ಅಗ್ನಿವೀರ್ ನೇಮಕಾತಿಯಲ್ಲಿ ಬದಲಾವಣೆ ಬಯಸಿದ ಸೇನೆ; ಶೀಘ್ರದಲ್ಲೇ ಹೊಸ ನಿಯಮಗಳ ಜಾರಿ?

By Suvarna News  |  First Published Jun 12, 2024, 5:28 PM IST

ಬಹುತೇಕರ ಅಸಮಾಧಾನಕ್ಕೆ ಕಾರಣವಾದ ಅಗ್ನಿವೀರ್ ನೇಮಕಾತಿ ನಿಯಮದಂತೆ ಕೇವಲ ಶೇ. 25ರಷ್ಟು ಅಗ್ನಿವೀರ್‌ಗಳನ್ನು ಶಾಶ್ವತವಾಗಿ ಉಳಿಸಿಕೊಂಡು, ಉಳಿದ ಶೇ. 75ರಷ್ಟು ಅಗ್ನಿವೀರ್‌ಗಳನ್ನು ತಲಾ 12 ಲಕ್ಷ ರೂ. ಮೊತ್ತದ ಪಾವತಿಯೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. 


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

2022ರಲ್ಲಿ ಭಾರತೀಯ ಸೇನೆಯಲ್ಲಿ ಪರಿಚಯಿಸಲ್ಪಟ್ಟ ಅಗ್ನಿವೀರ್ ನೇಮಕಾತಿ ಯೋಜನೆಯು, ಸಾಮಾಜಿಕ ವಲಯದಲ್ಲಿ ಎಷ್ಟು ಜನಪ್ರಿಯತೆ ಗಳಿಸಿತೋ, ಅಷ್ಟೇ ವಿರೋಧವನ್ನೂ ಎದುರಿಸಿತು. ಸೇನೆ ಸೇರುವ ಮೂಲಕ ದೇಶಸೇವೆಯ ಕನಸು ಹೊತ್ತ ಕೋಟ್ಯಂತರ ಯುವಕ/ಯುವತಿಯರಲ್ಲಿ ಈ ಯೋಜನೆ ಭರವಸೆಯನ್ನೂ ಮತ್ತು ಕೆಲ ಆತಂಕವನ್ನೂ ಹುಟ್ಟುಹಾಕಿತ್ತು.

Latest Videos

undefined

ಅಗ್ನಿವೀರ್ ನೇಮಕಾತಿ ಯೋಜನೆಗೆ ಪ್ರಮುಖವಾಗಿ ದೇಶದ ಉತ್ತರದ ರಾಜ್ಯಗಳಾದ  ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಬಲವಾದ ವಿರೋಧ ವ್ಯಕ್ತವಾಗಿತ್ತು. ಸೇವಾವಧಿ ಕುರಿತು ಅಭ್ಯರ್ಥಿಗಳಲ್ಲಿ ಅಸಮಾಧಾನ ಕಂಡುಬಂದಿತ್ತು. ಈ ಯೋಜನೆಯಡಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಕೇವಲ ಶೇ. 25ರಷ್ಟು ಅಗ್ನಿವೀರ್‌ಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಮತ್ತು ಉಳಿದ ಶೇ. 75ರಷ್ಟು  ಅಭ್ಯರ್ಥಿಗಳನ್ನು ನಾಲ್ಕು ವರ್ಷಗಳ ಸೇವೆಯ ನಂತರ ಬಿಡುಗಡೆ ಮಾಡುವ ನಿಯಮಕ್ಕೆ, ಸೇನೆಯಲ್ಲಿ ಧೀರ್ಘ ಕಾಲ ಸೇವೆ ಮಾಡಲು ಅಭ್ಯರ್ಥಿಗಳಿಂದ ತೀವ್ರ ವಿರೋಧ ಕೇಳಿಬಂತು. 

ಅಗ್ನಿವೀರ್ ನೇಮಕಾತಿ ನಿಯಮದಂತೆ ಕೇವಲ ಶೇ. 25ರಷ್ಟು ಅಗ್ನಿವೀರ್‌ಗಳನ್ನು ಶಾಶ್ವತವಾಗಿ ಉಳಿಸಿಕೊಂಡು, ಉಳಿದ ಶೇ. 75ರಷ್ಟು ಅಗ್ನಿವೀರ್‌ಗಳನ್ನು ತಲಾ 12 ಲಕ್ಷ ರೂ. ಮೊತ್ತದ ಪಾವತಿಯೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಈ ನಿಯಮ ಬಹುತೇಕ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. 

