ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು: ಎನ್.ರವಿಕುಮಾರ್ ಲೇಖನ

Published : Dec 26, 2025, 10:17 AM IST
N Ravikumar

ಸಾರಾಂಶ

ವಿಧೇಯಕಲ್ಲಿ ಜಾತಿ ಎಂಬ ಪದವನ್ನು ಏಕೆ ಕೈಬಿಡಲಾಗಿದೆ? ಜಾತಿ ವಿರುದ್ಧ ದ್ವೇಷ ಕಾರುವುದು, ದ್ವೇಷ ಭಾಷಣ, ದ್ವೇಷ ಅಪರಾಧದ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು, ಕಾಯ್ದೆ ಮಾಡಿದವರು ಸ್ಪಷ್ಟಪಡಿಸಬೇಕು.

ಲೇಖಕರು: ಎನ್.ರವಿಕುಮಾರ್, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರು

ಜಾತಿ ದ್ವೇಷ ಬಿತ್ತಿ, ಬ್ರಾಹ್ಮಣ-ಅಬ್ರಾಹ್ಮಣ, ಆರ್ಯ-ದ್ರಾವಿಡ, ವೈದಿಕ, ಅವೈದಿಕ, ಮೇಲ್ಜಾತಿ ಲಿಂಗಾಯತರು-ಒಕ್ಕಲಿಗರ ವಿರುದ್ಧ ಕೆಳಜಾತಿ ಹಿಂದುಳಿದವರು, ಅಸ್ಪೃಶ್ಯರನ್ನು ಎತ್ತಿಕಟ್ಟಿ ಹಿಂದೂ ಧರ್ಮ, ಹಿಂದೂ ಸಮಾಜ, ಹಿಂದೂ ಸಂಸ್ಕೃತಿ ಭಂಜನೆಗೆ ಮುಂದಾಗಿರುವ ಈ ‘ಅಹಿಂದ’, ‘ಎಡಪಂಥೀಯ’ ದ್ವೇಷ ಭಾಷಣಕಾರರೇ ನಿಜವಾದ ದ್ವೇಷಾಪರಾಧಿಗಳು. ಹಿಂದೂ ದ್ವೇಷದಿಂದಲೇ ಈ ಮಸೂದೆ ತಂದಿರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಇವರು ಟಾರ್ಗೆಟ್ ಮಾಡಿರುವುದು ಆರೆಸ್ಸೆಸ್ಸ್‌, ಬಿಜೆಪಿಯನ್ನಲ್ಲ. ಬದಲಿಗೆ ಹಿಂದೂಗಳನ್ನು.

ಪ್ರತಿ ಮನುಷ್ಯನ ಮನಸ್ಸಿನಲ್ಲೂ ಪ್ರೀತಿ ಮತ್ತು ದ್ವೇಷ ಎಂಬ ಎರಡು ಭಾವನೆಗಳಿರುತ್ತವೆ. ಒಂದು ಒಬ್ಬರಿಗೆ ಪ್ರೀತಿ ಎಂದೆನಿಸಿದರೆ ಮತ್ತೊಬ್ಬರಿಗೆ ಅದು ದ್ವೇಷ ಎನಿಸಬಹುದು. ಆದ್ದರಿಂದ ಯಾವುದು ಯಾರಿಗೆ ಪ್ರೀತಿ, ಯಾವುದು ಯಾರಿಗೆ ದ್ವೇಷ ಎಂದೆನಿಸುತ್ತದೆ ಎಂಬುದನ್ನು ಮಾತು-ಅಭಿಪ್ರಾಯ-ಸಂಕೇತಗಳ ಮೂಲಕ ನಿರ್ಧರಿಸುವುದು ಕಷ್ಟ. ಆದರೆ ಘಟನೆಗಳು, ಕ್ರಿಯೆಗಳ ಮೂಲಕ ನಿರ್ಧರಿಸುವುದು ಸುಲಭ ಮತ್ತು ಸರಳ. ಈಗಿರುವ ಕಾಂಗ್ರೆಸ್ ಸರ್ಕಾರ ತಮ್ಮದೇ ಶಾಸಕರ ಮನೆಗೆ ಬೆಂಕಿಯಿಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲಲ್ಲಿ ಖಡ್ಗ ಹಿಡಿದು ಸಾರ್ವಜನಿಕವಾಗಿ ಮೆರವಣಿಗೆ ಮಾಡಿ, ಅಮಾಯಕರ ಮನೆ ಬಾಗಿಲಿಗೆ ಕಲ್ಲೆಸೆದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಬೆಂಕಿ ಹಚ್ಚಿದವರ, ದೊಂಬಿ, ಗಲಭೆಗಿಳಿದವರ, ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಕ್ರಿಮಿನಲ್‌ಗಳ ಮೇಲಿನ ಕೇಸು ಹಿಂಪಡೆಯಲು ಮುಂದಾಗಿತ್ತು.

