
ಏಳು ಕೋಟಿ ಕನ್ನಡಿಗರ ಓದು ಸಂಸ್ಕೃತಿಯ ಪ್ರಾತಿನಿಧಿಕ ಸಂಸ್ಥೆ ಆಡಳಿತಾತ್ಮಕ ಅರಾಜಕತೆ, ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆಯ ಕೊರತೆಯಿಂದ ಮೂಲ ಆಶಯದಿಂದಲೇ ದೂರ ಸರಿಯುತ್ತಿದೆ. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ಆಯುಕ್ತಾಲಯವನ್ನಾಗಿ ಮೇಲ್ದರ್ಜೆಗೇರಿಸಿದಾಗ ಓದುಗರು, ಲೇಖಕರು, ಪ್ರಕಾಶಕರು ಮತ್ತು ಗ್ರಂಥಪಾಲಕರು ಹೊಸ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆಡಳಿತ ಸುಧಾರಣೆ, ಗ್ರಂಥಾಲಯಗಳ ಅಭಿವೃದ್ಧಿ, ಪುಸ್ತಕ ಖರೀದಿಗೆ ವೇಗ, ಸಿಬ್ಬಂದಿ ನೇಮಕಾತಿ ಮತ್ತು ಓದು ಸಂಸ್ಕೃತಿಯ ವಿಸ್ತರಣೆಗೆ ಹೊಸ ಆಯಾಮ ಸಿಗಬಹುದು ಎಂದು ಭಾವಿಸಿದ್ದರು. ಆದರೆ ಹೆಸರಿನ ಬದಲಾವಣೆಯ ಹೊರತಾಗಿ ಗ್ರಂಥಾಲಯಗಳ ಸ್ಥಿತಿಗತಿಯಲ್ಲಿ ನಿರೀಕ್ಷಿತ ಬದಲಾವಣೆ ಕಾಣುತ್ತಿಲ್ಲ.
ಇಲಾಖೆಯ ನಿರ್ದೇಶಕರ ಹುದ್ದೆಯೇ ದೀರ್ಘಕಾಲದಿಂದ ಖಾಲಿ ಉಳಿದಿರುವುದು ಆಡಳಿತದ ಗಂಭೀರತೆಯನ್ನು ಪ್ರಶ್ನಿಸುವಂತಿದೆ. ಪುಸ್ತಕ, ಸಾಹಿತ್ಯ, ಗ್ರಂಥಾಲಯ ಮತ್ತು ಓದು ಸಂಸ್ಕೃತಿಯ ಬಗ್ಗೆ ತಿಳಿವಳಿಕೆಯುಳ್ಳ ಸಮರ್ಥ ಅಧಿಕಾರಿಯನ್ನು ನೇಮಿಸಬೇಕು. ಕೆಲವು ಹಿರಿಯ ಅಧಿಕಾರಿಗಳು ವರ್ಷಗಟ್ಟಲೆ ಒಂದೇ ಸ್ಥಾನದಲ್ಲಿ ಮುಂದುವರಿಯುತ್ತಿರುವುದು, ಅವರ ಕಾರ್ಯವೈಖರಿಯ ಬಗ್ಗೆ ದೂರುಗಳಿದ್ದರೂ, ಅಧಿವೇಶನದಲ್ಲಿ ಚರ್ಚೆಗಳಾದರೂ ಸೂಕ್ತ ಪರಿಶೀಲನೆ ನಡೆಯದಿರುವುದು ಇಲಾಖೆಯ ಹೊಣೆಗಾರಿಕೆಯ ಕೊರತೆಯನ್ನು ತೋರಿಸುತ್ತದೆ. ಅಧಿಕಾರಿಗಳು ಪ್ರಶ್ನಾತೀತರಲ್ಲ; ಅವರ ಕಾರ್ಯವೈಖರಿಯ ಮೌಲ್ಯಮಾಪನ, ನಿಯಮಾನುಸಾರ ವರ್ಗಾವಣೆ ಮತ್ತು ಜವಾಬ್ದಾರಿಗಳ ಮರುಹಂಚಿಕೆ ಅಗತ್ಯ.
