ಶಿವಮೊಗ್ಗ: ದಸರಾ ಆನೆಗಳಿಗೆ ಸಂಭ್ರಮದ ಬೀಳ್ಕೊಡುಗೆ

By Web DeskFirst Published Oct 10, 2019, 1:31 PM IST
Highlights

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬೀಳ್ಕೊಡುಗೆ ನೀಡಲಾಯಿತು| ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತು| 

ಶಿವಮೊಗ್ಗ(ಅ.10): ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆನೆಗಳಿಗೆ ಬುಧವಾರ ನಗರದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಹಾನಗರ ಪಾಲಿಕೆ ವತಿಯಿಂದ ಗೌರವಿಸಲಾಯಿತು.

ಹಳೇ ಕಾರಾಗೃಹ ಆವರಣದಲ್ಲಿ ಮಂಗಳವಾರ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರದ ನಡುವೆ ಬನ್ನಿ ಮುಡಿಯುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಇದಕ್ಕೂ ಮೊದಲು ನಡೆದ ವೈಭವದ ಅಂಬಾರಿ ಮೆರವಣಿಗೆಗೆ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಕರೆತರಲಾಗಿದ್ದ ಆನೆಗಳು ಮೆರುಗು ತಂದಿದ್ದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ಉಪಮೇಯರ್‌ ಎಸ್‌.ಎನ್‌. ಚನ್ನಬಸಪ್ಪ ಅವರು, ಮೇಯರ್‌ ಲತಾ ಗಣೇಶ್‌ ನೇತೃತ್ವದಲ್ಲಿ ಹಾಗೂ ನಗರದ ನಾಗರಿಕರ ಸಹಕಾರದಲ್ಲಿ ಶಿವಮೊಗ್ಗ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದೆ. ಸ್ಥಳೀಯ ಸಾಂಸ್ಕೃತಿಕ ಕಲಾ ತಂಡಗಳು ಸೇರಿದಂತೆ ಎಲ್ಲರೂ ಉತ್ಸವದ ಯಶಸ್ವಿಗೆ ಕಾರಣರಾಗಿದ್ದಾರೆ. 10 ದಿನಗಳ ಕಾಲ ಸಾಂಸ್ಕೃತಿಕ ದಸರಾ, ಮಹಿಳಾ ದಸರಾ, ಯುವ ದಸರಾ ಸೇರಿದಂತೆ 12 ದಸರಾ ಚಟುವಟಿಕೆಗಳಲ್ಲಿ 4500ಕ್ಕೂ ಅಧಿಕ ಕಲಾವಿದರು ಭಾಗವಹಿಸಿದ್ದು ವಿಶೇಷ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಹಕರಿಸಿದ್ದಾರೆ. ಶಿವಮೊಗ್ಗ ದಸರಾ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಿ ಉತ್ಸವದ ಯಶಸ್ವಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.

ಮೈಸೂರು ಹೊರತುಪಡಿಸಿ ಶಿವಮೊಗ್ಗದಲ್ಲಿ ವೈಭವದ ದಸರಾ ಕಾರ್ಯಕ್ರಮ ಹಾಗೂ ತಾಯಿ ಚಾಮುಂಡೇಶ್ವರಿ ದೇವಿಯ ಅದ್ಧೂರಿ ಮರೆವಣಿಗೆ ನಡೆದಿದೆ. ಅಂಬಾರಿ ಮೆರವಣಿಗೆಯಲ್ಲಿ ಆನೆಗಳ ಬಳಗದವರು ಸಹಕಾರ ನೀಡಿದ್ದಾರೆ. ಸಾಗರ್‌ ಆನೆ ಅನಾರೋಗ್ಯಕ್ಕೀಡಾದಾಗ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಒಟ್ಟಾರೆ ಉತ್ಸವದ ಯಶಸ್ವಿಗೆ ಎಲ್ಲರೂ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೇಯರ್‌ ಲತಾ ಗಣೇಶ್‌, ಪಾಲಿಕೆ ಸದಸ್ಯರಾದ ಎಸ್‌.ಜ್ಞಾನೇಶ್ವರ್‌, ಇ.ವಿಶ್ವಾಸ್‌, ಅನಿತಾ ರವಿಶಂಕರ್‌, ಪ್ರಮುಖರಾದ ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.
 

click me!