ನೂತನ KSRTC ಬಸ್ ಸಂಚಾರಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ

By Kannadaprabha NewsFirst Published Nov 8, 2019, 3:00 PM IST
Highlights

ಕೆಎಸ್‌ಆರ್‌ಟಿಸಿ ನೂತನ ಬಸ್ ಸಂಚಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು. ಅಲ್ಲದೇ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡಲು ಬದ್ಧವಾಗಿರುವುದಾಗಿ ಹೇಳಿದರು.

ಶಿಕಾರಿಪುರ [ನ.08]:  ತಾಲೂಕಿನ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಿ ಕೊಡಲು ಬದ್ಧವಾಗಿದ್ದು, ಈ ದಿಸೆಯಲ್ಲಿ ಈಗಾಗಲೇ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ತುರ್ತು ಆರಂಭಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಗುರುವಾರ ಪಟ್ಟಣದಿಂದ ಕೊಟ್ಟೂರಿಗೆ ಐತಿ ಹಾಸಿಕ ನಿಂಬೆಗೊಂದಿ ಸುಕ್ಷೇತ್ರದ ಮೂಲಕ ಕೆಎಸ್‌ಆರ್‌ಟಿಸಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜನತೆಗೆ ಸಂಚಾರ ವ್ಯವಸ್ಥೆಯಲ್ಲಿ ಸಕಲ ಸೌಲಭ್ಯವನ್ನು ಕಲ್ಪಿಸಿಕೊಡುವ ದಿಸೆಯಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಪಟ್ಟಣಕ್ಕೆ ಸಮೀಪದ ಕುಟ್ರಹಳ್ಳಿ ಬಳಿಯ ವಿಶಾಲ ೫ ಎಕರೆ ಕೃಷಿ ಜಾಗವನ್ನು ಕೆಎಸ್‌ಆರ್‌ಟಿಸಿ ಡಿಪೋ ಆರಂಭಕ್ಕಾಗಿ ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಡಿಪೋ ಆರಂಭವಾಗಲಿದೆ. ಪಟ್ಟಣದ ಕೆಎಸ್‌ಆರ್‌ಟಿಸಿ
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 2 ರಿಂದ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣ ಶೆಡ್ ಸಹಿತ ಮೂಲಭೂತ ಹಾಗೂ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುವುದು. ತಿಂಗಳ ಕಾಲಾವಧಿಯಲ್ಲಿ ಬಸ್ ನಿಲ್ದಾಣದ ನವೀಕರಣ ಪೂರ್ಣ
ಗೊಳ್ಳಲಿದೆ ಎಂದು ಬರವಸೆ ನೀಡಿದರು. ಕೆಎಸ್‌ಆರ್‌ಟಿಸಿ ಡಿಪೋ ಸಹಿತ ಹೊಸ ಬಸ್ ಗಳ ಸಂಚಾರಕ್ಕೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಿತ ಶ್ರಮಿಸಿದ ಸರ್ವರಿಗೂ ಅಭಿನಂದಿಸುವುದಾಗಿ ತಿಳಿಸಿದರು. 

ಮುಖ್ಯಮಂತ್ರಿಗಳ ಆಪ್ತ ಕೆ.ಎಸ್ ಗುರು ಮೂರ್ತಿ ಮಾತನಾಡಿ, ತಾಲೂಕಿಗೆ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ನಿತ್ಯ ಎಲ್ಲೆಡೆಗೆ ಒಡಾಟಕ್ಕಾಗಿ ಡಿಪೋ ಆರಂಭ ಸಂಸದ ರಾಘವೇಂದ್ರರ ಬಹು ದಿನದ ಕನಸಾಗಿದ್ದು, ಶಾಸಕ ರಾದ ಅವಧಿಯಲ್ಲಿಯೇ ಈ ಬಗ್ಗೆ ಹೆಚ್ಚಿನ
ನಿಗಾವಹಿಸಿದ್ದ ಅವರ ಕನಸು ಇದೀಗ ಫಲ ನೀಡುತ್ತಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ನಿಂಬೆಗೊಂದಿ ಸುಕ್ಷೇತ್ರ ಐತಿಹಾಸಿಕ, ಧಾರ್ಮಿಕವಾಗಿ ಪ್ರಸಿದಟಛಿವಾಗಿದ್ದು, ಸಹಸ್ರಾರು ಪ್ರಯಾಣಿಕರು ನಿಂಬೆಗೊಂದಿ ಮೂಲಕ ಕೊಟ್ಟೂರಿಗೆ ಪ್ರಯಾಣಿಸಲಿದ್ದಾರೆ. ಭಕ್ತರ ಬಹು ದಿನದ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಹೊಸ ಬಸ್ ಸಂಚಾರಕ್ಕೆ ಚಾಲನೆ
ನೀಡಲಾಗಿದೆ. ನಿತ್ಯ ಬೆಳಗ್ಗೆ 8 ಗಂಟೆಗೆ  ಹೊರಡುವ ಬಸ್ ಮಧ್ಯಾಹ್ನದ ವೇಳೆಯಲ್ಲಿ ಕೊಟ್ಟೂರು ತಲುಪಲಿದ್ದು ಪುನಃ ವಾಪಾಸಾಗಲಿದೆ ಭಕ್ತರು ಸಂಪೂರ್ಣ ಪ್ರಯೋಜನ ಪಡೆದು ಕೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಡಿ.ಎಸ್ ಈಶ್ವರಪ್ಪ, ಮಾಜಿ ಪುರಸಭಾಧ್ಯಕ್ಷ ಟಿ.ಎಸ್ ಮೋಹನ್, ವಸಂತಗೌಡ, ಚನ್ನವೀರಪ್ಪ, ಹಾಲಪ್ಪ, ಸುಕೇಂದ್ರಪ್ಪ, ಪರಶುರಾಮ ಚಾರ್ಗ ಲ್ಲಿ, ಮಹೇಂದ್ರ, ದಿಲೀಪಕುಮಾರ್, ಜಗದೀಶ ಕಮ್ಮನಹಳ್ಳಿ, ರುದ್ರಮುನಿ ಮತ್ತಿತರರು ಹಾಜರಿದ್ದರು.

click me!