರ್ ಶೇನ್ ವಾರ್ನ್ ಸ್ಪಿನ್ ಮೋಡಿ ಮರುಳಾಗದವರೇ ಇಲ್ಲ. ಆದರೆ ಏಕದಿನ ಕ್ರಿಕೆಟ್’ನಲ್ಲಿ ಶೇನ್ ವಾರ್ನ್’ಗಿಂತ ಸಚಿನ್ ತೆಂಡುಲ್ಕರ್ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಕಬಳಿಸಿದ್ದಾರೆ.

ಹೌದು ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್’ನಲ್ಲಿ ಎರಡು ಬಾರಿ 5 ವಿಕೆಟ್ ಕಬಳಿಸಿದ್ದರೆ, ವಾರ್ನ್ ಒಮ್ಮೆ ಮಾತ್ರ 5 ವಿಕೆಟ್ ಕಬಳಿಸಿದ್ದಾರೆ.
ಸಚಿನ್ ಒಮ್ಮೆ ಆಸ್ಟ್ರೇಲಿಯಾ ವಿರುದ್ಧ ಇನ್ನೊಮ್ಮೆ ಪಾಕಿಸ್ತಾನ ವಿರುದ್ಧ 5 ವಿಕೆಟ್ ಪಡೆದರೆ, ವಾರ್ನ್ 1996ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಒಮ್ಮೆ ಮಾತ್ರ 5 ವಿಕೆಟ್ ಕಬಳಿಸಿದ್ದಾರಷ್ಟೇ..!

4. ವಾರ್ನ್’ಗಿಂತ ಸನತ್ ಜಯಸೂರ್ಯ ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ್ದಾರೆ:


ಇದಂತೂ ಶೇನ್ ವಾರ್ನ್ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿಯ ವಿಚಾರ. ಶ್ರಿಲಂಕಾ ತಂಡದ ಆರಂಭಿಕ ಬ್ಯಾಟ್ಸ್’ಮನ್ ಸನತ್ ಜಯಸೂರ್ಯ ಆಸ್ಟ್ರೇಲಿಯಾದ ಮಾಂತ್ರಿಕ ಸ್ಪಿನ್ನರ್ ಶೇನ್ ವಾರ್ನ್’ಗಿಂತ ಅತಿಹೆಚ್ಚು ವಿಕೆಟ್’ಗಳನ್ನು ಏಕದಿನ ಕ್ರಿಕೆಟ್’ನಲ್ಲಿ ಕಬಳಿಸಿದ್ದಾರೆ.
ಎಡಗೈ ಸ್ಪಿನ್ನರ್ ಜಯಸೂರ್ಯ ಏಕದಿನ ಕ್ರಿಕೆಟ್’ನಲ್ಲಿ 323 ವಿಕೆಟ್ ಪಡೆದಿದ್ದರೆ, ವಾರ್ನ್ ಒನ್’ಡೇ ಕ್ರಿಕೆಟ್’ನಲ್ಲಿ ಪಡೆದ ವಿಕೆಟ್’ಗಳ ಸಂಖ್ಯೆ 293 ವಿಕೆಟ್’ಗಳು ಮಾತ್ರ.
5. ಅತಿಹೆಚ್ಚು ನಾಟೌಟ್ ಆದ ಆಟಗಾರ ಮುತ್ತಯ್ಯ ಮುರುಳಿಧರನ್.! [ ಟೆಸ್ಟ್, ಏಕದಿನ ಹಾಗೂ ಟಿ20]


ಕ್ರಿಕೆಟ್ ಜಗತ್ತು ಕಂಡ ಅತ್ಯದ್ಭುತ ಸ್ಪಿನ್ನರ್’ಗಳಲ್ಲಿ ಶ್ರೀಲಂಕಾದ ಆಫ್’ಸ್ಪಿನ್ನರ್ ಮುತ್ತಯ್ಯ ಮುರುಳಿಧರನ್’ಗೆ ಅಗ್ರಸ್ಥಾನ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್’ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿರುವ ಮುತ್ತಯ್ಯ ಮತ್ತೊಂದು ಅಪರೂಪದ ದಾಖಲೆ ಮಾಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿಹೆಚ್ಚು ಬಾರಿ ನಾಟೌಟ್ ಆದ ಬ್ಯಾಟ್ಸ್’ಮನ್ ಎಂಬ ಹೆಗ್ಗಳಿಕೆಗೂ ಮುತ್ತಯ್ಯ ಪಾತ್ರರಾಗಿದ್ದಾರೆ.
ಸಾಮಾನ್ಯವಾಗಿ 10 ಇಲ್ಲವೇ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗಿಳಿಯುತ್ತಿದ್ದ ಮುರುಳಿ ಅಜೇಯರಾಗಿ ಉಳಿಯುತ್ತಿದ್ದುದ್ದೇ ಹೆಚ್ಚು.  ಮೂರು ಮಾದರಿಯ ಕ್ರಿಕೆಟ್’ನಲ್ಲಿ ಮುರುಳಿ 118 ಬಾರಿ ನಾಟೌಟ್ ಆಗಿ ಈ ಸಾಧನೆ ಮಾಡಿದ್ದಾರೆ. 

click me!