ಅಧಿಕಾರಿಗಳ ಕಾರ್ಯವೈಖರಿಗೆ ತನಿಖೆ ಅಗತ್ಯ
ಇಲಾಖೆಯ ಟೆಂಡರ್, ಗುತ್ತಿಗೆ, ಪೂರೈಕೆ, ಮುದ್ರಣ, ಪೀಠೋಪಕರಣ, ವಿದ್ಯುತ್ ಉಪಕರಣ, ಕಟ್ಟಡ ದುರಸ್ತಿ ಮತ್ತು ಕಚೇರಿ ಖರೀದಿಗಳಲ್ಲಿ ಪಾರದರ್ಶಕತೆ ಇರಬೇಕು. ಕೆಲವು ಅಧಿಕಾರಿಗಳು ತಮ್ಮ ಅಧೀನದ ಗುತ್ತಿಗೆ ನೌಕರರು, ಕುಟುಂಬದವರು ಅಥವಾ ಇತರರ ಹೆಸರಿನಲ್ಲಿ ಪರೋಕ್ಷ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪಗಳಿವೆ. ಅಗತ್ಯವಿಲ್ಲದ ಪೀಠೋಪಕರಣ ಬದಲಾವಣೆ, ಸಿಂಗಲ್ ಟೆಂಡರ್ಗಳಿಗೆ ಆದ್ಯತೆ ನೀಡುವಂತಹ ವಿಷಯಗಳ ಬಗ್ಗೆಯೂ ದೂರುಗಳಿವೆ. ಸಿಬ್ಬಂದಿಯ ಮೇಲೆ ಅಧಿಕಾರ ದುರುಪಯೋಗ ಮತ್ತು ಲೈಂಗಿಕ ಕಿರುಕುಳದಂತಹ ಆರೋಪಗಳೂ ಹೆಚ್ಚಾಗಿ ಕೇಳಿಬಂದಿವೆ. ಇವೆಲ್ಲವೂ ಕೇವಲ ಆರೋಪಗಳಾಗಿಯೇ ಉಳಿಯದೆ ಸ್ವತಂತ್ರ ಉನ್ನತಮಟ್ಟದ ತನಿಖೆಯ ಮೂಲಕ ಸತ್ಯಾಸತ್ಯತೆ ಹೊರಬರಬೇಕು. ಯಾವುದೇ ಅಧಿಕಾರಿಯ ವಿರುದ್ಧದ ದೂರುಗಳನ್ನು ಪೂರ್ವಗ್ರಹವಿಲ್ಲದೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಪುಸ್ತಕ ಖರೀದಿಯ ಅನಿಶ್ಚಿತತೆ; ಪ್ರಕಾಶಕರ ಬದುಕಿಗೆ ಸಂಕಷ್ಟ
ಹಲವು ಪುಸ್ತಕ ಖರೀದಿ ಯೋಜನೆಗಳು ಸ್ಥಗಿತಗೊಂಡಿರುವುದರಿಂದ ಪ್ರಕಾಶನ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆಯ್ಕೆಯಾದ ಪುಸ್ತಕಗಳನ್ನು ಪೂರೈಸಿದ ಪ್ರಕಾಶಕರು ವರ್ಷಗಳಾದರೂ ತಮ್ಮ ಮೂಲ ಬಂಡವಾಳವನ್ನೇ ಮರಳಿ ಪಡೆಯಲಾಗದೆ ಕಾಯುತ್ತಿದ್ದಾರೆ. ಪುಸ್ತಕಗಳ ಪೂರೈಕೆಗೆ ಅಡ್ಡಿಗಳು, ಪಾವತಿ ವಿಳಂಬ, ಪುಟದ ಆಧಾರದ ಮೇಲಿನ ಕಡಿತ ಮತ್ತು ವೈಜ್ಞಾನಿಕವಲ್ಲದ ಬೆಲೆ ನಿಗದಿ ಅವರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿವೆ.
ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪ್ರಕಾಶಕರು ಮತ್ತು ಲೇಖಕರ ವಿರುದ್ಧ ವಿಚಾರಣೆ, ನಿರ್ಬಂಧ ಹಾಗೂ ಕಿರುಕುಳದ ದೂರುಗಳು ಕೇಳಿಬಂದಿವೆ. ಇಂತಹ ದೂರುಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಪ್ರಕಾಶಕರು ಇಲಾಖೆಯ ವಿರೋಧಿಗಳಲ್ಲ; ಪುಸ್ತಕಗಳನ್ನು ಓದುಗರಿಗೆ ತಲುಪಿಸುವ ಪ್ರಕ್ರಿಯೆಯ ಪಾಲುದಾರರು. ಆಯ್ಕೆಯಾದ ಎಲ್ಲ ಪುಸ್ತಕಗಳ ಪೂರೈಕೆಗೆ ಸಮಾನ ಅವಕಾಶ ಕಲ್ಪಿಸಿ, ಬಾಕಿ ಪಾವತಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.
ಪುಸ್ತಕ ಮಾರುಕಟ್ಟೆಯ ವಾಸ್ತವವನ್ನೂ ಇಲಾಖೆ ಅರ್ಥಮಾಡಿಕೊಳ್ಳಬೇಕು. ಎಲ್ಲ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಸಮಾನವಾಗಿ ಮಾರಾಟವಾಗುವುದಿಲ್ಲ. ಸಾಹಿತ್ಯ, ಸಂಶೋಧನೆ, ವಿಮರ್ಶೆ, ನಾಟಕ, ಕಾವ್ಯ ಮತ್ತು ಅನುವಾದ ಸೇರಿದಂತೆ ಅನೇಕ ಮಹತ್ವದ ಕೃತಿಗಳಿಗೆ ಸಾರ್ವಜನಿಕ ಗ್ರಂಥಾಲಯಗಳೇ ಓದುಗರನ್ನು ತಲುಪುವ ಪ್ರಮುಖ ಮಾರುಕಟ್ಟೆಯಾಗಿವೆ. ಗ್ರಂಥಾಲಯಗಳ ಪುಸ್ತಕ ಖರೀದಿ ಕುಸಿದಾಗ ಪ್ರಕಾಶಕರ ಬಳಿ ಪುಸ್ತಕಗಳು ಮಾರಾಟವಾಗದೆ ಉಳಿಯುತ್ತವೆ. ಇದರಿಂದ ಪ್ರಕಾಶಕರು ತಮ್ಮ ಪುಸ್ತಕಗಳನ್ನು ಹೇಗಾದರೂ ಗ್ರಂಥಾಲಯಗಳ ಮೂಲಕ ಓದುಗರಿಗೆ ತಲುಪಿಸಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ. ಇಂತಹ ಅನಾರೋಗ್ಯಕರ ಪರಿಸ್ಥಿತಿ ಮಧ್ಯವರ್ತಿಗಳು ಮತ್ತು ಅನಧಿಕೃತ ಮಾರ್ಗಗಳಿಗೆ ಅವಕಾಶ ಕಲ್ಪಿಸುವ ಅಪಾಯವಿದೆ. ಇದಕ್ಕೆ ಪ್ರಕಾಶಕರನ್ನು ಹೊಣೆ ಮಾಡುವ ಬದಲು, ಪಾರದರ್ಶಕ, ನ್ಯಾಯಸಮ್ಮತ ಮತ್ತು ನಿಯಮಬದ್ಧ ಪುಸ್ತಕ ಖರೀದಿ ವ್ಯವಸ್ಥೆಯನ್ನು ಬಲಪಡಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ.
