ನವಭಾರತದ ಬಿಸಿನೆಸ್‌ಗೆ ಬ್ರಿಟನ್‌ ಒಪ್ಪಂದ ಉದಾಹರಣೆ: ಪೀಯೂಷ್‌ ಗೋಯಲ್‌ ಲೇಖನ

Published : Jul 27, 2025, 11:10 AM IST
PM Modi

ಸಾರಾಂಶ

ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಅರ್ಥ ವ್ಯವಸ್ಥೆಯಲ್ಲಾದ ಕ್ರಾಂತಿಕಾರಿ ಸುಧಾರಣೆಗಳು, ಸುಗಮ ವ್ಯಾಪಾರ ಮತ್ತು ಪ್ರಧಾನಿಯವರ ಜಾಗತಿಕ ಸ್ಥಾನಮಾನವು ಭಾರತದಲ್ಲಿ ಸಾಮಾನ್ಯ ಜನರಿಗೂ ದೊಡ್ಡ ಅವಕಾಶ ಒಲಿಯಲು ಸಾಧ್ಯವಾಗಿದೆ. ಎಲ್ಲಿಯೂ ರಾಜಿಯಾಗದೇ ಜನರ ಹಿತಾಸಕ್ತಿಗೆ ಬದ್ಧವಾಗಿದೆ.

ಪೀಯೂಷ್‌ ಗೋಯಲ್‌, ಕೇಂದ್ರ ಸಚಿವ

ʻಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದʼವು(ಸಿಇಟಿಎ) ಭಾರತೀಯ ರೈತರು, ಮೀನುಗಾರರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳನ್ನು ಜಾಗತಿಕವಾಗಿ ಪ್ರಕಾಶಮಾನವಾಗಿಸುತ್ತದೆ. ಹಲವಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಂತೆ ಸಾಮಾನ್ಯರಿಗೂ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಸರಕುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ, ಯುರೋಪಿಯನ್ ಮುಕ್ತ ವ್ಯಾಪಾರ ಸಂಘಟನೆಯ ದೇಶಗಳು ಮತ್ತು ಯುಎಇ ಸೇರಿದಂತೆ ಇತರ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಬೀಳಲಿದೆ. ಇದುʻವಿಕಸಿತ ಭಾರತ- 2047ʼರ ಕನಸನ್ನು ಸಾಧಿಸಲು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಗರಿಷ್ಠಗೊಳಿಸುವ ಮೋದಿ ಸರ್ಕಾರದ ಕಾರ್ಯತಂತ್ರದ ಒಂದು ಭಾಗವಾಗಿದೆ.

2014ರಲ್ಲಿ, ಮೋದಿ ಸರ್ಕಾರ ಆರ್ಥಿಕತೆಯಲ್ಲಿ ಜಾಗತಿಕ ವಿಶ್ವಾಸವನ್ನು ಪುನರ್‌ನಿರ್ಮಿಸಲು ಹಾಗೂ ಭಾರತೀಯ ಮತ್ತು ವಿದೇಶಿ ಹೂಡಿಕೆದಾರರಿಗೆ ಆಕರ್ಷಕವಾಗಿಸಲು ದೃಢವಾದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (ಎಫ್‌ಟಿಎ) ಸಹಿ ಹಾಕುವುದು ಈ ವಿಶಾಲ ಕಾರ್ಯತಂತ್ರದ ಒಂದು ಭಾಗವಾಗಿದೆ. ವ್ಯಾಪಾರ ನೀತಿಗಳ ಬಗ್ಗೆ ಅನಿಶ್ಚಿತತೆಯನ್ನು ತೊಡೆದು ಹಾಕುವ ಮೂಲಕ ಈ ವ್ಯಾಪಾರ ಒಪ್ಪಂದಗಳು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುತ್ತವೆ. ಭಾರತದೊಂದಿಗೆ ಯಾವುದೇ ಸ್ಪರ್ಧಾತ್ಮಕ ವ್ಯಾಪಾರ ಹಿತಾಸಕ್ತಿಗಳು ಇಲ್ಲದಂತಹ ಅಭಿವೃದ್ಧಿ ಹೊಂದಿದ ದೇಶಗಳ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದಗಳು ಭಾರತಕ್ಕೆ ಅನುಕೂಲಕಾರಿಯಾಗಿವೆ.

