ಮಾಸ್ತಿ ಅನಂತ ಕುಪ್ಪಳ್ಳಿ ಕಾರಂತ ಗಿರೀಶ ಕಂಬಾರ ದತ್ತಾತ್ರೇಯ ಗೋಕಾಕ: AI ಬಂದ ಮೇಲೆ ಲೇಖಕರ ಕೆಲಸವೇನು?

Published : Nov 15, 2026, 04:01 PM IST
AI and Literature

ಸಾರಾಂಶ

ಕೃತಕ ಬುದ್ಧಿಮತ್ತೆ ಸಾಹಿತ್ಯ ಮತ್ತು ಬರವಣಿಗೆಯ ಜಗತ್ತನ್ನು ಹೇಗೆ ಬದಲಿಸುತ್ತಿದೆ? ಕಥೆ, ಕವಿತೆ, ಕಾದಂಬರಿ ರಚನೆಯಲ್ಲಿ AI ಬಳಕೆಯ ಸಾಧ್ಯತೆಗಳು, ಸವಾಲುಗಳು ಮತ್ತು ಲೇಖಕರ ಸೃಜನಶೀಲತೆಯ ಮಹತ್ವದ ಕುರಿತು ವಿಶೇಷ ವಿಶ್ಲೇಷಣೆ.

ಜೋಗಿ

ಇತ್ತೀಚೆಗೆ ನಾನು ಒಂದು ಕಾಲೇಜಿಗೆ ಹೋಗಿದ್ದೆ. ಅಲ್ಲಿ ಮೇಷ್ಟರಾಗಿದ್ದ ನನ್ನ ಗೆಳೆಯರೊಬ್ಬರು ವಿದ್ಯಾರ್ಥಿಗಳ ಬಗ್ಗೆ ದೂರು ಹೇಳುತ್ತಾ, ಎಲ್ಲ ಹುಡುಗರೂ ಪುಸ್ತಕ ಓದಿ ಅಭಿಪ್ರಾಯ ಬರೆದುಕೊಂಡು ಬನ್ನಿ ಅಂತ ಹೇಳಿದರೆ, ಎಐ ಕೈಗೆ ಪುಸ್ತಕ ಕೊಟ್ಟು ಬರೆಸಿಕೊಂಡು ಬರುತ್ತಾರೆ. ಮಕ್ಕಳಿಗೆ ಎಷ್ಟು ಗೊತ್ತಿರಬೇಕೋ ಅಷ್ಟು ಕತೆಯನ್ನು ಎಐ ಹೇಳುತ್ತದೆ. ಹೀಗಾಗಿ ನಾನು ಗದರಿಸಿ ಕೇಳಿದರೆ ಅವರು ಕತೆಯನ್ನೂ ಹೇಳುತ್ತಾರೆ. ಮಕ್ಕಳಿಗೆ ಕತೆ ಗೊತ್ತಾಗುತ್ತದೆ, ಆದರೆ ಕತೆ ಓದುವುದರಿಂದ ಸಿಗುವ ಸಂತೋಷ ಮಾತ್ರ ಸಿಕ್ಕಿರುವುದಿಲ್ಲ. ಹೀಗೇ ಆದರೆ ಮುಂದೇನು ಗತಿ ಅಂತ ಆತಂಕ ವ್ಯಕ್ತಪಡಿಸಿದರು.

ನನಗೆ ಮಕ್ಕಳು ಮಾಡುತ್ತಿರುವ ಪ್ರಯೋಗ ಬಹಳ ಆಸಕ್ತಿಕರವಾಗಿ ಕಂಡಿತು. ಹಳೆಯ ಕಾಲದಲ್ಲಿ ಓದಿದಂತೆ ಇಡೀ ಕತೆಯನ್ನು ಇಡಿಯಾಗಿ ಓದುವ ಅವಶ್ಯಕತೆ ಎಲ್ಲರಿಗೂ ಇರಲಿಕ್ಕಿಲ್ಲ. ಕೆಲವರಿಗೆ ಕತೆಯ ಸಾರಾಂಶ ಮಾತ್ರ ಸಾಕಾಗಬಹುದು. ಶಿಕ್ಷಕರ ಮನಸ್ಸಿನಲ್ಲಿರುವ ಕತೆ ಓದುವುದರಿಂದ ಸಂತೋಷ ಸಿಗುತ್ತದೆ ಎಂಬ ಭಾವನೆ ಎಲ್ಲರ ಪಾಲಿಗೂ ನಿಜ ಅಲ್ಲದೇ ಇರಬಹುದು.