ಸೇನೆಯಲ್ಲಿ ನಾಲ್ಕು ವರ್ಷಗಳ ಚುಟುಕು ಸೇವಾ ಅವಧಿ ಮುಗಿಸಿದ ಅಗ್ನಿವೀರ್‌ಗಳ ಭವಿಷ್ಯದ ಬಗ್ಗೆ, ಈ ನಿಯಮ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಅಗ್ನಿವೀರ್ ನೇಮಕಾತಿ ವಿವಾದವು 2024ರ ಸಾರ್ವತ್ರಿಕ ಚುನಾವಣಾ ಪ್ರಚಾರದಲ್ಲಿ ಚರ್ಚಾಸ್ಪದ ವಿಷಯವಾಗಿತ್ತು. ಅಲ್ಲದೇ ಚುನಾವಣೆಯಲ್ಲಿ ಬಹುತೇಕವಾಗಿ ಉತ್ತರದ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿಯ ಸೀಟು ಗಳಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತು ಎಂಬ ವಿಶ್ಲೇಷಣೆ ಕೂಡ ಕೇಳಿಬರಲು ಕಾರಣವಾಯಿತು. 

ಮೋದಿ ಸರ್ಕಾರ ರಚನೆಗೂ ಮುನ್ನವೇ ಅಗ್ನಿವೀರ್‌ ಯೋಜನೆ ಬಗ್ಗೆ ಜೆಡಿಯು, ಎಲ್‌ಜೆಪಿ ಕ್ಯಾತೆ!

ಬಿಜೆಪಿಯ ಕೆಲವು ಮಿತ್ರಪಕ್ಷಗಳು ಅದರಲ್ಲೂ ವಿಶೇಷವಾಗಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್), ಅಗ್ನಿವೀರ್ ನೇಮಕಾತಿ ಯೋಜನೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ . ಅಲ್ಲದೇ  ಯೋಜನೀಯಲ್ಲಿ ಕೆಲವು ಮೂಲಭೂತ ಬದಲಾವಣೆಗೆ  ಈ ಪಕ್ಷಗಳಿಂದ ಆಗ್ರಹ ಕೇಳಿಬಂದಿದೆ.

ಇದಕ್ಕೆ ಪೂರಕವಾಗಿ ಅಗ್ನಿವೀರ್ ನೇಮಕಾತಿ ಯೋಜನೆಯ ನಿಯಮಗಳಲ್ಲಿ, ಕೆಲವು ಬದಲಾವಣೆಗಳನ್ನು ಮಾಡಲು ಸೇನೆ ಮುಕ್ತವಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಸಂಭವನೀಯ ಸುಧಾರಣೆಗಳನ್ನು ಗುರುತಿಸಲುಸೇನೆಯ ವಿವಿಧ ವಿಭಾಗಗಲ್ಲಿ, ಈಗಾಗಲೇ ವಿಮರ್ಶೆಗಳು ಆರಂಭವಾಗಿವೆ ಎಂದು ಹೇಳಲಾಗುತ್ತಿದೆ. 

'ಕೋವೈ ಮೀಡಿಯಾ ಪ್ರೈವೇಟ್ ಲಿಮಿಟೆಡ್' ಮಾಧ್ಯಮ ಸಂಸ್ಥೆಯ 'ಸ್ವರಾಜ್ಯ'ದ ಪ್ರಕಾರ, ಅಗ್ನಿವೀರ್  ಯೋಜನೆಯ ನಿಯಮಗಳಲ್ಲಿ ಭಾರತೀಯ ಸೇನೆಯು ತರಲು ಬಯಸಿರುವ ಐದು ಪ್ರಮುಖ ನಿಯಮಗಳು ಇಂತಿವೆ..

1. ಕಾಯಂ ಅಗ್ನಿವೀರ್‌ಗಳ ಶೇಕಡಾವಾರು ಪ್ರಮಾಣ ಹೆಚ್ಚಳ;
ಎಲ್ಲಾ ಅಗ್ನಿವೀರ್ ಅಭ್ಯರ್ಥಿಗಳ ಸೇವಾವಧಿ ನಾಲ್ಕು ವರ್ಷವಾದರೂ, ಈ ಅವಧಿಯ ಬಳಿಕ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.25ರಷ್ಟು ಅಗ್ನಿವೀರ್‌ಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಈ ನಿಯಮದಲ್ಲಿ ಅವಕಾಶವಿದೆ. ಆದರೆ ಇದೀಗ ಅಗ್ನಿವೀರ್‌ಗಳ ಉಳಿಸಿಕೊಳ್ಳುವಿಕೆ ಪ್ರಮಾಣವನ್ನು ಹೆಚ್ಚಿಸಲು ಸೇನೆ ಬಯಸಿದೆ. ಶಾಶ್ವತ ಉಳಿಸಿಕೊಳ್ಳುವಿಕೆ ಪ್ರಮಾಣವನ್ನು ಶೇ.60-70ಕ್ಕೆ ಹೆಚ್ಚಿಸುವ ಕುರಿತು ಸೇನೆಯು ಗಂಭೀರವಾಗಿ ಚಿಂತಿಸುತ್ತಿದೆ. 