ರಾಜ್ಯಮಟ್ಟದ ತಜ್ಞರ ಸಮಿತಿಗಳು ಪುಸ್ತಕಗಳನ್ನು ಆಯ್ಕೆ ಮಾಡಿದರೂ ಕೆಲವು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ ಸ್ಥಳೀಯ ಅಧಿಕಾರಿಗಳೇ ತಮಗೆ ಬೇಕಾದವರ ಪುಸ್ತಕಗಳನ್ನು ಖರೀದಿಸುತ್ತಾರೆ ಎಂಬ ದೂರುಗಳಿವೆ. ನಾಟಕ, ಕವಿತೆ, ಕಾದಂಬರಿಗಳಂತಹ ಸಾಹಿತ್ಯ ಪ್ರಕಾರಗಳ ನಿರ್ಲಕ್ಷ್ಯ, ಸಣ್ಣ ಮತ್ತು ಮಧ್ಯಮ ಪ್ರಕಾಶಕರಿಗೆ ಅವಕಾಶದ ಕೊರತೆ ಹಾಗೂ ಪ್ರಭಾವ ಹೊಂದಿರುವ ಪ್ರಕಾಶಕರ ಪುಸ್ತಕಗಳಿಗೆ ಆದ್ಯತೆ ನೀಡುವ ಆರೋಪಗಳೂ ಇವೆ. ಪುಸ್ತಕಗಳ ಆಯ್ಕೆ, ಖರೀದಿ ಮತ್ತು ಪೂರೈಕೆಯಲ್ಲಿ ರಾಜ್ಯಮಟ್ಟದ ಆಯ್ಕೆ ಸಮಿತಿಯ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಲ್ಲ ಲೇಖಕ-ಪ್ರಕಾಶಕರಿಗೂ ಸಮಾನ ಅವಕಾಶ ಕಲ್ಪಿಸುವ ಮಾರ್ಗಸೂಚಿ ರೂಪಿಸಬೇಕು. 2021ರ ಪುಸ್ತಕ ಖರೀದಿಯ ಬಾಕಿ ಹಣವನ್ನು ಪ್ರಕಾಶಕರಿಗೆ ಪಾವತಿಸಲಿ. ಇಷ್ಟು ವರ್ಷಗಳ ಕಾಲ ಪ್ರಕಾಶಕರನ್ನು ಕಾಯಿಸುವುದೇ ಆಡಳಿತದ ಸಾಧನೆಯೇ?
ಗ್ರಂಥಾಲಯ ಸೆಸ್ ಎಲ್ಲಿಗೆ ಹೋಗುತ್ತಿದೆ?
ಸ್ಥಳೀಯ ಸಂಸ್ಥೆಗಳ ಮೂಲಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ಸೆಸ್ ಸಂಗ್ರಹಿಸಲಾಗುತ್ತದೆ. ಆದರೆ ಈ ಹಣದ ಹಂಚಿಕೆ, ಬಳಕೆ ಮತ್ತು ಖರ್ಚಿನ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಪುಸ್ತಕ ಖರೀದಿ ಮತ್ತು ಪ್ರಕಾಶಕರ ಬಾಕಿ ಪಾವತಿಗೆ ಹಣವಿಲ್ಲ ಎಂಬ ಉತ್ತರಗಳು ಕೇಳಿಬರುತ್ತಿರುವಾಗ, ಪ್ರತಿವರ್ಷ ಸಂಗ್ರಹವಾಗುವ ಸೆಸ್ ಹಣದ ಲೆಕ್ಕವನ್ನು ಬಹಿರಂಗಪಡಿಸುವುದು ಸರ್ಕಾರದ ಕರ್ತವ್ಯ. ಬೆಂಗಳೂರಿನ ಐದು ವಲಯಗಳಲ್ಲಿ ಹಿಂದೆ ನೂರು ಪ್ರತಿಗಳಂತೆ ಖರೀದಿಯಾಗುತ್ತಿದ್ದ ಪುಸ್ತಕಗಳ ಪ್ರಮಾಣ ಐವತ್ತಕ್ಕೆ ಇಳಿದಿದೆ. ಹಿಂದೆ ಗ್ರಂಥಾಲಯಗಳ ಖರೀದಿಯ ನಿರೀಕ್ಷೆಯಲ್ಲಿ ಪ್ರಕಾಶಕರು ಸಾವಿರ ಪ್ರತಿಗಳವರೆಗೆ ಮುದ್ರಿಸುತ್ತಿದ್ದರು. ಈಗ ಖರೀದಿ ಪ್ರಮಾಣ ಕುಸಿದಿರುವುದರಿಂದ ಪ್ರಕಾಶನ ಕ್ಷೇತ್ರದ ಆರ್ಥಿಕ ಚಟುವಟಿಕೆಯೇ ಕುಂಠಿತವಾಗಿದೆ. ಗ್ರಂಥಾಲಯಗಳ ಹೆಸರಿನಲ್ಲಿ ಸಂಗ್ರಹವಾಗುವ ಹಣ ಅವುಗಳ ಅಭಿವೃದ್ಧಿಗೇ ಬಳಕೆಯಾಗಬೇಕು.
