
ಪುಣೆ(ಏ.26): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 39ನೇ ಪಂದ್ಯದಲ್ಲಿಂದು ಬಲಿಷ್ಠ ರಾಜಸ್ಥಾನ ರಾಯಲ್ಸ್ (Rajasthan Royals) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಕೇವಲ 68 ರನ್‌ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ಎದುರು 9 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡ ಬೆನ್ನಲ್ಲೇ ಇದೀಗ ಆರ್‌ಸಿಬಿ ತಂಡಕ್ಕೆ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವು ಎದುರಾಗಿದೆ. ಆರ್‌ಸಿಬಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್, ಅನೂಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ಈ ಮೂವರು ಸೇರಿ ಒಟ್ಟು 502 ರನ್ ಬಾರಿಸದ್ದರೆ, ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಒಬ್ಬರೇ 491 ರನ್ ಸಿಡಿಸಿದ್ದಾರೆ. ಇನ್ನು ಕರ್ನಾಟಕ ಮೂಲದ ದೇವದತ್ ಪಡಿಕ್ಕಲ್ ಹಾಗೂ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡಾ ಭರ್ಜರಿ ಫಾರ್ಮ್‌ನಲ್ಲಿರುವುದು ಆರ್‌ಸಿಬಿ ತಲೆನೋವು ಹೆಚ್ಚುವಂತೆ ಮಾಡಿದೆ.
15ನೇ ಆವೃತ್ತಿಯ ಮೊದಲ ಸುತ್ತಿನ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸಿತ್ತು. ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹಮ್ಮದ್ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡವು ಗೆಲುವಿನ ಕೇಕೆ ಹಾಕುವಂತೆ ಮಾಡಿತ್ತು.
IPL 2022: ಬಟ್ಲರ್ 'ಜೋಶ್' ಅಡಗಿಸುತ್ತಾ ಆರ್‌ಸಿಬಿ..?
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ತಂಡಗಳು ಒಟ್ಟು 25 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಚ ಮೇಲುಗೈ ಸಾಧಿಸಿದೆ. ಆರ್‌ಸಿಬಿ ತಂಡವು 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು 10 ಪಂದ್ಯಗಳನ್ನು ಗೆದ್ದು ಬೀಗಿದೆ. ಇನ್ನು 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.
ಇಂದಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ:
ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಹೀನಾಯ ಸೋಲು ಕಂಡ ಬೆನ್ನಲ್ಲೇ ಇಂದಿನ ಮಹತ್ವದ ಪಂದ್ಯಕ್ಕೆ ತಂಡದಲ್ಲಿ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಆರ್‌ಸಿಬಿ ಆರಂಭಿಕ ಬ್ಯಾಟರ್ ಅನೂಜ್ ರಾವತ್ ಸಾಲು ಸಾಲು ವೈಫಲ್ಯಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅನೂಜ್ ರಾವತ್‌ಗೆ ವಿಶ್ರಾಂತಿ ನೀಡಿ ಮಹಿಪಾಲ್ ಲೊಮ್ರಾರ್‌ಗೆ ಆರ್‌ಸಿಬಿ ತಂಡವು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಫಾಫ್ ಡು ಪ್ಲೆಸಿಸ್ ಜತೆಗೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.