ಜಾತ್ಯತೀತತೆ ಯಾರೂ ಯಾರಿಗೂ ಕಲಿಸಲಾಗಲ್ಲ: ಜಾವೇದ್

Kannadaprabha News   | Kannada Prabha
Published : Jan 17, 2026, 12:28 PM IST
Javed Akhtar

ಸಾರಾಂಶ

‘ಜಾತ್ಯತೀತ ಮನೋಭಾವ ಕಲಿಸುವುದಕ್ಕೆ ಯಾವುದೇ ಕ್ರ್ಯಾಶ್ ಕೋರ್ಸ್ ಇಲ್ಲ. ಅದು ನಮ್ಮ ಜೀವನಶೈಲಿ ಆದಾಗಲೇ ಅರ್ಥಪೂರ್ಣ. ಇವತ್ತು ಜಾತ್ಯತೀತ ಎನ್ನುವುದನ್ನು ನಾಲ್ಕು ಅಕ್ಷರಗಳ ಪದಕ್ಕೆ ಇಳಿಸಲಾಗಿದೆ’ ಎಂದು ಹಿರಿಯ ಗೀತರಚನಕಾರ, ಲೇಖಕ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟರು.

ಜೋಗಿ

ಜೈಪುರ : ‘ಜಾತ್ಯತೀತ ಮನೋಭಾವ ಕಲಿಸುವುದಕ್ಕೆ ಯಾವುದೇ ಕ್ರ್ಯಾಶ್ ಕೋರ್ಸ್ ಇಲ್ಲ. ಅದು ನಮ್ಮ ಜೀವನಶೈಲಿ ಆದಾಗಲೇ ಅರ್ಥಪೂರ್ಣ. ಇವತ್ತು ಜಾತ್ಯತೀತ ಎನ್ನುವುದನ್ನು ನಾಲ್ಕು ಅಕ್ಷರಗಳ ಪದಕ್ಕೆ ಇಳಿಸಲಾಗಿದೆ’ ಎಂದು ಹಿರಿಯ ಗೀತರಚನಕಾರ, ಲೇಖಕ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟರು.

ಜೈಪುರ ಸಾಹಿತ್ಯೋತ್ಸವದ ಕಿಕ್ಕಿರಿದ ಗೋಷ್ಠಿಯಲ್ಲಿ ಮಾತಾಡಿದ ಜಾವೇದ್ ಅಖ್ತರ್, ‘ಜಾತ್ಯತೀತತೆ ನಮ್ಮ ಜೀವನಶೈಲಿ ಆಗಬೇಕು. ನಮ್ಮ ಸುತ್ತಮುತ್ತಲಿನವರೂ ಹಾಗೇ ಬದುಕುತ್ತಿದ್ದಾರೆ ಎಂದು ತಿಳಿಯಬೇಕು. ಜಾತ್ಯತೀತ ಆಗಿರುವುದು ಅಂದರೆ ಈ ಕೆಳಗಿನ ಅಂಶಗಳನ್ನು ಕಲಿತು ಅಳವಡಿಸಿಕೊಳ್ಳುವುದು ಎಂದು ಹೇಳಿದರೆ ಅದು ಕೃತಕವಾಗುತ್ತದೆ. ಹಾಗೆ ಕಲಿತದ್ದು ಬಹಳ ದಿನ ಉಳಿಯುವುದಿಲ್ಲ. ನಾನು ಅದನ್ನು ನನ್ನ ಹಿರಿಯರಿಂದ ಕಲಿತೆ. ನಮ್ಮ ಮನೆಯಲ್ಲಿ ಎಲ್ಲರೂ ನಾಸ್ತಿಕರಾಗಿದ್ದರಿಂದ, ಧಾರ್ಮಿಕತೆಗೆ ಮನೆಯೊಳಗೆ ಪ್ರವೇಶ ಇರಲಿಲ್ಲ, ಮನುಷ್ಯರಿಗೆ ಮಾತ್ರ ಪ್ರವೇಶ ಇತ್ತು’ ಎಂದು ಹೇಳಿದರು.

‘ಬಾಲ್ಯದಲ್ಲಿ ತನ್ನ ಅಜ್ಜ ಐವತ್ತು ಪೈಸೆ ಕೊಟ್ಟು ದೇವರನಾಮಗಳನ್ನು ಬಾಯಿಪಾಠ ಮಾಡಲು ಪುಸಲಾಯಿಸುತ್ತಿದ್ದರು. ಆಗ ತನ್ನ ಅಜ್ಜಿ ಯಾರಿಗೂ ಯಾರ ಮೇಲೂ ಧಾರ್ಮಿಕ ನಂಬಿಕೆಗಳನ್ನು ಹೇರಲು ಹಕ್ಕಿಲ್ಲ ಎಂದು ಹೇಳುತ್ತಿದ್ದರು. ಆ ಕಾಲಕ್ಕೆ ನನಗೆ ಐವತ್ತು ಪೈಸೆ ತಪ್ಪಿತಲ್ಲ ಅಂತ ಅಜ್ಜಿ ಮೇಲೆ ಸಿಟ್ಟು ಬರುತ್ತಿತ್ತು. ಈಗ ನೋಡಿದರೆ, ತನ್ನ ಹೆಸರು ಬರೆಯಲಿಕ್ಕೂ ಗೊತ್ತಿಲ್ಲದ ಅಜ್ಜಿ ಎಷ್ಟೊಂದು ಜ್ಞಾನಿಯಾಗಿದ್ದಳು ಅನ್ನಿಸುತ್ತದೆ. ಅಜ್ಜಿಯ ಸಂವೇದನೆಯ ಹತ್ತನೇ ಒಂದು ಭಾಗ ನಮ್ಮ ರಾಜಕಾರಣಿಗಳಿಗೆ ಇದ್ದರೂ ಸಾಕಿತ್ತು’ ಎಂದು ಜಾವೇದ್ ನೆನಪಿಸಿಕೊಂಡರು.

