ಬಾಹ್ಯಾಕಾಶ, ಗಗನಯಾನ ಈಗ ಸಾಮಾನ್ಯವಾಗಿ ಬಿಟ್ಟಿದೆ. ಮಾನವಸಹಿತ ಗಗನಯಾನವನ್ನು ಅಮೆರಿಕದ ನಾಸಾ ನಿರಂತರವಾಗಿ ಮಾಡುತ್ತಿದೆ. ಈ ನಡುವೆ ಎಲ್ಲರಲ್ಲೂ ಕಾಡುವ ಒಂದೇ ಒಂದು ಪ್ರಶ್ನೆ ಏನೆಂದರೆ, ಹಾಗೇನಾದರೂ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಸಾವು ಕಂಡರೆ ಏನಾಗುತ್ತದೆ? ಅದಕ್ಕೆ ಉತ್ತರ ಇಲ್ಲಿದೆ.
ನವದೆಹಲಿ (ಆ.3): ಮಾನವರನ್ನು ಬಾಹ್ಯಾಕಾಶಕ್ಕೆ ಕಳಿಸುವ ಯಾನಗಳು ಅತ್ಯಂತ ಕ್ಲಿಷ್ಟಕರ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಲಿವುಡ್‌ನ ಗ್ರ್ಯಾವಿಟಿ ಚಿತ್ರ ನೋಡಿದವರಿಗೆ ಬಹುತೇಕ ಒಂದು ಪ್ರಶ್ನೆ ಎದುರಿಗೆ ಬಂದೇ ಇರುತ್ತದೆ. ಹಾಗೇನಾದರೂ ಬಾಹ್ಯಾಕಾಶದಲ್ಲಿ ಅವಗಢಗಳಾಗಿ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿಯೇ ಸಾವು ಕಂಡರೆ ಏನಾಗುತ್ತದೆ ಎನ್ನುವ ಪ್ರಶ್ನೆ. ಇದು ಸಹಜ ಕೂಡ. ನಿಮಗೆ ನೆನಪಿರಲಿ, ಮಾನವ ಭೂಮಿಯನ್ನು ಬಿಟ್ಟು ಬಾಹ್ಯಾಕಾಶದ ಶೋಧನೆಗೆ ಇಳಿದು 60 ವರ್ಷಗಳಾಗಿದೆ. ಇಲ್ಲಿಯವರೆಗೂ 20 ಮಂದಿ ಸಾವು ಕಂಡಿದ್ದಾರೆ. ನಾಸಾದ ಯೋಜನೆಗಳಲ್ಲಿ 14 ಮಂದಿ ಗಗನಯಾತ್ರಿಗಳು ಬಾಹ್ಯಾಕಾಶ ದುರಂತದಲ್ಲಿ ಸಾವು ಕಂಡಿದ್ದಾರೆ. 1986 ರಿಂದ 2003ರವರೆಗಿನ ಅವಧಿಯ ಅವಗಢದಲ್ಲಿ ನಾಸಾ ಈ ಗಗನಯಾತ್ರಿಗಳನ್ನು ಕಳೆದುಕೊಂಡಿದೆ. 1971ರ ಸುಯೇಜ್ 11 ಮಿಷನ್‌ನಲ್ಲಿ 3 ಕಾಸ್ಮೋಸ್ಯಾಟ್‌ಗಳು, 1967ರ ಅಪೋಲೋ 1 ಲಾಂಚ್ ಪ್ಯಾಡ್ ಅವಗಢದಲ್ಲಿ 3 ಆಸ್ಟ್ರೋನಟ್‌ಗಳು ಸಾವು ಕಂಡಿದ್ದಾರೆ. ಮಾನವ ಸಹಿತ ಬಾಹ್ಯಾಕಾಶ ಯಾನ ಎಷ್ಟು ಸಂಕೀರ್ಣ ಎನ್ನುವುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು.
