
ಎಚ್‌ಎಸ್ ವೆಂಕಟೇಶ್ ಮೂರ್ತಿ ಹಾಗೂ ನನ್ನದು ಮೂರು ದಶಕಗಳ ಬಾಂಧವ್ಯ. ಸಿ ಅಶ್ವತ್ಥ್ ಅವರು ಬದುಕಿರುವವರೆಗೂ ನಮ್ಮಿಬ್ಬರ ನಡುವೆ ಹೆಚ್ಚು ಒಡನಾಟ ಇರಲಿಲ್ಲ. ಆದರೆ ಆ ಬಳಿಕ ಬಹಳ ಹತ್ತಿರವಾದರು. ಅವರ 60ನೇ ವರ್ಷದ ಹುಟ್ಟುಹಬ್ಬಕ್ಕೆ ಅವರ ಕವಿತೆಗಳ ಸೋಲೋ ಆಲ್ಬಂ ಹೊರತಂದಿದ್ದೆ. ಅದನ್ನು ಅವರು ಮೆಚ್ಚಿಕೊಂಡಿದ್ದರು. ನನ್ನನ್ನು ಎಲ್ಲರಿಗೂ ದೊಡ್ಡ ಮಗ ಎಂದೇ ಪರಿಚಯ ಮಾಡಿಸುತ್ತಿದ್ದರು. ಅವರು ತೀರಿಕೊಂಡದ್ದು ಶುಕ್ರವಾರ ಮುಂಜಾನೆ, ಗುರುವಾರ ರಾತ್ರಿ ವೀಡಿಯೋ ಕಾಲ್ ಮಾಡಿಸಿದ್ದರು.
ಮೈ ಮುಖಕ್ಕೆಲ್ಲ ನಳಿಕೆ ಸಿಕ್ಕಿಸಿದ್ದ ಕಾರಣ ಹೆಚ್ಚೇನೂ ಮಾತನಾಡಲಾಗಲಿಲ್ಲ, ಹೇಗಿದ್ದೀರಿ ಸರ್ ಅಂದ್ರೆ ಥಂಬ್ಸ್ ಅಪ್ ಮಾಡಿದ್ದರು. ಎಚ್‌ಎಸ್‌ವಿ ಅವರ ಕೊನೆಯ ದಿನಗಳು ಯಾತನಾಮಯವಾಗಿದ್ದವು. ಫ್ರಾಸ್ಟ್ರೇಟ್ ಕ್ಯಾನ್ಸರ್‌ನಿಂದ ಅವರು ಬಹಳ ವೇದನೆ ಅನುಭವಿಸುತ್ತಿದ್ದರು. ಭೇಟಿಗೆ ಬಂದ ಆಪ್ತರ ಬಳಿ ನೀವು ಕಾಲೊತ್ತಿದರೆ ಪುಣ್ಯ ಬರುತ್ತೆ ಅಂತ ಹೇಳ್ತಿದ್ರು. ಆದರೂ ಇದು ಅವರ ಜೀವನೋತ್ಸಾಹ ತಗ್ಗಿಸಲಿಲ್ಲ. ಅವರು ಇಂಥಾ ನೋವಲ್ಲೂ ಮುಕ್ತಕಗಳನ್ನು ಬರೆಯುತ್ತಿದ್ದರು. ‘ನೋವಾ ನಾನಾ ನೋಡೇ ಬಿಡಾಣ ಮೋಹನ’ ಎನ್ನುವುದು ಅವರು ಆಗಾಗ ನನ್ನ ಬಳಿ ಹೇಳುತ್ತಿದ್ದ ಮಾತು.
ಹೆಚ್‌ಎಸ್‌ವಿ ಅವರ ಜೊತೆಗೆ ಹಲವಾರು ಕಡೆ ಪ್ರಯಾಣ ಮಾಡಿದ್ದೀನಿ. ಹೆಚ್‌ಎಸ್‌ವಿ ಅವರು ಬಹಳ ಫುಡೀ. ಒಂದು ಸೀಬೆ ಕಾಯಿ ಗಾಡಿ ಕಂಡ್ರೆ ಸಾಕು, ‘ನಿಲ್ಸ್ ನಿಲ್ಸ್ ನಿಲ್ಸಿ’ ಅನ್ನೋರು. ಸೌತೆಕಾಯಿ ಕಂಡ್ರೂ ನಿಲ್ಲಿಸಬೇಕು. ಹಲಸಿನ ಹಣ್ಣು ಅಂದ್ರಂತೂ ಪ್ರಾಣ. ನಮ್ಮ ಪ್ರಯಾಣದುದ್ದಕ್ಕೂ ಅವರು ಹೀಗೆ ಏನಾದರೊಂದು ತಿನ್ನುತ್ತಲೇ ಇರುತ್ತಿದ್ದರು. ಬೇರೆ ಬೇರೆ ಊರುಗಳಿಗೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿನ ಸ್ಥಳೀಯ ತಿನಿಸು ಕೊಟ್ಟರೆ ಎಲ್ಲದರ ರುಚಿಯನ್ನೂ ನೋಡೋರು. ಹಾಗಂತ ತಿನ್ನೋದು ಮಿತವಾಗಿಯೇ. ಆದರೆ ಪ್ರತಿಯೊಂದರ ರುಚಿ ನೋಡುವ ಕುತೂಹಲ ಅವರದಾಗಿತ್ತು.
ನಾನು ಅವರು ತಿನ್ನೋದನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಅವರು ಹೊಸ ಕವಿತೆ ಬರೆದಾಗ ನನಗೆ ಕಳಿಸುವ ಅಭ್ಯಾಸ ಇತ್ತು. ಅವರು ಪದೇ ಪದೇ ರಾಧಾ ಕೃಷ್ಣರ ಬಗ್ಗೆ ಬರೆದಾಗ, ‘ಬೇರೆ ಕೊಡಿ ಸಾರ್’ ಎನ್ನುತ್ತಿದ್ದೆ. ಅವರು ಕವಿತೆಗಳಲ್ಲದೇ ಬೇರೆ ಪುಸ್ತಕ ಕೊಟ್ರೆ, ‘ಪುಸ್ತಕ ಬೇಡ ಸರ್’ ಅನ್ನುತ್ತಿದ್ದೆ. ಅದನ್ನೆಲ್ಲ ಅವರು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು. ಹೀಗೆ ಹೆಚ್‌ಎಸ್‌ವಿ ಜೊತೆಗೆ ಒಡನಾಡಿದ ಪ್ರತೀಕ್ಷಣವೂ ನನಗೆ ಅವಿಸ್ಮರಣೀಯ.