ಇಂಗ್ಲಿಷಿನಲ್ಲಿ ಎರಡು ನಿಮಿಷದಲ್ಲಿ ಆ್ಯನಾ ಕರೇನಿನಾ, ಎರಡು ನಿಮಿಷದಲ್ಲಿ ಹ್ಯಾಮ್ಲೆಟ್ ಮುಂತಾದ ಪ್ರಯೋಗಗಳು ನಡೆಯುತ್ತಿವೆ. ಇಡೀ ಕತೆಯನ್ನು ಎರಡೇ ನಿಮಿಷದಲ್ಲಿ ಕೆಲವು ಚಿತ್ರ ಮತ್ತು ಕೆಲವು ಮಾತುಗಳಿಂದ ಅರ್ಥ ಮಾಡಿಸುತ್ತಾರೆ. ಎಷ್ಟೋ ಸಲ ಆ ಕತೆಯ ಭಾವ ಕೂಡ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಸ್ವಲ್ಪ ಕಲ್ಪನಾ ಶಕ್ತಿ ಇದ್ದರೆ ಎರಡು ನಿಮಿಷದಲ್ಲಿ ಕೇಳಿದ ಕತೆ ನೂರೆಂಟು ಕವಲು ಒಡೆದು ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ನನ್ನ ಪ್ರಕಾರ ಇದು ಇಡೀ ಕತೆಯನ್ನು ಓದುವುದಕ್ಕಿಂತ ಹೆಚ್ಚು ಪರಿಣಾಮಕಾರಿ ಆಗುವ ಸಾಧ್ಯತೆಯೂ ಇದೆ.

ನನ್ನ ಅನೇಕ ಲೇಖಕ ಮಿತ್ರರು ಕೂಡ ಬರೆಯುವಾಗ ಎಐ ಬಳಸುತ್ತಾರೆ. ಪುಸ್ತಕ ಬರೆದಾದ ನಂತರ ಮೊದಲು ಗೆಳೆಯರಿಗೆ ಕಳಿಸುತ್ತಿದ್ದರು. ಯಾರೂ ಕೂಡ ಪೂರ್ತಿ ಓದುತ್ತಿರಲಿಲ್ಲ. ಓದಿದಂತೆ ನಟಿಸಿ ಚೆನ್ನಾಗಿದೆ ಅನ್ನುತ್ತಿದ್ದರು. ಈಗ ಎಐಗೆ ಕೊಟ್ಟರೆ ಅದು ಎಲ್ಲಿ ತಪ್ಪಿದೆ, ಏನು ಸಮಸ್ಯೆಯಿದೆ ಅಂತ ಸಮಗ್ರವಾಗಿ ಹೇಳುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬಹಳ ಸೊಗಸಾಗಿ ಕಾದಂಬರಿಯ ಅಂತ್ಯವನ್ನೂ ಸೂಚಿಸುತ್ತದೆ. ಅದಕ್ಕೆ ನಮ್ಮ ಸತ್ವ ಬಿಟ್ಟುಕೊಡದೇ, ಅದರಿಂದ ಸೂಚನೆ ತೆಗೆದುಕೊಂಡರೆ ನಿಜಕ್ಕೂ ಅನುಕೂಲ ಇದೆ. ಇದು ಬೇರೆಯವರಿಗೆ ಪುಸ್ತಕ ಕೊಡುವುದಕ್ಕಿಂತ ಎಷ್ಟೋ ವಾಸಿ. ಬೇರೆ ಲೇಖಕರು, ಓದುಗರು ಜೀವಮಾನದಲ್ಲಿ ನೂರು, ಇನ್ನೂರು ಪುಸ್ತಕ ಓದಿರಬಹುದು. ಎಐ ಸಾವಿರಾರು ಪುಸ್ತಕ ಓದಿರುತ್ತದೆ. ಹೀಗಾಗಿ ಎಐ ಇನ್ನೂ ಚೆನ್ನಾಗಿ ವಿಮರ್ಶೆ ಮಾಡುತ್ತದೆ ಅಂತ ಒಬ್ಬ ಲೇಖಕರು ಎಐಯನ್ನು ಕೊಂಡಾಡಿದರು. ಮಿಕ್ಕ ಹಲವು ಲೇಖಕರ ಅಭಿಪ್ರಾಯವೂ ಇದೇ ಆಗಿತ್ತು.

