ಡಾ.ರಾಮದಾಸ್ ಪೈ ಜೀವನ ನಮಗೆ ದಾರಿದೀಪ: ಅದು ಸಂಭ್ರಮವಲ್ಲ, ನಮಗೆ ನಿರಂತರ ಪ್ರೇರಣೆ

Published : Sep 17, 2025, 07:33 AM IST
Dr Ramdas Pai

ಸಾರಾಂಶ

ಆ ದಿನಗಳನ್ನುನಾನು ನೆನಪು ಮಾಡುವುದಾದರೆ, ಭಾರತದ ಕಾಲೇಜುಗಳಲ್ಲಿ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶವನ್ನು ಸರ್ವೋಚ್ಚ ನ್ಯಾಯಾಲಯ ತಡೆಹಿಡಿದಿತ್ತು. ಇತರರಿಗೆ ಇದು ಹಿನ್ನಡೆಯಾಗಿ ತೋರಿತ್ತು. ಆದರೆ, ಡಾ. ಪೈ ಅವರಿಗೆ ಅದು ವಿದೇಶಗಳಲ್ಲಿ ಮಣಿಪಾಲವನ್ನು ಸ್ಥಾಪಿಸುವ ಅವಕಾಶವಾಗಿ ಕಂಡಿತು.

ಡಾ। ರಾಮ್‌ನಾರಾಯಣ್ ಲೇಖನ

ಡಾ.ರಾಮದಾಸ್ ಪೈ ಅವರೊಂದಿಗೆ ನಾನು ಅಧಿಕೃತವಾಗಿ ಕೆಲಸ ಮಾಡುವ ಭಾಗ್ಯವನ್ನು ಪಡೆಯುವ ಸಾಕಷ್ಟು ಮೊದಲೇ ಒಮ್ಮೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆ ನನ್ನ ಮೊದಲ ಭೇಟಿ ಸಂಕ್ಷಿಪ್ತವಾದುದಾಗಿತ್ತು. ನಾನು ಪೆಥಾಲಜಿ ವಿಭಾಗದಲ್ಲಿ ಟ್ಯೂಟರ್ ಆಗಿ ಸೇರಿದ್ದೆ. ಡಾ. ಪಿ. ವೇಣುಗೋಪಾಲ್ ಅವರು ಅನಿರೀಕ್ಷಿತವಾಗಿ ಮತ್ತು ಆಶ್ಚರ್ಯಕರವಾಗಿ ನನ್ನನ್ನು ಮಾಹೆಯ ಕುಲಾಧಿಪತಿಗೆ ಪರಿಚಯಿಸಿದರು. ಅದೊಂದು ಕ್ಷಣಿಕವಾದ ಭೇಟಿ. ಆದರೆ, ಅದು ಇಂದಿಗೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

ನಮ್ಮ ನಿಕಟ ಸಂಬಂಧವು ವೆಸ್ಟ್ ಇಂಡೀಸ್‌ನ ವಿಶ್ವವಿದ್ಯಾಲಯದೊಂದಿಗೆ ಟ್ವಿನ್ನಿಂಗ್ ಪ್ರೋಗ್ರಾಂ ಆರಂಭಿಸಿದ ಸಂದರ್ಭದಲ್ಲಿ ಇನ್ನಷ್ಟು ಬೆಳೆಯಿತು. ಆ ಸಮಯದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಸ್ವತಃ ಡಾ. ರಾಮದಾಸ್ ಪೈ ಅವರೇ ಮೇಲ್ವಿಚಾರಣೆ ಮಾಡುತ್ತಿದ್ದರು. ಈ ಉಪಕ್ರಮ (ಇನಿಶಿಯೇಟಿವ್) ಪೂರ್ಣವಾಗಿ ಅಜ್ಞಾತ ದಾರಿಯಲ್ಲಿ ನಡೆಯುವ ಪ್ರಯತ್ನವಾಗಿತ್ತು- ದಾರಿ ನಕ್ಷೆಯೂ ಇರಲಿಲ್ಲ, ಪೂರ್ವಾನುಭವಗಳೂ ಇರಲಿಲ್ಲ. ಪ್ರತಿ ಬಾರಿ- ಸಮಸ್ಯೆ ಸಂಬಂಧಿತ ಸಲಹೆಗಿರಲಿ, ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬೋರೇಟರಿ ಇರಲಿ ಅಥವಾ ಇತರ ನವೀನ ವಿಚಾರಗಳಿಗಿರಲಿ- ನಾನು ಡಾ. ರಾಮದಾಸ್ ಪೈ ಅವರಲ್ಲಿ ಪ್ರಸ್ತಾವಿಸಿದಾಗ, ಅವರ ಉತ್ತರ ಯಾವತ್ತೂ ದೃಢವಾಗಿರುತ್ತಿತ್ತು, ‘ಆಗಲಿ, ಮುಂದುವರಿಯಿರಿ!’