News Hour: ಮೋದಿಗೆ ಶುರುವಾಯ್ತಾ ಎನ್‌ಡಿಎ ಮೈತ್ರಿಪಕ್ಷಗಳ ಟೆನ್ಶನ್‌!

2. ಸೇವಾವಧಿ ವಿಸ್ತರಣೆ;
ಹೌದು, ಅಗ್ನಿವೀರ್  ಸೇವಾವಧಿಯನ್ನು ನಾಲ್ಕು ವರ್ಷಗಳಿಂದ 7-8  ವರ್ಷಗಳವರೆಗೆ ವಿಸ್ತರಿಸಲು ಸೇನೆ ಚಿಂತಿಸುತ್ತಿದೆ. ಸೇನಾ ರೆಜಿಮೆಂಟ್ ವ್ಯವಸ್ಥೆಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಸಂಪೂರ್ಣ ತರಬೇತಿ ನೀಡಲು, ಕನಿಷ್ಠ ಆರರಿಂದ ಏಳು ವರ್ಷಗಳ ಅವಧಿ ಅವಶ್ಯ ಎಂಬ ನಿವೃತ್ತ ಸೇನಾಧಿಕಾರಿಗಳ ವಾದಕ್ಕೆ ಬಲ ಬಂದಿದೆ.

ಪ್ರಸ್ತುತ ಅಗ್ನಿವೀರ್ ಯೋಜನೆಯಡಿ ಮೂಲಭೂತ ತರಬೇತಿಯ ಅವಧಿ ಕೇವಲ ಒಂಬತ್ತು ತಿಂಗಳುಗಳು ಮಾತ್ರ. ಇದರಿಂದ ಅಗ್ನಿವೀರ್ ಓರ್ವ ರೆಜಿಮೆಂಟ್‌ನೊಳಗೆ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದು, ಕರ್ತವ್ಯ ಆರಂಭಿಸುವ ಹೊತ್ತಿಗೆ ಆತನ ಸೇವಾವಧಿಯೇ ಮುಗಿಯುವ ಸಂಭವ ಹೆಚ್ಚಿದೆ. ಇದರಿಂದ ಭವಿಷ್ಯದಲ್ಲಿ ಸೇನೆಯು ಕೆಲವು ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯೂ ಇಲ್ಲದ್ದಿಲ್ಲ. ಹೀಗಾಗಿ ತರಬೇತಿ ಅವಧಿಯ ವಿಸ್ತರಣೆ ಮತ್ತು ಈ ಮೂಲಕ ಅಭ್ಯರ್ಥಿಯ ಸೇವಾವಧಿ ವಿಸ್ತರಣೆಗೆ ಸೇನೆ ಆಲೋಚನೆ ಮಾಡುತ್ತಿದೆ. 

3. ನೇಮಕಾತಿ ವಯೋಮಿತಿ ಹೆಚ್ಚಳ;
ಪ್ರಸ್ತುತ ಅಗ್ನಿವೀರ್‌ಗಳ ನೇಮಕಾತಿ ಪ್ರಕ್ರಿಯೆಗೆ ಇರುವ ವಯೋಮಿತಿ 17 ಮತ್ತು 21.5 ವರ್ಷ. ಆದರೆ ಸಿಗ್ನಲ್, ಏರ್ ಡಿಫೆನ್ಸ್ ಮತ್ತು ಇಂಜಿನಿಯರ್‌ಗಳಂತಹ ತಾಂತ್ರಿಕ ಶಾಖೆಗಳಿಗೆ, ನೇಮಕಾತಿ ವಯೋಮಿತಿಯನ್ನು 23 ವರ್ಷಕ್ಕೆ ಹೆಚ್ಚಳ ಮಾಡುವ ಪ್ರಸ್ತಾವನೆ ಸೇನೆ ಮುಂದಿದೆ.

ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿಗೆ ಹೆಚ್ಚಿನ ಅವಧಿ ಬೇಕು. ಹೀಗಾಗಿ ವಯೋಮಿತಿಯನ್ನು ಹೆಚ್ಚಿಸುವ ಮೂಲಕ ಅಭ್ಯರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತಿ ಪಡೆಯಲು ಹೆಚ್ಚಿನ ಕಾಲಾವಧಿ ನೀಡಲು ಈ ನಿಯಮದ ಬದಲಾವಣೆ ಅವಶ್ಯ ಎಂದು ಹೇಳಾಗಿದೆ.

ಮೋದಿ, ಅಮಿತ್ ಶಾ ಮುಂದೆ ಮಹತ್ವದ ಬೇಡಿಕೆ ಇಟ್ಟ ನಿತೀಶ್ ಕುಮಾರ್?

4. ಉದ್ಯೋಗ ಬೇಡಿಕೆ ಖಾತರಿಪಡಿಸುವಿಕೆ; 
ಸೇವಾವಧಿ ಪೂರ್ಣಗೊಂಡ ಬಳಿಕ ಸೇವೆಯಿಂದ ಬಿಡುಗಡೆಗೊಳ್ಳುವ ಅಗ್ನಿವೀರರಿಗೆ, ಅನ್ಯ ಕ್ಷೇತ್ರದಲ್ಲಿ ಉದ್ಯೋಗ ಖಾತರಿಪಡಿಸಲು ನೆರವು ನೀಡುವ ಯೋಜನೆ ಸೇನೆಯ ಮುಂದಿದೆ. ಇದ್ಕಕಾಗಿ ವೃತ್ತಿಪರ ಏಜೆನ್ಸಿಯನ್ನು ನೇಮಿಸಿಕೊಳ್ಳುವ ಕುರಿತು ಸಲಹೆ ನೀಡಲಾಗಿದೆ. ಈ ಏಜೆನ್ಸಿಯು ನಿವೃತ್ತ ಅಗ್ನಿವೀರರಿಗೆ ಅನ್ಯ ಉದ್ಯೋಗ ಹುಡುಕುವಲ್ಲಿ ನೆರವಾಗಲಿದೆ.  ಅಲ್ಲದೇ ತರಬೇತಿಯ ಸಮಯದಲ್ಲಿ ಅವಘಡದ ಕಾರಣಕ್ಕೆ ಯಾವುದೇ ಅಗ್ನಿವೀರ್‌ ಅಂಗವೈಕಲ್ಯಕ್ಕೆ ಗುರಿಯಾದರೆ, ಅಂತಹವರಿಗೆ ಎಕ್ಸ್-ಗ್ರೇಷಿಯಾ ನೀಡುವ ಪ್ರಸ್ತಾವನೆಯನ್ನು ಮಂಡಿಸಲಾಗಿದೆ.  .

5. ಜೀವನಾಧಾರ ಭತ್ಯೆ
ಒಂದು ವೇಳೆ ಅಗ್ನಿವೀರ್ ಓರ್ವ ಯುದ್ಧದಲ್ಲಿ ಹುತಾತ್ಮನಾದರೆ, ಆತನ ಕುಟುಂಬಕ್ಕೆ ಜೀವನಾಧಾರ ಭತ್ಯೆ ನೀಡುವ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಅಗ್ನಿವೀರ್ ಕುಟುಂಬದ ಭದ್ರತೆ ಈ ಯೋಜನೆಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಬೇಕು ಎಂದು  'ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಅಗ್ನಿವೀರ್ ಯೋಜನೆ ವಿರುದ್ಧ ರಾಷ್ಟ್ರಪತಿಗೆ ರಾಹುಲ್‌ ಗಾಂಧಿ ದೂರು!

ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿವೀರ್ ಯೋಜನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯತೆ ದಟ್ಟವಾಗಿದ್ದು, ಈ ಯೋಜನೆಯ ಸುತ್ತ ಹೆಣೆದುಕೊಂಡಿರುವ ವಿವಾದಗಳನ್ನು ತೊಡೆದುಹಾಕಲು ನೀಲನಕ್ಷೆ ಸಿದ್ಧವಾಗುತ್ತಿದೆ. ಈ ಮೂಲಕ ಸೇನೆ ಸೇರಿ ದೇಶಸೇವೆ ಮಾಡುವ ಕನಸು ಹೊತ್ತ ಕೋಟ್ಯಂತರ ಯುವಕ/ಯುವತಿಯರಿಗೆ ಹೊಸ ಭರವಸೆ ಕಾಣಿಸುತ್ತಿದೆ.

click me!