ಸಾಹಿತ್ಯದಲ್ಲಿ ಓದುಗ ಮತ್ತು ಲೇಖಕ ಇಬ್ಬರಿಗೂ ಹೊಸ ಹೊಸ ಸಾಧ್ಯತೆಗಳನ್ನು ಎಐ ನೀಡಿದೆ ಅನ್ನುವುದಕ್ಕೆ ಈ ಉದಾಹರಣೆಗಳು ಸಾಕ್ಷಿ. ಈಗ ಮಳೆಯ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದುಕೊಳ್ಳಿ. ನಾನು AI ಯನ್ನು ಕೇಳಿದರೆ ಅದು ಮಳೆಯ ಬಗ್ಗೆ ಸುಂದರವಾದ ಕವಿತೆಯೊಂದನ್ನು ಬರೆದುಕೊಡಬಹುದು. ನನ್ನ ಮನಸ್ಸಿನಲ್ಲಿ ಮಳೆ ಅಂದಾಕ್ಷಣ ಬೇಂದ್ರೆ, ಜಿಎಸ್ ಶಿವರುದ್ರಪ್ಪ, ಕುವೆಂಪು, ಹಂಸಲೇಖ, ಲಲಿತಾ ಸಿದ್ಧಬಸವಯ್ಯ, ಗೋಪಾಲಕೃಷ್ಣ ಅಡಿಗ, ಕೆ ಎಸ್ ನರಸಿಂಹ ಸ್ವಾಮಿ- ಇವರೆಲ್ಲ ಮಳೆಯ ಬಗ್ಗೆ ಬರೆದ ಪದ್ಯಗಳು ಮೂಡಿ ಮರೆಯಾಗುತ್ತವೆ. ಮಳೆ ಒಬ್ಬೊಬ್ಬರಿಗೆ ಒಂದೊಂದು ಥರ ಕಾಣುತ್ತದೆ. ಶ್ರಾವಣ ಬಂತು ಕಾಡಿಗೇ ಬಂತು ನಾಡಿಗೇ ಅಂತ ಬೇಂದ್ರೆ ಹಾಡಿದರೆ ಜನಪದ ಯಾತಕ್ಕೆ ಮಳೆ ಹೋದವೋ ಲೋಕ ತಲ್ಲಣಿಸುತ್ತಾವೋ ಅಂತ ಹಾಡುತ್ತಾನೆ. ಸುತ್ತಮುತ್ತ ಅಂಧಕಾರ ಮಳೆಹನಿಗಳ ಪಂಜರ ಅಂತ ಜಿಎಸ್ಎಸ್ ಹಾಡಿದರೆ, ಸೋರುತಿಹುದು ಮನೆಯ ಮಾಳಿಗೆ ಅಂತ ಶಿಶುನಾಳ ಶರೀಫ ಹಾಡುತ್ತಾರೆ. ಒಂದೇ ಮಳೆಯ ಬಗ್ಗೆ ನೂರು ಕವಿಗಳು ನೂರು ಥರದ ಕವಿತೆಗಳನ್ನು ಬರೆಯಬಹುದು. ಮಳೆ ಒಂದೇ; ಆದರೆ ಅದನ್ನು ನೋಡುವ ಕಣ್ಣುಗಳು ಬೇರೆ. ಒಬ್ಬನಿಗೆ ಅದು ಪ್ರೇಮ, ಇನ್ನೊಬ್ಬನಿಗೆ ವಿರಹ, ಮತ್ತೊಬ್ಬನಿಗೆ ಹಬ್ಬ, ಮಗದೊಬ್ಬನಿಗೆ ಬದುಕಿನ ಹೋರಾಟ. ಸಾಹಿತ್ಯದ ಸೌಂದರ್ಯವೇ ಇರುವುದು ಈ ಭಿನ್ನತೆಯಲ್ಲಿ.

ಈಗ AI ಯನ್ನು ನಾವು ಹೇಗೆ ಬಳಸಬಹುದು ಎಂಬ ಪ್ರಶ್ನೆ ಬರುತ್ತದೆ. ಮಳೆಯ ಬಗ್ಗೆ ಒಂದು ಕವಿತೆ ಬರೆಯಲು ಕೇಳುವುದಕ್ಕಿಂತ, ''''ಮಳೆಯ ಬಗ್ಗೆ ಒಬ್ಬ ಪ್ರೇಮಕವಿ, ಒಬ್ಬ ರೈತ, ಒಬ್ಬ ವೃದ್ಧ, ಒಬ್ಬ ನಗರವಾಸಿ ಮತ್ತು ಒಬ್ಬ ಬರಗಾಲವನ್ನು ಕಂಡ ಮನುಷ್ಯ ಹೇಗೆ ಬೇರೆಬೇರೆ ರೀತಿಯಲ್ಲಿ ಯೋಚಿಸಬಹುದು?'''' ಎಂದು ಕೇಳಬಹುದು. ಅದು ನಮಗೆ ಐದು ವಿಭಿನ್ನ ದೃಷ್ಟಿಕೋನಗಳನ್ನು ಕೊಡಬಹುದು. ಅವುಗಳಲ್ಲಿ ನಮಗೆ ಹೊಳೆಯುವ ಒಂದು ಎಳೆಯನ್ನು ಹಿಡಿದುಕೊಂಡು ನಮ್ಮದೇ ಆದ ಕವಿತೆಯನ್ನು ಬರೆಯಬಹುದು.

AI ಕೊಡುವುದು ಒಂದು ಸಾಧ್ಯತೆ. ಅದನ್ನು ಸಾಹಿತ್ಯವನ್ನಾಗಿ ಪರಿವರ್ತಿಸುವುದು ಲೇಖಕನ ಕೆಲಸ. ಮಳೆಯ ಹನಿಯನ್ನು ಎಐ ವಿವರಿಸಬಹುದು. ಆದರೆ ಆ ಹನಿ ತನ್ನ ಬಾಲ್ಯದ ಮನೆಯ ಹೆಂಚಿನ ಮೇಲೆ ಬಿದ್ದಾಗ ನೆನಪಾಗುವ ಅಜ್ಜಿ ಸುಟ್ಟು ಕೊಟ್ಟ ಹಲಸಿನ ಹಪ್ಪಳ ಮತ್ತು ಚಹಾದ ರುಚಿಯನ್ನು ಕವಿ ಮಾತ್ರ ಬರೆಯಬಲ್ಲ.

ಹೊಸ ತಂತ್ರಜ್ಞಾನ ಬಂದಾಗಲೆಲ್ಲ ಮನುಷ್ಯನಿಗೆ ಎರಡು ಬಗೆಯ ಆತಂಕಗಳು ಶುರುವಾಗುತ್ತವೆ. ಒಂದು, ಇದರಿಂದ ನಮ್ಮ ಬದುಕು ಎಷ್ಟು ಸುಲಭವಾಗಬಹುದು ಎಂಬ ಕುತೂಹಲ. ಇನ್ನೊಂದು, ಇದರಿಂದ ನಮ್ಮ ಬದುಕಿನಲ್ಲಿ ಏನೆಲ್ಲ ಕಳೆದುಹೋಗಬಹುದು ಎಂಬ ಭಯ. ಮುದ್ರಣ ಯಂತ್ರ ಬಂದಾಗಲೂ ಇಂಥದ್ದೇ ಆತಂಕವಿತ್ತು. ಪತ್ರಿಕೆಗಳು ಬಂದಾಗಲೂ ಇತ್ತು. ರೇಡಿಯೊ, ದೂರದರ್ಶನ, ಕಂಪ್ಯೂಟರ್, ಇಂಟರ್‌ನೆಟ್ ಬಂದಾಗಲೂ ಮನುಷ್ಯ ತನ್ನ ಹಳೆಯ ಜಗತ್ತನ್ನು ಕಳೆದುಕೊಳ್ಳುವ ಭಯದಲ್ಲಿದ್ದರು. ಈಗ ಎಐ ಬಂದಿದೆ. ಈ ಸಲದ ಆತಂಕ ಸ್ವಲ್ಪ ಭಿನ್ನವಾಗಿದೆ. ಯಾಕೆಂದರೆ ಇದು ನಮ್ಮ ಕೆಲಸಗಳನ್ನು ಮಾತ್ರ ಸುಲಭಗೊಳಿಸುತ್ತಿಲ್ಲ; ನಮ್ಮ ಪರವಾಗಿ ಯೋಚಿಸುವ, ಬರೆಯುವ, ವಿಶ್ಲೇಷಿಸುವ ಸಾಮರ್ಥ್ಯವನ್ನೂ ಹೊಂದಿದೆ.

ಹಾಗಾದರೆ ಸಾಹಿತ್ಯದ ಭವಿಷ್ಯವೇನು? ಇನ್ನು ಮುಂದೆ ಲೇಖಕರು ಬೇಕಾಗುತ್ತಾರೆಯೇ? ಕವಿಗಳು ಕವಿತೆ ಬರೆಯಬೇಕೇ? ಕಥೆಗಾರರು ಕಥೆ ಹೇಳಬೇಕೇ? ಕಾದಂಬರಿಕಾರರು ಕಾದಂಬರಿ ಬರೆಯಲು ವರ್ಷಗಟ್ಟಲೆ ಕುಳಿತುಕೊಳ್ಳಬೇಕೇ? ಒಂದು ಯಂತ್ರವೇ ಇವೆಲ್ಲವನ್ನೂ ಮಾಡಬಲ್ಲುದಾದರೆ ಮನುಷ್ಯನ ಸೃಜನಶೀಲತೆಗೆ ಉಳಿಯುವ ಜಾಗ ಯಾವುದು?

ಈ ಪ್ರಶ್ನೆಗಳನ್ನು ಕೇಳುವ ಮೊದಲು ನಾವು ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಸಾಹಿತ್ಯ ಎನ್ನುವುದು ಕೇವಲ ಪದಗಳ ಜೋಡಣೆಯಲ್ಲ. ಅದು ಮನುಷ್ಯನ ಅನುಭವ, ನೋವು, ಪ್ರೀತಿ, ಅಸೂಯೆ, ನೆನಪು, ಅಪಮಾನ, ಸಂತೋಷ ಮತ್ತು ಬದುಕಿನ ವಿಚಿತ್ರಗಳ ಅಭಿವ್ಯಕ್ತಿ. ಒಂದು ಘಟನೆ ಇಬ್ಬರು ಮನುಷ್ಯರಿಗೆ ಎರಡು ರೀತಿಯಲ್ಲಿ ಕಾಣಿಸುತ್ತದೆ. ಈ ಶಕ್ತಿ ಎಐಗೆ ಇದೆಯೇ? ಇದೆ ಅಂತಲೇ ಅನ್ನಿಸುತ್ತದೆ. ಎಷ್ಟರ ಮಟ್ಟಿಗಿದೆ ಎಂಬುದು ಈಗಿನ್ನೂ ಅರಿವಿಗೆ ಬರದ ಸಂಗತಿ. ಆದರೆ, ಎಐಗೆ ಮನುಷ್ಯನ ಬರವಣಿಗೆಯನ್ನು ಓದುವ, ಅದರಲ್ಲಿರುವ ದೌರ್ಬಲ್ಯಗಳನ್ನು ಗುರುತಿಸುವ, ಹೊಸ ಸಾಧ್ಯತೆಗಳನ್ನು ಸೂಚಿಸುವ ಸಾಮರ್ಥ್ಯವಿದೆ. ಇಲ್ಲಿಯೇ ಸಾಹಿತ್ಯಕ್ಕೆ AI ಒಂದು ಉಪಯುಕ್ತ ಸಹಾಯಕನಾಗಬಲ್ಲದು.