ಮಣಿಪಾಲವನ್ನು ವಿಶ್ವಮಟ್ಟಕ್ಕೆ ಒಯ್ದರು: ಅನಿಶ್ಚಿತ ವರ್ತಮಾನವನ್ನು ಮೀರಿ ನೋಡಬಲ್ಲ ಅವರ ಸಹಜದೃಷ್ಟಿಯು ನಮ್ಮಲ್ಲಿ ಹೊಸ ಚಿಂತನೆಗಳನ್ನು ಬೆಳೆಸುವ ಆತ್ಮವಿಶ್ವಾಸವನ್ನು ಮೂಡಿಸಿತು. ಅವರೊಂದಿಗೆ ಹೊಸ ಆಲೋಚನೆಗಳನ್ನು ಮುಂದಿಟ್ಟು ಚರ್ಚಿಸುವುದೆಂದರೆ ಆನಂದದಾಯಕ ಸಂಗತಿಯಾಗಿತ್ತು. ಭವಿಷ್ಯದ ಸಾಧ್ಯತೆಗಳನ್ನು ಶೋಧಿಸುವಲ್ಲಿ ಅವರು ಉತ್ಸಾಹಭರಿತರಾಗಿ ತೊಡಗಿಕೊಳ್ಳುವುದು ನನ್ನ ಅರಿವಿಗೆ ಬರುತ್ತಿತ್ತು. 90ರ ದಶಕದಲ್ಲಿ ಎಲ್ಲರೂ ವಿದೇಶಿ ವಿಶ್ವವಿದ್ಯಾಲಯಗಳು ಇನ್ನೇನು ಭಾರತಕ್ಕೆ ಬರಲಿವೆ ಎಂದು ಮಾತನಾಡುತ್ತಿದ್ದಾಗ, ಅವರು ಮಣಿಪಾಲವನ್ನು ವಿಶ್ವಮಟ್ಟಕ್ಕೊಯ್ಯುವ ಕನಸು ಕಾಣುತ್ತಿದ್ದರು.

ಆ ದಿನಗಳನ್ನುನಾನು ನೆನಪು ಮಾಡುವುದಾದರೆ, ಭಾರತದ ಕಾಲೇಜುಗಳಲ್ಲಿ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶವನ್ನು ಸರ್ವೋಚ್ಚ ನ್ಯಾಯಾಲಯ ತಡೆಹಿಡಿದಿತ್ತು. ಇತರರಿಗೆ ಇದು ಹಿನ್ನಡೆಯಾಗಿ ತೋರಿತ್ತು. ಆದರೆ, ಡಾ. ಪೈ ಅವರಿಗೆ ಅದು ವಿದೇಶಗಳಲ್ಲಿ ಮಣಿಪಾಲವನ್ನು ಸ್ಥಾಪಿಸುವ ಅವಕಾಶವಾಗಿ ಕಂಡಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ವಿದೇಶಕ್ಕೆ ಹೋಗುವ ಬಗ್ಗೆ ಯಾರೂ ಕೇಳಿರದ ದಿನಗಳವು. ಡಾ. ರಾಮದಾಸ್ ಪೈ ಅವರು ಮಲೇಷ್ಯಾ ಮತ್ತು ಕ್ರಮೇಣ ವೆಸ್ಟ್ ಇಂಡೀಸ್‌ನೊಂದಿಗೆ ಸಹಭಾಗಿತ್ವದ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಮಿತವೆಚ್ಚದ ದೃಷ್ಟಿಯಿಂದ ಪೋಷಕರು ಈ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡರು ಮತ್ತು ಅಂತಾರಾಷ್ಟ್ರೀಯ ಶಿಕ್ಷಣದ ಬಾಗಿಲು ತೆರೆದ ಕಾರಣ ವಿದ್ಯಾರ್ಥಿಗಳ ದೃಷ್ಟಿಯಲ್ಲಿಯೂ ಇದು ಮೌಲ್ಯಯುತ ಕಾರ್ಯಕ್ರಮವಾಯಿತು.

ಎಲ್ಲ ಯಶಸ್ಸೂ ತಂಡಕ್ಕೇ ಅರ್ಪಣೆ: ಮತ್ತೊಂದು ನಿರ್ಧಾರಾತ್ಮಕ ಕ್ಷಣ 1993ರಲ್ಲಿ ಬಂದಿತ್ತು. ಮಾಹೆಗೆ ‘ಡೀಮ್-ಟು-ಬಿ ಯುನಿವರ್ಸಿಟಿ’ ಸ್ಥಾನಮಾನ ಬಂದಿತ್ತು. ಡಾ.ರಾಮದಾಸ ಪೈ ಅವರಿಗೆ ವಿಶ್ವಾಸಾರ್ಹವಾದ ಸಣ್ಣ ತಂಡದಲ್ಲಿ ನಾನು ಒಬ್ಬನಾಗಿ, ಯುಜಿಸಿ ನಿಯೋಗವನ್ನು ಎಲ್ಲೆಡೆ ಕರೆದೊಯ್ಯುವ ಹೊಣೆಗಾರಿಕೆಯನ್ನು ವಹಿಸಿದ್ದೆ. ಆ ಹೊಣೆಗಾರಿಕೆಯು ನನ್ನ ಪಾಲಿಗೆ ಪಾರಿತೋಷಕವಾಗಿತ್ತು. ಮಣಿಪಾಲವು ಮಾನ್ಯತೆ ಪಡೆದ ಪ್ರಪ್ರಥಮ ಆರೋಗ್ಯ ವಿಜ್ಞಾನ ಸಂಸ್ಥೆಯಾಗುವಲ್ಲಿ ನಮ್ಮ ಪ್ರಯತ್ನ ಫಲ ನೀಡಿತು. ಯಾವುದೇ ಮಾನ್ಯತೆ ದೊರೆಯಲಿ, ಗೌರವ ಸಿಗಲಿ, ಅದರ ಯಶಸ್ಸನ್ನು ಅವರು ತಂಡಕ್ಕೇ ಅರ್ಪಿಸುತ್ತಿದ್ದರು. 2011ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಪಡೆದಾಗ ಮತ್ತು ಮಲೇಷ್ಯಾ ಸರ್ಕಾರದ ದಾತುಕ್ ಗೌರವದಿಂದ ಸಮ್ಮಾನಿತರಾದಾಗ ಅವರು ಹೀಗೆಂದಿದ್ದರು: ‘ಈ ಪ್ರಶಸ್ತಿ ನಿಮ್ಮದು, ಸಂಪೂರ್ಣ ಮಣಿಪಾಲ ತಂಡದ್ದು.’

