ಮೈ ನವಿರೇಳಿಸುವ ಅದ್ಭುತ ಗಾಥೆ: ಸಾಗರದಲ್ಲಿ ಅಸಾಧ್ಯವೆನಿಸಿದ ಸಾಹಸವನ್ನು ಸಾಧ್ಯವಾಗಿಸಿದ ಅನನ್ಯಾ!

Published : Nov 15, 2026, 04:45 PM IST
Ananya Atlantic Ocean Rowing

ಸಾರಾಂಶ

ಪುಟ್ಟ ದೋಣಿಯಲ್ಲಿ ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರದಲ್ಲಿ 5,000 ಕಿ.ಮೀ. ದೂರ ಕ್ರಮಿಸಿ 52 ದಿನಗಳ ಸಾಹಸಯಾನದಿಂದ ವಿಶ್ವದಾಖಲೆ ಸೃಷ್ಟಿಸಿದ ಅನನ್ಯಾಳ ರೋಚಕ ಕಥನವೇ ‘ಸಾಗರದಲ್ಲಿ ಸಾಹಸಿ’. ಡಾ. ಶಿವಪ್ರಸಾದ್ ಬರೆದ..

ಉಮಾ ರಾಮರಾವ್‌, ಮುಂಬಯಿ

ಡಾ. ಶಿವಪ್ರಸಾದ್‌ ಅವರ ʼಸಾಗರದಲ್ಲಿ ಸಾಹಸಿʼ ಪುಸ್ತಕವು ಅವರ ಮಗಳು ಅನನ್ಯಾ ಏಕಾಂಗಿಯಾಗಿ ಪುಟ್ಟ ದೋಣಿಯೊಂದರಲ್ಲಿ ಹುಟ್ಟುಹಾಕುತ್ತಾ ಅಟ್ಲಾಂಟಿಕ್‌ ಸಾಗರದಲ್ಲಿ 5000 ಕಿ.ಮೀ. ಗಳಷ್ಟು ದೂರವನ್ನು ಕ್ರಮಿಸಿ ವಿಶ್ವದಾಖಲೆಯನ್ನು ಸೃಜಿಸಿದ ನೈಜ ಕಥನ. ವೀರಲೋಕ ಪ್ರಕಾಶನದಿಂದ ಇದೇ ವರ್ಷ (2026) ಬೆಳಕು ಕಂಡಿರುವ ಈ ಪುಸ್ತಕಕ್ಕೆ ಬಹಳ ಒಪ್ಪುವಂತಹ ಬೆನ್ನುಡಿಯನ್ನು ಡಾ. ಗುರುಪ್ರಸಾದ ಕಾಗಿನೆಲೆಯವರು ಬರೆದಿದ್ದಾರೆ. ಎಂತಹ ಅದ್ಭುತವಾದ ಸಾಹಸ!

ಪುಸ್ತಕವನ್ನೋದಿದಾಗ ಅನನ್ಯಳ ಮತ್ತು ಅವಳ ತಾಯ್ತಂದೆಯರ ಬಗ್ಗೆ ಬಹಳ ಅಭಿಮಾನವೆನ್ನಿಸುತ್ತದೆ. ಅನನ್ಯಳ ಅನನ್ಯ ಸಾಧನೆಯನ್ನು ಅಷ್ಟೇ ಅನನ್ಯವಾಗಿ ಅವಳ ತಂದೆ ಡಾ. ಶಿವಪ್ರಸಾದರು ಕಟ್ಟಿಕೊಟ್ಟಿದ್ದಾರೆ. ಪುಸ್ತಕವನ್ನು ಓದುತ್ತಿದ್ದಂತೆ ನಾನು ಈ ಸಾಹಸಗಾಥೆಯಲ್ಲಿ ಮೈಮರೆತೆ. ಮಗಳ ಹಿರಿದಾದ ಸಾಹಸವನ್ನು 86 ಪುಟಗಳ ಈ ಕಿರು ಹೊತ್ತಗೆಯಲ್ಲಿ ಅತಿ ಚೊಕ್ಕವಾಗಿ ಲೇಖಕರು ನಿವೇದಿಸಿದ್ದಾರೆ. ಸಮಂಜಸವಾಗಿ ವಿಂಗಡಿಸಿದ ಆರು ಅಧ್ಯಾಯಗಳಲ್ಲಿ ಬಹಳ ಅಚ್ಚುಕಟ್ಟಾಗಿ ಈ ಅನುಪಮ ಕಾರ್ಯದ ವಿವರಗಳನ್ನು ಕಟ್ಟಿಕೊಡಲಾಗಿದೆ.

ಮೇಲ್ನೋಟಕ್ಕೆ ಅಸಾಧ್ಯವೇ ಎನ್ನಿಸುವ ಈ ಅಪರೂಪದ ಕಾರ್ಯವನ್ನು ಕೈಗೊಳ್ಳಬೇಕೆನ್ನುವ ಆಸೆ ಅನನ್ಯಳ ಮನದಲ್ಲಿ ಹುಟ್ಟಿದ್ದಾದರೂ ಹೇಗೆಂಬುದನ್ನು ʼಪುಟ್ಟ ದೋಣಿಯಲ್ಲೊಂದು ದೊಡ್ಡ ಕನಸುʼ ಎಂಬ ಮೊದಲ ಅಧ್ಯಾಯದಲ್ಲಿ ಲೇಖಕರು ಬಿಚ್ಚಿರಿಸಿದ್ದಾರೆ. ಈ ಕ್ರೀಡೆ ನನಗಂತೂ ತೀರ ಅಪರಿಚಿತ. ಕ್ರೀಡೆಯ ವಿವರಗಳನ್ನೆಲ್ಲ ಮನಮುಟ್ಟುವಂತೆ ಮೊದಲ ಅಧ್ಯಾಯದಲ್ಲಿಯೇ ತಿಳಿಸಲಾಗಿದೆ. ಇಂತಹದೊಂದು ಸಾಹಸವನ್ನು ಮಗಳು ಕೈಗೊಳ್ಳುವೆನೆಂದಾಗ ತಂದೆಯಾಗಿ ಲೇಖಕರು ಅನುಭವಿಸಿದ ಆತಂಕ, ಅವಳನ್ನು ಈ ನಿರ್ಧಾರದಿಂದ ಹಿಂದಳೆಯಲು ಮಾಡಿದ ಪ್ರಯತ್ನಗಳು ಎಲ್ಲವೂ ವಿಶದವಾಗಿ ದಾಖಲಾಗಿವೆ. ಓದುತ್ತಾ ಹೋದಂತೆ ಈ ತಲ್ಲಣ, ಕಳವಳಗಳು ನನ್ನವೇ ಎಂದೆನಿಸಿದವು.

ಮನೆಜನರೆಲ್ಲರ ವಿರೋಧವನ್ನು ಬಹಳ ಮೃದುವಾಗಿ ಆದರೆ ಅಷ್ಟೇ ದೃಢವಾಗಿ ಎದುರಿಸಿ ತನ್ನ ನಿರ್ಧಾರದಿಂದ ಹಿಂದೆ ಸೆರಿಯದೆ ಉಳಿದ ಅನನ್ಯಳ ಗಟ್ಟಿತನ ಬೆರಗು ಹುಟ್ಟಿಸಿತು. ಅಲ್ಲದೆ ಕರುಳಿನ ಕುಡಿ ಇಂತಹ ಕಠಿಣ ನಿರ್ಧಾರವನ್ನು ಕೈಗೊಂಡ ನಂತರ ಅದನ್ನು ಸಂಪೂರ್ಣವಾಗಿ ಬೆಂಬಲಿಸಿ ಅವಳಿಗೆ ಆಸರೆಯಾಗಿ ನಿಂತ ತಾಯ್ತಂದೆಯರ ಉದಾತ್ತ ನಿಲವು ಮನಸ್ಸನ್ನು ಆರ್ದ್ರವಾಗಿಸಿತು. ʼ ಕನಸಿಗೆ ಕಡಿವಾಣವಿಲ್ಲʼ ಎನ್ನುತ್ತಾ ʼಕನಸು ಚಿಕ್ಕದಾಗಿರಬಹುದು ಅಥವಾ ಅಕ್ಕನು ಚನ್ನಮಲ್ಲಿಕಾರ್ಜುನನ್ನೇ ಕಂಡ ಅನುಭಾವದ ಕನಸೂ ಆಗಿರಬಹುದುʼ ಎಂಬ ಹೋಲಿಕೆಯಿಂದ ಡಾ. ಶಿವಪ್ರಸಾದರು ಮುಂದಿನ ಅಧ್ಯಾಯಗಳ ವಿಷಯದ ತೂಕವನ್ನು ಬಹಳ ಸಮರ್ಥವಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ.

