ಪವರ್‌ ಪಾಯಿಂಟ್‌.. ಎಥೆನಾಲಿಂದ ಸಮಸ್ಯೆಗೀಡಾದ 1 ವಾಹನ ತೋರಿಸಿ: ನಿತಿನ್‌ ಗಡ್ಕರಿ

Published : Sep 18, 2025, 10:49 AM IST
Nitin Gadkari

ಸಾರಾಂಶ

ಎಥೆನಾಲ್‌ ಮಿಶ್ರಿತ ಇಂಧನದಿಂದ ವಾಹನಗಳಿಗೆ ಹಾನಿ ಎಂದು ದೂರುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದಾಗಿ ಯಾವುದೇ ಕಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಉದಾಹರಣೆ ಇಲ್ಲ. ನಾನು ಮುಕ್ತ ಸವಾಲೆಸೆಯುತ್ತೇನೆ.

ನಿತಿನ್‌ ಗಡ್ಕರಿ, ಕೇಂದ್ರ ಹೆದ್ದಾರಿ, ರಸ್ತೆ ಸಾರಿಗೆ ಸಚಿವ

ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಬಿಡಿಭಾಗಗಳಿಗೆ ಹಾನಿ ಎನ್ನುವ ಆರೋಪ ಹಲವರದ್ದು. ಆದರೆ ಅದನ್ನು ಹಲವು ಪರೀಕ್ಷೆಗಳು ಸುಳ್ಳಾಗಿಸಿವೆ. ಎಲ್ಲಾ ಕ್ಷೇತ್ರದಲ್ಲಿಯೂ ಲಾಬಿ ಸರ್ವೇ ಸಾಮಾನ್ಯ, ಆದರೆ ಪೆಟ್ರೋಲ್ ಲಾಬಿ ಅತ್ಯಂತ ಶ್ರೀಮಂತವಾದದ್ದು. ಎಥೆನಾಲ್‌ ವಿಚಾರದಲ್ಲಿ ನನ್ನ ವಿರುದ್ಧ ಹಣ ನೀಡಿ ತೇಜೋವಧೆ ಮಾಡಲಾಯಿತು. ಪುತ್ರರ ಹಿತಾಸಕ್ತಿಗಾಗಿ ಈ ಕ್ರಮ ಎಂದರು. ಆದರೆ ಅವುಗಳಲ್ಲಿ ಯಾವ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ.

ಸರ್ಕಾರದ ಎಥೆನಾಲ್‌ ಕಾರ್ಯಕ್ರಮಗಳ ಬಗ್ಗೆ ವಿರೋಧಿಗಳು ಸಾರ್ವಜನಿಕರಿಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಎಥೆನಾಲ್‌ ಮಿಶ್ರಿತ ಇಂಧನದಿಂದ ವಾಹನಗಳಿಗೆ ಹಾನಿ ಎಂದು ದೂರುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು. ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದಾಗಿ ಯಾವುದೇ ಕಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಉದಾಹರಣೆ ಇಲ್ಲ. ನಾನು ಮುಕ್ತ ಸವಾಲೆಸೆಯುತ್ತೇನೆ. ಇ -20 ಪೆಟ್ರೋಲ್‌ನಿಂದಾಗಿ ಸಮಸ್ಯೆ ಹೊಂದಿರುವ ಯಾವುದಾದರೂ ಒಂದು ವಾಹನವಿದ್ದರೆ ನನಗೆ ತೋರಿಸಿ. ಅಂತಹದ್ದೊಂದು ನಿದರ್ಶನ ನಿಮಗೆ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಇದರಿಂದ ಎಂಜಿನ್‌ಗೆ ಆಗಲಿ, ಅದರ ಕಾರ್ಯಕ್ಷಮತೆಗಾಗಲೀ ಯಾವುದೇ ನಷ್ಟವಿಲ್ಲ. ಎಥೆನಾಲ್ ವಾಹನಗಳಿಗೆ ಮಾರಕ ಎಂದು ಟೀಕಿಸುವವರಲ್ಲಿ ಹೆಚ್ಚಿನವರಲ್ಲಿ ಸ್ವಹಿತಾಸಕ್ತಿ ಇರಬಹುದು. ಆದರೆ ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.