ಏಕೆಂದರೆ, ಈ ಒಪ್ಪಂದಗಳು ಪ್ರತಿ ಸ್ಪರ್ಧಿಗಳಿಗೆ ಭಾರತದ ಬಾಗಿಲುಗಳನ್ನು ತೆರೆಯುವ ಮೂಲಕ ಭಾರತೀಯ ವ್ಯವಹಾರಗಳಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಯುಪಿಎ ಆಡಳಿತಾವಧಿಯಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳು ಭಾರತದೊಂದಿಗಿನ ವ್ಯಾಪಾರ ಮಾತುಕತೆಯನ್ನು ಕೈ ಬಿಟ್ಟವು. ಆಗ ಭಾರತವನ್ನು ವಿಶ್ವದ ‘ದುರ್ಬಲ ಐದು’ ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಮೋದಿಯವರ ನಾಯಕತ್ವದಲ್ಲಿ ಭಾರತದ ಜಿಡಿಪಿ 2014ರಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿ ಸುಮಾರು 331 ಲಕ್ಷ ಕೋಟಿ ರು.ಗೆ ತಲುಪಿದೆ. ಕ್ರಾಂತಿಕಾರಿ ಸುಧಾರಣೆಗಳು, ಸುಗಮ ವ್ಯಾಪಾರ ಮತ್ತು ಪ್ರಧಾನಿಯವರ ಜಾಗತಿಕ ಸ್ಥಾನಮಾನವು ಭಾರತಕ್ಕೆ ಬಲವಾದ ಅವಕಾಶವಾಗಿ ಹೊರಹೊಮ್ಮಲು ಸಹಾಯ ಮಾಡಿವೆ.

ಮಾರುಕಟ್ಟೆ ಪ್ರವೇಶ, ಸ್ಪರ್ಧಾತ್ಮಕ ಅನುಕೂಲತೆ: ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು ಬ್ರಿಟನ್‌ ಮಾರುಕಟ್ಟೆಯ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಸರಕುಗಳಿಗೆ ಸಮಗ್ರ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸುತ್ತದೆ. ಇದು ವ್ಯಾಪಾರ ಮೌಲ್ಯದ ಸುಮಾರು ಶೇ.100 ವ್ಯಾಪ್ತಿಯಾದ್ಯಂತ 99% ಉತ್ಪನ್ನಗಳ ಮೇಲಿನ ಸುಂಕವನ್ನು ತೊಡೆದುಹಾಕುತ್ತದೆ. ಇದು 56 ಶತಕೋಟಿ ಡಾಲರ್‌ ದ್ವಿಪಕ್ಷೀಯ ವ್ಯಾಪಾರಕ್ಕೆ ದೊಡ್ಡ ಅವಕಾಶಗಳನ್ನು ಸೃಷ್ಟಿಸುತ್ತದೆ. ʻಸಿಇಟಿಎʼ ನೆರವಿನಿಂದ 2030ರ ವೇಳೆಗೆ ಈ ವ್ಯಾಪಾರ ಮೌಲ್ಯವು ದ್ವಿಗುಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಸಣ್ಣ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಸಾಕರ್‌ ಚೆಂಡುಗಳು, ಕ್ರಿಕೆಟ್‌ ಆಟದ ಸಾಮಗ್ರಿಗಳು, ರಗ್ಬಿ ಚೆಂಡುಗಳು ಮತ್ತು ಆಟಿಕೆಗಳನ್ನು ತಯಾರಿಸುವ ಕಂಪನಿಗಳು ಬ್ರಿಟನ್‌ನಲ್ಲಿ ವ್ಯವಹಾರ ವಿಸ್ತರಣೆಗೆ ಸಜ್ಜಾಗಿವೆ.