ಆದರೆ, ನಾಸಾ 2025ರ ವೇಳೆಗೆ ಚಂದ್ರನಲ್ಲಿಗೆ ಮಾನವನನ್ನು ಕಳಿಸುವ ಯೋಜನೆ ಈಗಾಗಲೇ ಸಿದ್ಧಮಾಡಿಕೊಂಡಿದೆ. ಮುಂದಿನ ದಶಕದಲ್ಲಿ ಮಂಗಳ ಗ್ರಹಕ್ಕೆ ತನ್ನ ಯಾನಿಗಳನ್ನು ಕಳಿಸುವುದಾಗಿ ಘೋಷಣೆ ಮಾಡಿದೆ. ಅದರ ನಡುವೆ ಕಮರ್ಷಿಯಲ್ ಬಾಹ್ಯಾಕಾಶ ಯಾನ ಅಂದರೆ ಸ್ಪೇಸ್ ಟೂರಿಸಂ ಕೂಡ ಪ್ರಗತಿ ಕಾಣುತ್ತಿದೆ. ಹಾಗೇನಾದರೂ ಆದಲ್ಲಿ ಬ್ಯಾಹಾಕಾಶ ಪ್ರಯಾಣ ಎನ್ನುವುದು ಇನ್ನಷ್ಟು ಸಾಮಾನ್ಯವಾಗಲಿದೆ. ಈ ವೇಳೆ ಬಾಹ್ಯಾಕಾಶ ಯಾನದ ವೇಳೆ ಗಗನಯಾನಿಗಳು ಸಾವು ಕಾಣುವ ಅಪಾಯವೂ ಇರುತ್ತದೆ. ಈ ಹಂತದಲ್ಲಿ ಬರುವ ಒಂದೇ ಒಂದು ಅಗತ್ಯವಾದ ಪ್ರಶ್ನೆ ಏನೆಂದರೆ, ಯಾರಾದರೂ ಬಾಹ್ಯಾಕಾಶ ಯಾವದಲ್ಲಿ ಸಾವು ಕಂಡರೆ ಅವರ ದೇಹವನ್ನು ಏನು ಮಾಡಲಾಗುತ್ತದೆ ಎನ್ನುವುದು..
ಚಂದ್ರ ಅಥವಾ ಮಂಗಳ ಗ್ರಹದಲ್ಲಿ ಗಗನಯಾನಿ ಸಾವು ಕಂಡರೆ ಏನಾಗುತ್ತದೆ?: ಗಗನಯಾತ್ರಿಗಳನ್ನು ಆರೋಗ್ಯವಾಗಿಡುವ ನಿಟ್ಟಿನಲ್ಲಿ ಹೊಸ ಹೊಸ ಪರೀಕ್ಷೆಯನ್ನು ಮಾಡುವ ಬಾಹ್ಯಾಕಾಶ ವೈದ್ಯಕೀಯ ವೈದ್ಯರೊಬ್ಬರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರಾನ್ಸೇಷನಲ್ ರಿಸರ್ಚ್ ಇನ್ಸ್‌ಟಿಟ್ಯೂಟ್ ಫಾರ್ ಸ್ಪೇಸ್ ಹೆಲ್ತ್‌ನ ವೈದ್ಯರು ಗಗನಯಾತ್ರಿಗಳು ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಸಾಧ್ಯವಾದಷ್ಟು ಆರೋಗ್ಯಕರವಾಗಿರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇವರು ನೀಡಿರುವ ಮಾಹಿತಿಯ ಪ್ರಕಾರ, ಹಾಗೇನಾದರೂ ಕಡಿಮೆ ಭೂಕ್ಷಕ್ಷೆಯ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಅಂದರೆ, ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್‌ನಲ್ಲಿ ಸಾವು ಕಂಡರೆ, ಅಂಥ ಸಿಬ್ಬಂದಿಯ ದೇಹವನ್ನು ಕೆಲವೇ ಗಂಟೆಗಳಲ್ಲಿ ಕ್ಯಾಪ್ಸುಲ್‌ನ ಮೂಲಕ ಭೂಮಿಗೆ ಕಳುಹಿಸಿಕೊಡಲಾಗುತ್ತದೆ. ಹಾಗೇನಾದರೂ ಸಾವು ಚಂದ್ರನ ಮೇಲೆ ಸಂಭವಿಸಿದಲ್ಲಿ ಸಿಬ್ಬಂದಿ ಕೆಲವೇ ದಿನಗಳಲ್ಲಿ ಮೃತ ದೇಹದೊಂದಿಗೆ ಭೂಮಿಗೆ ವಾಪಾಸ್ ಬರಬಹುದು. ನಾಸಾ ಇಂಥ ಸಾವುಗಳು ಕಂಡಲ್ಲಿ ಮೃತದೇಹಗಳನ್ನು ಹೇಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಕೆಲವು ನಿಯಮಾವಳಿಗಳು ರೂಪಿಸಿದೆ. ಹಾಗಂತ ಚಂದ್ರನ ಮೇಲೆ ಯಾರಾದರೂ ಸಾವು ಕಂಡಲ್ಲಿ ದೇಹದ ಸಂರಕ್ಷಣೆ ನಾಸಾದ ಪ್ರಮುಖ ಆದ್ಯತೆ ಆಗಿರೋದಿಲ್ಲ. ಬದಲಿಗೆ ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ವಾಪಾಸ್ ತರುವುದೇ ಪ್ರಮುಖ ಆದ್ಯತೆ ಆಗಿರುತ್ತದೆ.
