ಚೌಡಿಮಾವಿನ ಮರ: ಮಕ್ಕಳ ಕನಸು, ಅಪ್ಪಯ್ಯನ ನೆನಪು, ಹಳ್ಳಿಯ ಕತೆ

Published : Jul 27, 2025, 10:32 AM IST
mango tree

ಸಾರಾಂಶ

ಚೌಡಿ ಮಾವಿನಮರದ ಹಣ್ಣು ಒಳ್ಳೆ ಈಶಾಡಿ ಹಣ್ಣಿನ ತರಹ ರುಚಿ ಇತ್ತು. ಮರವೋ ದೈತ್ಯಾಕಾರದಲ್ಲಿ ಬೆಳೆದು ರೆಂಬೆಕೊಂಬೆಗಳನ್ನು ಸುತ್ತ ಚಾಚಿತ್ತು.

ಗೀತಾ ಕೇಶವ್ ಭಟ್, ಬೊಪ್ಪನಳ್ಳಿ

ಅಂದು ನಸುಕಿನಲ್ಲಿ ಜೋರಾಗಿ ಗಾಳಿ ಬೀಸಿತು, ಪಕ್ಕದಲ್ಲಿ ಮಲಗಿದ ತಂಗಿ ತಮ್ಮರನ್ನು ಎಬ್ಬಿಸಿ ನಡೆಯಿರಿ ಜೋರಾಗಿ ಬೀಸಿದ ಗಾಳಿಗೆ ಬಹಳ ಮಾವಿನ ಹಣ್ಣು ಉದುರಿರಬಹುದು, ಎನ್ನುತ್ತ ಮನೆಯಿಂದ ದೂರವೇ ಇರುವ ಚೌಡಿಮಾವಿನ ಮರಕ್ಕೆ ಓಡಿದೆ. ತಮ್ಮ, ತಂಗಿ ಹಿಂಬಾಲಿಸಿದರು. ಮಾವಿನ ಮರದಡಿ ಬುಟ್ಟಿ ತುಂಬ ಮಾವಿನ ಹಣ್ಣು ಆರಿಸಿ ಇನ್ನೊಂದು ಗಾಳಿ ಬೀಸುವ ನಿರೀಕ್ಷೆಯಲ್ಲಿ ಅಲ್ಲೇ ಕುಳಿತೆವು. ಬೆಳಗಿನ ಹೊತ್ತು ನಿದ್ದೆಗಣ್ಣು ಆದರೂ ಮಾವಿನ ಹಣ್ಣಿನ ಮೇಲೆ ಆಸೆ, ತುಂಬ ಯಾಕೆಂದರೆ ಚೌಡಿ ಮಾವಿನಮರದ ಹಣ್ಣು ಒಳ್ಳೆ ಈಶಾಡಿ ಹಣ್ಣಿನ ತರಹ ರುಚಿ ಇತ್ತು. ಮರವೋ ದೈತ್ಯಾಕಾರದಲ್ಲಿ ಬೆಳೆದು ರೆಂಬೆಕೊಂಬೆಗಳನ್ನು ಸುತ್ತ ಚಾಚಿತ್ತು.

ಪಕ್ಕದಲ್ಲೆ ಸ್ಮಶಾನವಿದೆ. ಮನದಲ್ಲಿ ಭಯ ಆವರಿಸಿದರೂ ಅವರಿಬ್ಬರಿಗೆ ನಾನೇ ಧೈರ್ಯ ತುಂಬಿ ಸಮಾಧಾನ ಹೇಳಿದೆ. ಸ್ಮಶಾನ ನಮ್ಮ ಊರಿನದೇ ಅಲ್ಲವೇ, ಅಲ್ಲಿ ಅಜ್ಜಂದಿರು ಅಜ್ಜಿಯರನ್ನೇ ಅಂತ್ಯಕ್ರಿಯೆ ಮಾಡಿದ್ದು. ಅವರೇನು ನಮ್ಮನ್ನು ಹೆದರಿಸಲಾರರು. ಅಷ್ಟಕ್ಕೂ ಅದೋ ಅಲ್ಲಿ ಪುಟ್ಟದಾಗಿ ಗುಬ್ಬಿಯಂತೆ ಹಬ್ಬಿ ಚಿಗುರುತ್ತಿರುವ ಅಶ್ವಥ ಮರದ ಅಡಿ ನಮ್ಮ ಅಪ್ಪಯ್ಯನನ್ನು ಸುಟ್ಟಿದ್ದು ನೆನಪಿಲ್ಲವೇ ಎಂದೆ. ನನ್ನ ಅಪ್ಪಯ್ಯ ಯಾರನ್ನೂ ಹೆದರಿಸಿಲ್ಲ. ಇದ್ದಾಗಲೂ ತಾನಾಯಿತು ತನ್ನ ಬದುಕಾಯಿತು. ದುರಾಸೆಯಿಲ್ಲ, ಅದಕ್ಕೇ ಇರಬಹುದು ದೂರಾಲೋಚನೆಯೂ ಇರಲಿಲ್ಲ. ಸ್ವಾರ್ಥಿಯಾಗಿರಲಿಲ್ಲ ಹಾಗಿದ್ದಿದ್ದರೆ ಕಣ್ಮರೆಯಾಗುತ್ತಿರಲಿಲ್ಲವೇನೋ. ಅಪ್ಪಯ್ಯನ ಮನಸಿನಷ್ಟೇ ವಿಶಾಲವಾದ ಲೇಖನ ವರ್ಣಿಸಿ ಬರೆಯಲು ಸಾಧ್ಯವಿಲ್ಲ.

