
ಬೆಂಗಳೂರು (ಜು.14): ಸಿಂಗದೂರು ಸೇತುವೆ ಉದ್ಘಾಟನೆ ಆಹ್ವಾನ ವಿಚಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಟಾಪಟಿ ಮುಂದುವರಿದಿದೆ. ಇದರ ನಡವೆ ಸೋಮವಾರ ನಿತಿನ್ ಗಡ್ಕರಿ ಅಧಿಕೃತವಾಗಿ ಸಿಗಂದೂರು ಸೇತುವೆಯನ್ನು ಉದ್ಘಾಟನೆ ಮಾಡಿದ್ದು ಮಾತ್ರವಲ್ಲದೆ, ಸೇತುವೆಗೆ ಸಿಗಂದೂರು ಸೇತುವೆ ಎಂದೇ ನಾಮಕರಣ ಮಾಡಿದ್ದಾರೆ. ಇದರ ನಡುವೆ ಸೇತುವೆ ಉದ್ಘಾಟನೆಗೆ ಆಗಮಿಸುವಂತೆ ಜು.11ಕ್ಕೆ ಪತ್ರ ಬರೆದಿದ್ದಾಗಿ, ಹಾಗೇನಾದರೂ ಸಾಧ್ಯವಾಗದೇ ಹೋದಲ್ಲಿ ವರ್ಚುವಲ್ ಆಗಿಯಾದರೂ ಪಾಲ್ಗೊಳ್ಳುವಂತೆ ಜು.12ಕ್ಕೆ ಪತ್ರ ಬರೆದಿದ್ದೆ ಎನ್ನುವುದನ್ನು ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ.
ನಿತಿನ್ ಗಡ್ಕರಿ ತಮ್ಮ ಪೋಸ್ಟ್‌ನಲ್ಲಿ ಜುಲೈ 11ರಂದು ಪತ್ರ ಬರೆದು 14ನೇ ತಾರೀಕು ಉದ್ಘಾಟನೆ ಬಗ್ಗೆ ಆಹ್ವಾನ ನೀಡಿದ್ದಾಗಿ ಹೇಳಿದ್ದು, ಒಂದು ವೇಳೆ ನಿಮಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ ವರ್ಚುವಲ್ ಆಗಿ ಭಾಗಿಯಾಗಿ ಎಂದು ಜುಲೈ 12 ಕ್ಕೆ ಪತ್ರ ಬರೆದಿದ್ದಾರೆ.
ಎರಡೂ ಪತ್ರ ಹಾಕಿ ಎಕ್ಸ್‌ನಲ್ಲಿ ಗಡ್ಕರಿ ಪೋಸ್ಟ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಮುಖ್ಯಮಂತ್ರಿ ಹಾಗೂ ಸರ್ಕಾರ ಪ್ರೋಟೋಕಾಲ್ ನಿರಂತರವಾಗಿ ಫಾಲೋ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಸಿಎಂ, 'ಶಿವಮೊಗ್ಗ ಕಾರ್ಯಕ್ರಮದ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದೇನೆ. ಆದರೆ, ನಿಮ್ಮ ಸಚಿವಾಲಯವು ಕಾರ್ಯಕ್ರಮವನ್ನು ಅಂತಿಮಗೊಳಿಸುವ ಮೊದಲು ಮತ್ತು ನನ್ನ ಹೆಸರನ್ನು ಮುದ್ರಿಸಿದ ಆಹ್ವಾನ ಪತ್ರಿಕೆಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವ ಮೊದಲು ನನ್ನನ್ನಾಗಲಿ ಅಥವಾ ನನ್ನ ಕಚೇರಿಯನ್ನಾಗಲಿ ಸಂಪರ್ಕಿಸಿಲ್ಲ ಎನ್ನುವುದನ್ನು ದಾಖಲಿಸಲು ಬಯಸುತ್ತೇನೆ.
ಅಧಿಕೃತ ಆಹ್ವಾನ ಪತ್ರಿಕೆಯನ್ನು ಜುಲೈ 11 ರಂದು ಮಾತ್ರ ಸ್ವೀಕರಿಸಲಾಯಿತು, ಕಾರ್ಯಕ್ರಮಕ್ಕೆ ಕೇವಲ ಮೂರು ದಿನಗಳ ಮೊದಲು. ಅದೇ ದಿನ, ನನ್ನ ಕಚೇರಿಯು ವಿಜಯಪುರದ ಇಂಡಿಯಲ್ಲಿ ನೀರಾವರಿ ಮತ್ತು ಅಭಿವೃದ್ಧಿ ಯೋಜನೆಗಳ ರಾಜ್ಯ ಮಟ್ಟದ ಉದ್ಘಾಟನೆಗೆ ನನ್ನ ಪೂರ್ವ ಬದ್ಧತೆಯ ಬಗ್ಗೆ ನಿಮಗೆ ತಿಳಿಸಿತು ಮತ್ತು ಕಾರ್ಯಕ್ರಮವನ್ನು ಮರು ನಿಗದಿಪಡಿಸುವಂತೆ ವಿನಂತಿಸಿತು.