ಹಣ ನೀಡಿ ತೇಜೋವಧೆ: ಈ ವಿಚಾರದಲ್ಲಿ ಹಣ ನೀಡಿ ನನ್ನ ಬಗ್ಗೆ ರಾಜಕೀಯ ಅಪಪ್ರಚಾರ, ತೇಜೋವಧೆ ಮಾಡಲಾಗುತ್ತಿದೆ. ಆದರೆ ಪರೀಕ್ಷೆಗಳಿಂದ ಅದೆಲ್ಲ ಸುಳ್ಳು ಎನ್ನುವುದು ಸಾಬೀತಾಗಿದೆ. ಕೈಗಾರಿಕೆಗಳು ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ರಾಜಕೀಯದಲ್ಲೂ ಕೂಡ ಸ್ಪರ್ಧೆ, ಸ್ವಾರ್ಥ, ತಾನೇ ಮುಂದೆ ಹೋಗಬಹುದು ಎನ್ನುವುದೆಲ್ಲವೂ ಇದ್ದೇ ಇರುತ್ತದೆ. ಇದೇ ಉದ್ದೇಶದಿಂದ ನನ್ನ ವಿರುದ್ಧ ಹಣ ನೀಡಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಯಿತು. ರಾಜಕೀಯವಾಗಿ ಟಾರ್ಗೆಟ್‌ ಮಾಡಲಾಯಿತು. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ಎಲ್ಲವೂ ಸ್ಪಷ್ಟವಾಗಿದೆ. ಎಲ್ಲಾ ಪರೀಕ್ಷಾ ಸಂಸ್ಥೆಗಳು ಎಥೆನಾಲ್ ಮಿಶ್ರಿತ ಇಂಧನದಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಖಚಿತ ಪಡಿಸಿವೆ.

ಎಥೆನಾಲ್‌ ಬಳಕೆಯಿಂದ ಮಾಲಿನ್ಯವು ಕಡಿಮೆಯಾಗುತ್ತದೆ. ಆಗಲೇ ಹೇಳಿದಂತೆ ಶೇ.80ರಷ್ಟು ಪೆಟ್ರೋಲ್‌ನ್ನು ಶೇ.20 ರಷ್ಟು ಎಥೆನಾಲ್‌ ಜತೆಗೆ ಮಿಶ್ರಣ ಮಾಡುವುದರಿಂದ ವಾಹನಗಳ ಯಾವುದೇ ಭಾಗಗಳಿಗೆ ಹಾನಿಯಾಗುವುದಿಲ್ಲ. ವಿಪಕ್ಷಗಳು ಹಾಗೂ ಅನೇಕ ಕಾರು ಮಾಲೀಕರು ಜಾಲತಾಣದಲ್ಲಿ ಇದನ್ನು ಟೀಕಿಸಿದ್ದರು. ಇದರಿಂದ ಎಂಜಿನ್‌ ಬಿಡಿಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದರು. ಅದೆಲ್ಲವೂ ನೂರಕ್ಕೆ ನೂರರಷ್ಟು ಅಸತ್ಯ.

