ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಅರೆಬಿಳಚಿ ಭದ್ರಾ ನಾಲೆಯಲ್ಲಿ ದುರ್ಘಟನೆ

Published : Jan 18, 2026, 09:30 PM ISTUpdated : Jan 18, 2026, 09:50 PM IST
Bhadra canal tragedy

ಸಾರಾಂಶ

ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಶಿವಮೊಗ್ಗದ ಅರೆಬಳಿಚಿ ಭದ್ರಾ ನಾಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಇಡೀ ಕುಟುಂಬವೇ ನೀರುಪಾಲಾಗಿದೆ.  ನಾಲ್ವರಿಗೂ ಈಜು ಬರದ ಕಾರಣ ದುರ್ಘಟನೆ ನಡೆದಿದೆ.

ಶಿವಮೊಗ್ಗ (ಜ.18) ಶಿವಮೊಗ್ಗ ಸಮೀಪದ ಕೂಡ್ಲಿಗೆರೆ ಬಳಿಯ ಅರಬಿಳಚಿ ಗ್ರಾಮದ ಒಂದೇ ಕುಟುಂಬದ ನಾಲ್ವರು ಬಟ್ಟೆ ಒಗೆಯುವ ಸಂದರ್ಭದಲ್ಲಿ ಕಾಲು ಜಾರಿ ಭದ್ರಾ ನಾಲೆಗೆ ಉರುಳಿ ಬಿದ್ದು ಮೃತಪಟ್ಟ ದುರ್ಘಟನೆ ಭಾನುವಾರ ನಡೆದಿದೆ. ಈವರೆಗೂ ನಾಲ್ವರ ಶವ ಪತ್ತೆಯಾಗಿಲ್ಲ. ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರ ಪತ್ತೆಗೆ ತೀವ್ರ ಕ್ರಮ ಕೈಗೊಂಡಿದ್ದಾರೆ.ಅರೆಬಳಚಿ ಗ್ರಾಮದ ನೀಲಾಬಾಯಿ (50), ಮಗ ರವಿಕುಮಾರ್ (23), ಮಗಳು ಶ್ವೇತಾ (24) ಮತ್ತು ಅಳಿಯ ಪರಶುರಾಮ (28) ನೀರು ಪಾಲಾದ ದುರ್ದೈವಿಗಳಾಗಿದ್ದಾರೆ.

ಘಟನೆ ವಿವರ:

ಕುಟುಂಬದ ನಾಲ್ವರು ಕೂಡ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎರಡು ಬೈಕ್‌ಗಳಲ್ಲಿ ಬಟ್ಟೆ ತೊಳೆಯಲು ಭದ್ರಾ ನಾಲೆಯತ್ತ ಹೊಗಿದ್ದಾರೆ. ತಾಯಿ ನೀಲಾಬಾಯಿ ಮತ್ತು ಮಗಳು ಶ್ವೇತಾ ಬಟ್ಟೆ ಒಗೆಯಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ತಾಯಿ, ಮಗಳು ಕಾಲು ಜಾರಿ ನಾಲೆಗೆ ಬಿದ್ದಿದ್ದಾರೆ. ತಕ್ಷಣವೇ ಇವರನ್ನು ರಕ್ಷಿಸಲು ಮಗ ರವಿಕುಮಾರ್‌ ಮತ್ತು ಅಳಿಯ ಪರಶುರಾಮ್‌ ನಾಲೆಗೆ ಧುಮುಕಿದ್ದಾರೆ. ಆದರೆ ನಾಲ್ವರು ಕೂಡ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಆ ಸ್ಥಳದಲ್ಲಿ ಯಾರೂ ಇರಲಿಲ್ಲ ಎನ್ನಲಾಗುತ್ತಿದೆ.

ಅರಬಿಳಚಿ ಗ್ರಾಮದ ನೀಲಾಬಾಯಿ ಮಗಳಾದ ಶ್ವೇತಾ ಅವರನ್ನು ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ಪರಶುರಾಮ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

ಅರಬಿಳಚಿ ಗ್ರಾಮದಲ್ಲಿ ಜ.12 ರಿಂದ 16ರವರೆಗೆ ಮಾರಿಕಾಂಬ ಜಾತ್ರಾಮಹೋತ್ಸವ ಅದ್ದೂರಿಯಾಗಿ ಜರುಗಿದ್ದು, ಈ ಹಬ್ಬಕ್ಕಾಗಿ ಮಗಳು ಶ್ವೇತಾ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತವರಿಗೆ ಆಗಮಿಸಿದ್ದರು. ಮನೆಗೆ ಹೆಚ್ಚು ಜನ ನೆಂಟರು ಆಗಮಿಸಿದ್ದರಿಂದ ಈ ಕುಟುಂಬ ಬಟ್ಟೆ ತೊಳೆಯಲೆಂದು ನಾಲೆಗೆ ಬಂದಿದ್ದರು.ನಾಲೆಯ ದಡದಲ್ಲಿ ಬಟ್ಟೆ ಹಾಗೂ ಎರಡು ಬೈಕ್ ಗಳನ್ನು ಕಂಡ ಸ್ಥಳೀಯರು ಸ್ಥಳದಲ್ಲಿ ಯಾರೂ ಇಲ್ಲದ್ದರಿಂದ ಅನುಮಾನಗೊಂಡು ಪಟ್ಟಣದ ಠಾಣೆಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ್ದಾರೆ. ಬೈಕ್‌ ಸಂಖ್ಯೆ ಆಧಾರದಲ್ಲಿ ಸಂಪರ್ಕಿಸಿದಾಗ ನಾಲೆಗೆ ಬಂದವರ ಮಾಹಿತಿ ದೊರಕಿದೆ. ಡಿವೈಎಸ್ಪಿ ಕಾರ್ಯಪ್ಪನವರ ನೇತೃತ್ವದಲ್ಲಿ ಪಿ.ಐ. ಶಿವಪ್ರಸಾದ್ ಹಾಗೂ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.

ಕುರಿ ತೊಳೆಯಲು ಹೋಗಿ ಇಬ್ಬರು ಯುವಕರು ನೀರುಪಾಲು

ಚಿತ್ರದುರ್ಗದ ಜಿ.ಆರ್ ಹಳ್ಳಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಂನಲ್ಲಿ ಕುರಿ ತೊಳೆಯಲು ಹೋದ ಇಬ್ಬರು ಮುಳುಗಿ ಮೃತಪಟ್ಟ ಘಟನೆ ನಡೆದಿದೆ. 23ರ ಹರೆಯದ ವಿಶ್ವನಾಥ್ ಹಾಗೂ 19 ವರ್ಷಧ ಮಾರುತಿ ಮೃತ ದುರ್ದೈವಿಗಳು. ಇಬ್ಬರು ಯುವಕರಿಗೂ ಈಜು ಬಾರದ ಕಾರಣ, ಚೆಕ್ ಡ್ಯಾಂ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

PREV
Read more Articles on
click me!

Recommended Stories

ಕೆ.ಎಸ್. ಈಶ್ವರಪ್ಪ ಬಿಜೆಪಿ ವಾಪಸಾತಿ, ನನ್ನ ಮನಸ್ಸಲ್ಲೂ ಇದೆ ಬಸನಗೌಡ ಯತ್ನಾಳ್ ಮನಸ್ಸಲ್ಲೂ ಇದೆ ಅಂದ್ರು!
ಮಕ್ಕಳಿಗೆ ಪಾಠ ಹೇಳಿಕೊಟ್ಟ ಶಾಲಾ ಕೊಠಡಿಯಲ್ಲೇ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ!