ಸಕ್ರೆಬೈಲ್ ಆನೆ ಬಿಡಾರದ ಹೊಸ ಲೋಗೋವನ್ನು ಸಮಸದ ಬಿವೈ ರಾಘವೇಂದ್ರ ಬಿಡುಗಡೆಗೊಳಿಸಿದರು
ಶಿವಮೊಗ್ಗ (ಅ.11 ) :ಪರಿಸರ ಹಾಗೂ ವನ್ಯಜೀವಿಗಳ ಅವನತಿಗೆ ಕಾರಣವಾಗುತ್ತಿರುವ ವಿಜ್ಞಾನದ ಆವಿಷ್ಕಾರಗಳ ಬದಲು ಪರಿಸರ ಹಾಗೂ ವನ್ಯಜೀವಿ ಸ್ನೇಹಿಯಾಗಿರುವಂತಹ ವೈಜ್ಞಾನಿಕ ಸಂಶೋಧನೆಗಳ ಅವಶ್ಯಕತೆ ಇದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಜಿಲ್ಲೆಯ ವನ್ಯಜೀವಿ ವಿಭಾಗವು ಸಕ್ರೆಬೈಲ್ ಆನೆ ಬಿಡಾರದಲ್ಲಿ ವನ್ಯ ಜೀವಿ ಸಪ್ತಾಹದ ಅಂಗವಾಗಿ ಗುರುವಾರ ಆಯೋಜಿಸಿದ್ದ ಸಕ್ರೆಬೈಲ್ ಆನೆ ಬಿಡಾರದ ಲೋಗೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮೊಬೈಲ್ ತರಂಗಗಳು, ಪ್ಲಾಸ್ಟಿಕ್ ಹಾಗೂ ಇನ್ನಿತರೆ ರಾಸಾಯನಿಕ ವಸ್ತುಗಳು ಹಲವು ವನ್ಯಜೀವಿಗಳ ಅವನತಿಗೆ ಕಾರಣವಾಗುತ್ತಿದೆ. ಅಲ್ಲದೆ ಪರಿಸರ ಕೂಡಾ ನಾಶವಾಗುತ್ತಿದೆ. ಇದನ್ನು ಗಮನಿಸಿ ಸರ್ಕಾರ ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ಕೈಗೊಂಡಿರುವುದು ಗಮನಾರ್ಹ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅರಣ್ಯದಲ್ಲಿ ಸ್ವತಂತ್ರವಾಗಿರಬೇಕಾದ ಪ್ರಾಣಿಗಳನ್ನು ನಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಮನರಂಜನೆಗೆ ಬಳಸಿಕೊಳ್ಳುವುದು ಪರಿಸರದ ಧರ್ಮಕ್ಕೆ ವಿರುದ್ಧವಾದದು. ಇದನ್ನು ಸರಿದೂಗಿಸಿಕೊಳ್ಳಲು ಅವುಗಳನ್ನು ಪ್ರೀತಿಯಿಂದ ಕಾಣುವುದು ಹಾಗೂ ಅವುಗಳನ್ನು ರಕ್ಷಣೆ ಮಾಡುವುದೊಂದೇ ದಾರಿ ಎಂದು ಹೇಳಿದರು.
ಆನೆ ಬಿಡಾರಕ್ಕೆ ಬರುವ ಪ್ರವಾಸಿಗರಿಂದ ಪ್ರತಿ ವರ್ಷ ಸಾಕಷ್ಟುಆದಾಯ ಬರುತ್ತಿದೆ. ಈ ಆದಾಯವನ್ನು ಹೆಚ್ಚಿಸಲು ಹಾಗೂ ಸೂಕ್ತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ ಎರಡು ಕೋಟಿ ರು. ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅರಣ್ಯ ಖಾತೆ ಸಚಿವರೊಂದಿಗೆ ಚರ್ಚಿಸಿ ಉತ್ತಮ ಪ್ರವಾಸಿ ತಾಣವಾಗಿಸಲು ಹೆಚ್ಚಿನ ಅನುದಾನ ಬಿಡುಗಡೆಗೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್, ಶಂಕರ್, ತ್ಯಾವರೆಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕುಂದ್ ಇತರರು ಇದ್ದರು. ವನ್ಯಜೀವಿ ಸಪ್ತಾಹ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ಪರಿಸರ ಸ್ವಚ್ಛತಾ ಕಾರ್ಯ ನಡೆಸಿದರು.