ರೈತರ ಆದಾಯವೂ ದುಪ್ಪಟ್ಟು: ಭಾರತ ಇಂಧನಗಳ ಆಮದಿಗೆ ಪ್ರತಿ ವರ್ಷ ₹22 ಲಕ್ಷ ಕೋಟಿ ಖರ್ಚು ಮಾಡುತ್ತದೆ. ಆದರೆ ಎಥೆನಾಲ್‌ನಿಂದ ಆ ಹಣ ಉಳಿದು ಅದು ಭಾರತೀಯ ಆರ್ಥಿಕತೆಗೆ ಹೋದರೆ ಎಲ್ಲಿ ಎಷ್ಟು ಲಾಭ ಗಳಿಸಬಹುದು? ಇಂಧನ ಆಮದು ಕಡಿತವೇ ನಮ್ಮ ಗುರಿ. ಭಾರತವು ಎಥೆನಾಲ್‌ನ ಮೂರನೇ ಅತಿದೊಡ್ಡ ಬಳಕೆದಾರ ಮತ್ತು ಉತ್ಪಾದಕ ದೇಶ. ಬ್ರೆಜಿಲ್‌ನಂತಹ ದೇಶಗಳು ಶೇ.100ರಷ್ಟು ಎಥೆನಾಲ್‌ ಮಿಶ್ರಣ ಹೊಂದಿವೆ. ಆದರೆ ಭಾರತ ಶೇ.27 ರಷ್ಟು ಎಥೆನಾಲ್ ಮಿಶ್ರಣ ಪ್ರಯೋಗಗಳನ್ನು ಆರಂಭಿಸಿದೆ. ಆದರೆ ಅದರ ಅನುಷ್ಠಾನಕ್ಕೆ ಇನ್ನು ಸಮಯ ನಿಗದಿಯಾಗಿಲ್ಲ. ಇ -20 ವಾಹನಗಳ ಸರಾಸರಿ ಮೈಲೇಜ್‌ ಕಡಿಮೆ ಮಾಡುತ್ತದೆ ಎನ್ನುವುದು ನಿಜ. ಆದರೆ ಆಮದು ವೆಚ್ಚ ಕಡಿಮೆ ಆಗುತ್ತದೆ, ಮಲಿನತೆಯೂ ಕ್ಷೀಣಿಸುತ್ತದೆ ಎಂದಾಗ ಇಷ್ಟನ್ನಾದರೂ ಸಹಿಸಬೇಕಲ್ಲವೇ?

ಎಥೆನಾಲ್‌ ಮಿಶ್ರಣ ಕಾರ್ಯದಿಂದ ದೇಶ ಈಗಾಗಲೇ 1.44 ಲಕ್ಷ ಕೋಟಿ ಉಳಿಸಿದೆ. ಇನ್ನು ಎಥೆನಾಲ್‌ ಬಳಕೆ ಕೇವಲ ಪರಿಸರ ಸ್ನೇಹಿ ಮಾತ್ರವಲ್ಲ, ರೈತ ಪರ ಕೂಡ ಹೌದು. ಇದರಿಂದ ಹಲವು ಸಕ್ಕರೆ ಕಾರ್ಖಾನೆಗಳು ಚೇತರಿಸಿಕೊಂಡಿವೆ., ರೈತರ ಆದಾಯವೂ ದುಪ್ಪಟ್ಟಾಗಲಿದೆ. ಮೆಕ್ಕೆ ಜೋಳವನ್ನು ಎಥೆನಾಲ್‌ ಉತ್ಪಾದನೆಗೆ ಬಳಸಲಾಗುತ್ತಿದೆ. ಪರಿಣಾಮ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮೆಕ್ಕೆ ಜೋಳ ಬೆಳೆಯು ಪ್ರಮಾಣ ಮೂರು ಪಟ್ಟು ಹೆಚ್ಚಳಕ್ಕೆ ಕಾರಣವಾಗಿದೆ,. ಈ ಹಿಂದೆ ಜೋಳ ಕ್ವಿಂಟಾಲ್‌ಗೆ 1200 ರು.ಗೆ ಮಾರಾಟ ಆಗುತ್ತಿತ್ತು. ಆದರೆ ಇದೀಗ ಅದು 2600 ರು. ಸಿಗುತ್ತಿದೆ.

