ರಿಯಾಯಿತಿ ನೀಡದ ಖಾಸಗಿ ಬಸ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹ

By Kannadaprabha NewsFirst Published Nov 5, 2019, 11:06 AM IST
Highlights

ಖಾಸಗಿ ಬಸ್ ಮಾಲಿಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಿಯಾಯಿತಿ ನೀಡದ ಹಿನ್ನೆಲೆ ಜಿಲ್ಲಾ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 

ಶಿವಮೊಗ್ಗ [ನ.05]:  ಹಿರಿಯ ನಾಗರಿಕರಿಗೆ ಪ್ರಯಾಣ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡದ ಖಾಸಗಿ ಬಸ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಚುನಾವಣೆ ಗುರುತಿನ ಚೀಟಿ ತೋರಿಸಿದರೂ ಕೆಲ ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರು ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುತ್ತಿಲ್ಲ. ಹಿರಿಯ ನಾಗರಿಕರನ್ನು ತಾತ್ಸಾರದಿಂದ ನೋಡುವ ಖಾಸಗಿ ಬಸ್‌ಗಳ ಪರವಾನಗಿ ರದ್ದುಪಡಿಸಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಆದೇಶ ಧಿಕ್ಕರಿಸಿದ ಆರೋಪದಡಿಯಲ್ಲಿ ಕ್ರಿಮಿನಲ್‌ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಹಿರಿಯ ನಾಗರಿಕರಿಗೆ ಅವರು ಹೊಂದಿರುವ ಚುನಾವಣೆ ಗುರುತಿನ ಚೀಟಿಯನ್ನು ಕಂಡಕ್ಟರ್‌ ಅಥವಾ ಸ್ಟ್ಯಾಂಡ್‌ ಏಜೆಂಟರಿಗೆ ತೋರಿಸಿದಲ್ಲಿ ಶೇ.25 ರಷ್ಟುರಿಯಾಯಿತಿ ನೀಡಲು ತೀರ್ಮಾನಿಸಿ 2015ರ ಸೆ. 23ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಿ ಆದೇಶ ಹೊರಡಿಸಲಾಗಿದೆ. ಹೀಗಿದ್ದರು ಕೆಲ ಖಾಸಗಿ ಬಸ್‌ಗಳಲ್ಲಿ ರಿಯಾಯಿತಿ ನೀಡುತ್ತಿಲ್ಲ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2016ರ ಮೇ 3ರಂದು ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಗುರುತಿನ ಚೀಟಿಗಳನ್ನು ನಿರ್ವಹಣೆ ಮಾಡುವಂತಹ ಏಜೆಂಟರು, ಕಂಡಕ್ಟರ್‌ಗೆ ತೋರಿಸಿದಲ್ಲಿ ಶೇ. 25 ರಷ್ಟುರಿಯಾಯಿತಿ ನೀಡಲು ತಿಳಿವಳಿಕೆ ನೀಡಿದ್ದಾರೆ. ಹೀಗಿದ್ದರೂ ರಿಯಾಯಿತಿ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. ಇಂತಹ ಖಾಸಗಿ ಬಸ್‌ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿಕಲ್ಲೂರು ಮೇಘರಾಜ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ. ಮಾದಪ್ಪ, ಎಸ್‌.ವಿ. ರಾಜಮ್ಮ ಸೇರಿದಂತೆ ಹಲವರು ಇದ್ದರು.

click me!