ಒಬ್ಬ ಲೇಖಕ ತನ್ನ ಕಥೆಯನ್ನು ಬರೆದ ನಂತರ ಅದನ್ನು AI ಮುಂದೆ ಇಡಬಹುದು. ಕಥೆಯಲ್ಲಿ ಓದುಗನ ಆಸಕ್ತಿ ಎಲ್ಲಿ ಕಡಿಮೆಯಾಗಬಹುದು ಎಂದು ಕೇಳಬಹುದು. ಒಂದು ಪಾತ್ರದ ವರ್ತನೆ ಸಹಜವಾಗಿದೆಯೇ ಎಂದು ಪರಿಶೀಲಿಸಬಹುದು. ಕಥೆಗೆ ಇನ್ನೊಂದು ಸಾಧ್ಯವಾದ ಅಂತ್ಯವನ್ನು ಸೂಚಿಸಲು ಹೇಳಬಹುದು. ಒಂದು ವಿಷಯವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಹುದು. ಆದರೆ ಆ ಸಲಹೆಗಳನ್ನು ಹಾಗೆಯೇ ಸ್ವೀಕರಿಸುವ ಅಗತ್ಯವಿಲ್ಲ. ಲೇಖಕನಿಗೆ ಯಾವುದು ಸರಿ ಅನ್ನಿಸುತ್ತದೆಯೋ ಅದನ್ನು ಮಾತ್ರ ತೆಗೆದುಕೊಳ್ಳಬೇಕು. ಯಾಕೆಂದರೆ AI ಕೊಡುವ ಉತ್ತರ ಒಂದು ಸಾಧ್ಯತೆ ಮಾತ್ರ. ಅದೇ ಅನುಭವದಿಂದ ಹುಟ್ಟಿದ ಸತ್ಯವಲ್ಲ.

ಒಬ್ಬ ಲೇಖಕನ ಶೈಲಿ ಒಂದೆರಡು ದಿನಗಳಲ್ಲಿ ರೂಪುಗೊಳ್ಳುವುದಿಲ್ಲ. ಅವನು ಓದಿದ ಪುಸ್ತಕಗಳು, ಕಂಡ ಮನುಷ್ಯರು, ಅನುಭವಿಸಿದ ಅಪಮಾನಗಳು, ಪ್ರೀತಿಸಿದವರು, ಕಳೆದುಕೊಂಡವರು, ಅವನ ಊರಿನ ಭಾಷೆ, ಅವನ ಮನೆಯ ವಾಸನೆ, ಅವನ ನೆನಪುಗಳು ಎಲ್ಲವೂ ಸೇರಿ ಒಂದು ಅವನಿಗೇ ವಿಶಿಷ್ಟವಾದ ಧ್ವನಿಯನ್ನು ರೂಪಿಸುತ್ತವೆ. ಆ ಧ್ವನಿಯೇ ಅವನ ಸಾಹಿತ್ಯದ ಗುರುತು. AI ಯಿಂದ ಬರೆಯಿಸಿಕೊಳ್ಳುವ ಆತುರದಲ್ಲಿ ಆ ಧ್ವನಿಯನ್ನೇ ಕಳೆದುಕೊಂಡರೆ ಉಳಿಯುವುದು ಸುಂದರವಾದ ವಾಕ್ಯಗಳು ಮಾತ್ರ; ಅದು ಆ ಲೇಖಕನ ಬರವಣಿಗೆಯಾಗಿರುವುದಿಲ್ಲ.

AI ಬಹಳ ಸುಂದರವಾಗಿ ಬರೆಯಬಲ್ಲದು. ಆದರೆ ಸುಂದರವಾಗಿ ಬರೆದಿರುವುದೆಲ್ಲ ಒಳ್ಳೆಯ ಸಾಹಿತ್ಯವಾಗಬೇಕಿಲ್ಲ. ಎಐ ಬಹಳ ನಾಜೂಕು ನಾರಿ. ಕುಂವೀ ಅ‍ವರ ಭಾಷೆಯ ಜವಾರಿತನವನ್ನು ಎಐ ತೋರಲಾರದು. ಅದು ಬೈಗಳನ್ನು ನಿರಾಕರಿಸುತ್ತದೆ. ಭಾಷೆಯ ಒರಟುತನವನ್ನು ತೆಗೆದುಹಾಕುತ್ತದೆ. ವಾಕ್ಯಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತದೆ. ಆದರೆ ಕೆಲವು ಬಾರಿ ಸಾಹಿತ್ಯಕ್ಕೆ ಬೇಕಾಗಿರುವುದೇ ಆ ಒರಟುತನ. ಒಂದು ಹಳ್ಳಿಯ ಮನುಷ್ಯ ಮಾತನಾಡುವ ಭಾಷೆಯನ್ನು ನಗರೀಕೃತಗೊಳಿಸಿದರೆ ಆ ಪಾತ್ರವೇ ಸತ್ತುಹೋಗಬಹುದು. ಒಬ್ಬ ವೃದ್ಧನ ಮಾತಿನ ನಡುವೆ ಬರುವ ಮೌನವನ್ನು ಸುಂದರವಾದ ವಾಕ್ಯಗಳಿಂದ ತುಂಬಿಸಿದರೆ ಆ ಮೌನದ ಅರ್ಥವೇ ಕಳೆದುಹೋಗಬಹುದು. ಹೀಗಾಗಿ AI ನಮ್ಮ ಭಾಷೆಯನ್ನು ಸರಿಪಡಿಸುವ ಮೊದಲು ನಮ್ಮ ಭಾಷೆಯ ಸ್ವಭಾವವನ್ನು ಅರ್ಥಮಾಡಿಕೊಳ್ಳಬೇಕು. ಅದನ್ನು ಬಳಸುವ ಲೇಖಕ ತನ್ನ ಭಾಷೆಯ ಸ್ವಭಾವವನ್ನು ಮರೆಯಬಾರದು.

