ತೂಗುಮಂಚದಲ್ಲಿ ಕವಿ ಇಲ್ಲ: ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಬದುಕು, ಬರಹ

Kannadaprabha News   | Kannada Prabha
Published : May 31, 2025, 05:40 AM IST
Hs Venkateshamurthy

ಸಾರಾಂಶ

ಬಾಲ್ಯದಲ್ಲೇ ಕುಮಾರವ್ಯಾಸ, ಲಕ್ಷ್ಮೀಶ ಕವಿಯ ಪ್ರಭಾವ ಇವರ ಮೇಲಾಯಿತು. ಇನ್ನೊಂದೆಡೆ ಯಕ್ಷಗಾನ ಬಯಲಾಟ, ರಂಗಭೂಮಿಗಳ ಪ್ರಭಾವಕ್ಕೂ ಒಳಪಟ್ಟರು. ನವೋದಯ ಕಾಲದಲ್ಲಿ ಸಾಹಿತ್ಯಲೋಕ ಪ್ರವೇಶಿಸಿದ ಕಾವ್ಯರಚನೆಗೆ ಮುಂದಾದರು.

ಜನಮಾನಸದಲ್ಲಿ ಹೆಚ್‌ಎಸ್‌ವಿ ಎಂದೇ ಖ್ಯಾತರಾಗಿದ್ದ ಸಾಹಿತಿ ಎಚ್‌ ಎಸ್‌ ವೆಂಕಟೇಶ ಮೂರ್ತಿ ಆರು ದಶಕಗಳಿಂದ ಸಾಹಿತ್ಯ, ಸಿನಿಮಾ, ಕಿರುತೆರೆ, ಅಧ್ಯಾಪನ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. 2020ರಲ್ಲಿ ಕಲುಬುರಗಿಯಲ್ಲಿ ನಡೆ 85ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರನ್ನು ಅರಸಿ ಬಂದಿತ್ತು. ಹರೆಯದ ಹುಚ್ಚು ಖೋಡಿ ಮನಸ್ಸಿನ ಝಲ್ಲೆಸುವ ಪ್ರಣಯ ಗೀತೆಗಳಿಂದ ಕೃಷ್ಣ ರಾಧೆಯ ಪ್ರೇಮಗೀತೆ, ದಾಂಪತ್ಯದ ನವಿರಾದ ಕವಿತೆ, ಕಥನ ಕವನಗಳಿಂದ ಬುದ್ಧಚರಣ ಮಹಾಕಾವ್ಯದವರೆಗೆ, ಪುರಾಣ, ಇತಿಹಾಸಗಳ ಗಂಭೀರ ಗ್ರಂಥಗಳಿಂದ ಪುಟ್ಟ ಮಕ್ಕಳ ಹನಿ ಕವಿತೆಗಳವರೆಗೆ, ಧಾರಾವಾಹಿ ಶೀರ್ಷಿಕೆ ಗೀತೆಗಳಿಂದ ಸಿನಿಮಾ ನಿರ್ದೇಶನದವರೆಗೆ ಇವರ ಸೃಷ್ಟಿಶೀಲತೆಯ ಹರವು ಬಲು ವಿಸ್ತಾರವಾದುದು.

ಜೂನ್‌ 23, 1944ರಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಎಂಬ ಸಣ್ಣ ಊರಿನಲ್ಲಿ ಜನಿಸಿದರು. ತಂದೆ ನಾರಾಯಣ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ಚಿತ್ರದುರ್ಗದಲ್ಲಿ ಕಾಲೇಜು ಶಿಕ್ಷಣ ಪಡೆದರು. ಮಲ್ಲಾಡಿಹಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಇವರು ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ ಎ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ ಎ ಪದವಿ ಪಡೆಯುತ್ತಾರೆ. ಬಳಿಕ ಬೆಂಗಳೂರಿನ ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ 30 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧಕ್ಕೆ ಡಾಕ್ಟರೆಟ್‌ ಪದವಿ ಸಿಕ್ಕಿದೆ.

