
ವೋಯೇಜರ್ ನೌಕೆಯು ಕೇವಲ ಒಂದು ಬೆಳಕಿನ ದಿನದಷ್ಟು ದೂರ ಸಾಗಿದ್ದಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಸಂಭ್ರಮವಾಯಿತು. ಕಾರಣ, ಬೆಳಕಿನ ದಿನವೆಂದರೆ ಬೆಳಕಿಗೆ ಕೇವಲ ಒಂದು ದಿನದಲ್ಲಿ ಕ್ರಮಿಸಲು ಸಾಧ್ಯವಾಗುವ ದೂರ. ಆದರೆ ಈ ಪುಟ್ಟ ನೌಕೆಗೆ ಅಷ್ಟೇ ದೂರ ಕ್ರಮಿಸಲು ಸುಮಾರು ಅರ್ಧ ಶತಮಾನವೇ ಬೇಕಾಯಿತು. ಅದೂ ಗಂಟೆಗೆ ಅರವತ್ತೊಂದು ಸಾವಿರದ ನೂರಾ ಐವತ್ತೈದು ಕಿಲೋಮೀಟರ್ ವೇಗದಲ್ಲಿ ಸಾಗಿಯೂ ಕೂಡ! ಈ ಸಾಧನೆಗೆ ಸಂಭ್ರಮಪಡಬೇಕಾದದ್ದೇ.
1977ರಲ್ಲಿ ಭೂಮಿಯಿಂದ ಹೊರಟ ಇದು, ಮಾನವ ನಿರ್ಮಿತ ವಸ್ತುಗಳಲ್ಲೇ ಅತಿ ದೂರ ಸಾಗಿರುವ ನೌಕೆ. ಮನುಷ್ಯ ನಿರ್ಮಿತ ವಸ್ತುವೊಂದು ಸೌರಮಂಡಲದ ಗಡಿಯನ್ನು ದಾಟಿ ಅಂತರತಾರಾ ವಲಯವನ್ನು ಪ್ರವೇಶಿಸಿರುವುದೇ ಅಚ್ಚರಿ. ಅಲ್ಲಿಂದಲೂ ಮನುಷ್ಯನ ಸೂಚನೆಗಳಿಗೆ ಕಿವಿಗೊಡುತ್ತಿರುವುದು ಮತ್ತೊಂದು ಅಚ್ಚರಿ. ಗುರು, ಶನಿ ಗ್ರಹಗಳನ್ನು ಹಿಂದೆಂದೂ ಕಾಣದಷ್ಟು ಸ್ಪಷ್ಟವಾಗಿ ತೋರಿಸಿದ್ದು ಇನ್ನೊಂದು ಅಚ್ಚರಿ. ಹೀಗೆ ಅಚ್ಚರಿಗಳನ್ನು ಹುಟ್ಟಿಸುತ್ತಾ, ಇನ್ನು ಎಂದಿಗೂ ಮನೆಗೆ ಮರಳದೆ ಬ್ರಹ್ಮಾಂಡದಲ್ಲಿ ಕಳೆದುಹೋಗಲಿರುವ ಈ ನೌಕೆಯು ಸಾಧ್ಯವಾದಷ್ಟು ಹೆಚ್ಚು ಕಾಲ ಮನುಷ್ಯನ ಸಂಪರ್ಕದಲ್ಲಿರಬೇಕೆಂದರೆ ಅದರ ವಿದ್ಯುತ್ ಕೋಶಗಳ ಶಕ್ತಿ ಬೇಗನೆ ಮುಗಿಯದಂತೆ ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ 1990ರ ಫೆಬ್ರವರಿ 14ರಂದು ಅದರ ಕ್ಯಾಮೆರಾ ಸೇರಿದಂತೆ ಕೆಲವು ಯಂತ್ರಗಳನ್ನು ಸ್ಥಗಿತಗೊಳಿಸುವಂತೆ ವಿಜ್ಞಾನಿಗಳು ಇಲ್ಲಿಂದಲೇ ಸೂಚನೆ ನೀಡಿದರು. ಕ್ಯಾಮೆರಾ ಶಾಶ್ವತವಾಗಿ ಕಣ್ಣುಮುಚ್ಚುವುದಕ್ಕೆ ಸುಮಾರು ಅರ್ಧಗಂಟೆ ಮುನ್ನ ಕೊನೆಯ ಬಾರಿ ಹಿಂತಿರುಗಿ ನೋಡಿ, ತಾನು ಬಿಟ್ಟು ಹೊರಟ ನೆಲದ ''ಭಾವಚಿತ್ರ''ವನ್ನು ಸೆರೆಹಿಡಿಯಿತು.