AI ಸಾಹಿತ್ಯದ ಅಧ್ಯಯನಕ್ಕೂ ಹೊಸ ಬಾಗಿಲುಗಳನ್ನು ತೆರೆಯಬಲ್ಲದು. ಒಬ್ಬ ಸಂಶೋಧಕ ಹಳೆಯ ಕಾದಂಬರಿಗಳಲ್ಲಿ ಮಹಿಳಾ ಪಾತ್ರಗಳ ಚಿತ್ರಣವನ್ನು ಹೋಲಿಸಬಹುದು. ಕನ್ನಡದ ವಿವಿಧ ಕಾಲಘಟ್ಟಗಳ ಕವಿತೆಗಳಲ್ಲಿ ಪ್ರಕೃತಿಯ ವರ್ಣನೆ ಹೇಗೆ ಬದಲಾಗಿದೆ ಎಂದು ಪರಿಶೀಲಿಸಬಹುದು. ಒಬ್ಬ ವಿಮರ್ಶಕ ನಿರ್ದಿಷ್ಟ ಲೇಖಕನ ಬರವಣಿಗೆಯಲ್ಲಿರುವ ಪುನರಾವರ್ತಿತ ರೂಪಕಗಳನ್ನು ಗುರುತಿಸಬಹುದು. ಭಾಷಾಂತರಕಾರನಿಗೆ ಒಂದು ಪದದ ವಿವಿಧ ಅರ್ಥಛಾಯೆಗಳನ್ನು ಹುಡುಕಲು ನೆರವಾಗಬಹುದು. ಹೀಗೆ ಸಾಹಿತ್ಯದ ಓದು, ಸಂಶೋಧನೆ, ಸಂಪಾದನೆ ಮತ್ತು ವಿಮರ್ಶೆಗೆ ಹೊಸ ಉಪಕರಣಗಳು ಸಿಗುತ್ತವೆ.

ಆದರೆ ಈ ಉಪಕರಣಗಳ ಮೇಲೆ ಸಂಪೂರ್ಣ ಅವಲಂಬಿತರಾಗುವುದು ಅಪಾಯಕಾರಿ. AI ತಪ್ಪು ಮಾಹಿತಿಯನ್ನೂ ನೀಡಬಹುದು. ಪ್ರಕಟವಾಗದ ಪುಸ್ತಕದ ಬಗ್ಗೆ ಪ್ರಕಟವಾದಂತೆ ಹೇಳಬಹುದು. ಇಲ್ಲದ ಉಲ್ಲೇಖವನ್ನು ಸೃಷ್ಟಿಸಬಹುದು. ಒಂದು ಕವಿತೆಯ ಸಾಲನ್ನು ತಪ್ಪಾಗಿ ಯಾರಿಗಾದರೂ ಆರೋಪಿಸಬಹುದು. ಆದ್ದರಿಂದ ಅದರ ಉತ್ತರಗಳನ್ನು ಪರಿಶೀಲಿಸುವ ಜವಾಬ್ದಾರಿ ಲೇಖಕನದು. ತಂತ್ರಜ್ಞಾನಕ್ಕೆ ಮಾಹಿತಿ ಇರಬಹುದು; ಆದರೆ ಆ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಅಂತಿಮ ವಿವೇಕ ಮನುಷ್ಯನಲ್ಲೇ ಇರಬೇಕು.

ಸಾಹಿತ್ಯದ ಭವಿಷ್ಯದಲ್ಲಿ AI ಒಂದು ದೊಡ್ಡ ಪಾತ್ರ ವಹಿಸಲಿದೆ. ಆದರೆ ಅದು ಲೇಖಕನನ್ನು ಬದಲಿಸುವುದಕ್ಕಿಂತ ಲೇಖಕನ ಕೆಲಸದ ಸ್ವರೂಪವನ್ನು ಬದಲಿಸಬಹುದು. ಹಿಂದೆ ಒಂದು ವಿಷಯದ ಮಾಹಿತಿ ಸಂಗ್ರಹಿಸಲು ದಿನಗಟ್ಟಲೆ ಗ್ರಂಥಾಲಯದಲ್ಲಿ ಕಳೆಯಬೇಕಾಗಿತ್ತು. ಈಗ ಅದನ್ನು ವೇಗವಾಗಿ ಮಾಡಬಹುದು. ಹಿಂದೆ ಒಂದು ಕಥೆಯ ಹಲವು ಸಾಧ್ಯತೆಗಳನ್ನು ಯೋಚಿಸಲು ಒಬ್ಬ ಲೇಖಕ ತನ್ನಷ್ಟಕ್ಕೇ ಹೋರಾಡಬೇಕಾಗಿತ್ತು. ಈಗ ಅವನಿಗೆ ಚರ್ಚಿಸಲು ಒಂದು ಕೃತಕ ಸಹಾಯಕ ಸಿಗುತ್ತಾನೆ. ಹಿಂದೆ ತನ್ನ ಬರವಣಿಗೆಯ ಬಗ್ಗೆ ನಿಷ್ಪಕ್ಷಪಾತವಾದ ಅಭಿಪ್ರಾಯ ಪಡೆಯಲು ಕಷ್ಟವಿತ್ತು. ಈಗ ಪ್ರಾಥಮಿಕ ವಿಶ್ಲೇಷಣೆ ಪಡೆಯಬಹುದು.

