
Chinese man drink beer with his nose: ಇಂದಿನ ಡಿಜಿಟಲ್ ಯುಗದಲ್ಲಿ, ಸ್ಪರ್ಧಾರ್ತಕ ಯುಗದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು, ಲೈಕ್ಸ್, ಕಾಮೆಂಟ್ಸ್ ಬರಬೇಕು ಎಂದು ಒಬ್ಬೊಬ್ಬರು ಏನೇನೋ ಮಾಡುತ್ತಾರೆ. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ 'ವೈರಲ್' ಆಗಲು ಜನರು ಏನೆಲ್ಲ ಕಸರತ್ತುಗಳನ್ನು ಮಾಡುತ್ತಾರೆ ಎಂಬುದಕ್ಕೆ ಮಿತಿಯೇ ಇಲ್ಲವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಕಾಮೆಂಟ್‌ಗಳು, ಸೆಲ್ಫಿ ಹಪಾಹಪಿಗೆ ಬಿದ್ದು, ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಪ್ರಾಣವನ್ನು ಪಣಕ್ಕಿಟ್ಟು ವಿಚಿತ್ರ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಅಂತಹದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚೀನಾ ಮೂಲದ ವ್ಯಕ್ತಿಯೊಬ್ಬ ತನ್ನ ಮೂಗಿನ ಮೂಲಕ ಬಿಯರ್ ಕುಡಿದಿದ್ದಾನೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಚೀನಾ ಮೂಲದ ವ್ಯಕ್ತಿಯೊಬ್ಬ ತನ್ನ ಮೂಗಿನ ಹೊಳ್ಳೆಗೆ ಬಿಯರ್ ಗ್ಲಾಸ್ ತಾಗಿಸಿಟ್ಟಿದ್ದಾನೆ. ಆ ಮೂಲಕ ಬಿಯರ್‌ನ್ನು ದೇಹದೊಳಗಡೆ ಹೋಗುವಂತೆ ಮಾಡುತ್ತಿದ್ದಾರೆ. ಆ ಬಿಯರ್‌ನ್ನು ನೇರವಾಗಿ ಒಳಕ್ಕೆ ಎಳೆದುಕೊಳ್ಳುವುದನ್ನು ಕಾಣಬಹುದು. ಎಲ್ಲರ ಮುಂದೆ ಯಾವುದೇ ಮುಜುಗರವಿಲ್ಲದೆ ಆತ ಮಾಡುತ್ತಿರುವ ಈ 'ಸಾಹಸ'ವನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಈ ವಿಡಿಯೋ ಈಗ ಭಾರಿ ಸಂಖ್ಯೆಯಲ್ಲಿ ವೀಕ್ಷಕರಿಗೆ ರೀಚ್ ಆಗಿದೆ.
ಈ ವಿಡಿಯೋ ನೋಡಿ, ಕೆಲವರು ಇದನ್ನು "ವಿಚಿತ್ರ ಪ್ರತಿಭೆ" ಎಂದು ಲೇವಡಿ ಮಾಡಿದ್ದಾರೆ. ಇನ್ನು ಕೆಲವರು ಇದು "ಮೂರ್ಖತನದ ಪರಮಾವಧಿ" ಎಂದು ಆಕ್ರೋಶ ಹೊರಹಾಕಿದ್ದಾರೆ. ಇದರ ಜೊತೆಗೆ ಇದು ಯಾವ ಥರ ಟೇಸ್ಟ್ ಕೊಡುತ್ತದೆ ಎಂದು ಕೂಡ ವ್ಯಂಗ್ಯ ಮಾಡಿದ್ದಾರೆ.
ಇದು ಪ್ರಾಣಕ್ಕೆ ಅಪಾಯ!
ಈ ರೀತಿ ಮಾಡೋದನ್ನು ನೋಡಲು ವಿಚಿತ್ರವಾಗಿ ಕಂಡರೂ, ಇದು ಪ್ರಾಣಾಪಾಯವನ್ನುಂಟು ಮಾಡುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಮೂಗಿನ ಮೂಲಕ ಆಲ್ಕೋಹಾಲ್ ಸೇವಿಸಿದರೆ ಏನಾಗುವುದು?
ಆಸ್ಪಿರೇಶನ್ ನ್ಯುಮೋನಿಯಾ (Aspiration Pneumonia): ಆಲ್ಕೋಹಾಲ್ ಅಕಸ್ಮಾತ್ ಶ್ವಾಸನಾಳದ ಮೂಲಕ ಶ್ವಾಸಕೋಶಕ್ಕೆ ಸೇರಿದರೆ ತೀವ್ರ ಸೋಂಕು ಉಂಟಾಗುವುದು, ಆ ಬಳಿಕ ಉಸಿರಾಟದ ತೊಂದರೆ ಅಥವಾ ಸಾವು ಕೂಡ ಸಂಭವಿಸಬಹುದು.
ತೀವ್ರ ಕಿರಿಕಿರಿ: ಮೂಗಿನ ಒಳಗಿನ ಲೋಳೆಪೊರೆಯು (Mucous Membrane) ಅತ್ಯಂತ ಸೂಕ್ಷ್ಮವಾಗಿರುತ್ತದೆ. ಬಿಯರ್‌ನಲ್ಲಿರುವ ಆಲ್ಕೋಹಾಲ್,ಕಾರ್ಬನ್ ಡೈಆಕ್ಸೈಡ್ ಮೂಗಿನ ಒಳಭಾಗದಲ್ಲಿ ತೀವ್ರವಾಗಿ ಹಾನಿ ಮಾಡಬಹುದು.
ಮಿದುಳಿನ ಮೇಲೆ ಪರಿಣಾಮ: ಮೂಗಿನ ಮೂಲಕ ಆಲ್ಕೋಹಾಲ್ ಸೇವಿಸಿದ ಬಳಿಕ, ಅದು ರಕ್ತಕ್ಕೆ ಅತ್ಯಂತ ವೇಗವಾಗಿ ಸೇರುತ್ತದೆ, ಇದು ವ್ಯಕ್ತಿಯ ಪ್ರಜ್ಞೆ ತಪ್ಪುವಂತೆ ಮಾಡಬಹುದು.
ಕ್ಷಣಿಕ ಪ್ರಚಾರಕ್ಕಾಗಿ ಇಂತಹ ಪ್ರಾಣಾಪಾಯದ ಕೆಲಸಗಳನ್ನು ಮಾಡುವುದು ಸರಿಯಲ್ಲ. ಇಂತಹ ವಿಡಿಯೋಗಳು ಯುವಜನತೆಯ ಮೇಲೆ ತಪ್ಪು ಪ್ರಭಾವ ಬೀರುತ್ತವೆ. ಸೋಶಿಯಲ್ ಮೀಡಿಯಾ ಕೇವಲ ಮನರಂಜನೆಗೆ ಅಥವಾ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳಲು ಸಹಾಯಕ ಆಗುವಂತೆ ಇರಬೇಕು ಅಷ್ಟೇ.