ಈ ಬ್ರಹ್ಮಾಂಡದ ಅಪಾರ ಅವಕಾಶದಲ್ಲಿ ಧೂಳಿನ ಕಣದಂತೆ ತೇಲುತ್ತಿರುವ ಭೂಮಿಯ ಈ ಚಿತ್ರ ನೋಡುಗರಲ್ಲಿ ಅನೇಕ ಭಾವಗಳನ್ನು ಮೂಡಿಸಿತು. ಈ ಸೃಷ್ಟಿಯಲ್ಲಿ ನಾವೆಷ್ಟು ಒಂಟಿ ಎಂಬುದನ್ನು ಅರ್ಥ ಮಾಡಿಸುತ್ತಾ, ಮನುಷ್ಯನ ಪಾಂಡಿತ್ಯ, ಸಾಧನೆ, ಅಹಂಕಾರಗಳಿಗೆ ಪೆಟ್ಟು ನೀಡುವಂತಿರುವ ಈ ಚಿತ್ರ ಜಗತ್ಪ್ರಸಿದ್ಧಿಯಾಯಿತು. ಖ್ಯಾತ ವಿಜ್ಞಾನಿ ಕಾರ್ಲ್ ಸಾಗನ್ ಅವರ ಸಲಹೆಯಂತೆ ಸೆರೆಹಿಡಿಯಲಾದ ಈ ಚಿತ್ರಕ್ಕೆ ಅವರೇ ''Pale Blue Dot'' ಎಂದು ಹೆಸರಿಟ್ಟರು. ತಮ್ಮ ಪುಸ್ತಕದಲ್ಲಿ ಈ ಚಿತ್ರದ ಬಗ್ಗೆ ತುಂಬ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮತ್ತೆ ಮತ್ತೆ ಕೇಳುವಂತಿರುವ ಅವರ ಮಾತುಗಳು ಹೀಗಿವೆ.
“ಮತ್ತೊಮ್ಮೆ ಆ ಚುಕ್ಕಿಯತ್ತ ನೋಡಿ. ಅದೇ ಅಲ್ಲಿ ಕಾಣುತ್ತಿದೆಯಲ್ಲ... ಅದು ಮನೆ, ನಮ್ಮ ಮನೆ. ಅದರ ಮೇಲೆಯೇ ನಿಮ್ಮ ಪ್ರತಿ ಪ್ರೀತಿಪಾತ್ರರೂ ನೆಲೆಸಿರುವುದು. ನಿಮಗೆ ಗೊತ್ತಿರುವವರೂ, ನೀವು ಕೇಳಿ ತಿಳಿದ ಪ್ರತಿಯೊಬ್ಬರೂ, ಪ್ರತಿ ಮನುಜನೂ ಬದುಕು ಸಾಗಿಸಿದ್ದೂ, ಸಾಗಿಸುತ್ತಿರುವುದೂ ಇಲ್ಲೇ. ನಮ್ಮಲ್ಲಿ ತುಂಬಿಕೊಂಡಿರುವ ಅಪಾರ ನೋವು, ಸಂಕಟಗಳು, ಕಳೆದ ಸಂತಸದ ಸಮಯಗಳು, ನೀವು ನಂಬಿರುವ ಧರ್ಮಗಳು, ಧಾರ್ಮಿಕ ಸಿದ್ಧಾಂತಗಳು, ಆರ್ಥಿಕ ಸಿದ್ಧಾಂತಗಳು, ನೈತಿಕ ಕಟ್ಟುಪಾಡುಗಳು ಎಲ್ಲವೂ ಹುಟ್ಟಿದ್ದು ಇಲ್ಲೇ. ಮನುಜನ ಇತಿಹಾಸ ಕಂಡ ಪ್ರತಿ ಬೇಟೆಗಾರನೂ, ಅಮಾಯಕ ಬೇಟೆಯೂ, ಪ್ರತಿ ಸಾಹಸಿಯೂ, ರಣಹೇಡಿಯೂ, ನಾಗರಿಕತೆಗಳ ಹುಟ್ಟಿಗೆ ಕಾರಣನಾದವನೂ, ಅದೇ ನಾಗರಿಕತೆಗಳನ್ನು ಧ್ವಂಸ ಮಾಡಿದವನೂ, ಪ್ರತಿ ಆಳುವ ಅರಸನೂ, ಅನ್ನ ಬೆಳೆದವನೂ, ಯುವಪ್ರೇಮಿಗಳೂ, ಅಪ್ಪ-ಅಮ್ಮಂದಿರೂ, ಅವರ ಮುದ್ದು ಕಂದನೂ, ಪ್ರತಿ ಸಂಶೋಧಕನೂ, ಅನ್ವೇಷಕನೂ, ಪ್ರತಿ ತತ್ವಜ್ಞಾನಿಯೂ, ಭ್ರಷ್ಟ ರಾಜಕಾರಣಿಯೂ, ನೆಚ್ಚಿನ ತಾರೆಯರೂ, ಸರ್ವೋಚ್ಚ ನಾಯಕನೂ, ಪ್ರತಿ ಯೋಗಿಯೂ, ಪುಣ್ಯಾತ್ಮನೂ ಮತ್ತು ಪರಮ ಪಾಪಿಯೂ ಎಲ್ಲರೂ ಜೀವನ ಕಳೆದದ್ದು ಇಲ್ಲೇ. ಅದೇ ಇಲ್ಲಿ ಕಾಣುತ್ತಿದೆಯಲ್ಲ, ಆ ಸೂರ್ಯನ ಬೆಳಕಿನ ಧಾರೆಯ ಮಧ್ಯೆ ತೇಲುತ್ತಿದೆಯಲ್ಲ, ಆ ಧೂಳಿನ ಕಣದ ಮೇಲೆಯೇ.
ಈ ಅಂತ್ಯಗಾಣದ ವಿಶ್ವಶಕ್ತಿಯ ಆಟದ ರಂಗದಲ್ಲಿ ಈ ಭೂಮಿ ಒಂದು ಚಿಕ್ಕ ವೇದಿಕೆ. ಯೋಚಿಸಿ, ಆ ಎಲ್ಲಾ ಸರ್ವಾಧಿಕಾರಿಗಳೂ, ಚಕ್ರವರ್ತಿಗಳೂ ರಕ್ತದ ನದಿಗಳನ್ನೇ ಹರಿಸಿದರಲ್ಲಾ... ವೈಭವದ ವಿಜಯೋತ್ಸವಗಳನ್ನಾಚರಿಸಿದರಲ್ಲಾ... ಅದೆಲ್ಲವೂ ಈ ಬಿಂದುಭಾಗಗಳ ಮೇಲಿನ ಅಲ್ಪಕಾಲದ ಅಧಿಕಾರಕ್ಕಾಗಿ! ಈ ಬಿಂದುವಿನ ಒಂದು ಮೂಲೆಯ ಜನರು ಮತ್ತೊಂದು ತುದಿಯ ನಿವಾಸಿಗಳ ಮೇಲೆ ಮಾಡಿದ ದೌರ್ಜನ್ಯ, ಮುಗಿಯದ ಕ್ರೌರ್ಯಗಳ ಬಗ್ಗೆ ಯೋಚಿಸಿನೋಡಿ. ಎಲ್ಲರೂ ಮನುಷ್ಯರೇ... ಆದರೂ ಅದೆಷ್ಟು ತಪ್ಪುಗ್ರಹಿಕೆಗಳು, ಅದೆಷ್ಟು ಉತ್ಸುಕತೆ ಒಬ್ಬರನ್ನೊಬ್ಬರ ಕೊರಳನ್ನು ಹರಿಯಲು, ಅದೆಷ್ಟು ''ಉತ್ಸಾಹಭರಿತ ದ್ವೇಷ''!