AI ಯನ್ನು ಸಾಹಿತ್ಯದಲ್ಲಿ ಬಳಸಬಹುದಾದ ಕೆಲವು ಮುಖ್ಯ ಕ್ಷೇತ್ರಗಳಿವೆ. ಮಾಹಿತಿ ಸಂಗ್ರಹ, ಐತಿಹಾಸಿಕ ಹಿನ್ನೆಲೆಯ ಪರಿಶೀಲನೆ, ಭಾಷಾಂತರದ ಪ್ರಾಥಮಿಕ ಕರಡು, ಬರವಣಿಗೆಯಲ್ಲಿನ ಪುನರಾವರ್ತನೆ ಗುರುತಿಸುವುದು, ಕಥೆಯ ರಚನೆಯ ಬಗ್ಗೆ ಅಭಿಪ್ರಾಯ ಪಡೆಯುವುದು, ಪರ್ಯಾಯ ಶೀರ್ಷಿಕೆಗಳನ್ನು ಹುಡುಕುವುದು, ಸಂಶೋಧನೆಗೆ ಬೇಕಾದ ಪ್ರಶ್ನೆಗಳನ್ನು ರೂಪಿಸುವುದು, ಹಳೆಯ ಕೃತಿಗಳ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು. ಇವೆಲ್ಲವೂ ಲೇಖಕನ ಸಮಯವನ್ನು ಉಳಿಸಬಹುದು. ಆದರೆ ಸಮಯ ಉಳಿಸುವುದೇ ಲೇಖಕನ ಉದ್ದೇಶವಾಗಿದ್ದರೆ, ಆತ ಲೇಖಕನಾಗುವುದು ಸಾಧ್ಯವಿಲ್ಲ.

ಮುಂದಿನ ದಿನಗಳಲ್ಲಿ AI ಬಳಸಿ ಬರೆಯುವವರ ಸಂಖ್ಯೆ ಹೆಚ್ಚಾಗಬಹುದು. AI ಬಳಸಿ ಪುಸ್ತಕಗಳನ್ನು ಸಂಪಾದಿಸುವವರು ಬರಬಹುದು. AI ನೆರವಿನಿಂದ ಅನುವಾದಿಸುವವರು, ಸಂಶೋಧಿಸುವವರು, ವಿಮರ್ಶೆ ಮಾಡುವವರು ಹೆಚ್ಚಾಗಬಹುದು. ಇದರಿಂದ ಸಾಹಿತ್ಯ ಜಗತ್ತು ಕೊನೆಗೊಳ್ಳುವುದಿಲ್ಲ. ಅದರ ವ್ಯಾಪ್ತಿ ವಿಸ್ತರಿಸಬಹುದು. ಆದರೆ ಆ ವಿಸ್ತರಣೆಯ ನಡುವೆ ಮನುಷ್ಯನ ವೈಯಕ್ತಿಕ ಧ್ವನಿ ಕಳೆದುಹೋಗದಂತೆ ನೋಡಿಕೊಳ್ಳಬೇಕು.

ಕೊನೆಗೂ ಒಂದು ಮಾತು. ಲೇಖಕನಿಗೆ ಕೃತಕ ಬುದ್ಧಿಮತ್ತೆ ಬೇಕೇ ಬೇಡವೇ ಎಂಬುದಕ್ಕಿಂತ ಅದನ್ನು ಹೇಗೆ ಬಳಸುತ್ತಾನೆ ಎಂಬುದು ಮುಖ್ಯ. ಲೇಖಕನನ್ನು ಆಲಸ್ಯಗೊಳಿಸುವ ಸಾಧನವಾಗಿಯೂ ಅದು ಬಳಕೆಯಾಗಬಹುದು. ಲೇಖಕನನ್ನು ಹೆಚ್ಚು ಕುತೂಹಲಿಯಾಗಿಸುವ ಸಾಧನವಾಗಿಯೂ ಬಳಕೆಯಾಗಬಹುದು. ತನ್ನ ಪರವಾಗಿ ಬರೆಯಲು ಅದನ್ನು ಕೇಳುವವನು ಒಂದು ದಿನ ತನ್ನ ಬರವಣಿಗೆಯನ್ನೇ ಕಳೆದುಕೊಳ್ಳಬಹುದು. ತನ್ನ ಬರವಣಿಗೆಯನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಅದನ್ನು ಬಳಸುವವನು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು. ಯಂತ್ರಕ್ಕೆ ಬುದ್ಧಿಮತ್ತೆ ಇರಬಹುದು. ಆದರೆ ಬದುಕಿನ ಬಗ್ಗೆ ಕಾಳಜಿ ಇರಬೇಕಾದದ್ದು ಮನುಷ್ಯನಿಗೆ. ಸಾಹಿತ್ಯವನ್ನು ಜೀವಂತವಾಗಿಡುವುದು ಆ ಕಾಳಜಿಯೇ.

