38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ

Published : Feb 08, 2025, 09:49 AM IST
38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ

ಸಾರಾಂಶ

೩೮ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪುರುಷರ ಟೆನಿಸ್ ತಂಡ ತಮಿಳುನಾಡಿಗೆ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಪ್ರೀತಂ ಟೆಕ್ವಾಂಡೋದಲ್ಲಿ ಕಂಚು ಗೆದ್ದರು. ಸರ್ವಿಸಸ್ ೧೦ ಚಿನ್ನ ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಕರ್ನಾಟಕ ೫೭ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಡೆಹ್ರಾಡೂನ್‌: 38ನೇ ರಾಷ್ಟ್ರೀಯ ಗೇಮ್ಸ್‌ನ ಟೆನಿಸ್‌ನಲ್ಲಿ ಕರ್ನಾಟಕ ಪುರುಷರ ತಂಡ ಬೆಳ್ಳಿ ಪದಕ ಗೆದ್ದಿದೆ. ಕ್ರೀಡಾಕೂಟದ ಟೆನಿಸ್‌ನಲ್ಲಿ ರಾಜ್ಯ ಪುರುಷರ ತಂಡ ಪ್ರಾಬಲ್ಯ ಸಾಧಿಸಿದರೂ, ಚಿನ್ನ ಗೆಲ್ಲುವ ಆಸೆಗೆ ತಮಿಳುನಾಡು ತಣ್ಣೀರೆರಚಿತು. ಶುಕ್ರವಾರ ನಡೆದ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ 0-2 ಸೋಲು ಎದುರಾಗಿ, ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮೊದಲ ಸಿಂಗಲ್ಸ್‌ನಲ್ಲಿ ರಾಜ್ಯದ ರಿಶಿ ರೆಡ್ಡಿ ವಿರುದ್ಧ ತಮಿಳುನಾಡಿನ ಅಭಿನವ್‌ ಷಣ್ಮುಗಂ 3-6, 7-6(8-6), 6-4ರಲ್ಲಿ ಗೆಲುವು ಸಾಧಿಸಿದರು. 2ನೇ ಸಿಂಗಲ್ಸ್‌ನಲ್ಲಿ ಕರ್ನಾಟಕದ ನಂ.1 ಆಟಗಾರ ಪ್ರಜ್ವಲ್‌ ದೇವ್‌ಗೂ ಆಘಾತ ಎದುರಾಯಿತು. ಅವರು ತಾರಾ ಆಟಗಾರ ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ 7-5, 4-6, 4-6 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡರು.

ಬೆಳ್ಳಿ ವಿಜೇತ ಕರ್ನಾಟಕ ತಂಡದಲ್ಲಿ ಪ್ರಜ್ವಲ್‌ ದೇವ್‌, ರಿಶಿ ರೆಡ್ಡಿ ಜೊತೆ ನಿಕಿ ಪೂನಚ್ಚ, ಆದಿಲ್‌ ಕಲ್ಯಾಣ್‌ಪುರ ಹಾಗೂ ಮನೀಶ್‌ ಜಿ. ಇದ್ದರು. ಈ ತಂಡ ಸೆಮಿಫೈನಲ್‌ನಲ್ಲಿ ತೆಲಂಗಾಣ ವಿರುದ್ಧ ಗೆದ್ದಿತ್ತು. ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋತು ಹೊರಬಿದ್ದಿತ್ತು.

ಟೆಕ್ವಾಂಡೋ: ಕಂಚು ಗೆದ್ದ ರಾಜ್ಯದ ಪ್ರೀತಂ

ಶುಕ್ರವಾರ ರಾಜ್ಯಕ್ಕೆ ಟೆಕ್ವಾಂಡೋ ಸ್ಪರ್ಧೆಯಲ್ಲಿ ಪದಕ ಒಲಿಯಿತು. ಪುರುಷರ ಕ್ಯೊರುಗಿ 87 ವಿಭಾಗದ ಸ್ಪರ್ಧೆಯಲ್ಲಿ ಪ್ರೀತಂ ಆರ್‌. ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಸ್ಪರ್ಧೆಯಲ್ಲಿ ಇದು ಕರ್ನಾಟಕಕ್ಕೆ ಸಿಕ್ಕ ಮೊದಲ ಪದಕ.

ಒಂದೇ ದಿನ 10 ಸ್ವರ್ಣ ಪದಕ ಗೆದ್ದ ಸರ್ವಿಸಸ್ ಈಗ ಪಟ್ಟಿಯಲ್ಲಿ ನಂ.1

ಸರ್ವಿಸಸ್‌ ಶುಕ್ರವಾರ ಭರ್ಜರಿ ಪದಕ ಬೇಟೆಯಾಡಿತು. ಒಂದೇ ದಿನ 10 ಚಿನ್ನ ಸೇರಿ ಒಟ್ಟು 12 ಪದಕ ಗೆದ್ದು, ಪಟ್ಟಿಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಸದ್ಯ ಕರ್ನಾಟಕ 30 ಚಿನ್ನ, 12 ಬೆಳ್ಳಿ ಹಾಗೂ 15 ಕಂಚು ಸೇರಿ 57 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಸರ್ವಿಸಸ್‌ 38 ಚಿನ್ನ, 13 ಬೆಳ್ಳಿ, 13 ಕಂಚು ಸೇರಿ 64 ಪದಕ ಜಯಿಸಿದೆ. 3ನೇ ಸ್ಥಾನದಲ್ಲಿರುವ ಮಹಾರಾಷ್ಟ್ರ 21 ಚಿನ್ನ ಸೇರಿ 99 ಪದಕಗಳನ್ನು ತನ್ನದಾಗಿಸಿಕೊಂಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?