* ರಾಜ್ಯದಲ್ಲಿ ಮೊದಲ ಕ್ರೀಡಾ ಯೂನಿವರ್ಸಿಟಿ ನಿರ್ಮಾಣಕ್ಕೆ ಸಿದ್ದತೆ
* 100 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗದಲಿದೆ ರಾಜ್ಯದ ಮೊದಲ ಸ್ಪೋರ್ಟ್ಸ್ ಯೂನಿರ್ಸಿಟಿ
* ಯಲಹಂಕದಲ್ಲಿ ನಿರ್ಮಾಣವಾಗಲಿದೆ ಕ್ರೀಡಾ ಯೂನಿರ್ವಸಿಟಿ
ಬೆಂಗಳೂರು(ಏ.26): ರಾಜ್ಯದ ಕ್ರೀಡಾ ಅಭಿಮಾನಿಗಳು ಸಾಕಷ್ಟು ವರ್ಷಗಳಿಂದ ಕಾತರದಿಂದ ನಿರೀಕ್ಷಿಸುತ್ತಿದ್ದ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣವಾಗುವ ಕಾಲ ಸನ್ನಿಹಿತವಾಗಿದೆ. ಯಲಹಂಕ ಸಮೀಪದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಸಿದ್ದತೆಗಳು ಆರಂಭವಾಗಿರುವ ಕುರಿತಂತೆ ರಾಜ್ಯ ಕ್ರೀಡಾ ಹಾಗೂ ಯುವಜನ ಖಾತೆ ಸಚಿವ ಸಿ. ನಾರಾಯಣಗೌಡ ಸುಳಿವು ನೀಡಿದ್ದಾರೆ.
ನಮ್ಮ ಕರ್ನಾಟಕದಲ್ಲಿ ಇದುವರೆಗೂ ಸ್ಪೋರ್ಟ್ಸ್ ಯೂನಿವರ್ಸಿಟಿ ಇರಲಿಲ್ಲ. ಆದರೆ ನಮ್ಮ ಸರ್ಕಾರ ಈಗಾಗಲೇ ಯಲಹಂಕದಲ್ಲಿ ನೂರು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಅಲ್ಲಿ ಸ್ಪೋರ್ಟ್ಸ್ ಯೂನಿವರ್ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯದ ಕ್ರೀಡಾ ಪ್ರಿಯರಿಗೆ ಕರ್ನಾಟಕ ಸರ್ಕಾರವು ಗುಡ್ ನ್ಯೂಸ್ ನೀಡಿದೆ.
ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕುರಿತಂತೆ ಮಾತನಾಡಿದ ಕ್ರೀಡಾಸಚಿವರು, ಒಡಿಸ್ಸಾದಲ್ಲಿ ಮೊದಲನೇ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಡೆದಿತ್ತು. ಇದೀಗ ಎರಡನೇ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಕರ್ನಾಟಕ ಆತಿಥ್ಯವನ್ನು ವಹಿಸಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಉಪರಾಷ್ಟ್ರಪತಿಗಳಾದ ವೆಂಕಯ್ಯನಾಯ್ಡು ಅವರು ಚಾಲನೆ ನೀಡಿದ್ದಾರೆ. ಭಾರತದ ಕ್ರೀಡೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದು ಪ್ರಧಾನಿ ಮೋದಿಯವರ ಕನಸು. ಮೋದಿಯವರ ಕನಸಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರ ಹೆಚ್ಚು ಒತ್ತನ್ನ ನೀಡಿದೆ ಎಂದು ನಾರಾಯಣ ಗೌಡ ಹೇಳಿದ್ದಾರೆ.
Khelo India University Games: ಸ್ವರ್ಣಕ್ಕೆ ಮುತ್ತಿಟ್ಟ ಶ್ರೀಹರಿ, ಶಿವ ಶ್ರೀಧರ್
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 8 ಸಾವಿರ ಜನ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಕ್ರೀಡೆಯ ಪ್ರಗತಿಗೆ ರಾಜ್ಯ ಸರ್ಕಾರವು ಹೆಚ್ಚಿನ ಒತ್ತನ್ನು ನೀಡಿದೆ. 504 ಕೋಟಿ ಅನುದಾನವನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆಟದ ಮೈದಾನ ಮಾಡಲಾಗ್ತಿದೆ. ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಒಂದುವರೆ ಗಂಟೆಗಳ ಕಾಲ ಆಟ ಆಡಿಸುವಂತೆ ಸೂಚನೆ ನೀಡಿದ್ದೇವೆ.
ಗರಡಿ ಮನೆ ನಿಂತುಹೋಗಿದ್ದು, ಹಳೇ ಮೈಸೂರು ಭಾಗದಲ್ಲಿ ಗರಡಿ ಮನೆ ಮಾಡಿಕೊಟ್ಟಿದ್ದೇವೆ. ಹಳೆಯ ಕುಸ್ತಿ ಪಟುಗಳಿಗೆ ಒಂದು ಸಾವಿರ ಮಾಸಾಶನ ಹೆಚ್ಚಿಸಿದ್ದೇವೆ. ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಮಾಡಲು ನಿರ್ಧರಿಸಿ, ಒಂದು ವರ್ಷದಲ್ಲಿ ಮೂವತ್ತು ಕಡೆ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ. ಕಂಠೀರವ ಸ್ಟೇಡಿಯಂನಲ್ಲಿ ಸಿಂಥೆಟಿಕ್ ಟ್ರಾಕ್ ಮಾಡಿದ್ದೇವೆ. ತುಮಕೂರು, ಮಂಡ್ಯದಲ್ಲಿ, ಬೆಂಗಳೂರಿನಲ್ಲಿ ಟೆಸ್ಟಿಂಗ್ ಟ್ರಾಕ್ ಮಾಡಿದ್ದೇವೆ. ಸ್ವಿಮ್ಮಿಂಗ್ ಪೂಲ್ ನೆನೆಗುದಿಗೆ ಬಿದ್ದಿದ್ದು, ಅದನ್ನ ಮತ್ತೆ ಕಾರ್ಯ ಮಾಡುವಂತೆ ಕೆಲಸ ಮಾಡಲಾಗಿದೆ ಎಂದು ನಾರಾಯಣ ಗೌಡ ಹೇಳಿದ್ದಾರೆ.