ಬಾಲ್ಯದಲ್ಲೇ ಕುಮಾರವ್ಯಾಸ, ಲಕ್ಷ್ಮೀಶ ಕವಿಯ ಪ್ರಭಾವ ಇವರ ಮೇಲಾಯಿತು. ಇನ್ನೊಂದೆಡೆ ಯಕ್ಷಗಾನ ಬಯಲಾಟ, ರಂಗಭೂಮಿಗಳ ಪ್ರಭಾವಕ್ಕೂ ಒಳಪಟ್ಟರು. ನವೋದಯ ಕಾಲದಲ್ಲಿ ಸಾಹಿತ್ಯಲೋಕ ಪ್ರವೇಶಿಸಿದ ಕಾವ್ಯರಚನೆಗೆ ಮುಂದಾದರು. ನಂತರ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ನವ್ಯ ಕಾವ್ಯದ ಕೃಷಿಯಲ್ಲಿ ತೊಡಗಿಸಿಕೊಂಡರು. ಬಳಿಕ ಭಾವಗೀತೆಗಳ ಮೇಲೆ ಪ್ರೀತಿ ಹುಟ್ಟಿತು. ಆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರು. ಇದೇ ಹೊತ್ತಲ್ಲಿ ಸಿನಿಮಾಗಳಿಗೆ ಗೀತ ರಚನೆ ಮಾಡಿದರು. ಇನ್ನೊಂದೆಡೆ ವಾಲ್ಮೀಕಿ, ಲಕ್ಷ್ಮೀಶ, ಕುಮಾರವ್ಯಾಸ ಮೊದಲಾದವರ ಕೃತಿಗಳನ್ನು ತಿಳಿಗನ್ನಡದಲ್ಲಿ ಕಾವ್ಯವಾಗಿ ಬರೆದರು. ಕನ್ನಡ, ಸಂಸ್ಕೃತ, ಇಂಗ್ಲೀಷ್‌ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಇತ್ತು. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.

ಎಚ್‌ಎಸ್‌ವಿ ಅವರ ಪ್ರಮುಖ ಕವಿತಾ ಸಂಕಲನ: ಪರಿವೃತ್ತ, ಬಾಗಿಲು ಬಡಿವ ಜನಗಳು, ಸಿಂದಬಾದನ ಆತ್ಮಕಥೆ, ಒಣ ಮರದ ಗಿಳಿಗಳು, ಮರೆತ ಸಾಲುಗಳು, ಸೌಗಂಧಿಕ, ಎಲೆಗಳು ನೂರಾರು, ಅಗ್ನಿಸ್ತಂಭ, ಎಷ್ಟೊಂದು ಮುಖ, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ)

ಮಹಾ ಕಾವ್ಯ : ಬುದ್ಧಚರಣ
ಮಕ್ಕಳ ಸಾಹಿತ್ಯ: ಹಕ್ಕಿಸಾಲು, ಹೂವಿನ ಶಾಲೆ, ಸೋನಿ ಪದ್ಯಗಳು, ಉತ್ತರಾಯಣ ಮತ್ತು ..
ಕಥಾ ಸಂಕಲನಗಳು: ಬಾನಸವಾಡಿಯ ಬೆಂಕಿ, ಪುಟ್ಟಾರಿಯ ಮತಾಂತರ
ಕಾದಂಬರಿ : ತಾಪಿ, ಅಮಾನುಷರು, ಕದಿರನ ಕೋಟೆ, ಅಗ್ನಿಮುಖಿ
ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಉರಿಯ ಉಯ್ಯಾಲೆ, ಅಗ್ನಿವರ್ಣ, ಸ್ವಯಂವರ
ಅನುವಾದ: ಋತುವಿಲಾಸ
ಸಾಹಿತ್ಯ ವಿಮರ್ಶೆ: ನೂರು ಮರ, ನೂರು ಸ್ವರ, ಮೇಘದೂತ, ಕಥನ ಕವನ, ಆಕಾಶದ ಹಕ್ಕು
ಆತ್ಮಕಥನ : ಎಚ್ಚೆಸ್ವೀ ಅನಾತ್ಮ ಕಥನ
ಸಂಪಾದನೆ : ಶತಮಾನದ ಕಾವ್ಯ

ಚಲನಚಿತ್ರ, ಕಿರುತೆರೆ: ಚಿನ್ನಾರಿಮುತ್ತ, ಕೊಟ್ರೇಶಿ ಕನಸು, ಕ್ರೌರ್ಯ, ಮತದಾನ ಚಿತ್ರಗಳಿಗೆ ಗೀತಸಾಹಿತ್ಯ. ಮುಕ್ತ, ಮುಕ್ತ ಮುಕ್ತ, ಯಾವ ಜನ್ಮದ ಮೈತ್ರಿ ಮೊದಲಾದ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ. ‘ತೂಗುಮಂಚ’, ‘ಭಾವಭೃಂಗ’, ‘ಬಣ್ಣದ ಹಕ್ಕಿ’ ಸೇರಿದಂತೆ ಭಾವಗೀತೆಗಳ ಅನೇಕ ಧ್ವನಿ ಸುರುಳಿಗಳು ಬಿಡುಗಡೆಯಾಗಿವೆ. ಇದಲ್ಲದೇ ಜೀವನಚರಿತ್ರೆ, ಅನುಭವ ಕಥನ, ಸಾಹಿತ್ಯ ಚರಿತ್ರೆ ಮೊದಲಾದ ಕ್ಷೇತ್ರಗಳಲ್ಲೂ ಕೈಯಾಡಿಸಿದ್ದಾರೆ.

ಪ್ರಶಸ್ತಿಗಳು: 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಅನಕೃ ನಿರ್ಮಾಣ್ ಪ್ರಶಸ್ತಿ ಇತ್ಯಾದಿ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?