
ಲಂಡನ್: ಲಂಡನ್ನ ಪ್ರಸಿದ್ಧ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿರುವ ಪ್ರಾಚೀನ ರೋಮನ್ ಕಲ್ಲಿನ ಶವಪೆಟ್ಟಿಗೆಯ (ಸಾರ್ಕೊಫಾಗಸ್) ಒಳಗಿದ್ದ ಅಸ್ಥಿಪಂಜರದ ಕುರಿತು ಶತಮಾನಗಳಿಂದಲೂ ಇದ್ದ ರಹಸ್ಯಕ್ಕೆ ಕೊನೆಗೂ ಆಧುನಿಕ ವಿಧಿವಿಜ್ಞಾನ ಹಾಗೂ ಪುರಾತತ್ತ್ವ ಶಾಸ್ತ್ರದ ಸಂಶೋಧಕರು ತೆರೆ ಎಳೆದಿದ್ದಾರೆ. ಶವಪೆಟ್ಟಿಗೆಯ ಮೇಲಿರುವ ಹೆಸರಿನಂತೆ ಇದು ರೋಮನ್ ಕಾಲದ ಶ್ರೀಮಂತ ವ್ಯಕ್ತಿಯ ಸಮಾಧಿಯಲ್ಲ, ಬದಲಾಗಿ 11ನೇ ಶತಮಾನದ ಉನ್ನತ ಶ್ರೇಣಿಯ ಮಧ್ಯಕಾಲೀನ ಸನ್ಯಾಸಿಯ ಅಸ್ಥಿಪಂಜರ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.
'ಡೈಲಿ ಮೇಲ್' ಮತ್ತು ವೆಸ್ಟ್ಮಿನಿಸ್ಟರ್ ಅಬ್ಬೆಯ ಅಧಿಕೃತ ವೆಬ್ಸೈಟ್ ನೀಡಿರುವ ವರದಿಗಳ ಪ್ರಕಾರ, ಈ ಸುಣ್ಣದ ಕಲ್ಲಿನ ಶವಪೆಟ್ಟಿಗೆಯನ್ನು 1820 ರಲ್ಲಿ ವೆಸ್ಟ್ಮಿನಿಸ್ಟರ್ ಅಬ್ಬೆಯ ಉತ್ತರ ಭಾಗದಲ್ಲಿ ಕಾಮಗಾರಿ ನಡೆಸುತ್ತಿದ್ದಾಗ ಕಾರ್ಮಿಕರು ಆಕಸ್ಮಿಕವಾಗಿ ಪತ್ತೆಹಚ್ಚಿದ್ದರು. ಆ ವೇಳೆ ಶವಪೆಟ್ಟಿಗೆಯ ಮುಚ್ಚಳ ಆರು ತುಂಡುಗಳಾಗಿ ಮುರಿದುಬಿದ್ದಿತ್ತು. ನಂತರ 1869 ರಲ್ಲಿ ಇದನ್ನು ಅಧಿಕೃತವಾಗಿ ಉತ್ಖನನ ಮಾಡಿ ಹೊರತೆಗೆಯಲಾಯಿತು.
ಈ ಶವಪೆಟ್ಟಿಗೆಯ ಮೇಲಿದ್ದ ಲ್ಯಾಟಿನ್ ಶಾಸನದಲ್ಲಿ 'ವ್ಯಾಲೇರಿಯಸ್ ಅಮಂಡಿನಸ್' ಎಂಬ ಹೆಸರು ಕೆತ್ತಲಾಗಿತ್ತು. ಈತ ಕ್ರಿಸ್ತಶಕ 300 ರಿಂದ 400 ರ ಸುಮಾರಿಗೆ ಲಂಡನ್ನಲ್ಲಿ ವಾಸಿಸುತ್ತಿದ್ದ ಅತ್ಯಂತ ಶ್ರೀಮಂತ ರೋಮನ್ ಪ್ರಜೆ ಎಂದು ಭಾವಿಸಲಾಗಿತ್ತು. ಹೀಗಾಗಿ, ಇಷ್ಟು ವರ್ಷಗಳ ಕಾಲ ಈ ಸಮಾಧಿ ವ್ಯಾಲೇರಿಯಸ್ಗೇ ಸೇರಿದ್ದು ಎಂದು ನಂಬಲಾಗಿತ್ತು.