ಎರಡನೆಯ ಅಧ್ಯಾಯದಲ್ಲಿ ʼವಿಶ್ವದ ಅತಿ ಕಠಿಣ ರೋಯಿಂಗ್ ಸ್ಪರ್ಧೆʼ ಎಂದೇ ಹೆಸರಾದ ಈ ಕ್ರೀಡೆಯ ಇತಿಹಾಸವನ್ನೆಲ್ಲ ಸಮಗ್ರವಾಗಿ ಆದರೆ ಸ್ವಲ್ಪವೂ ನೀರಸವೆನಿಸದಂತೆ ಲೇಖಕರು ಬರೆದಿದ್ದಾರೆ. ಮನುಷ್ಯನ ಕುತೂಹಲ, ಹೊಸದನ್ನು ಹುಡುಕುವ ಉತ್ಸಾಹ ಮತ್ತು ವ್ಯಾಪಾರದ ಪರಿಧಿಯನ್ನು ಹಿಗ್ಗಲಿಸಿಕೊಳ್ಳಬೇಕೆನ್ನುವ ತುಡಿತಗಳಿಂದಾಗಿ ಅಟ್ಲಾಂಟಿಕ್‌ ಸಾಗರದ ಯಾನವು ಒಂದು ಮಹತ್ತ್ವದ ಪರಂಪರೆಯನ್ನೇ ಹೊಂದಿರುವುದನ್ನು ಚರಿತ್ರೆಯ ದಾಖಲಿತ ಸತ್ಯಗಳ ಬೆಳಕಿನಲ್ಲಿ ನಮೂದಿಸಿರುವ ಪರಿ ಶ್ಲಾಘ್ಯವಾಗಿದೆ.

ಆಫ್ರಿಕಾ ಖಂಡದ ಪಶ್ಚಿಮಕ್ಕಿರುವ ಸ್ಯಾನ್‌ ಸೆಬಾಸ್ಟಿಯನ್‌ ಬಂದರಿನಿಂದ ಪ್ರಾರಂಭವಾಗಿ ಉತ್ತರ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನಡುವಿನ ಅಂಟಿಗದಲ್ಲಿ ಈ ಸ್ಪರ್ಧೆಯು ಕೊನೆಗೊಳ್ಳುತ್ತದೆ. ಎರಡನೆಯ ಅಧ್ಯಾಯದ ಕೊನೆಯಲ್ಲಿ ಕೊಟ್ಟಿರುವ ನಕ್ಷೆಯಿಂದ ಸುಮಾರು ಹನ್ನೆರಡು ಸಾವಿರ ಅಡಿಗಳಷ್ಟು ಆಳವಾಗಿರುವ ಈ ಸಮುದ್ರದಲ್ಲಿ ಅನನ್ಯಳು ಕ್ರಮಿಸಿದ ಮಾರ್ಗವು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಚ್ಚೊತ್ತಿ ವಿಸ್ಮಯ ತುಂಬಿದ ಮೆಚ್ಚುಗೆಯನ್ನು ಹುಟ್ಟಿಸುತ್ತದೆ. ಅವಳು ಕೈಕೊಂಡ ಯಾನದ ಭವ್ಯತೆಯ ಅರಿವಾಗುತ್ತದೆ.