ರಾಜ್ಯದಲ್ಲಿ ತಾಂಡವವಾಡುತ್ತಿರುವ ಕ್ರೌರ್ಯ ನಿಯಂತ್ರಿಸುವಲ್ಲಿ ಸೋತಿರುವ ಕಾಂಗ್ರೆಸ್ ಸರ್ಕಾರ ಇದೀಗ ದ್ವೇಷಭಾಷಣ ನಿಯಂತ್ರಣ ಮಸೂದೆ ತರಲು ಮುಂದಾಗಿರುವ ಹಿಂದಿನ ಉದ್ದೇಶ ನಿಜವಾದ ದ್ವೇಷ ಮತ್ತು ಕ್ರೌರ್ಯಗಳನ್ನು ನಿಯಂತ್ರಿಸುವುದಲ್ಲ, ಬದಲಾಗಿ ತಮಗಾಗದವರನ್ನು ಹತ್ತಿಕ್ಕಲು ದ್ವೇಷದಿಂದ ತರುವುದೇ ಆಗಿದೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಎದುರಾಳಿಗಳನ್ನು ಹತ್ತಿಕ್ಕುವ ಮತ್ತು ವೋಟ್‌ ಬ್ಯಾಂಕ್ ಅನ್ನು ಓಲೈಸುವ ದ್ವೇಷ ಮಸೂದೆ ಆಗಿದೆ. ವಿಧೇಯಕದ 3(4)ರ ಅಡಿ ಬರುವ ದಂಡನೆಗಳಲ್ಲಿ ಕೆಲ ವಿನಾಯ್ತಿ ನೀಡಲಾಗಿದೆ. ‘ಜನಹಿತಕ್ಕಾಗಿ ಇರುವುದೆಂದು ಸಮರ್ಥನೀಯವಾಗಿ ರುಜುವಾಗಿರುವ ಅಥವಾ ಸದ್ಭಾವನಾ ಪೂರ್ವಕವಾಗಿ ಪರಂಪರೆ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಇಡಲಾಗಿರುವ ಅಥವಾ ಬಳಕೆಯಲ್ಲಿರುವಂಥವುಗಳಿಗೆ ಸದರಿ ಉಪಬಂಧಗಳನ್ನು ವಿಸ್ತರಿಸತಕ್ಕದಲ್ಲ’ ಎಂಬ ವಿನಾಯ್ತಿ ಮೂಲಕ ಇವರು ಯಾವ ಧಾರ್ಮಿಕ ಗ್ರಂಥಗಳ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ರಕ್ಷಿಸಲು ಹೊರಟಿದ್ದಾರೆ ಎಂಬುದು ರಹಸ್ಯವಾಗಿದೆ.