ಸಮಯ ಪಾಲನೆಯಲ್ಲಿ ಕಟ್ಟುನಿಟ್ಟು

ಹೇಳ ಹೊರಟರೆ ಕೆಲವು ಸಣ್ಣ ಸಣ್ಣ ವಿಷಯಗಳೂ ಇವೆ- ಅವರ ಸಮಯಪಾಲನೆ ಮತ್ತು ವಾತ್ಸಲ್ಯದ ಭಾವ. ಕಾರ್ಯಕ್ರಮ ಬೆಳಗ್ಗೆ ಒಂಬತ್ತು ಗಂಟೆಗೆ ಆರಂಭವಾಗುವುದಾದರೆ, ಅವರು ಅದಕ್ಕಿಂತ ಮುಂಚೆಯೇ ಬಂದುಬಿಡುತ್ತಿದ್ದರು. ಭೋಜನಕೂಟಕ್ಕೆ ಆಹ್ವಾನಿಸಿದರೆ, ಅತಿಥಿಗಳಿಗಿಂತ ಮುಂಚೆಯೇ ಇರುತ್ತಿದ್ದರು. ಅವರ ಕಚೇರಿ ಸದಾ ನನಗೆ ಮುಕ್ತವಾಗಿತ್ತು. ಕೆಲವೊಮ್ಮೆ ಕರೆಮಾಡಿ ಹೇಳಿಬಿಡಬಹುದಾದ ಸಂಗತಿಗಳಿಗೂ ಅವರು ನನ್ನ ಕೊಠಡಿಗೇ ನೇರವಾಗಿ ಬಂದುಬಿಡುತ್ತಿದ್ದರು. ನಾವು ಮಾತಿಗೆ ಕುಳಿತಾಗ, ಅವರು ಒಂದು ಕಪ್ ಚಹಾ ಕುಡಿಯಲು ಒತ್ತಾಯಿಸುತ್ತಿದ್ದರು.

ನನ್ನ ಕೆಲಸ ಕಾರ್ಯಗಳ ಬಗ್ಗೆ, ಶೈಕ್ಷಣಿಕ ವಿಚಾರಗಳ ಬಗ್ಗೆ, ನನ್ನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದರು. ಅವರು ಎಷ್ಟು ಕೆಲಸಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರೂ ನಿಮಗಾಗಿ ಸಂಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ ಎಂಬ ಭಾವನೆ ಮೂಡುತ್ತಿತ್ತು. ಇಂಥದ್ದು ಮೂಡಿಬರಬೇಕಾದರೆ ಒಳಗಿನ ಸಹೃದಯತೆಯಿಂದ ಮಾತ್ರ ಸಾಧ್ಯ. ಅವರ 90ನೇ ಜನ್ಮದಿನದ ಈ ಸಂದರ್ಭದಲ್ಲಿ ನಾವು ಅವರ ಅಸಾಮಾನ್ಯ ಜೀವನಪಥವನ್ನುಮಾತ್ರ ಸಂಭ್ರಮಿಸುವುದಲ್ಲ, ಅವರು ನಮಗೆ ನೀಡಿದ ನಿರಂತರ ಪ್ರೇರಣೆಯನ್ನೂ ಆಚರಿಸುತ್ತಿದ್ದೇವೆ. ಅವರ ಆದರ್ಶ ಜೀವನ ಮತ್ತು ನಾಯಕತ್ವದ ಗುಣಗಳು ನಮಗೆ ಸದಾ ದಾರಿದೀಪವಾಗಿರುತ್ತವೆ. ಅವರ ಪರಂಪರೆಯನ್ನು ಮುಂದುವರಿಸುವುದು ನಮ್ಮ ಹೊಣೆಗಾರಿಕೆಯೂ ಹೌದು, ನಮ್ಮ ಸಂಭ್ರಮವೂ ಹೌದು.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?