ನಾನೆಂದರೆ ಇಷ್ಟವಾಗಿತ್ತು ಅವನಿಗೆ. ಕೂಡು ಕುಟುಂಬದಲ್ಲಿ ದುಡಿಯುತ್ತ ಸ್ವಂತಿಕೆಗೆ ಅವಕಾಶವಿರದೆ ಅಸಹಾಯಕತೆಯೇ ಮೂರ್ತಿವೆತ್ತಂತಿದ್ದ ಅಪ್ಪಯ್ಯನ ಮುಖ ಕಣ್ಣಿನಲ್ಲೇ ಇದೆ ಹೊರತು ಅವನ ಒಂದು ಸ್ಪಷ್ಟವಾದ ಭಾವಚಿತ್ರವೂ ಲಭ್ಯವಿಲ್ಲ. ಎಂಥ ದುರ್ಧೈವಿ ನಾನು. ಅಪ್ಪಯ್ಯನದು ಅಕಾಲ ಮರಣ. ತನ್ನ ನಲವತ್ತೈದರೊಳಗೇ ಕಾಯಿಲೆಯಿಂದ ಹಣ್ಣಾಗಿ ನಮ್ಮನ್ನಗಲಿದ್ದ. ಇದೇ ಮಾವಿನ ಹಣ್ಣನ್ನು ತಾನೇ ಆರಿಸಿಕೊಂಡು ಬಂದು ಅನ್ನಕ್ಕೆ ಹಸಿಮೆಣಸಿನೊಂದಿಗೆ ಕಿವಚಿಕೊಂಡು ಕೊಬರಿ ಎಣ್ಣೆ ಹಾಕಿ ಕಲಸಿ ಉಣ್ಣುತ್ತಿದ್ದ. ಬೇರೆ ಪದಾರ್ಥ ಬಾಯಿಗೆ ರುಚಿಸದಿದ್ದಾಗ ಬದನೆಕಾಯಿ ಸುಡುವದು ಅದನ್ನೂ ಅನ್ನಕ್ಕೆ ಕಲಸಿದಾಗ ನಮ್ಮ ಬಾಳೆಗೂ ಕೈ ತುತ್ತು ಹಾಕುವದು ಈಗಲೂ ಕಣ್ಣು ಕಟ್ಟಿದಂತಿದೆ.

ಅಪ್ಪಯ್ಯ ಅಸಹಾಯಕನಾಗಿ ಅಶಕ್ತನಾಗಿದ್ದಾಗ ನಾವೇ ಈ ಹಣ್ಣು ಆರಿಸಿ ಕೊಡುತ್ತಿದ್ದೆವು. ಅದೇಕೋ ಈ ಮಾವಿನ ಮರ, ಅಪ್ಪಯ್ಯ ಒಟ್ಟಿಗೇ ನೆನಪಾಗಿದೆ ಇಂದು? ದೊಡ್ಡದೊಂದು ಗಾಳಿ ಬೀಸಿತು. ಅವರಿಬ್ಬರೂ ಓಡಿದರು, ಮರದ ಬುಡಕ್ಕೆ. ನಾನು ಏಳಬೇಕೆನ್ನುವಷ್ಟರಲ್ಲಿ ತಲೆಮೇಲೆ ಪಕ್ಕದಲ್ಲಿ ಲಡ್ಡಾದ ಅಪ್ಪೇ ಮಿಡಿ ಮರದ ಸಣ್ಣ ರೆಂಬೆ ಬಿತ್ತು. ಜೋರಾಗಿ ಕಿರುಚಿದೆ. ಪಕ್ಕದಲ್ಲಿದ್ದ ನನ್ನವರಿಗೆ ಎಚ್ಚರವಾಯಿತು. ಮಕ್ಕಳಿಗೂ ಎಚ್ಚರವಾಗಿ ವಿಚಾರಿಸಿಕೊಂಡರು. ಅವರಿಗೇನು ಗೊತ್ತು ನನಗೆ ಎಷ್ಟು ದೊಡ್ಡ ಕನಸು ಬಿದ್ದಿದೆಯೆಂದು.. ಮತ್ತೆ ಹಾಗೇ ಮಲಗಿಕೊಂಡೆ. ಗಾಳಿಪಂಖ ಜೋರಾಗಿ ತಿರುಗುತ್ತಿತ್ತು, ರಾತ್ರಿ ಅದನ್ನು ಚಾಲು ಮಾಡಿದಾಗ ಕರೆಂಟ್ ಇರಲಿಲ್ಲ.