ಕಾನೂನು ತಜ್ಞರು ಉತ್ತರಿಸಬೇಕು: ಸಮರ್ಥನೀಯವಾಗಿ ರುಜುವಾಗಿರುವ ಅಂಥ ಧಾರ್ಮಿಕ ಉದ್ದೇಶಗಳ ಪುಸ್ತಕಗಳಾವುವು ಎಂದು ಮುಖ್ಯಮಂತ್ರಿ, ಮಂತ್ರಿಗಳು, ಸಾರ್ವಜನಿಕರಿಗೆ ಸ್ಪಷ್ಟಪಡಿಸುವುದು ಒಳಿತು. ಇಲ್ಲವಾದರೆ ಒಂದು ಧರ್ಮದವರಿಗೆ ಸದ್ಭಾವನಾ ಗ್ರಂಥ ಎನಿಸಿರುವುದು ಮತ್ತೊಂದು ಧರ್ಮದವರಿಗೆ ಅನ್ನಿಸದೇ ಇರಬಹುದು. ಒಬ್ಬರ ಪೂಜ್ಯ, ಪವಿತ್ರ ಗ್ರಂಥದಲ್ಲಿ ಮತ್ತೊಂದು ಧರ್ಮ-ದೇವರನ್ನು ನಂಬಿದವರನ್ನು ಕೊಲ್ಲು ಎಂದಿರಬಹುದು. ಆಗ ಅಂಥ ಗ್ರಂಥಗಳನ್ನು ಈ ಕಾಯಿದೆ ಸದ್ಭಾವನಾ ಗ್ರಂಥವೆಂದು ಅದಕ್ಕೆ ರಕ್ಷಣೆ ನೀಡುತ್ತದೆಯೇ ಎಂಬ ಬಗ್ಗೆ ಕಾನೂನು ತಜ್ಞರು ಉತ್ತರಿಸಬೇಕು. ಧಾರ್ಮಿಕ ಉದ್ದೇಶಗಳಿಗಾಗಿ ಇಡಲಾಗಿರುವ ಅಥವಾ ಬಳಕೆಯಲ್ಲಿರುವಂಥವುಗಳಿಗೆ ವಿನಾಯ್ತಿ ನೀಡುವ ಮೂಲಕ ತುಷ್ಟೀಕರಣ ರಾಜಕಾರಣದ ಹಿಡನ್ ಅಜೆಂಡಾವನ್ನು ಸೇರಿಸಿರುವುದು ಸ್ಪಷ್ಟ. ಮೃತ ವ್ಯಕ್ತಿಗಳ ವಿರುದ್ಧ ಕೆಡುಕಿನ ಮಾತಾಡಿದರೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲುಶಿಕ್ಷೆ, 1 ಲಕ್ಷ ರು.ವರೆಗಿನ ದಂಡ ಧಾರ್ಮಿಕ ಉದ್ದೇಶಗಳಿಗಾಗಿ ಇಡಲಾದ ಅಥವಾ ಬಳಕೆಯಲ್ಲಿರುವ ಪುಸ್ತಕ, ಕರಪತ್ರ, ಕಾಗದ, ಬರಹಗಳಿಗೆ ಅನ್ವಯಿಸುವುದಿಲ್ಲ ಎಂದರೇನರ್ಥ? ಪರೋಕ್ಷವಾಗಿ ಈ ಮಸೂದೆ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತದೆ, ಮುಸ್ಲಿಮರನ್ನು ಓಲೈಸುತ್ತದೆ ಅಲ್ಲವೇ?

ಜಾತಿ ಪದ ಯಾಕೆ ಕೈಬಿಟ್ಟಿದ್ದಾರೆ?

ವಿಧೇಯಕಲ್ಲಿ ಜಾತಿ ಎಂಬ ಪದವನ್ನು ಏಕೆ ಕೈಬಿಡಲಾಗಿದೆ? ಜಾತಿ ವಿರುದ್ಧ ದ್ವೇಷ ಕಾರುವುದು, ದ್ವೇಷ ಭಾಷಣ, ದ್ವೇಷ ಅಪರಾಧದ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು, ಕಾಯ್ದೆ ಮಾಡಿದವರು ಸ್ಪಷ್ಟಪಡಿಸಬೇಕು. ವರ್ಗ/ಗುಂಪು/ಸಮುದಾಯ ಎಂಬ ಪದಗಳು ಯಾರನ್ನು ಸೂಚಿಸುತ್ತವೆ? ಈ ಪದಗಳ ಸಾಲಿಗೆ ಜಾತಿ ಏಕೆ ಸೇರಿಲ್ಲ? ಜಾತಿ ದ್ವೇಷ ದ್ವೇಷದ ವ್ಯಾಪ್ತಿಗೆ ಬರುವುದಿಲ್ಲವೇ? ಮತ, ಪಂಥ, ಜಾತಿ ಎಂಬವು ಹಿಂದೂ ಸಮಾಜದ ಸ್ವರೂಪ. ಅವುಗಳ ಮೇಲಿನ ದ್ವೇಷ ಭಾಷಣ, ದ್ವೇಷ ಅಪರಾಧವನ್ನೇಕೆ ಪರಿಗಣಿಸಿಲ್ಲ? ಏಕೆ ವರ್ಗ/ಗುಂಪು/ಸಮುದಾಯ ಎಂಬ ನಿರ್ದಿಷ್ಟ ಪದಗಳನ್ನು ಬಳಸಲಾಗಿದೆ? ಇವು ಸಂವಿಧಾನದ ಯಾವ ವ್ಯಾಖ್ಯೆಯನ್ನು ಧ್ವನಿಸುತ್ತವೆ ಎಂಬ ಕುರಿತು ಸಾರ್ವಜನಿಕ ಚರ್ಚೆ ಅತ್ಯಗತ್ಯ.

