
ಬೆಂಗಳೂರು[ಜೂ.04]: ಭೂಮಿ ಮೇಲಿರುವ ಎಲ್ಲರೂ ಏನಾದರೊಂದು ಸಾಧನೆ ಮಾಡಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ಅಚ್ಚಳಿಯದೇ ಉಳಿಯಬೇಕು ಎಂದು ಬಯಸುತ್ತಾರೆ. ಆದರೆ ಕೆಲವರು ಮಾತ್ರ ಈ ಪ್ರತಿಷ್ಠಿತ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಾಗುವಂತಹ ವಿಶ್ವದಾಖಲೆಯನ್ನು ನಿರ್ಮಿಸುತ್ತಾರೆ. ಅಪರೂಪದ ಸಾಧನೆ ಮಾಡಿದ ಕ್ರಿಕೆಟಿಗರು ಕೂಡಾ ಈ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಅದೇ ರೀತಿ ಭಾರತದ ಮೂವರು ಕ್ರಿಕೆಟಿಗರು ತಮ್ಮ ವಿನೂತನ ಸಾಧನೆ ಮೂಲಕ ’ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರು ಆ ಕ್ರಿಕೆಟಿಗರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ..
#1. ಎಂ.ಎಸ್ ಧೋನಿ:[ಅತಿ ದುಬಾರಿ ಬ್ಯಾಟ್]
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2011ರ ವಿಶ್ವಕಪ್’ನ ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಸಿಕ್ಸರ್ ಸಿಡಿಸಿ ವಿಶ್ವಕಪ್ ಗೆದ್ದುಕೊಟ್ಟಿದ್ದು ನಮಗೆಲ್ಲ ಗೊತ್ತೇ ಇದೆ. ಧೋನಿ ಬಳಸಿದ ರೀಬೊಕ್ ವಿಲ್ಲೊ(Reebok Willow) ಬ್ಯಾಟ್ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಅವರ ಹೆಸರು ದಾಖಲಾಗುವಂತೆ ಮಾಡಿದೆ.
ಹೌದು, ಧೋನಿ ಲಂಡನ್’ನಲ್ಲಿ ಆಯೋಜಿಸಿದ್ದ ’ಈಸ್ಟ್ ಮೀಟ್ಸ್ ವೆಸ್ಟ್’ ಕಾರ್ಯಕ್ರಮದಲ್ಲಿ ಎಲ್ಲರ ಹುಬ್ಬೇರುವಂತೆ ಆರ್.ಕೆ. ಗ್ಲೋಬಲ್ ಸಂಸ್ಥೆಯು 1.00.000 ಪೌಂಡ್[ ಸುಮಾರು 10,82,37,883.33 ರುಪಾಯಿ] ನೀಡಿ ಖರೀದಿಸಿತು. ಈ ಹಣವನ್ನು ಧೋನಿ ಪತ್ನಿ ಸಾಕ್ಷಿ ಪೌಂಡೇಶನ್ ಬಳಸುತ್ತಿದ್ದು, ಅವಕಾಶವಂಚಿತ ಮಕ್ಕಳ ಅಭಿವೃದ್ದಿಗೆ ಈ ಹಣವನ್ನು ಸಾಕ್ಷಿ ದತ್ತಿ ಸಂಸ್ಥೆ ಬಳಸುತ್ತಿದೆ.
#2. ರಾಜಾ ಮಹರಾಜ್ ಸಿಂಗ್[ ಹಿರಿಯ ಪ್ರಥಮದರ್ಜೆ ಕ್ರಿಕೆಟಿಗ]
ಬಾಂಬೆ ಪ್ರಾಂತ್ಯದ ಗವರ್ನರ್ ಆಗಿದ್ದ ರಾಜಾ ಮಹರಾಜ್ ಸಿಂಗ್ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ಜಗಜ್ಜಾಹೀರಗೊಳಿಸಿದ್ದು ತಮ್ಮ 72ನೇ ವಯಸ್ಸಿನಲ್ಲಿ..! ಆದರೆ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುವಲ್ಲಿ ರಾಜಾ ಕೊನೆಗೂ ಯಶಸ್ವಿಯಾಗಿದ್ದಾರೆ. ಕತಾಪುರದ ರಾಜ ಮನೆತನದ ಮಹರಾಜ್ ಸಿಂಗ್ ತಮ್ಮ 72ನೇ ವಯಸ್ಸಿನಲ್ಲಿ[72 ವರ್ಷ, 192 ದಿನಗಳು] ಪ್ರಥಮ ದರ್ಜೆ ಪಂದ್ಯವನ್ನಾಡುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆಯುವಲ್ಲಿ ಯಶಸ್ವಿಯಾಗಿದ್ದರು.