ನಮ್ಮ ತೋರಿಕೆಗಳು, ಸ್ವಪ್ರಾಮುಖ್ಯತೆಯ ಅಹಂಕಾರಗಳು, ನಮ್ಮ ವಿಶೇಷ ಸ್ಥಾನಮಾನದ ಭ್ರಮೆಗಳಿಗಲ್ಲ ಸವಾಲೊಡ್ಡುತ್ತಿದೆ ಈ ತೆಳು ಬೆಳಕಿನ ಕಿರಣದಲ್ಲಿ ತೇಲುತ್ತಿರುವ ಈ ಪುಟ್ಟ ಚುಕ್ಕೆ. ನಮ್ಮ ನೆಲವು ವಿಶ್ವಸಾಗರದ ಕತ್ತಲಲ್ಲಿ ತೇಲುತ್ತಿರುವ ಒಂಟಿ ಕಣ. ದಿಕ್ಕುಗಾಣದ ಅಪಾರ ಶೂನ್ಯತೆಯ ಮಧ್ಯೆ ಇರುವ ಈ ಪುಟ್ಟ ಕಣದ ಮೇಲಿನ ನಮ್ಮನ್ನು ನಮ್ಮಿಂದಲೇ ರಕ್ಷಿಸಲು ಎತ್ತಲಿಂದಲೂ ಸಹಾಯ ಬರುವ ಸಣ್ಣ ಕುರುಹೂ ಕಾಣುತ್ತಿಲ್ಲ. ಈವರೆಗೆ ನಮಗೆ ಗೊತ್ತಿರುವ, ಜೀವ ಹೊತ್ತ ನೆಲವೆಂದರೆ ನಮ್ಮ ಭೂಮಿ ಮಾತ್ರ. ಮತ್ತೆಲ್ಲೂ, ಕೊನೆಪಕ್ಷ ಸಮೀಪದ ಭವಿಷ್ಯದಲ್ಲೂ ನಮ್ಮ ಕುಲ ವಲಸೆ ಹೋಗಬಹುದಾದಂಥ ಜಾಗ ಕಾಣುತ್ತಿಲ್ಲ. ಭೇಟಿ ನೀಡಲಾಗಲೀ, ನೆಲೆನಿಲ್ಲಲಾಗಲೀ... ಊಹೂ... ಈವರೆಗೆ ಮತ್ತೊಂದು ನೆಲ ಕಂಡೇ ಇಲ್ಲ. ಇಷ್ಟವಿರಲಿ, ಇಲ್ಲದಿರಲಿ... ಸದ್ಯ ನಮ್ಮ ಭೂಮಿಯೊಂದೇ ಬದುಕು ನಡೆಯಬೇಕಿರುವ ಜಾಗ.