ನಿಮ್ಮ ಕಥೆಯನ್ನು ಎಐಗೆ ಯಾಕೆ ಕೊಡಬೇಕು?

ಎಐ ಈ ಕೆಳಗಿನ ಸಂಗತಿಗಳತ್ತ ನಿಮ್ಮ ಗಮನ ಸೆಳೆಯಬಹುದು.

1. ಈ ಕಥೆಯಲ್ಲಿ ಓದುಗನ ಆಸಕ್ತಿ ಕಡಿಮೆಯಾಗುವ ಜಾಗ ಯಾವುದು?

2. ಪಾತ್ರಗಳ ವರ್ತನೆ ಮತ್ತು ಸಂಭಾಷಣೆ ಸಹಜವಾಗಿದೆಯೇ?

3. ಕಥೆಯಲ್ಲಿ ಅನಗತ್ಯವಾಗಿ ಪುನರಾವರ್ತನೆಯಾಗಿರುವ ಸಂಗತಿಗಳಿವೆಯೇ?

4. ನಾನು ಗಮನಿಸದೇ ಬಿಟ್ಟಿರುವ ಬೇರೆ ಅರ್ಥ ಅಥವಾ ಒಳನೋಟ ಇದೆಯೇ?

5. ಈ ಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಯಾವ ಬದಲಾವಣೆಗಳನ್ನು ಪರಿಗಣಿಸಬಹುದು?

ಈ ಪ್ರಶ್ನೆಗಳಿಗೆ ಬಂದ ಉತ್ತರಗಳನ್ನು ಸೂಚನೆಗಳಾಗಿ ನೋಡಬೇಕು; ಆದೇಶಗಳಾಗಿ ಅಲ್ಲ. ಲೇಖಕನಿಗೆ ಒಪ್ಪಿಗೆಯಾಗದ ಸಲಹೆಯನ್ನು ನಿರಾಕರಿಸುವ ಸ್ವಾತಂತ್ರ್ಯ ಸದಾ ಇರಬೇಕು.

ಲೇಖಕನ ಶೈಲಿ ಉಳಿಯಬೇಕಾದರೆ...

- ಮೊದಲ ಕರಡನ್ನು ಸಾಧ್ಯವಾದಷ್ಟು ನೀವೇ ಬರೆಯಿರಿ. ನಿಮ್ಮ ಅನುಭವ ಮತ್ತು ಭಾಷೆಯೇ ಬರವಣಿಗೆಯ ಜೀವ.

- ಮಾಹಿತಿಯನ್ನು ಸಂಗ್ರಹಿಸಲು, ಉಲ್ಲೇಖಗಳನ್ನು ಪರಿಶೀಲಿಸಲು AI ಬಳಸಿ.

- ಕಥೆಯ ರಚನೆ, ಪಾತ್ರಗಳ ಬೆಳವಣಿಗೆ, ಭಾಷೆಯ ಪುನರಾವರ್ತನೆ ಕುರಿತು ಅಭಿಪ್ರಾಯ ಕೇಳಿ.

- ನಿಮ್ಮ ಬರವಣಿಗೆಯನ್ನು ಸಂಪೂರ್ಣವಾಗಿ AI ಭಾಷೆಗೆ ಪರಿವರ್ತಿಸಲು ಬಿಡಬೇಡಿ.

- ನಿಮ್ಮ ಅನುಭವಕ್ಕೆ ವಿರುದ್ಧವಾದ ಸಲಹೆಗಳನ್ನು ಸ್ವೀಕರಿಸಬೇಡಿ.

- AI ಕೊಟ್ಟ ಮಾಹಿತಿಯನ್ನು ಸ್ವತಂತ್ರವಾಗಿ ಪರಿಶೀಲಿಸಿ.

- ಅಂತಿಮ ಬರವಣಿಗೆಗೆ ನೀವೇ ಜವಾಬ್ದಾರರಾಗಿರಿ.

ನೆನಪಿರಲಿ: AI ನಿಮ್ಮ ಪರವಾಗಿ ಬರೆಯಬಹುದು. ಆದರೆ ನಿಮ್ಮ ಪರವಾಗಿ ಬದುಕಲು ಸಾಧ್ಯವಿಲ್ಲ. ಸಾಹಿತ್ಯಕ್ಕೆ ಬೇಕಾಗಿರುವುದು ಬದುಕಿದ ಮನುಷ್ಯನ ಅನನ್ಯ ಅನುಭವವೇ.

PREV
Read more Articles on
click me!

Recommended Stories

ಮನುಷ್ಯನಿಗೆ ಮನುಷ್ಯನ ಸಾಮೀಪ್ಯ ಬೇಕಾಗಿದೆ: ನಗರಗಳಲ್ಲಿ ಶುರುವಾಗಿದೆ ವಿಚಿತ್ರ ಟ್ರೆಂಡ್!
ಕೇವಲ 7 ವರ್ಷ, ಮೂರು ತಿಂಗಳು, ಆರು ಕಥೆಗಳು; ಈ ಪುಟ್ಟ ಬಾಲಕಿಯ ಸಾಧನೆ ಏನು ಗೊತ್ತಾ?