ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ/ ಶಿವಮೊಗ್ಗದ ಕುಂಸಿ ಠಾಣೆಯಲ್ಲಿ ಮಾದರಿ ಕಾರ್ಯ/ ಹೆರಿಗೆ ರಜೆ ಮೇಲೆ ತೆರಳುತ್ತಿದ್ದ ಗರ್ಭಿಣಿಗೆ ಸೀಮಂತದ ಬೀಳ್ಕೊಡುಗೆ
ಶಿವಮೊಗ್ಗ(ಅ. 16) ಕೊಲೆ, ಸುಲಿಗೆ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ತಂದು ವಿಚಾರಣೆಗೆ ಒಳಪಡಿಸುವ ಪೊಲೀಸರು ಅದೆಲ್ಲವನ್ನು ಒಂದು ಕ್ಷಣ ಮರೆತು ಹೆಣ್ಣು ಮಗಳೊಬ್ಬಳಿಗೆ ಅರಿಶಿನ-ಕುಂಕುಮ ನೀಡಿದರು.
ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ಇಂಥದ್ದೊಂದು ಸೀಮಂತ ಕಾರ್ಯಕ್ಕೆ ಸಾಕ್ಷಿಯಾಯಿತು. ಅರಿಶಿನ, ಕುಂಕುಮ, ಹಣ್ಣು, ಸೀರೆ, ಕುಪ್ಪಸ, ಮಡಲಿಕ್ಕಿ ಇತ್ಯಾದಿ ಮಂಗಳ ದ್ರವ್ಯಗಳು ಪೊಲೀಸ್ ಠಾಣೆಯನ್ನು ದೇವಾಲಯದಂತೆ ಮಾಡಿತು.
ಮಂಗಳೂರು ಪೊಲೀಸ್ ಠಾಣೆಯಲ್ಲಿ ಸೀಮಂತದ ಸಂಭ್ರಮ
ಪೊಲೀಸ್ ಠಾಣೆಯೊಂದರಲ್ಲಿ ಇದೇ ಮೊದಲ ಸಾರಿ ಎಂಬಂತೆ ಸಿಬ್ಬಂದಿಯೋರ್ವರಿಗೆ ಸೀಮಂತ ಕಾರ್ಯ ನಡೆಸಲಾಯಿತು. ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಪ್ರದಾಯ ಪಾಲನೆಮಾಡಿ ಹೊಸ ಮಾದರಿಗೆ ನಾಂದಿಯಾಯಿತು.
ಕುಂಸಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕವಿತಾ ಎಂಬುವರಿಗೆ ಸೀಮಂತ ನಡೆಸಿಕೊಡಲಾಯಿತು. ಹೆರಿಗೆ ರಜೆ ಮೇಲೆ ಸಿಬ್ಬಂದಿ ಕವಿತಾ ಕೊನೆಯ ದಿನದ ಕೆಲಸ ಮುಗಿಸಿ ತೆರಳುವವರಿದ್ದರು. ಈ ವೇಳೆ ಕುಂಸಿ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ಅವರ ಆಶಯದಂತೆ ಎಲ್ಲ ಸಿಬ್ಬಂದಿ ಸೇರಿ ಸೀಮಂತ ಕಾರ್ಯ ನಡೆಸಿಕೊಟ್ಟರು.
ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ಪೇದೆ ಕವಿತಾ ಅವರಿಗೆ ಇದು ಎರಡನೇ ಮಗು. ಕೆಲ ತಿಂಗಳ ಹಿಂದೆ ಶಿವಮೊಗ್ಗ ತಹಸೀಲ್ದಾರ್ ಗಿರೀಶ್ ಅವರು ತಮ್ಮ ಕಚೇರಿಯಲ್ಲಿ ಇದೇ ರೀತಿಯಲ್ಲಿ ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಯೋರ್ವರಿಗೆ ಉಡಿ ತುಂಬಿಸಿ ಸೀಮಂತ ಕಾರ್ಯ ನಡೆಸಿ ರಜೆಯ ಮೇಲೆ ಬೀಳ್ಕೊಟ್ಟಿದ್ದರು.
ಇದರಿಂದ ಪ್ರೇರಣೆ ಪಡೆದ ಜಗದೀಶ್ ಅವರು ಕೂಡ ತಮ್ಮ ಸಹೋದ್ಯೋಗಿಯೋರ್ವರಿಗೆ ಇದೇ ರೀತಿಯ ಸೀಮಂತ ಕಾರ್ಯವನ್ನು ತಮ್ಮ ಕಚೇರಿಯಲ್ಲಿಯೇ ನಡೆಸಿದರು.ಈ ಕಾರ್ಯಕ್ರಮದಲ್ಲಿ ಹೊರಗಡೆಯ ಮಹಿಳೆಯರನ್ನು ಕರೆಯಿಸಿ ಕವಿತಾರವರಿಗೆ ಉಡಿ ತುಂಬಿಸಲಾಯಿತು. ಬಳೆ ಸೀರೆ ನೀಡಿ ಆಶೀರ್ವದಿಸಲಾಯಿತು. ಕವಿತಾ ಅವರ ಪತಿ ಶಿವಕುಮಾರ್ ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಠಾಣೆಯ ಪಿಎಸ್‌ಐ ಜಗದೀಶ್ ಮತ್ತು ಸಿಬ್ಬಂದಿ ಸೀಮಂತ ನಡೆಸಿರುವುದು ಹೊಸ ಪರಂಪರೆಗೆ ನಾಂದಿ ಹಾಡಿದೆ.