ಸಮೂಹ ಅಥವಾ ಸಂಸ್ಥೆ ವಿರುದ್ಧ ಎಂದಿದೆಯೇ ಹೊರತು ಜಾತಿ/ಮತ/ಪಂಥಗಳ ವಿರುದ್ಧ ಎಂದು ಬರೆದಿಲ್ಲ. ಇದು ಕೂಡ ಜಾತಿವ್ಯವಸ್ಥೆಯ ಹಿಂದೂ ಸಮಾಜವನ್ನು ಜೈಲಿಗೆ ಕಳಿಸಲು ವರ್ಗ/ಸಮೂಹ ವ್ಯವಸ್ಥೆಯ ಮತೀಯ ಸಮಾಜಗಳನ್ನು ರಕ್ಷಿಸಲು ತಂದಿರುವ ಕಾಯ್ದೆ. ಜಾತಿದ್ವೇಷದ ಭಾಷಣ ಬರಹಗಳಿಂದ ಎಡಪಂಥೀಯರು ಹಿಂದೂ ಸಮಾಜವನ್ನು ನೂರು ವರ್ಷಗಳಿಂದಲೂ ನಿಂದಿಸುತ್ತಾ, ದ್ವೇಷಿಸುತ್ತಾ, ವರ್ಗ ಸಂಘರ್ಷದ ಹೆಸರಲ್ಲಿ ಸಾಯಿಸುತ್ತಾ ಬಂದಿದ್ದಾರೆ. ಆದರೂ ಜಾತಿದ್ವೇಷಿಗಳನ್ನು, ಜಾತಿ ದ್ವೇಷದ ಅಪರಾಧಿಗಳನ್ನು ಮಸೂದೆಯ ಒಳಗೆ ತಾರದೇ ವರ್ಗ/ಗುಂಪು/ಸಮುದಾಯ ಎಂದಿರುವುದು ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮುಸ್ಲಿಂ ತುಷ್ಟೀಕರಣದ ಕಾಯ್ದೆ ಇದು. ರಾಜ್ಯದಲ್ಲಿ ಕ್ರೌರ್ಯ ತಡೆಯಲಾಗದ ಸರ್ಕಾರ ದ್ವೇಷಭಾಷಣ ತಡೆಯುವ ನಾಟಕವನ್ನಾಡುತ್ತಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡಿರುವ ಈ ಮಸೂದೆ ತಂದ ಸರ್ಕಾರವನ್ನು ಈದ ಹಿಂದೂಗಳು ಟಾರ್ಗೆಟ್ ಮಾಡಬೇಕಿದೆ.

ಜಾತಿ ದ್ವೇಷ ಬಿತ್ತಿ, ಬ್ರಾಹ್ಮಣ-ಅಬ್ರಾಹ್ಮಣ, ಆರ್ಯ-ದ್ರಾವಿಡ, ವೈದಿಕ, ಅವೈದಿಕ, ಮೇಲ್ಜಾತಿ ಲಿಂಗಾಯತರು-ಒಕ್ಕಲಿಗರ ವಿರುದ್ಧ ಕೆಳಜಾತಿ ಹಿಂದುಳಿದವರು, ಅಸ್ಪೃಶ್ಯರನ್ನು ಎತ್ತಿಕಟ್ಟಿ ಹಿಂದೂ ಧರ್ಮ, ಹಿಂದೂ ಸಮಾಜ, ಹಿಂದೂ ಸಂಸ್ಕೃತಿ ಭಂಜನೆಗೆ ಮುಂದಾಗಿರುವ ಈ ‘ಅಹಿಂದ’, ‘ಎಡಪಂಥೀಯ’ ದ್ವೇಷ ಭಾಷಣಕಾರರೇ ನಿಜವಾದ ದ್ವೇಷಾಪರಾಧಿಗಳು. ಹಿಂದೂ ದ್ವೇಷದಿಂದಲೇ ಈ ಮಸೂದೆ ತಂದಿರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಇವರು ಟಾರ್ಗೆಟ್ ಮಾಡಿರುವುದು ಆರೆಸ್ಸೆಸ್ಸ್‌, ಬಿಜೆಪಿಯನ್ನಲ್ಲ. ಬದಲಿಗೆ ಹಿಂದೂಗಳನ್ನು. ಇವರು ತೃಪ್ತಿಪಡಿಸುತ್ತಿರುವುದು ನ್ಯಾಯ ಒದಗಿಸುತ್ತಿರುವುದು ದಲಿತರು, ಹಿಂದುಳಿದವರಿಗಲ್ಲ. ಅಲ್ಪಸಂಖ್ಯಾತರಿಗೆ ಮಾತ್ರ!

PREV
Read more Articles on
click me!

Recommended Stories

ದಾವಣಗೆರೆಯ ಶೈಕ್ಷಣಿಕ ಪುನರುಜ್ಜೀವನದ ಶಿಲ್ಪಿ ಶಾಮನೂರು
‘ಹೇಟ್‌’ಬುಕ್‌ ಕಮೆಂಟ್‌ಗಳಿಗೆ ದ್ವೇಷದ ಬಿಲ್‌ ಕಡಿವಾಣ?