
ಶಿವಮೊಗ್ಗ (ಜು.10) ಅಂಗನವಾಡಿ ಮಕ್ಕಳಿಗೆ ಹಾಕಿದ ವಿಟಮಿನ್ ಎ ಡ್ರಾಪ್‌ನಿಂದ ತೀವ್ರ ಅಸ್ವಸ್ಥಗೊಂಡು ಮಕ್ಕಳು ಆಸ್ಪತ್ರೆ ದಾಖಲಾದ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಹಿರೇಸಾನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 13 ಮಕ್ಕಳಿಗೆ ಮಂಗಳವಾರ ಇರುಳುಗಣ್ಣು ಮುಂಜಾಗ್ರತಾ ಕ್ರಮವಾಗಿ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ . ಡ್ರಾಪ್ ಎಡವಟ್ಟಿನಿಂದ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಲಾಗಿದೆ.
ಹೊಟ್ಟೆ ನೋವು, ವಾಂತಿಯಿಂದ ಮಕ್ಕಳು ಅಸ್ವಸ್ಥ
ಹೀರೇಸಾನಿ ಅಂಗನವಾಡಿ ಕೇಂದ್ರದ 13 ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಆದರೆ ಸಂಜೆ ಹೊತ್ತಿಗೆ ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ಮಕ್ಕಳಲ್ಲಿ ಹೊಟ್ಟೆ ನೋವು , ವಾಂತಿ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿದೆ. ಹೀಗಾಿಗ ಬುಧವಾರ ರಿಪ್ಪನ್ ಪೇಟೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಮಕ್ಕಳ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿದೆ. ಆರೋಗ್ಯ ಸುಧಾರಿಸಿದ ಹಿನ್ನಲೆಯಲ್ಲಿ 11 ಮಕ್ಕಳನ್ನು ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಮಕ್ಕಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೋಷಕರಿಂದ ವಿಟಮಿನ್ ಎ ಡ್ರಾಪ್ ಮೇಲೆ ಆರೋಪ
ಪೋಷಕರು ವಿಟಮಿನ್ ಎ ಡ್ರಾಪ್‌ನಿಂದ ಸಮಸ್ಯೆಯಾಗಿದೆ ಎಂದು ಆರೋಪ ಮಾಡಿದ್ದರೆ. ವಿಟಮಿನ್ ಎ ಡ್ರಾಪ್ ಹಾಕಿದ ಬಳಿಕ ಕೆಲ ಹೊತ್ತಿನಲ್ಲೇ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತೀವ್ರ ಸುಸ್ತು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದೆ. ಕೆಲ ಮಕ್ಕಳಲ್ಲಿ ವಾಂತಿ ಕಾಣಿಸಿಕೊಂಡಿದೆ.ಆದರೆ ಸಂಜೆ ವೇಳೆಗೆ ಹೊಟ್ಟೆ ನೋವು, ವಾಂತಿ ಸಮಸ್ಯೆ ತೀವ್ರಗೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳು ತೀವ್ರ ಅಸ್ವಸ್ಥರಾಗುತ್ತಿದ್ದಂತೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರು ಆತಂಕಗೊಂಡು ಮಕ್ಕಳನ್ನು ಆಸ್ಪತ್ರೆ ದಾಖಲಿಸುತ್ತಿದ್ದಂತೆ ಮಾಹಿತಿ ಎಲ್ಲೆಡೆ ಹಬ್ಬಿದೆ.
ನೀರಿನ ಸಮಸ್ಯೆಯಿಂದ ಆಗಿರುವ ಸಾಧ್ಯತೆ ಎಂದ ಅಧಿಕಾರಿಗಳು
ಇತ್ತ ನೀರಿನ ಸಮಸ್ಯೆಯಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.