‘ನಾವು ಇರುವ ಕಾಲ ಸುವರ್ಣಯುಗ ಅಲ್ಲ. ಅರಿಸ್ಟಾಟಲ್ ಕೂಡ ತನ್ನ ಮುಂದಿನ ತಲೆಮಾರಿನ ಬಗ್ಗೆ ಬೇಸರ ಮಾಡಿಕೊಂಡಿದ್ದ. ಕ್ರಿಸ್ತಪೂರ್ವ 360ರಲ್ಲೇ ತರುಣ ಜನಾಂಗಕ್ಕೆ ಶ್ರದ್ಧೆಯಿಲ್ಲ, ಏಕಾಗ್ರತೆ ಇಲ್ಲ, ಶಿಸ್ತಿಲ್ಲ, ಅವರೆಲ್ಲ ಪೂರ್ತಿ ಕೆಟ್ಟು ಹೋಗಿದ್ದಾರೆ ಎಂದು ಬರೆದಿದ್ದಾರೆ. ದೊಡ್ಡವರು ಮಕ್ಕಳನ್ನು ದೂರುವುದು ಅಂದಿನಿಂದಲೇ ನಡೆದುಬಂದಿದೆ’ ಎಂದು ಅಖ್ತರ್ ತರುಣ ಜನಾಂಗದ ನಿಲುವುಗಳನ್ನು ಸಮರ್ಥಿಸಿಕೊಂಡರು.

ಸಹಾಯಕ ನಿರ್ದೇಶಕರ ಶೋಚನೀಯ ಸ್ಥಿತಿ

‘ಸಿನಿಮಾರಂಗದಲ್ಲಿ ಸಹಾಯಕ ನಿರ್ದೇಶಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅವರಿಗೆ ಮೇಡಂ ಚಪ್ಪಲಿ ತಂದುಕೊಡು, ಹೀರೋ ಕೋಟು ಹುಡುಕು ಮುಂತಾದ ಕೆಲಸ ಹೇಳುತ್ತಿದ್ದರು. ನಾನೂ ಒಂದು ಕಾಲದಲ್ಲಿ ಅವನ್ನೆಲ್ಲ ಮಾಡಿದ್ದೆ. ಈಗ ಇದು ಬದಲಾಗಿದೆ. ಅನೇಕ ಸಹಾಯಕ ನಿರ್ದೇಶಕರು ಸ್ಟಾರ್‌ಗಳನ್ನು ಹೆಸರು ಹಿಡಿದು ಕರೆಯುವಷ್ಟು ಮುಂದುವರಿದಿದೆ. ನನಗೆ ಅದನ್ನೆಲ್ಲ ನೋಡುವಾಗ ಭಯವಾಗುತ್ತದೆ. ನನ್ನ ಕಾಲದಲ್ಲಿ ಹೀರೋಗಳ ಹೆಸರು ಹೇಳುವುದನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ’ ಎಂದು ಅಖ್ತರ್ ತನ್ನ ಆರಂಭದ ದಿನಗಳನ್ನು ನೆನಪಿಸಿಕೊಂಡರು.

ಉರ್ದು ಭಾಷೆಯೇ ಹೊರತು ಧರ್ಮ ಅಲ್ಲ

‘ಉರ್ದು ಪ್ರಾದೇಶಿಕ ಭಾಷೆಯೇ ಹೊರತು ಧಾರ್ಮಿಕ ಗುರುತು ಅಲ್ಲ. ಪಾಕಿಸ್ತಾನದ ಸೃಷ್ಟಿಗೆ ಉರ್ದು ಕಾರಣವಾಯಿತು. ಉರ್ದು ತಮ್ಮ ಭಾಷೆ ಅಂದುಕೊಂಡವರು ಆಗಾಗ ಸಂಘರ್ಷಕ್ಕೆ ಕಾರಣ ಆಗುತ್ತಿರುತ್ತಾರೆ. ಭಾಷೆ ಯಾವತ್ತೂ ಧರ್ಮಕ್ಕೋ ಸಮಾಜಕ್ಕೋ ಸಂಬಂಧಿಸಿದ್ದು ಆಗಿರಲು ಸಾಧ್ಯವಿಲ್ಲ. ಅದು ಪ್ರದೇಶಕ್ಕೆ ಸಂಬಂಧಿಸಿದ್ದು. ಸಂಸ್ಕೃತಕ್ಕೆ ಹೋಲಿಸಿದರೆ ಉರ್ದು ಇತ್ತೀಚಿನ ಭಾಷೆ’ ಎಂದು ಜಾವೇದ್ ಅಖ್ತರ್ ಅಭಿಪ್ರಾಯಪಟ್ಟರು.

PREV
Read more Articles on
click me!

Recommended Stories

ವಿಕಸಿತ ಭಾರತದ ಸಂಕಲ್ಪಕ್ಕೆ ''ರಾಮ್ ಜಿ'' ಶಕ್ತಿ
ಇನ್ಮುಂದೆ Zepto, Blinkit, Swiggy 10 ನಿಮಿಷದ ಡೆಲಿವರಿ ಸಿಗಲ್ಲ: ಸರ್ಕಾರದ ಆದೇಶ! ಖುಷಿಯಿಂದ ಒಪ್ಕೊಂಡ ಗ್ರಾಹಕರು