ದೊಡ್ಡ ಸಂಖ್ಯೆಯ ಉದ್ಯೋಗಗಳು: ಈ ಒಪ್ಪಂದಗಳು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಅಲೆಯನ್ನು ಉತ್ತೇಜಿಸುತ್ತದೆ. ಜವಳಿ, ಚರ್ಮ ಮತ್ತು ಪಾದರಕ್ಷೆಗಳಲ್ಲಿ ಭಾರತವು ಬ್ರಿಟನ್‌ಗೆ ಅಗ್ರ ಮೂರು ಪೂರೈಕೆದಾರರಲ್ಲಿ ಒಂದಾಗುವ ಸಾಮರ್ಥ್ಯವನ್ನು ಹೊಂದಿದೆ. ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್‌ ಸರಕುಗಳು, ರಾಸಾಯನಿಕಗಳು ಮತ್ತು ಫೋನ್‌ಗಳಂತಹ ಎಲೆಕ್ಟ್ರಾನಿಕ್‌ ಉತ್ಪನ್ನಗಳ ರಫ್ತು ಸಹ ಹೆಚ್ಚಾಗುವ ನಿರೀಕ್ಷೆಯಿದೆ. ಶೇ. 95ಕ್ಕಿಂತ ಹೆಚ್ಚು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳು ಶೂನ್ಯ ಸುಂಕವನ್ನು ಆಕರ್ಷಿಸುತ್ತವೆ. ಮೂರು ವರ್ಷಗಳಲ್ಲಿ ಕೃಷಿ ರಫ್ತುಗಳನ್ನು ಶೇ. 20 ಕ್ಕಿಂತ ಅಧಿಕ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ 100 ಶತಕೋಟಿ ಡಾಲರ್‌ ಕೃಷಿ-ರಫ್ತು ಮಾಡುವ ಗುರಿ ಭಾರತದ್ದು. ಅರಿಶಿನ, ಮೆಣಸು, ಏಲಕ್ಕಿ ಮತ್ತು ಮಾವಿನ ತಿರುಳು, ಉಪ್ಪಿನಕಾಯಿ ಮತ್ತು ಬೇಳೆಕಾಳುಗಳಂತಹ ಸಂಸ್ಕರಿಸಿದ ಸರಕುಗಳು ಸಹ ಸುಂಕ ಮುಕ್ತ ಪ್ರವೇಶವನ್ನು ಪಡೆಯುತ್ತವೆ. ಹೆಚ್ಚಿನ ರಫ್ತಿನಿಂದ ಕೃಷಿ ಆದಾಯ ಹೆಚ್ಚಾಗುತ್ತದೆ ಮತ್ತು ಗುಣಮಟ್ಟ, ಪ್ಯಾಕೇಜಿಂಗ್ ಮತ್ತು ಪ್ರಮಾಣೀಕರಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತದೆ.

ಮೀನುಗಾರರ ವ್ಯಾಪಾರ ವಿಸ್ತರಣೆ ಲಾಭ: ʻಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದʼವು ಕೃಷಿ ಕ್ಷೇತ್ರಗಳನ್ನು ವ್ಯಾಪ್ತಿಯಿಂದ ಹೊರಗಿಡುತ್ತದೆ. ಡೈರಿ ಉತ್ಪನ್ನಗಳು, ಓಟ್ಸ್ ಮತ್ತು ಅಡುಗೆ ಎಣ್ಣೆಗಳ ಮೇಲೆ ಯಾವುದೇ ಸುಂಕ ರಿಯಾಯಿತಿಗಳನ್ನು ನೀಡುವುದಿಲ್ಲ. ಭಾರತೀಯ ಮೀನುಗಾರರು, ವಿಶೇಷವಾಗಿ ಆಂಧ್ರಪ್ರದೇಶ, ಒಡಿಶಾ, ಕೇರಳ ಮತ್ತು ತಮಿಳುನಾಡಿನ ಮೀನುಗಾರರು ಬ್ರಿಟನ್ ಸಮುದ್ರ ಆಮದು ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ಗಣನೀಯ ವ್ಯಾಪಾರ ವಿಸ್ತರಣೆಯ ಲಾಭವನ್ನು ಪಡೆಯಲಿದ್ದಾರೆ. ಸೀಗಡಿ ಮತ್ತು ಇತರ ಸಮುದ್ರ ಉತ್ಪನ್ನಗಳ ಮೇಲಿನ ಬ್ರಿಟನ್‌ ಆಮದು ಸುಂಕ ಶೇ. 20 ರಿಂದ ಶೂನ್ಯಕ್ಕೆಇಳಿಯಲಿದೆ. ಈ ಒಪ್ಪಂದವು ಮಾಹಿತಿ ತಂತ್ರಜ್ಞಾನ ಮತ್ತು / ಐಟಿ ಆಧಾರಿತ ಸೇವೆಗಳು, ಹಣಕಾಸು ಸೇವೆಗಳು ಮತ್ತು ಶಿಕ್ಷಣ ಸೇರಿದಂತೆ ಹಲವು ಸೇವಾವಲಯಗಳ ಬೆಳವಣಿಗೆ ವೇಗವನ್ನು ಹೆಚ್ಚಿಸಲಿದೆ. ಗುತ್ತಿಗೆ ಸೇವಾ ಪೂರೈಕೆದಾರರು, ವ್ಯವಹಾರ ಪ್ರಯಾಣಿಕರು, ಹೂಡಿಕೆದಾರರು, ಯೋಗ ತರಬೇತಿದಾರರು, ಸಂಗೀತಗಾರರು ಮತ್ತು ಬಾಣಸಿಗರು ಸೇರಿದಂತೆ ನುರಿತ ವೃತ್ತಿಪರರಿಗೆ ಅನುಕೂಲ ಮಾಡಿಕೊಡಲಿದೆ.