ಯಾನದ ಸಾಧಕ ಬಾಧಕಗಳನ್ನು ವಿವರಿಸಿರುವ ಮೂರನೆಯ ಅಧ್ಯಾಯವು ಸ್ವಲ್ಪ ಆತಂಕವನ್ನು ಹುಟ್ಟಿಸುತ್ತದೆಯಾದರೂ ಸ್ಯಾಟಲೈಟ್ ಫೋನಿನ ಮೂಲಕ ಅನನ್ಯ ಬಾಹ್ಯ ಜಗತ್ತಿನ ಸಂಪರ್ಕದಲ್ಲಿರಬಹುದೆನ್ನುವ ಮಾತಿನಿಂದ ನೆಮ್ಮದಿಯ ನಿಟ್ಟುಸಿರನ್ನು ಬಿಡುವಂತಾಗುತ್ತದೆ. ಯಾನಕ್ಕೆ ಮುನ್ನದ ಪೂರ್ವ ಸಿದ್ಧತೆಗಳು ಎನ್ನುವ ನಾಲ್ಕನೆಯ ಅಧ್ಯಾಯದಲ್ಲಿ ಈ ಮಹಾಯಾನವು ನಿರೀಕ್ಷಿಸುವ ಕಠಿಣ ಸಿದ್ಧತೆಗಳ ವಿವರವನ್ನು ಲೇಖಕರು ನಮ್ಮೆದುರಿನಲ್ಲಿಟ್ಟಿದ್ದಾರೆ. ಅನನ್ಯಳ ದೋಣಿಯ ವರ್ಣನೆ ಕಣ್ಣಿಗೆ ಕಟ್ಟುವಂತಿದೆ.

ಅವಳು ತನ್ನ ದೋಣಿಗೆ ʼಒಡಿಸಿಯಸ್ʼ ಎಂದು ಹೆಸರಿಸಿದ್ದನ್ನು ಮತ್ತು ಅದರ ಹಿನ್ನೆಲೆಯನ್ನು ಓದಿ ಅನನ್ಯಳ ಔಚಿತ್ಯ ಪ್ರಜ್ಞೆಯನ್ನು ಮೆಚ್ಚಿಕೊಳ್ಳುವಂತಾಗುತ್ತದೆ. ಅವಳ ತಯಾರಿ, ಸ್ಪರ್ಧೆಯ ವೆಚ್ಚವನ್ನು ಭರಿಸಲು ಅವಳಿಗೆ ಸಹಾಯಕರಾದ ಪ್ರಾಯೋಜಕರು, ಅವಳ ಸಾಹಸವನ್ನು ವ್ಯಾಪಕವಾಗಿ ಪ್ರಸಾರ ಮಾಡಿದ್ದ ಡಿಜಿಟಲ್‌ ಮಾಧ್ಯಮಗಳು ಮೊದಲಾದ ಎಲ್ಲವನ್ನೂ ವಿವರವಾಗಿ ಬರೆಯಲಾಗಿದೆ.. ಅನನ್ಯ ಉಪಯೋಗಿಸಿದ ದೋಣಿಗೆ ಭಾರತದ ಲೆಕ್ಕದಲ್ಲಿ ಐವತ್ತುಲಕ್ಷ ರೂಪಾಯಿಗಳಷ್ಟು ಬೆಲೆ ಎಂಬುದನ್ನು ಓದಿ ಅಬ್ಬಾ! ಎನ್ನಿಸಿತು. ಮುಂಬಯಿಯಂತಹ ಮಹಾನಗರದಲ್ಲಿಯೂ ಒಂದು ಪುಟ್ಟ ಫ್ಲ್ಯಾಟನ್ನು ಕೊಳ್ಳಬಹುದಾದ ಮೊತ್ತ ಇದು!

