ಶಿವಮೊಗ್ಗದ ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಸಿಗಂದೂರು ಸೇತುವೆ ಉದ್ಘಾಟನೆಗೆ ಸಿದ್ಧವಾಗಿದೆ. ಈ ಸೇತುವೆ ಅಂಬಾರಗೋಡ್ಲು ಮತ್ತು ತುಮರಿ ಗ್ರಾಮಗಳನ್ನು ಸಂಪರ್ಕಿಸಲಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.
ಶಿವಮೊಗ್ಗ: ಶರಾವತಿ ನದಿಯ ಹಿನ್ನೀರಿನ ಮೇಲೆ ನಿರ್ಮಿಸಲಾಗಿರುವ ರಾಜ್ಯದ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆ ಬಹುತೇಕ ಮುಗಿಯುವ ಹಂತದಲ್ಲಿದೆ. ಈ ಸೇತುವೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಅಂಬಾರಗೋಡ್ಲು ಮತ್ತು ತುಮರಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಇದೀಗ ಸೇತುವೆ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಸಿಗಂದೂರು ಸೇತುವೆ ದೇಶದ ಎರಡನೇ ಅತೀ ಉದ್ದನೆಯ ಸೇತುವೆಯಾಗಲಿದೆ. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, 2.44 ಕಿಲೋಮೀಟರ್ ಉದ್ದದ ಸೇತುವೆಯಲ್ಲಿ ಡಾಂಬಾರು ಮತ್ತು ಬಣ್ಣ ಬಳಿಯುವ ಕೆಲಸಗಳು ನಡೆಯುತ್ತಿವೆ. 423 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ.
ಫೆಬ್ರವರಿ 19, 2018 ರಂದು ಈ ಸಿಗಂದೂರು ಸೇತುವೆಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಡಿಪಾಯ ಹಾಕಿದ್ದರು. ಹಾಗಾಗಿ ಉದ್ಘಾಟನೆಗೂ ನಿತಿನ್ ಗಡ್ಕರಿ ಅವರನ್ನೇ ಕರೆಸಲು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮುಂದಾಗಿದ್ದಾರೆ. ಈ ತಿಂಗಳಾಂತ್ಯಕ್ಕೆ ದೆಹಲಿಗೆ ತೆರಳಿ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿ ಉದ್ಘಾಟನೆ ದಿನಾಂಕವನ್ನು ಬಿ.ವೈ. ರಾಘವೇಂದ್ರ ಅಂತಿಮ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಯಾವಾಗ ಸಂಚಾರಕ್ಕೆ ಮುಕ್ತವಾಗಲಿದೆ ಸೇತುವೆ
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಸಿಗಂದೂರು ಸೇತುವೆ ಉದ್ಘಾಟನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸೇತುವೆಯಲ್ಲಿ ಸಂಚಾರ ಆರಂಭವಾದ ಬಳಿಕ ಲಾಂಚ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಈ ಸೇತುವೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ದೊಡ್ಡಪ್ರಮಾಣದಲ್ಲಿಅನುಕೂಲವಾಗಲಿದೆ. ಸಿಗಂದೂರು ಅಥವಾ ತುಮರಿಯಿಂದ ಸಾಗರ ಪಟ್ಟಣಕ್ಕೆ ಬರಲು ಸುಮಾರು 80 ಕಿ.ಮೀ ಪ್ರಯಾಣಿಸಬೇಕಿತ್ತು. ಈ ಸೇತುವೆ ಪ್ರಯಾಣದ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡಲಿದೆ. ಇದರ ಜೊತೆಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಸಾಗರ ನಡುವಿನ ಪ್ರಯಾಣದ ಸಮಯ ಸಹ ಕಡಿತವಾಗಲಿದೆ.
ಇದನ್ನೂ ಓದಿ: ಸಿಗಂದೂರು ಸೇತುವೆ : ಪ್ರವಾಸಿತಾಣದ ಮೆರಗು
ಲಾಂಚ್‌ಗಳನ್ನು ಬೇರೇಡೆ ಸಾಗಿಸಲಾಗುತ್ತಿದೆಯೇ ಇಲ್ಲ, ಲಾಂಚ್‌ಗಳನ್ನು ಬಳಸಿಕೊಂಡು ಪ್ರವಾಸೋದ್ಯಮದ ಹೊಸ ಆಯಾಮಗಳಿಗೆ ಆವಕಾಶ ಮಾಡಿಕೊಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ. ಅಂಬಾರಗೊಡ್ಲು - ಕಳಸವಳ್ಳಿ ಸೇತುವೆಯ ಕಾಮಗಾರಿ ಪೂರ್ಣಗೊಂಡ ಬಳಿಕ ಸದರಿ ಲಾಂಚ್‌ಗಳ ಸೇವೆಯು ಸ್ಥಗಿತಗೊಂಡರೆ ಲಾಂಚಿನಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಸಂಭವವಿದ್ದು, ಎಲ್ಲದಕ್ಕಿಂತ ಹೆಚ್ಚಾಗಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾದ ಲಾಂಚಿನ ಪ್ರಯಾಣವು ನಿಲ್ಲುವುದರಿಂದ ಸ್ಥಳೀಯ ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳಲಿದೆ.
ಇದನ್ನೂ ಓದಿ: ಶಿವಮೊಗ್ಗ: ಸಿಗಂದೂರು ಲಾಂಚ್ ನೌಕರರಿಗೆ ಅಭದ್ರತೆಯ ಭೀತಿ!