ಆದರೆ, ಇದೇ ಮಾತನ್ನು 300 ಮಿಲಿಯನ್ ಮೈಲಿ (ಅಂದರೆ 358.59 ಮಿಲಿಯನ್ ಕಿಲೋಮೀಟರ್) ದೂರದ ಮಂಗಳಗ್ರಹದ ಯಾನದ ವೇಳೆ ಉಳಿಸಿಕೊಳ್ಳಲು ಆಗೋದಿಲ್ಲ. ಹಾಗೇನಾದರೂ ಮಂಗಳ ಗ್ರಹಕ್ಕೆ ಯಾನ ಮಾಡುವ ವೇಳೆಯಲ್ಲಿ ಗಗನಯಾತ್ರಿ ಸಾವು ಕಂಡಲ್ಲಿ ಅದನ್ನು ಭೂಮಿಗ ವಾಪಾಸ್ ಕಳಿಸಲು ಸಾಧ್ಯವಿಲ್ಲ. ಹಾಗೇನಾದರೂ ಅದು ವಾಪಾಸ್ ಬರೋದಿದ್ದರೆ, ಉಳಿದ ಸಿಬ್ಬಂದಿಗಳ ಜೊತೆಗೆ ವರ್ಷದ ಬಳಿಕ ವಾಪಾಸ್ ಬರಬಹುದು. ಇಲ್ಲಿಯವರೆಗೂ ಮೃತದೇಹವನ್ನು ನೌಕೆಯಲ್ಲೇ ಇರುವ ಪ್ರತ್ಯೇಕ ಚೇಂಬರ್‌ನಲ್ಲಿ ವಿಶೇಷ ಬಾಡಿ ಬ್ಯಾಗ್‌ನಲ್ಲಿ ಸಂರಕ್ಷಿಸಿ ಇಡುತ್ತಾರೆ. ನೌಕೆಯ ಒಳಗಿನ ಸ್ಥಿರ ತಾಪಮಾನ ಹಾಗೂ ತೇವಾಂಶ ಈ ದೇಹವನ್ನು ಸಂರಕ್ಷಿಸಿ ಇಡಲು ಸಹಾಯ ಮಾಡುತ್ತದೆ. ಬಾಹ್ಯಾಕಾಶ ನಿಲ್ದಾಣ ಅಥವಾ ಬಾಹ್ಯಾಕಾಶ ನೌಕೆಯಂತಹ ಒತ್ತಡದ ವಾತಾವರಣದಲ್ಲಿ ಯಾರಾದರೂ ಸತ್ತರೆ ಮಾತ್ರ ಆ ಎಲ್ಲಾ ಸನ್ನಿವೇಶಗಳು ಅನ್ವಯಿಸುತ್ತವೆ.
ಬಾಹ್ಯಾಕಾಶ ಸೂಟ್‌ನ ರಕ್ಷಣೆಯಿಲ್ಲದೆ ಯಾರಾದರೂ ಬಾಹ್ಯಾಕಾಶಕ್ಕೆ ಕಾಲಿಟ್ಟಲ್ಲಿ ಅಂಥಾ ಯಾತ್ರಿ ತಕ್ಷಣವೇ ಸಾವು ಕಾಣುತ್ತದೆ. ಬಾಹ್ಯಾಕಾಶದ ನಿರ್ವಾತಕ್ಕೆ ಆತ ಒಡ್ಡುಕೊಳ್ಳುವ ಕಾರಣ ಉಸಿರಾಡಲು ಸಾಧ್ಯವಾಗೋದಿಲ್ಲ. ರಕ್ತ ಹಾಗೂ ದೇಹದ ಭಾಗಗಳು ಕುದಿಯಲು ಆರಂಭಿಸಿ ತಕ್ಷಣವೇ ಸಾವು ಕಾಣುತ್ತಾನೆ.