ನಸುಕಿನಲ್ಲಿ ಕರೆಂಟ್ ಬಂದು ಜೋರಾಗಿ ತಿರುಗುವಾಗಲೇ ಇರಬಹುದು ನನಗೆ ಗಾಳಿ ಬೀಸಿದ ಕನಸು ಮರಕ್ಕೋಡಿದ ಕನಸು... ಅಬ್ಬಾ ಎಂತಹ ಅದ್ಭುತ ಕನಸು ದೊಡ್ಡ ಬೆಳಗಾದ ಮೇಲೆ ಕನಸಿನ ದೃಶ್ಯಗಳನ್ನೆಲ್ಲ ಎಡಿಟ್ ಮಾಡಿ ಇವರಿಗೆ ವಿವರಿಸಿದೆ. ಅಪ್ಪಯ್ಯ ಕಾಲವಾಗಿ ಅವನ ನೆನಪು ಕಾಲಘಟ್ಟದಲ್ಲಿ ಹೂತು ಹೋಗಿದೆ. ಚೌಡಿಮರ ಇನ್ನೂ ಇದೆ. ಆ ಮರಕ್ಕೆ ಜಗ್ಗಿ ಕಾಯಿ ಬಂದ ವರ್ಷದಲ್ಲಿ ಯಾರಾದ್ರೂ ಸಾಯುತ್ತಾರೆಂಬ ನಂಬಿಕೆ ಮನೆಮಾಡಿದೆ. ಕಾಕತಾಳೀಯವೆಂಬಂತೆ ಆಗಿದ್ದೂ ಇದೆ ಸಾವುಗಳು. ಎಷ್ಟೋ ವರ್ಷವಾಗಿದೆ ಚೌಡಿಮರದ ಹತ್ತಿರ ಹೋಗಿಲ್ಲ. ಆದರೇಕೆ ಈ ಕನಸು? ಕನಸೇ ಹಾಗಿರಬಹುದು ಬಾಲ್ಯ ನೆನಪಿಸಲು ಆಗಾಗ ಬರುತ್ತದೆ. ಮೊದಲೆಲ್ಲ ಕನಸು ವಿವರಣೆಯನ್ನು ಮೈ ನವಿರೇಳುವಂತೆ ಹೇಳುವದು ಕೇಳುವದು ಇತ್ತು ಈಗ ಹೇಳುವದಕ್ಕೂ ಕೇಳುವದಕ್ಕೂ ಸಮಯವಿಲ್ಲ.

ಈ ಚೌಡಿ ಮಾವಿನ ಮರ ಬಹುಶಃ ನನ್ನ ಮುತ್ತಾತ ತಾತನ ಕಾಲದಿಂದಲೂ ಜನರಿಗೆ ಸವಿಫಲವುಣಿಸುತ್ತ ಸಾರ್ಥಕತೆ ಕಂಡಿದೆ. ಇದು ಸಿರಸಿ ತಾಲೂಕಿನ ಲಿಂಗದಕೋಣ ಎಂಬ ಗ್ರಾಮದ ಹೊರವಲಯದಲ್ಲಿದೆ. ಹಳ್ಳಿಗಳಲ್ಲಿ ಸುತ್ತಲಿರುವ ಬೆಟ್ಟ ಬೇಣಗಳು ಅಡಿಕೆ ತೋಟಕ್ಕೆ ಒದಗಿಸುವ ಸೊಪ್ಪಿಗಾಗಿ ಬೆಳೆಸಿ ಉಳಿಸಿದವು. ಸೊಪ್ಪಿನ ಬೆಟ್ಟ ಅಂತಲೇ ಗ್ರಾಮ್ಯ ಭಾಷೆಯಲ್ಲಿ ಹೇಳುತ್ತಾರೆ. ಪಕ್ಕದಲ್ಲೇ ಸ್ಮಶಾನವಿದೆ. ಗಗನಚುಂಬಿ ಈ ಚೌಡಿ ಮರವು ಹತ್ತು ಫೂಟು ಸುತ್ತಳತೆಹೊಂದಿದೆ. ನನ್ನ ಚಿಕ್ಕಪ್ಪ ಶ್ರೀಧರ ಹೆಗಡೆಯವರು ಹೇಳುವ ಪ್ರಕಾರ ಅವರು ಚಿಕ್ಕವರಿರುವಾಗ ಇನ್ನೊಂದೆರಡು ದೊಡ್ಡ ದೊಡ್ಡ ವಿಶಾಲವಾದ ಕೊಂಬೆಗಳಿದ್ದವಂತೆ. ಈ ಮರದ ಹತ್ತಿರ ಅಡಕೆ ತೋಟದ ಕೆಲಸಮಾಡಿಕೊಂಡಿದ್ದ ಚೌಡ ಎಂಬ ಆಳು ತನ್ನ ಬಿಡಾರ ಹೊಂದಿದ್ದ. ಅದರಿಂದಲೇ ಇದಕ್ಕೆ ಚೌಡಿಮಾವಿನ ಮರ ಎಂಬ ಹೆಸರು ಬಂದಿದೆಯಂತೆ.

PREV
Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?