ಸಾರ್ವಜನಿಕ ಆಹ್ವಾನ ಪತ್ರಿಕೆಗಳನ್ನು ನೀಡಿದ ನಂತರ ಕೇವಲ ಮೂರು ದಿನಗಳ ಮುಂಚಿತವಾಗಿ ಕಳುಹಿಸಲಾದ ಸಂವಹನವನ್ನು ಸರಿಯಾದ ಸಮಾಲೋಚನೆ ಅಥವಾ ಸಮನ್ವಯ ಎಂದು ಅರ್ಥೈಸಲಾಗುವುದಿಲ್ಲ. ನಿಜವಾದ ಸಹಕಾರಿ ಒಕ್ಕೂಟ ವ್ಯವಸ್ಥೆಯು ಅಂತಹ ಮಹತ್ವದ ಸಾರ್ವಜನಿಕ ಕಾರ್ಯಕ್ರಮಗಳನ್ನು ಅಂತಿಮಗೊಳಿಸುವ ಮೊದಲು ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಎಂಗೇಜ್‌ಮೆಂಟ್‌ಅನ್ನು ಬಯಸುತ್ತದೆ.
ಕರ್ನಾಟಕದ ಜನರ ಸೇವೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಲು ನಾನು ಬದ್ಧನಾಗಿರುತ್ತೇನೆ. ಭವಿಷ್ಯದ ಕಾರ್ಯಕ್ರಮಗಳು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸರಿಯಾದ ಸಮಾಲೋಚನೆ, ಸಮನ್ವಯ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತವೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಸಿಎಂ ಟ್ವೀಟ್‌ಗೆ ಆಕ್ರೋಶ: ಸೇತುವೆ ಉದ್ಘಾಟನೆ ಬಗ್ಗೆ ಕೇವಲ ಮೂರು ದಿನಗಳ ಮುಂಚೆ ತಿಳಿಸಲಾಯಿತು ಎಂದು ಸಿಎಂ ಸಿದ್ಧರಾಮಯ್ಯ ಹೇಳಿರುವ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ. ಅದು ಆದ್ಯತೆಯನ್ನು ಅವಲಂಬಿಸಿರುತ್ತದೆ.ತೆರಿಗೆ ಪಾವತಿದಾರರ ಹಣದಿಂದ ನಿರ್ಮಿಸಲಾದ ಯೋಜನೆಗಳನ್ನು ಉದ್ಘಾಟಿಸಲು ನಮಗೆ ಮುಖ್ಯಮಂತ್ರಿ ಅಥವಾ ಪ್ರಧಾನಿ ಅಗತ್ಯವಿಲ್ಲ. ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ತೆರಿಗೆ ಪಾವತಿದಾರರು ಮತ್ತು ಅದನ್ನು ನಿರ್ಮಿಸಿದ ಕಾರ್ಮಿಕರನ್ನು ಇದಕ್ಕೆ ಆಹ್ವಾನಿಸಬೇಕು' ಎಂದು ಬರೆದಿದ್ದಾರೆ.
ನಮ್ಮ ಮುಖ್ಯಮಂತ್ರಿಗಳು ಎಷ್ಟು ಫ್ರೀ ಆಗಿ ಇರುತ್ತಾರೆಂದರೆ, ಒಂದೇ ದಿನದ ಸೂಚನೆಗೆ ಅವರು ಐಪಿಎಲ್ ವಿಜಯೋತ್ಸವದಲ್ಲಿ ಭಾಗಿಯಾಗ್ತಾರೆ. ಆದರೆ, ಮೂರು ದಿನಗಳ ಮುಂಚಿನ ಆಹ್ವಾನಕ್ಕೆ ಅವರಿಗೆ ಬರಲು ಸಾಧ್ಯವಾಗೋದಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದಕ್ಕೂ ಮುನ್ನ ಗಡ್ಕರಿಗೆ ಪತ್ರ ಬರೆದಿದ್ದ ಸಿಎಂ, ಕಾರ್ಯಕ್ರಮದ ಬಗ್ಗೆ ನನಗೆ ಮುಂಚಿತವಾಗಿ ತಿಳಿಸಲಾಗಿಲ್ಲ.ನಾಳೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿಗದಿಪಡಿಸುವ ಮೊದಲು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿದ್ದರೆ ಹೆಚ್ಚು ಸೂಕ್ತವಾಗಿತ್ತು. ಆದ್ದರಿಂದ, ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಇಲಾಖೆಗೆ ಸೂಚಿಸಬೇಕು. ಅಲ್ಲದೆ, ಈ ಕಾರ್ಯಕ್ರಮವನ್ನು ಮುಂದೂಡಲು ಮತ್ತು ನಿಮಗೆ ಅನುಕೂಲಕರವಾದ ಒಂದೆರಡು ದಿನಾಂಕಗಳನ್ನು ನನಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ. ಇದರಿಂದ ನಾನು ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ಸೇರಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿರುತ್ತೇನೆ' ಎಂದು ಬರೆದಿದ್ದರು.