ʼದೈತ್ಯ ಅಲೆಗಳ ನಡುವೆ ಅನನ್ಯʼ ಎಂಬ ಐದನೆಯ ಅಧ್ಯಾಯವು ಈ ಪುಸ್ತಕದ ಹೃದಯವೇ ಎನ್ನಬೇಕು. ಈ ಅಧ್ಯಾಯದ ಕೆಲವು ಭಾಗಗಳನ್ನಂತೂ ನಾನು ಉಸಿರು ಬಿಗಿ ಹಿಡಿದುಕೊಂಡು ಓದಿದ್ದೇನೆ. ಕೆಲವು ವಾಕ್ಯಗಳನ್ನೋದುವಾಗ ನನ್ನ ಕಣ್ಣಂಚು ತೇವಗೊಂಡಿದೆ. ʼಸ್ಪರ್ಧೆ ಮುಗಿದಿದೆ, ಅನನ್ಯ ಸುರಕ್ಷಿತವಾಗಿ ಮರಳಿದ್ದಾಳೆʼ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದರೂ ಅವಳು ಸಾಗರದ ಮಧ್ಯದಲ್ಲಿ ಎದುರಿಸಿದ ಸವಾಲುಗಳನ್ನು ಕುರಿತು ಓದಿದಾಗ ಮೈ ಝುಮ್ ಎನ್ನುವಂತಾಗಿತ್ತು. ಅನನ್ಯಳ ಮೊಬೈಲ್ ಫೋನ್ ಸಮುದ್ರದಲ್ಲಿ ಬಿದ್ದು ಕಳೆದುಹೋದದ್ದು, ಅವಳ ತಲೆಗೆ ಪೆಟ್ಟು ಬಡಿದು ಊತ ಕಾಣಿಸಿಕೊಂಡದ್ದು, ಡೀಸೆಲನೈಝೇಷನ್ ಪ್ಲಾಂಟ್ ಕೆಲಸ ನಿಲ್ಲಿಸಿದ್ದು, ದೋಣಿಯ ಚುಕ್ಕಾಣಿಯೇ ಮುರಿದು ಹೋದದ್ದು ಒಂದೇ ಎರಡೇ?

ಕಠಿಣ ಪರಿಸ್ಥಿತಿಗಳ ಸರಮಾಲೆಯನ್ನೇ ಅವಳು ಧರಿಸುವಂತಾಗಿತ್ತು. ಆದರೆ ಧೈರ್ಯ, ಜಾಣ್ಮೆ ಮತ್ತು ಅದ್ಭುತವಾದ ಪ್ರಸಂಗಾವಧಾನತೆಗಳಿಂದ ಈ ಪುಟ್ಟ ಹುಡುಗಿ ಅದೆಲ್ಲವನ್ನೂ ಎದುರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಂಡ ರೀತಿ ಅನನ್ಯವೇ. ಲೇಖಕರೇ ಹೇಳಿರುವಂತೆ ಇದರಿಂದ ಅನನ್ಯಾ ತನ್ನ ಹೆಸರನ್ನು ಅನ್ವರ್ಥಕವನ್ನಾಗಿ ಮಾಡಿಕೊಂಡಳು. 'ಮೊಣಕಾಲಿಗಿಂತ ಕೆಳಗಿನ ಮಟ್ಟದಲ್ಲಿ ಮಾತ್ರ ನೀರಿರುವಂತೆ ಸಮುದ್ರಕ್ಕೆ ಇಳಿಯುವವನು ನಾನು. ಅನನ್ಯಳಿಗೆ ಈ ಧೈರ್ಯ ಹೇಗೆ ಬಂತೋʼ ಎಂಬ ಶಿವಪ್ರಸಾದರ ಮಾತು ನಗೆಯುಕ್ಕಿಸುತ್ತದೆ. ಅನನ್ಯಳ ಯಾನವನ್ನು ಕುರಿತು ಅವಳ ತಾಯ್ತಂದೆಯರು ಸಾಕಷ್ಟು ಅಧ್ಯಯನವನ್ನು ಮಾಡಿ..

ನೇವಿಗೇಶನ್ ಇತ್ಯಾದಿಗಳಲ್ಲಿ ಪರಿಣತರಾಗಿ ಅವಳಿಗೆ ಸಲಹೆಗಳನ್ನು ಕೊಡತೊಡಗಿದಾಗ ಅವಳು ಅವುಗಳನ್ನು ನಮ್ರತೆಯಿಂದ ನಿರಾಕರಿಸಿ ತಾನು ತನ್ನ ಮೇಲ್ವಿಚಾರಕರ ಸೂಚನೆಗಳನ್ನಷ್ಟೇ ಬಳಸುವುದು ಎಂದಳಂತೆ. ಅದು ಸ್ಪರ್ಧೆಯ ನಿಯಮಗಳಲ್ಲೊಂದು. ತಮ್ಮ ಈ ಆತಂಕ ಮತ್ತು ಅತ್ಯುತ್ಸಾಹದಿಂದ ಕೂಡಿದ ಕ್ರಿಯೆಯನ್ನು ಡಾ. ಶಿವಪ್ರಸಾದರು ಗೂಗಲ್ ನಲ್ಲಿ ಚಿಕಿತ್ಸೆಯ ಕ್ರಮಗಳನ್ನು ನೋಡಿಕೊಂಡು ಬಂದು ʼಹಾಗೆ ಮಾಡಿ, ಹೀಗೆ ಮಾಡಿʼ ಎಂದು ವೈದ್ಯರಿಗೇ ಸಲಹೆ ಕೊಡುವ ರೋಗಿಗಳ ರೀತಿಯದ್ದು ಎಂದು ಹೇಳಿರುವುದು ಮತ್ತೆ ನಗೆಯನ್ನು ತಂದಿತು. ತಮ್ಮ ನಿಲವನ್ನು ತಮ್ಮದೇ ವೃತ್ತಿಯ ಸಮಂಜಸವಾದ ಉದಾಹರಣೆಯಿಂದ ನೋಡಿ ಅದರ ಲೋಪದೋಷವನ್ನು ಮನಗಂಡಿರುವ ಈ ವಸ್ತುನಿಷ್ಠ ದೃಷ್ಟಿಕೋನವೂ ಅನನ್ಯವೇ.

ಆರನೆಯ ಅಧ್ಯಾಯವಾದ ʼಹೊಸದಿಗಂತʼ ತನ್ನ ಹೆಸರಿಗೆ ಒಪ್ಪುವಂತಿದೆ. ಯಶಸ್ವಿಯಾಗಿ ದಡವನ್ನು ಸೇರಿದ ಅನನ್ಯಳೊಡನೆ ಅವಳ ತಾಯ್ತಂದೆಯರು, ಸ್ನೇಹಿತರು ಒಂದುಗೂಡಿ ಸಂಭ್ರಮದ ಕ್ಷಣಗಳನ್ನು ಕಳೆದದ್ದನ್ನು ಇಲ್ಲಿ ವರ್ಣಿಸಿದ್ದಾರೆ. ಆ ವಿವರಗಳನ್ನು ಓದುತ್ತಿದ್ದಂತೆಯೇ ಅವರೆಲ್ಲರ ಸಂತೋಷದಲ್ಲಿ ನಾನೂ ಭಾಗಿಯಾದೆ. ಅನನ್ಯ ಪುಟ್ಟಿಯ ಕೈಕುಲುಕಿ ʼಪುಟ್ಟಾ ಯು ಆರ್ ರಿಯಲಿ ಗ್ರೇಟ್ʼ ಎಂದು ಹೇಳೋಣವೆನಿಸಿತು. ಸಮುದ್ರದಲ್ಲಿ ಏಕಾಂಗಿಯಾಗಿ 52 ದಿನಗಳನ್ನು ಕಳೆದು ತನ್ನ ಮೃದು ತೋಳುಗಳಿಂದ ಹುಟ್ಟು ಹಾಕಿ 5000 ಕಿ.ಮೀ. ದೂರವನ್ನು ಕ್ರಮಿಸಿದ್ದು ನಿಜಕ್ಕೂ ಅಸಾಮಾನ್ಯ. ಇಂತಹ ಸಾಧನೆಯನ್ನು ಮಾಡಿ ದಾಖಲೆಗಳನ್ನು ಸೃಷ್ಟಿಸಿದ ಅನನ್ಯಳ ಬಗ್ಗೆ ನಮ್ಮ ಎದೆಯುಬ್ಬುವುದು ಸಹಜವೇ.