ನನ್ನ ಮೆದುಳಿನ ಮೌಲ್ಯ ತಿಂಗಳಿಗೆ ₹ 200 ಕೋಟಿ

ರಾಜಕೀಯವಾಗಿ ಇದನ್ನು ಹೇಳಬೇಕೋ ಬೇಡವೋ ಗೊತ್ತಿಲ್ಲ. ಆದರೆ ಇದೆಲ್ಲವನ್ನೂ ಪೆಟ್ರೋಲಿಯಂ ಲಾಬಿ ಕುಶಲತೆಯಿಂದ ನಿರ್ವಹಿಸುತ್ತಿದೆ. ಎಲ್ಲೆಡೆ ಲಾಬಿಗಳಿರುತ್ತದೆ. ಆದರೆ ಪೆಟ್ರೋಲ್‌ ಲಾಬಿ ಶ್ರೀಮಂತವಾಗಿದೆ. ಎಥೆನಾಲ್‌ನಿಂದ ಬಳಕೆ ಮೂಲಕ ನನ್ನ ಮಕ್ಕಳಿಗೆ ಲಾಭ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ನನ್ನ ಇಬ್ಬರು ಪುತ್ರರು ಎಥೆನಾಲ್‌ ಉತ್ಪಾದನೆಗೆ ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಅದಕ್ಕೆ ನಾನು ಇಷ್ಟೊಂದು ಮುತುವರ್ಜಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎನ್ನುವುದು ವಿಪಕ್ಷಗಳ ಆರೋಪ. ಆದರೆ ಖಂಡಿತವಾಗಿ ಹಾಗೇನೂ ಇಲ್ಲ.

ಪ್ರಾಮಾಣಿಕವಾಗಿ ಹೇಗೆ ಉದ್ಯಮ ನಡೆಸಬಹುದು ಎಂಬ ಬಗ್ಗೆ ನಾನು ನನ್ನ ಮಗನಿಗೆ ಐಡಿಯಾಗಳನ್ನು ನೀಡುತ್ತೇನೆ. ಇತ್ತೀಚೆಗೆ ನನ್ನ ಮಗ ಇರಾನ್‌ನಿಂದ 800 ಕಂಟೇನರ್‌ ಸೇಬು ಆಮದು ಮಾಡಿಕೊಂಡ, ಅದೇ ವೇಳೆ ಅಲ್ಲಿಗೆ 1000 ಕಂಟೇನರ್‌ ಬಾಳೆಹಣ್ಣು ರಫ್ತು ಮಾಡಿದ. ಇದರ ಹೊರತಾಗಿ ನಾನು ಸಕ್ಕರೆ, ಡಿಸ್ಟಿಲರಿ, ವಿದ್ಯುತ್‌ ಸ್ಥಾವರ ಹೊಂದಿದ್ದೇನೆ. ನನ್ನ ಆದಾಯ ಸಾಕಷ್ಟಿದೆ. ನನ್ನ ಮೆದುಳು ತಿಂಗಳಿಗೆ 200 ಕೋಟಿ ಮೌಲ್ಯದ್ದಾಗಿದೆ. ನನಗೆ ಹಣದ ಕೊರತೆಯಿಲ್ಲ. ಎಥೆನಾಲ್‌ಗಳಿಂದ ಲಾಭ ಗಳಿಸಬೇಕಾಗಿಲ್ಲ.

2022-23ರ ಸಮಯದಲ್ಲಿ ಶೇ.12.06ರಷ್ಟು ಎಥೆನಾಲ್ ಮಿಶ್ರಣವಿತ್ತು. ಅನಂತರದ ವರ್ಷದಲ್ಲಿ ಶೇ.14.6 ಕ್ಕೆ ಏರಿತು. ಈ ವರ್ಷದ ಫೆಬ್ರವರಿ ವೇಳೆಗೆ ಅದು ಶೇ.19.6ರಕ್ಕೆ ತಲುಪಿದೆ. ಅದಾಗಿ ಕೆಲವೇ ತಿಂಗಳಲ್ಲಿ ಶೇ.20ರ ಗಡಿ ದಾಟಿದೆ. ಇದೆಲ್ಲ ನೋಡಿದರೆ ಒಂದಂತೂ ಸ್ಪಷ್ಟ. ಎಥೆನಾಲ್‌ ಭಾರತದ ಇಂಧನ ವಲಯದ ಭವಿಷ್ಯವಾಗಿ ಬೆಳೆಯಲಿದೆ. ನಮ್ಮ ದೇಶ ಇನ್ನೇನೂ ಕೆಲವೇ ವರ್ಷಗಳಲ್ಲಿ ಶೇ. 100 ಜೈವಿಕ ಎಥೆನಾಲ್‌ ಇಂಧನವನ್ನು ಹೊಂದಿರುವ ದೇಶವಾಗಿ ರೂಪುಗೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?