140 ವರ್ಷ ಪೂರೈಸಿದ ಟೆಸ್ಟ್ ಕ್ರಿಕೆಟ್'ಗೆ ಗೂಗಲ್ ಸಲಾಂ

By Suvarna Web DeskFirst Published Mar 15, 2017, 12:45 PM IST
Highlights

ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 45 ರನ್'ಗಳ ಜಯಭೇರಿ ಬಾರಿಸಿತ್ತು.

ಬೆಂಗಳೂರು(ಮಾ.15): ಏಕದಿನ, ಟಿ20 ಅಬ್ಬರ ಎಷ್ಟೇ ಜೋರಾಗಿದ್ದರೂ ಸಾಂಪ್ರದಾಯಿಕ ಕ್ರಿಕೆಟ್ ಎಂದೇ ಗುರುತಿಸಿಕೊಂಡಿರುವ ಟೆಸ್ಟ್ ಕ್ರಿಕೆಟ್ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ.

ಇಂದಿಗೆ ಸರಿಸುಮಾರು 140 ವರ್ಷಗಳ ಹಿಂದೆ ಅಂದರೆ ಮಾರ್ಚ್ 15, 1877ರಲ್ಲಿ ಮೊಟ್ಟ ಮೊದಲ ಅಧಿಕೃತ ಟೆಸ್ಟ್ ಪಂದ್ಯಾವಳಿಯು ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್'ನಲ್ಲಿ ನಡೆದಿತ್ತು. ಈ ಸವಿನೆನಪಿಗಾಗಿ ತಂತ್ರಜ್ಞಾನ ದಿಗ್ಗಜ ಗೂಗಲ್ ತನ್ನ ಡೂಡ್ಲ್'ನಲ್ಲಿ ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಅರ್ಪಿಸಿದೆ.

ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 45 ರನ್'ಗಳ ಜಯಭೇರಿ ಬಾರಿಸಿತ್ತು.

ಮೊದಲು ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮಾಡಿತ್ತು. ಇಂಗ್ಲೆಂಡ್ ಪರ ಮೊದಲು ಬೌಲಿಂಗ್ ಮಾಡಿದ್ದು ಆಲ್ಫ್ರೆಡ್ ಶಾ. ಇನ್ನು ಮೊದಲು ಬಾಲ್ ಎದುರಿಸದ್ದು ಚಾರ್ಲ್ಸ್ ಬ್ಯಾನರ್'ಮನ್. ಇದೇ ಪಂದ್ಯದಲ್ಲಿ ಬ್ಯಾನರ್'ಮನ್ ಟೆಸ್ಟ್ ಇತಿಹಾಸದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದರು. ಬ್ಯಾನರ್'ಮನ್ 165 ರನ್ ಬಾರಿಸಿದ್ದಾಗ ಕೈಬೆರಳಿನ ಗಾಯಕ್ಕೆ ತುತ್ತಾಗಿ ರಿಟೈರ್ಡ್ ಹರ್ಟ್ ತೆಗೆದುಕೊಂಡು ಪೆವಿಲಿಯನ್ ಸೇರಿದ್ದರು.   

ಎರಡು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಮುಗ್ಗರಿಸಿದರೂ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ಅದೇ ಮೈದಾನದಲ್ಲಿ ಎರಡನೇ ಪಂದ್ಯವನ್ನು 4 ವಿಕೆಟ್'ಗಳ ಅಂತರದಲ್ಲಿ ಗೆದ್ದು ಸರಣಿ ಸಮಮಾಡಿಕೊಂಡಿತ್ತು.

click me!