ಚಂದ್ರನ ಕಕ್ಷೆ ಸೇರುವ ಹೆದ್ದಾರಿಯಲ್ಲಿದೆ ಚಂದ್ರಯಾನ-3, ಮುಂದಿರುವ ಸವಾಲೇನು?
ಬ್ಯಾಹ್ಯಾಕಾಶ ಸೂಟ್ ಇಲ್ಲದೇ ಹೊರಗೆ ಹೋದರೆ ಏನಾಗುತ್ತದೆ?: ಚಂದ್ರನಲ್ಲಿ ಯಾವುದೇ ವಾತಾವರಣವಿಲ್ಲ. ಇದ್ದರೂ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಇನ್ನು ಮಂಗಳಗ್ರಹದಲ್ಲಿ ಆಮ್ಲಜನಕವೇ ಇಲ್ಲ. ಹಾಗೇನಾದರೂ ಬ್ಯಾಹಾಕಾಶ ಸೂಟ್ ಇಲ್ಲದೇ ಹೊರಬಂದಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿ ರಕ್ತ ಕುದಿಯಲು ಆರಂಭಿಸಿ ಸಾವು ಕಾಣುತ್ತಾನೆ.
ಮಂಗಳ ಗ್ರಹಕ್ಕೆ ಸೂಪರ್‌ಫಾಸ್ಟ್ ಪ್ರಯಾಣ, ನ್ಯೂಕ್ಲಿಯರ್ ಚಾಲಿತ ನೌಕೆ ಸಿದ್ಧಪಡಿಸಲಿರುವ ನಾಸಾ!
ಇವರ ದೇಹವನ್ನು ಸಂರಕ್ಷಣೆ ಮಾಡುವುದು ಹೇಗೆ?: ಮಂಗಳಗ್ರಹದ ಮೇಲೆ ಕಾಲಿಟ್ಟಾಗ ಯಾವುದೇ ಗಗನಯಾತ್ರಿ ಸಾವು ಕಂಡಲ್ಲಿ ಅವರ ಅಂತ್ಯಸಂಸ್ಕಾರ ಮಾಡುವುದು ಕಷ್ಟ. ಅಲ್ಲಿ ದೇಹವನ್ನು ಸುಡಲು ಸಾಕಷ್ಟು ಇಂಧನ ಬೇಕಾಗುತ್ತದೆ. ಇನ್ನು ಸಮಾಧಿ ಮಾಡುವುದು ಕೂಡ ಸಾಧ್ಯವಿಲ್ಲ. ಯಾಕೆಂದರೆ, ದೇಹದ ಬ್ಯಾಕ್ಟೀರಿಯಾ ಹಾಗೂ ಇತರ ಜೀವಿಗಳು ಮಂಗಳ ಗ್ರಹದ ಮೇಲ್ಮೈಅನ್ನು ಕಲುಷಿತ ಮಾಡಬಹುದು. ಬದಲಾಗಿ ಸಿಬ್ಬಂದಿ ಈ ದೇಹವನ್ನು ವಿಶೇಷ ಚೀಲದಲ್ಲಿ ಸಂರಕ್ಷಣೆ ಮಾಡಿ ಭೂಮಿಗೆ ವಾಪಾಸ್ ತರಬೇಕಾಗುತ್ತದೆ. ಹಾಗಂತ ಇದೇ ಅಂತಿಮವಾಗುತ್ತದೆ ಎನ್ನುವ ಹಾಗೆಯೂ ಇಲ್ಲ. ಈ ಬಗ್ಗೆ ನಾಸಾ ಇನ್ನೂ ಯೋಚನೆಯ ಹಂತದಲ್ಲಿದೆ. ಮಂಗಳಗ್ರಹದಲ್ಲಿ ಸಾವುಗಳು ಆದಲ್ಲಿ ಅದನ್ನು ಸಿಬ್ಬಂದಿ ಈ ದುಃಖವನ್ನು ಹೇಗೆ ಭರಿಸುತ್ತಾರೆ. ಭೂಮಿಯಲ್ಲಿ ಆ ಸಿಬ್ಬಂದಿಯ ಕುಟುಂಬದ ಸ್ಥಿತಿ ಏನು, ಮೃತ ದೇಹವನ್ನು ಏನು ಮಾಡಬೇಕು ಈ ಎಲ್ಲಾ ನಿಟ್ಟಿನಲ್ಲಿ ನಾಸಾ ಸಮಗ್ರ ಆಲೋಚನೆಯಲ್ಲಿದೆ.