ಖಗೋಳ ವಿಜ್ಞಾನದ ಅಧ್ಯಯನವು ಹೊಸ ವ್ಯಕ್ತಿತ್ವವನ್ನೇ ರೂಪಿಸುವಂಥ ಅನುಭವ ಎಂದು ಹೇಳಲಾಗುತ್ತದೆ. ಅದರಲ್ಲೂ ಅನತಿ ದೂರದಿಂದ ತೆಗೆದ ನಮ್ಮ ''ಪುಟ್ಟ ಪ್ರಪಂಚ''ದ ಈ ಚಿತ್ರವನ್ನು ನೋಡಿ. ಮನುಷ್ಯನ ಅಹಂಕಾರದ ಮೂರ್ಖತನವನ್ನು ಎತ್ತಿ ತೋರಿಸಿ, ಚಿಂತನೆಗೆ ಹಚ್ಚುವಂತೆ ಮಾಡುವ ಚಿತ್ರ ಬಹುಶಃ ಇದಕ್ಕಿಂತ ಮತ್ತೊಂದಿರಲಾರದು. ನನಗಂತೂ ಇದು ನಾವು ಮನುಷ್ಯರು ಪರಸ್ಪರ ಗೌರವದಿಂದ, ಪ್ರೀತ್ಯಾದರದಿಂದ ವ್ಯವಹರಿಸುವುದು ನಮ್ಮ ಜವಾಬ್ದಾರಿಯಾಗಬೇಕು ಎಂಬ ಭಾವಕ್ಕೆ ಹೆಚ್ಚು ಹೊಳಪು ನೀಡಿ ಹೇಳುತ್ತಿದೆ ಎಂದನಿಸುತ್ತಿದೆ. ಹಾಗೆಯೇ ನಮಗಿರುವ ಏಕೈಕ ಮನೆ, ಈ ''ತೆಳು ನೀಲಿ ಚುಕ್ಕಿ''ಯನ್ನು ಸಂರಕ್ಷಿಸಿ, ಕಾಪಿಟ್ಟುಕೊಳ್ಳಬೇಕಾದ ಹೊಣೆಗಾರಿಕೆಯನ್ನು ಒತ್ತಿ ಒತ್ತಿ ಹೇಳುತ್ತಿದೆ ಈ ಚಿತ್ರ.
ವೋಯೇಜರ್ ನೌಕೆಯನ್ನು ನಾಸಾ ಉಡಾವಣೆ ಮಾಡಿದ್ದು ಸೌರವ್ಯೂಹದ ಹೊರಭಾಗದ ಅಧ್ಯಯನಕ್ಕಾಗಿ. ಅದರಲ್ಲೂ ಮುಖ್ಯವಾಗಿ ಗುರು ಮತ್ತು ಶನಿ ಗ್ರಹಗಳು, ಅವುಗಳ ಚಂದ್ರರು ಹಾಗೂ ಅವುಗಳ ಕಾಂತಕ್ಷೇತ್ರಗಳ ಅಧ್ಯಯನಕ್ಕಾಗಿ. ಆ ಬಳಿಕ ಈ ಸೃಷ್ಟಿಯ ಅನಂತ ಆಳಕ್ಕೆ ಕಳುಹಿಸುವುದಾಗಿತ್ತು ಉದ್ದೇಶ.
ಉದ್ದೇಶದಂತೆ ಸೌರಮಂಡಲದ ಗಡಿಯನ್ನು ದಾಟಿ ಅಂತರತಾರಾ ವಲಯವನ್ನು ಪ್ರವೇಶಿಸಿರುವ ಅದು, ತನ್ನ ವಿದ್ಯುತ್ ಕೋಶಗಳ ಶಕ್ತಿ ಮುಗಿದ ಬಳಿಕ ಶೀಘ್ರವೇ ಮನುಷ್ಯನ ಸಂಪರ್ಕವನ್ನು ಕಳೆದುಕೊಳ್ಳಲಿದೆ. ಆ ಬಳಿಕ ಚಲನೆ ''ಜಡತ್ವದ ನಿಯಮಕ್ಕೆ'' ತಲೆಬಾಗಿ, ಕೊನೆಗಾಣದ ಈ ವಿಶ್ವದ ಆಳದಲ್ಲಿ ನಿರಂತರವಾಗಿ ಸಾಗಲಿದೆ. ಹೀಗೆ ಸಾಗಲಿರುವ ಅದಕ್ಕೆ ವಿಶ್ವದ ಯಾವುದೋ ಮೂಲೆಯಲ್ಲಿ ಅನ್ಯಗ್ರಹದ ಬುದ್ಧಿವಂತ ಜೀವಿಗಳು ಎದುರಾದರೆ, ಅವರಿಗೆ ನಮ್ಮ ಬಗ್ಗೆ ಮಾಹಿತಿ ತಿಳಿಯಲಿ ಎಂದು ಈ ನೌಕೆಯಲ್ಲಿ ಧ್ವನಿಮುದ್ರಿಕೆ ಮತ್ತು ಇತರೆ ಮಾಹಿತಿಯುಳ್ಳ ಪುಟ್ಟ ಚಿನ್ನದ ಲೇಪನದ ತಾಮ್ರದ ತಟ್ಟೆಯೊಂದನ್ನು ಇರಿಸಲಾಗಿದೆ. ಅದರಲ್ಲಿ ನಮ್ಮ ಭೂಮಿಯ ವಿಳಾಸವನ್ನು ನೀಡಲಾಗಿದೆ. ಜೊತೆಗೆ 55 ಭಾಷೆಗಳ ಧ್ವನಿಯೂ ಇದೆ. ಅದರಲ್ಲಿ “ನಮಸ್ಕಾರ, ಈ ಭೂಮಿಯ ಜನರ ಪರವಾಗಿ ಶುಭಾಶಯಗಳು” ಎಂಬ ಕನ್ನಡ ಧ್ವನಿಯೂ ಇದೆ! ಜತೆಗೆ ಹಿಂದುಸ್ತಾನಿ ಶಾಸ್ತ್ರೀಯ ಗಾಯನವೂ ಇದೆ!