ಹೀಗಿರುವಾಗ ಅವಳ ತಾಯ್ತಂದೆಯರಿಗೆ ಹೆಮ್ಮೆಯೆನಿಸದಿದ್ದೀತೇ?‌ ಆದರೆ ಡಾ. ಶಿವಪ್ರಸಾದರ ಬರವಣಿಗೆಯಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ್ದು ಅವರು ಈ ವಿಜಯಯಾತ್ರೆಯನ್ನು ನಿರೂಪಿಸುವಾಗ ತೋರಿಸುವ ಅಮಿತ ಸಂಯಮ. ವೈದ್ಯವೃತ್ತಿಯು ಪ್ರಾಯಶಃ ಇಂತಹ ಅನುದ್ವೇಗದ ಸಮಚಿತ್ತತೆಯನ್ನು ಅವರಿಗೆ ನೀಡಿದ್ದಿರಬಹುದು. ತಂದೆಯ ಹೃದಯದ ಆತಂಕ, ದುಃಖ, ಸಂತೋಷ ಎಲ್ಲವನ್ನೂ ಎಲ್ಲಿಯೂ ಅಬ್ಬರವಿಲ್ಲದಂತೆ ಅವರು ನಿರೂಪಿಸಿದ್ದಾರೆ. ಬರವಣಿಗೆಯ ಈ ಪಕ್ವ ಶೈಲಿ ಪುಸ್ತಕದ ಅತಿ ದೊಡ್ಡ ಧನಾಂಶ. ಮಧ್ಯದಲ್ಲಿ ಲೇಖಕರು ಬಹಳ ಸೂಕ್ತವಾಗಿ ಬಳಸುವ ಕವಿತೆಗಳು, ಕಾವ್ಯ ಸನ್ನಿವೇಶಗಳು ವೈದ್ಯರಾದ ಅವರಲ್ಲಿರುವ ಕವಿಹೃದಯವನ್ನು ತೆರೆದಿರಿಸುತ್ತವೆ. ಇಂತಹದೊಂದು ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ಡಾ. ಶಿವಪ್ರಸಾದರು ನಿಜಕ್ಕೂ ಅಭಿನಂದನಾರ್ಹರು.

ಪುಸ್ತಕದ ಕೊನೆಯಲ್ಲಿರುವ ಚಿತ್ರ ಸಂಪುಟವು ಈ ಮಹಾಯಾನದ ಮುಖ್ಯಕ್ಷಣಗಳನ್ನು ಓದುಗರ ಮುಂದಿರಿಸಿದೆ. ಒಟ್ಟಿನಲ್ಲಿ ಮನಸ್ಸಿಗೆ ಬಹಳ ಸಂತೋಷವನ್ನು ನೀಡಿದ ಓದು ಇದು. ಅನನ್ಯಳ ವಿದ್ಯಾಭ್ಯಾಸ, ಅವಳ ಉದ್ಯೋಗ ಮೊದಲಾದವನ್ನೂ ಹೇಳಬಹುದಿತ್ತೆನಿಸಿತು. ಇವೆಲ್ಲವೂ ಅವಳು ಕೈಗೊಂಡ ಇಂತಹ ಅದ್ಭುತ ಸಾಹಸಕ್ಕೆ ಪೂರಕವಾಗಿಯೇ ಇರುತ್ತವೆ. ತನ್ನ ಈ ಯಾನದಿಂದ ದೊರೆತ ಹಣವನ್ನು ಅನನ್ಯಾ ಅನಾಥ ಮಕ್ಕಳ ಅಭ್ಯುಯಕ್ಕಾಗಿ ಮೀಸಲಿಟ್ಟಿದ್ದನ್ನು ಓದಿದ ಮೇಲೆ ಅವಳನ್ನು ಕುರಿತು ಪ್ರೀತಿ. ಮೆಚ್ಚುಗೆಗಳ ಜೊತೆಗೆ ಗೌರವದ ಭಾವವು ಹುಟ್ಟಿತು. ಅನನ್ಯಳಿಗೆ ಸಮಸ್ತ ಕನ್ನಡಿಗರ ವತಿಯಿಂದ ಅನಂತ ಅಭಿನಂದನೆಗಳು ಮತ್ತು ಶುಭಕಾಮನೆಗಳು.

PREV
Read more Articles on
click me!

Recommended Stories

ಒಂದು ಫೋಟೋ ಫ್ರೇಮ್, ಒಂದು ಗುಲಾಬಿ: ‘ಅಮೃತ ಬಳ್ಳಿ ಕಷಾಯ’ದ ಹಿಂದಿರುವ ಭಾವುಕ ಕಥೆಯೇನು?
ಕಾರ್ನಾಡರ ನಾಟಕಗಳಿಗೆ ಹೊಸ ಜೀವ; ಒಂದೇ ದಿನ ಮೂರು ರಂಗಪ್ರಯೋಗ: ಎಲ್ಲಿ, ಯಾವಾಗ, ಯಾರಿಂದ?