ಪಾರಂಪರಿಕ ಕಟ್ಟಡಗಳು, ಅಮೂಲ್ಯ ನಿವೇಶನಗಳು ನಿರ್ಲಕ್ಷ್ಯಕ್ಕೆ?
ನಮ್ಮ ಹಿಂದಿನವರು ಓದಿನ ಮಹತ್ವವನ್ನರಿತು ರಾಜ್ಯದ ವಿವಿಧೆಡೆ, ಅದರಲ್ಲೂ ಬೆಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ ಗ್ರಂಥಾಲಯಗಳ ಕಟ್ಟಡಗಳನ್ನು ನಿರ್ಮಿಸಿ, ಇಲಾಖೆಗೆ ಅಮೂಲ್ಯ ಜಾಗಗಳನ್ನು ಉಳಿಸಿಹೋಗಿದ್ದಾರೆ. ಕೆಲವು ಕಟ್ಟಡಗಳು ಪಾರಂಪರಿಕ ಮಹತ್ವವನ್ನೂ ಹೊಂದಿವೆ. ಆದರೆ ಇಂದು ಅಧಿಕಾರಿಗಳ ದುಂಡಾವರ್ತನೆ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಗ್ರಂಥಾಲಯಗಳು ಹಾಳು ಕೊಂಪೆಗಳಾಗುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಹಲವು ಪ್ರಮುಖ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣವಾಗದೆ ನಿವೇಶನಗಳು ಖಾಲಿಯಾಗಿಯೇ ಉಳಿದಿವೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದರೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮೂಲಸೌಕರ್ಯ ಮತ್ತು ಸೇವಾ ವ್ಯಾಪ್ತಿ ಅದಕ್ಕೆ ತಕ್ಕಂತೆ ವಿಸ್ತರಣೆಯಾಗಿಲ್ಲ. ಹೊಸ ಬಡಾವಣೆಗಳು, ಜನವಸತಿ ಪ್ರದೇಶಗಳು ಮತ್ತು ವಿಸ್ತರಿಸುತ್ತಿರುವ ನಗರ ಭಾಗಗಳಿಗೆ ಅಗತ್ಯವಾದ ಗ್ರಂಥಾಲಯ ಸೌಲಭ್ಯ ಕಲ್ಪಿಸುವಲ್ಲಿ ಇಲಾಖೆ ಹಿಂದೆ ಬಿದ್ದಿದೆ. ಒಂದೆಡೆ ಅಮೂಲ್ಯ ನಿವೇಶನಗಳು ಬಳಕೆಯಾಗದೆ ಉಳಿದಿದ್ದರೆ, ಮತ್ತೊಂದೆಡೆ ಓದುಗರಿಗೆ ಅಗತ್ಯವಾದ ಗ್ರಂಥಾಲಯ ಕಟ್ಟಡಗಳ ಕೊರತೆಯಿದೆ. ಇದು ಯೋಜನಾರಹಿತ ಆಡಳಿತಕ್ಕೆ ಸಾಕ್ಷಿಯಾಗಿದೆ.