ನವೀನ ಮುಕ್ತ ವ್ಯಾಪಾರ ಒಪ್ಪಂದಗಳು: ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳು ಸರಕು ಮತ್ತು ಸೇವೆಗಳನ್ನು ಮೀರಿ ವಿಸ್ತರಿಸಿವೆ. ಯೂರೋಪ್‌ ಮುಕ್ತ ವ್ಯಾಪಾರ ಸಂಘಟನೆಯ ರಾಷ್ಟ್ರಗಳೊಂದಿಗೆ ಭಾರತವು 100 ಶತಕೋಟಿ ಡಾಲರ್‌ನ ಹೂಡಿಕೆಯ ಬದ್ಧತೆಯನ್ನುಪಡೆದುಕೊಂಡಿದೆ. ಇದು ಭಾರತದಲ್ಲಿ 1 ಕೋಟಿ ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆಸ್ಟ್ರೇಲಿಯಾದ ಮುಕ್ತ ವ್ಯಾಪಾರ ಒಪ್ಪಂದದೊಂದಿಗೆ, ಐಟಿ ಕಂಪನಿಗಳನ್ನು ಕಾಡುತ್ತಿದ್ದ ʻದ್ವಿ-ತೆರಿಗೆʼಸಮಸ್ಯೆಯನ್ನು ಭಾರತ ಪರಿಹರಿಸಿದೆ. ಬ್ರಿಟನ್‌ ಜೊತೆಗಿನ ಒಪ್ಪಂದದ ಅತ್ಯಂತ ಮಹತ್ವದ ಅಂಶವೆಂದರೆ ʻದ್ವಿಗುಣ ಕೊಡುಗೆನಿರ್ಣಯʼ. ಇದು ಬ್ರಿಟನ್ನಲ್ಲಿರುವ ಉದ್ಯೋಗದಾತರು ಮತ್ತು ತಾತ್ಕಾಲಿಕ ಭಾರತೀಯ ಕಾರ್ಮಿಕರಿಗೆ ಮೂರು ವರ್ಷಗಳವರೆಗೆ ಸಾಮಾಜಿಕ ಭದ್ರತಾ ಕೊಡುಗೆಗಳಿಂದ ವಿನಾಯಿತಿ ನೀಡುತ್ತದೆ. ಇದು ಭಾರತೀಯ ಸೇವಾ ಪೂರೈಕೆದಾರರ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಗ್ರಾಹಕರಿಗೆ ಗುಣಮಟ್ಟದ ಸರಕುಗಳು: ವ್ಯಾಪಾರ ಒಪ್ಪಂದಗಳು ಭಾರತೀಯ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಸರಕುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಗುಣಮಟ್ಟವನ್ನು ಉತ್ತೇಜಿಸಲು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಮೋದಿ ಸರ್ಕಾರ ಸಹಿ ಮಾಡಿದ ಪ್ರತಿಯೊಂದು ಮುಕ್ತ ವ್ಯಾಪಾರ ಒಪ್ಪಂದವನ್ನು ಉದ್ಯಮ ಸಂಸ್ಥೆಗಳು ಅಗಾಧವಾಗಿ ಬೆಂಬಲಿಸಿವೆ. ಇದು ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ದುರ್ಬಲರಿಗೆ ಜಾಗತಿಕ ಅವಕಾಶಗಳನ್ನು ತೆರೆಯುತ್ತದೆ. ʻನವಭಾರತʼವು ಹೇಗೆ ವ್ಯವಹಾರ ಮಾಡುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?