ಪಂದ್ಯವು ಗವರ್ನರ್ಸ್ XI ಹಾಗೂ ಕಾಮನ್’ವೆಲ್ತ್ XI ನಡುವೆ ನಡೆದಿತ್ತು. ಗವರ್ನರ್ಸ್ XI ತಂಡವನ್ನು ಮುನ್ನಡೆಸಿದ್ದ ಮಹರಾಜ್ ಸಿಂಗ್ ಮೊದಲ ದಿನದಾಟದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗಿಳಿದಿದ್ದರು. ಆದರೆ ಕೇವಲ 4 ರನ್ ಬಾರಿಸಿ ಸ್ಲಿಪ್’ನಲ್ಲಿ ಕ್ಯಾಚಿತ್ತು ಬೇಗನೇ ಪೆವಿಲಿಯನ್ ಸೇರಿದರು. ಔಟ್ ಆದ ಬಳಿಕ ಮಹರಾಜ್ ಮೈದಾನಕ್ಕೆ ಇಳಿಯಲೇ ಇಲ್ಲ. ಆ ಬಳಿಕ ಮಹರಾಜ್ ಅನುಪಸ್ಥಿತಿಯಲ್ಲಿ ಪಟಿಯಾಲಾದ ಯದುವೀಂದ್ರ ಸಿಂಗ್ ಗವರ್ನರ್ಸ್ XI ತಂಡವನ್ನು ಮುನ್ನಡೆಸಿದ್ದರು.
#3. ವಿರಾಗ್ ಮರೆ[ ಅತಿ ಹೆಚ್ಚು ಕಾಲ ನೆಟ್ ಅಭ್ಯಾಸ]
ಜೀವನ ಸಾಗಿಸಲು ’ವಡಾ ಪಾವ್’[ಒಂದು ರೀತಿಯ ತಿನಿಸು] ಮಾರಾಟ ಮಾಡುತ್ತಿದ್ದ ವಿರಾಗ್ ಮರೆ ಅತಿಹೆಚ್ಚು ಕಾಲ ನಿರಂತರ ನೆಟ್ ಅಭ್ಯಾಸ ನಡೆಸುವ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಸರು ದಾಖಲಿಸಿದ್ದಾರೆ. 24 ವರ್ಷದ ವಿರಾಗ್ ಮರೆ ಎರಡು ರಾತ್ರಿ ಮೂರು ಹಗಲು ನಿರಂತರ ನೆಟ್’ನಲ್ಲಿ ಬ್ಯಾಟ್ ಬೀಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಪುಣೆಯ ಕಾರ್ವೆ ನಗರದ ಮಹಾಲಕ್ಷ್ಮಿ ಲಾವನ್ಸ್’ನಲ್ಲಿ ಡಿಸೆಂಬರ್ 22ರಂದು ನೆಟ್’ನಲ್ಲಿ ಬ್ಯಾಟಿಂಗ್ ಆರಂಭಿಸಿದ ವಿರಾಗ್ ಸತತ 50 ಗಂಟೆ 5 ನಿಮಿಷ ಹಾಗೂ 51 ಸೆಕೆಂಡ್’ಗಳ ಕಾಲ 2,447 ಓವರ್[14.682 ಎಸೆತ] ನಿರಂತರ ಬ್ಯಾಟಿಂಗ್ ನಡೆಸಿ ಗಿನ್ನಿಸ್ ಬುಕ್’ನಲ್ಲಿ ವಿರಾಗ್ ಮರೆ ಈ ಸಾಧನೆ ಮಾಡಿದ್ದಾರೆ.
ಈ ಮೊದಲು ಡೇವ್ ನೆವ್ಮಾನ್ ಹಾಗೂ ರಿಚರ್ಡ್ ವೆಲ್ಸ್ 48 ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿ ದಾಖಲೆ ನಿರ್ಮಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.