ಆದರೆ, ಶವಪೆಟ್ಟಿಗೆಯ ಮುಚ್ಚಳದ ಮೇಲೆ ಕೆತ್ತಲಾಗಿದ್ದ ದೊಡ್ಡ ಲ್ಯಾಟಿನ್ ಶಿಲುಬೆಯ ಶೈಲಿಯನ್ನು ಪರಿಶೀಲಿಸಿದಾಗ ಪುರಾತತ್ವಜ್ಞರಿಗೆ ಅನುಮಾನ ಮೂಡಲು ಆರಂಭವಾಯಿತು. ಏಕೆಂದರೆ ಆ ಶಿಲುಬೆಯ ಕೆತ್ತನೆಯು 10 ನೇ ಅಥವಾ 11 ನೇ ಶತಮಾನದ ವಿನ್ಯಾಸಕ್ಕೆ ಸೇರಿತ್ತು. ಅಂದರೆ, ವ್ಯಾಲೇರಿಯಸ್ ಅಮಂಡಿನಸ್ ಮರಣ ಹೊಂದಿದ ನೂರಾರು ವರ್ಷಗಳ ನಂತರ ಈ ಶಿಲುಬೆಯನ್ನು ಕೆತ್ತಲಾಗಿತ್ತು. ಇದು ರೋಮನ್ ಶವಪೆಟ್ಟಿಗೆಯನ್ನು ನಂತರದ ಕಾಲದಲ್ಲಿ ಯಾರೋ ಮರುಬಳಕೆ ಮಾಡಿದ್ದಾರೆ ಎಂಬ ಸುಳಿವು ನೀಡಿತು.
ಸತ್ಯಾಸತ್ಯತೆ ತಿಳಿಯಲು ಅಸ್ಥಿಪಂಜರದ ಮೂಳೆಯ ಮಾದರಿಯನ್ನು ಸ್ಕಾಟಿಷ್ ವಿಶ್ವವಿದ್ಯಾಲಯಗಳ ಪರಿಸರ ಸಂಶೋಧನಾ ಕೇಂದ್ರಕ್ಕೆ ಕಳುಹಿಸಿ 'ರೇಡಿಯೋ ಕಾರ್ಬನ್ ಡೇಟಿಂಗ್' ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯ ವರದಿಯಂತೆ, ಈ ಅಸ್ಥಿಪಂಜರವು ಕ್ರಿಸ್ತ ಶಕ 987 ರಿಂದ 1052 ರ ನಡುವಿನ ಅವಧಿಗೆ ಸೇರಿದ್ದು ಎಂಬುದು ಸ್ಪಷ್ಟವಾಯಿತು. ಇದರಿಂದಾಗಿ ಶವಪೆಟ್ಟಿಗೆಯಲ್ಲಿದ್ದ ವ್ಯಕ್ತಿ ರೋಮನ್ ಯುಗದ ವ್ಯಾಲೇರಿಯಸ್ ಅಲ್ಲ, ಬದಲಾಗಿ ಸ್ಯಾಕ್ಸನ್ ಯುಗದ ಕೊನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿ ಎಂಬುದು ದೃಢಪಟ್ಟಿತು.
ಪ್ರಿ-ಕನ್ಸ್ಟ್ರಕ್ಟ್ ಆರ್ಕಿಯಾಲಜಿಯ ಮಾನವ ಮೂಳೆ ತಜ್ಞ ಜೇಮ್ಸ್ ಯಂಗ್ ಲ್ಯಾಂಗ್ಥಾರ್ನ್ ಅವರ ವಿಶ್ಲೇಷಣೆಯಂತೆ, ಈ ಅಸ್ಥಿಪಂಜರವು ಸುಮಾರು 5 ಅಡಿ 9 ಇಂಚು ಎತ್ತರವಿದ್ದ ಹಾಗೂ 35 ರಿಂದ 49 ವರ್ಷ ವಯಸ್ಸಿನ ನಡುವೆ ಮೃತಪಟ್ಟ ಗಂಡಸಿನದ್ದಾಗಿದೆ. 19 ನೇ ಶತಮಾನದಲ್ಲಿ ಮಾಡಲಾಗಿದ್ದ ಅಂದಾಜಿನಲ್ಲಿ ಇದನ್ನು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕನದ್ದು ಎಂದು ಭಾವಿಸಲಾಗಿತ್ತು, ಆದರೆ ಹೊಸ ಸಂಶೋಧನೆ ಅದನ್ನು ತಳ್ಳಿಹಾಕಿದೆ.