ಅದೇನೇ ಇರಲಿ, ಅನ್ಯಗ್ರಹದ ಬುದ್ಧಿಜೀವಿಗಳು ಸಿಗುವ ಸಾಧ್ಯತೆ ಇದೆಯೇ? ಇದ್ದರೂ ಅದಕ್ಕೆ ಎಷ್ಟು ಕಾಲ ಬೇಕು? ಒಂದು ಬೆಳಕಿನ ವರ್ಷ ಸಾಗಲಿಕ್ಕೇ ಹದಿನೆಂಟು ಸಾವಿರ ವರ್ಷಗಳು ಬೇಕು! ಅಷ್ಟು ಹೊತ್ತಿಗೆ ಇಲ್ಲಿ ಏನಾಗಿರಬಹುದು? ಯೋಚಿಸಿ, ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯ ಹುಟ್ಟಿ, ಮೆರೆದು, ನಾಶವಾಗಿ ಇಂದಿಗೆ ಸುಮಾರು ಏಳು ನೂರು ವರ್ಷಗಳು ಕಳೆದಿವೆ ಅಷ್ಟೇ. ನಮ್ಮ ಸಿಂಧೂ ನದಿ ನಾಗರಿಕತೆಯೂ ಐದು ಸಾವಿರ ವರ್ಷಗಳಷ್ಟು ಹಳೆಯದು. ಅತ್ಯಂತ ಹಳೆಯ ನಾಗರಿಕತೆಯನ್ನು ನೋಡಿದರೂ ಆರು ಸಾವಿರ ವರ್ಷಗಳಷ್ಟು ಕಾಲವಾಗುತ್ತದೆ ಅಷ್ಟೇ. ಇಷ್ಟು ಕಾಲದಲ್ಲಿ ಮನುಷ್ಯನ ಜಗತ್ತಿನಲ್ಲಿ ಎಷ್ಟೆಲ್ಲ ಬದಲಾವಣೆಗಳಾಗಿ ಹೋಗಿವೆ! ಇನ್ನು ವೋಯೇಜರ್ ಒಂದು ಬೆಳಕಿನ ವರ್ಷ ಸಾಗುವಷ್ಟರಲ್ಲಿ ಏನೆಲ್ಲ ಬದಲಾಗಬಹುದು? ಅದು ತನ್ನ ಹಾದಿಯಲ್ಲಿ ಸಿಗುವ ಮೊದಲ ನಕ್ಷತ್ರದ ಬಳಿಸಾರಲು ಸುಮಾರು ನಲವತ್ತು ಸಾವಿರ ವರ್ಷಗಳು ಬೇಕು! ಹೀಗಿರುವಾಗ ಅನ್ಯಗ್ರಹ ಜೀವಿಯನ್ನು ಇದು ಕಾಣುವ ಕಾಲಕ್ಕೆ ಮನುಷ್ಯನ ದುರಾಸೆಯ ಬಡಿದಾಟಕ್ಕೆ ಮನುಕುಲವೇ ನಾಶವಾಗಿರದಿದ್ದರೆ ಸಾಕು.