ಈ ಕಟ್ಟಡಗಳು ಮತ್ತು ನಿವೇಶನಗಳನ್ನು ಸಂರಕ್ಷಿಸಿ, ಅವುಗಳ ಸಮರ್ಪಕ ಬಳಕೆಗೆ ಯೋಜನೆ ರೂಪಿಸಬೇಕು. ಪಾರಂಪರಿಕ ಕಟ್ಟಡಗಳನ್ನು ಉಳಿಸುವುದರ ಜೊತೆಗೆ ಇಲಾಖೆಗೆ ಸೇರಿರುವ ಖಾಲಿ ನಿವೇಶನಗಳಲ್ಲಿ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಬೇಕು. ಇಲಾಖೆಯ ಎಲ್ಲ ಆಸ್ತಿಗಳ ಸಮಗ್ರ ಪಟ್ಟಿ, ಅವುಗಳ ಪ್ರಸ್ತುತ ಸ್ಥಿತಿ ಮತ್ತು ಬಳಕೆಯ ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ಆಸ್ತಿಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕು.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಮರಳಿ ಇಲಾಖೆಯ ವ್ಯಾಪ್ತಿಗೆ ಬರಲಿ
ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬೇರ್ಪಟ್ಟು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ವರ್ಗಾಯಿಸಲ್ಪಟ್ಟಿರುವ 5,766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಮತ್ತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಗೆ ತರಬೇಕು. ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಇಲಾಖೆಯ ಅಂಚಿನ ಘಟಕಗಳಲ್ಲ; ಅವು ಇಲಾಖೆಯ ಹೃದಯವಿದ್ದಂತೆ. ಹಳ್ಳಿಗಳಲ್ಲಿ ವಿದ್ಯಾರ್ಥಿಗಳು, ರೈತರು, ಮಹಿಳೆಯರು ಮತ್ತು ಸಾಮಾನ್ಯ ಜನರಿಗೆ ಜ್ಞಾನ ತಲುಪಿಸುವ ಪ್ರಮುಖ ಕೇಂದ್ರಗಳಿವು. ಅಗತ್ಯ ಸಿಬ್ಬಂದಿ, ಪುಸ್ತಕ, ಮೂಲಸೌಕರ್ಯ ಮತ್ತು ನಿರ್ವಹಣೆಯ ವ್ಯವಸ್ಥೆ ಕಲ್ಪಿಸಿ, ಇಲಾಖೆಯೊಂದಿಗೆ ಮರುಸಂಯೋಜಿಸಬೇಕು.
ಪುಸ್ತಕಗಳ ಸಂಗ್ರಹ, ಆಯ್ಕೆ, ಖರೀದಿ ಮತ್ತು ಓದು ಸಂಸ್ಕೃತಿಯ ಬೆಳವಣಿಗೆಗೆಂದೇ ಮೀಸಲಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇರುವಾಗ, ಪುಸ್ತಕಗಳಿಗೆ ಕೊನೆಯ ಆದ್ಯತೆ ನೀಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಗ್ರಂಥಾಲಯಗಳನ್ನು ವರ್ಗಾಯಿಸಿರುವುದು ವಿಪರ್ಯಾಸವಲ್ಲದೆ ಮತ್ತೇನು? ಗ್ರಂಥಾಲಯಗಳ ನಿರ್ವಹಣೆ ಅವುಗಳ ಮೂಲ ಆಶಯವಾದ ಪುಸ್ತಕ ಮತ್ತು ಓದು ಸಂಸ್ಕೃತಿಗೆ ಆದ್ಯತೆ ನೀಡುವ ಇಲಾಖೆಯ ಅಡಿಯಲ್ಲಿಯೇ ಇರಬೇಕು.
ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸ್ವತಂತ್ರ ಉನ್ನತಮಟ್ಟದ ತನಿಖೆ ನಡೆಸಬೇಕು. ಆಯುಕ್ತರು ಮತ್ತು ನಿರ್ದೇಶಕರ ಹುದ್ದೆಗೆ ಸಮರ್ಥರನ್ನು ನೇಮಿಸಿ, ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ಆಯುಕ್ತರ ಅಧಿಕಾರ ವ್ಯಾಪ್ತಿಯನ್ನು ಹಿಗ್ಗಿಸಿ, ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ನಿವಾರಿಸಬೇಕು. ಪುಸ್ತಕಗಳ ಆಯ್ಕೆ, ಖರೀದಿ, ಬಜೆಟ್ ಅನುಮೋದನೆ, ಬೆಲೆ ನಿಗದಿ, ಪೂರೈಕೆ ಮತ್ತು ಪ್ರಕಾಶಕರಿಗೆ ಪಾವತಿಸುವ ಪ್ರಕ್ರಿಯೆಗೆ ಕಾಲಮಿತಿಯ ಪಾರದರ್ಶಕ ವ್ಯವಸ್ಥೆ ರೂಪಿಸಬೇಕು. ಗ್ರಂಥಾಲಯ ಸೆಸ್ನ ಸಂಗ್ರಹ ಮತ್ತು ವೆಚ್ಚದ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸಬೇಕು. ಇಲಾಖೆಯ ಆಸ್ತಿಗಳ ಸಮಗ್ರ ಸಮೀಕ್ಷೆ ನಡೆಸಿ ಅವುಗಳ ಸಂರಕ್ಷಣೆ ಮತ್ತು ಸದ್ಬಳಕೆಗೆ ಕ್ರಮ ಕೈಗೊಳ್ಳಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಪುಸ್ತಕ ನೀತಿಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು. ಲೇಖಕರು, ಪ್ರಕಾಶಕರು, ಗ್ರಂಥಪಾಲಕರು, ವಿಷಯತಜ್ಞರು ಮತ್ತು ಓದುಗರ ಪ್ರಾತಿನಿಧ್ಯವಿರುವ ಸಮಗ್ರ ವ್ಯವಸ್ಥೆಯನ್ನು ರೂಪಿಸಿ, ಪುಸ್ತಕ ನೀತಿ ಕೇವಲ ಕಡತದಲ್ಲಿರುವ ದಾಖಲೆಯಾಗದೆ ಕಾರ್ಯರೂಪಕ್ಕೆ ಬರಬೇಕು. ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ; ಓದುಗರಿಗೆ ಪುಸ್ತಕಗಳನ್ನು ತಲುಪಿಸುವುದು, ಲೇಖಕರ ಸೃಜನಶೀಲತೆಗೆ ಗೌರವ ನೀಡುವುದು, ಪ್ರಕಾಶನ ಕ್ಷೇತ್ರವನ್ನು ಉಳಿಸುವುದು ಮತ್ತು ಜ್ಞಾನಾಧಾರಿತ ಸಮಾಜವನ್ನು ರೂಪಿಸುವುದಾಗಿದೆ. ಆಯುಕ್ತಾಲಯದ ಹೆಸರಿನ ಬದಲಾವಣೆ ಮಾತ್ರ ಆಡಳಿತ ಸುಧಾರಣೆಯಲ್ಲ. ಇಲಾಖೆಯ ಕಾರ್ಯವೈಖರಿ, ಸಾರ್ವಜನಿಕ ಸೇವೆ ಮತ್ತು ಗ್ರಂಥಾಲಯಗಳ ನೈಜ ಸ್ಥಿತಿಯಲ್ಲಿ ಬದಲಾವಣೆ ಕಾಣಬೇಕು. ಆಯುಕ್ತಾಲಯವಾಯಿತು; ಇನ್ನು ಗ್ರಂಥಾಲಯಗಳ ಸ್ಥಿತಿಯೂ ಬದಲಾಗಲಿ.