ವೆಸ್ಟ್ಮಿನಿಸ್ಟರ್ ಅಬ್ಬೆಯ ಪ್ರಮುಖ ಪುರಾತತ್ವಶಾಸ್ತ್ರಜ್ಞ ಪ್ರೊಫೆಸರ್ ವಾರ್ವಿಕ್ ರಾಡ್ವೆಲ್ ಅವರ ಪ್ರಕಾರ, ಈ ಅಸ್ಥಿಪಂಜರವು 11ನೇ ಶತಮಾನದಲ್ಲಿದ್ದ ಬೆನೆಡಿಕ್ಟೈನ್ ಮಠದ ಅಬ್ಬೆಯ ಮಠಾಧೀಶರಾಗಿದ್ದ ( ಕ್ರೈಸ್ತ ಗುರು) 'ಆಲ್ಫ್ವಿಗ್' ಅಥವಾ ಅವರ ಉತ್ತರಾಧಿಕಾರಿ 'ವುಲ್ನೋತ್' ಎಂಬ ಇಬ್ಬರಲ್ಲಿ ಒಬ್ಬರದ್ದಾಗಿರಬಹುದು.
ವುಲ್ನೋತ್: 1049 ರಲ್ಲಿ ನಿಧನರಾಗಿದ್ದು, ಅವರನ್ನು ಅಬ್ಬೆಯಲ್ಲಿ ಸಮಾಧಿ ಮಾಡಲಾಗಿತ್ತು. ಈ ಇಬ್ಬರೂ ವ್ಯಕ್ತಿಗಳು ರೇಡಿಯೋ ಕಾರ್ಬನ್ ಡೇಟಿಂಗ್ ಸಮಯ ಮತ್ತು ಮೂಳೆಗಳ ವಯಸ್ಸಿನ ಅಂದಾಜಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತಾರೆ.
ಸಮಾಧಿಯ ರಚನೆಯು ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಮಧ್ಯಕಾಲೀನ ಯುಗದಲ್ಲಿ ಅತ್ಯಂತ ಪ್ರಭಾವಿ ಹಾಗೂ ಗೌರವಾನ್ವಿತ ವ್ಯಕ್ತಿಗೆ ಮಾತ್ರ ಇಂತಹ ಅದ್ದೂರಿ ಸಮಾಧಿಯನ್ನು ನೀಡಲಾಗುತ್ತಿತ್ತು. ಪ್ರಾಚೀನ ರೋಮನ್ ಕಲ್ಲಿನ ಶವಪೆಟ್ಟಿಗೆಯೊಳಗೆ ಮೊದಲು ಮರದ ಶವಪೆಟ್ಟಿಗೆಯನ್ನು ಇರಿಸಿ, ಅದರ ಮೇಲೆ ಹೊಸ ಶಿಲುಬೆ ಕೆತ್ತಿದ ಕಲ್ಲಿನ ಮುಚ್ಚಳವನ್ನು ಮುಚ್ಚಲಾಗಿತ್ತು. ಶವಪೆಟ್ಟಿಗೆಯ ಸುತ್ತಲೂ ಕಂಡುಬಂದ ಬಿಳಿ ಸುಣ್ಣದ ಆಯತಾಕಾರದ ಕುರುಹುಗಳು, ಕಾಲಕ್ರಮೇಣ ಮರದ ಶವಪೆಟ್ಟಿಗೆ ಸಂಪೂರ್ಣವಾಗಿ ಕೊಳೆತು ಹೋಗಿರುವುದನ್ನು ತೋರಿಸುತ್ತವೆ.
ಒಟ್ಟಾರೆಯಾಗಿ, ವಿಜ್ಞಾನ ಮತ್ತು ಇತಿಹಾಸದ ಆಧುನಿಕ ತಂತ್ರಜ್ಞಾನಗಳು ಒಂದಾಗುವ ಮೂಲಕ, ಶತಮಾನಗಳಿಂದ ವೆಸ್ಟ್ಮಿನಿಸ್ಟರ್ ಅಬ್ಬೆಯಲ್ಲಿ ಮುಚ್ಚಿಹೋಗಿದ್ದ ಕಲ್ಲಿನ ಸಮಾಧಿಯ ನೈಜ ಇತಿಹಾಸವನ್ನು ಜಗತ್ತಿನ ಮುಂದೆ ತೆರೆದಿಟ್ಟಿವೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.