
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ನಾಸಾದ ಗಗನಯಾತ್ರಿ, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ನಡೆಸಿದ ಸುದೀರ್ಘ ಬಾಹ್ಯಾಕಾಶ ವಾಸ ಹಲವಾರು ಮಹತ್ವದ ಒಳನೋಟಗಳನ್ನು ಒದಗಿಸಿದ್ದು, ಇವು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ, ಅದರಲ್ಲೂ ಚಂದ್ರ ಮತ್ತು ಮಂಗಳ ಗ್ರಹಗಳಿಗೆ ತೆರಳುವ ಸುದೀರ್ಘ ಬಾಹ್ಯಾಕಾಶ ಯಾನಗಳಿಗೆ ಬಹಳಷ್ಟು ನೆರವಾಗಲಿವೆ. ಮೂಲತಃ ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಯಾನ ಕೇವಲ ಎಂಟು ದಿನಗಳಿಗೆ ಸೀಮಿತವಾಗಿತ್ತು. ಆದರೆ, ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಹೊಂದಿದ್ದ ತಾಂತ್ರಿಕ ದೋಷಗಳ ಕಾರಣದಿಂದ ಅವರ ಬಾಹ್ಯಾಕಾಶ ವಾಸ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸಿತು. ಈ ಅನುಭವ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಹಲವಾರು ಮುಖ್ಯ ಅಂಶಗಳತ್ತ ಬೆಳಕು ಚೆಲ್ಲಿದೆ.
1. ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಬೇಕು ಹೊಂದಿಕೊಳ್ಳುವ ಗುಣ
ಸುನಿತಾ ವಿಲಿಯಮ್ಸ್ ಅವರ ಸುದೀರ್ಘ ಬಾಹ್ಯಾಕಾಶ ಯೋಜನೆ ಬಾಹ್ಯಾಕಾಶ ಯಾತ್ರೆಗಳಲ್ಲಿ ಅತ್ಯಂತ ಮುಖ್ಯವಾಗಿರುವ ಹೊಂದಿಕೊಳ್ಳುವ ಗುಣದ ಅಗತ್ಯವನ್ನು ಪ್ರದರ್ಶಿಸಿದೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಹೊಂದಿದ್ದ ತಾಂತ್ರಿಕ ದೋಷಗಳ ಪರಿಣಾಮವಾಗಿ ಅವರ ಪುನರಾಗಮನ ವಿಳಂಬಗೊಂಡಿತು. ಇದು ಇಂತಹ ಸಂದರ್ಭಗಳಲ್ಲಿ ಬೇಕಾಗುವ ಪ್ರಬಲ ಪರ್ಯಾಯ ಯೋಜನೆಗಳು, ಹೆಚ್ಚುವರಿ ಬಾಹ್ಯಾಕಾಶ ನೌಕೆ, ಮತ್ತು ಹೊಂದಿಕೊಳ್ಳಬಲ್ಲ ಯೋಜನಾ ಕಾರ್ಯತಂತ್ರಗಳ ಅವಶ್ಯಕತೆಯನ್ನು ಪ್ರದರ್ಶಿಸಿದೆ. ಆ ಮೂಲಕ ಇಂತಹ ಅನಿರೀಕ್ಷಿತ ಸವಾಲುಗಳ ನಡುವೆಯೂ ಗಗನಯಾತ್ರಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಸಾಧ್ಯವಾಗುತ್ತದೆ.
ಮನೆಗೆ ಮರಳಲು ಸಜ್ಜಾದ ಸುನಿತಾ ವಿಲಿಯಮ್ಸ್: ಸಾಗರದಲ್ಲಿ ಇಳಿದ ನಂತರದ ಹಂತಗಳೇನು?
2. ಬಾಹ್ಯಾಕಾಶ ನೌಕೆಗಳ ವ್ಯವಸ್ಥೆಗಳ ನಂಬಿಕಾರ್ಹತೆ
ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆ ತರುವಲ್ಲಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ವಿಫಲವಾಗಿದೆ. ಇದು ಬಾಹ್ಯಾಕಾಶ ನೌಕೆಗಳ ಉಡಾವಣೆಗೂ ಮುನ್ನ ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವನ್ನು ಪ್ರದರ್ಶಿಸಿದೆ. ಈ ಯೋಜನೆ, ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ನಂತಹ ಪರ್ಯಾಯ ಆಯ್ಕೆಗಳ ಮಹತ್ವವನ್ನು ಸಾಬೀತುಪಡಿಸಿದೆ. ಆ ಮೂಲಕ, ಪ್ರಾಥಮಿಕ ವ್ಯವಸ್ಥೆ ವಿಫಲವಾದರೂ, ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳುವುದನ್ನು ಖಾತ್ರಿಪಡಿಸಲಾಗುತ್ತದೆ.
3. ಆರೋಗ್ಯದ ಮೇಲೆ ಸುದೀರ್ಘ ಬಾಹ್ಯಾಕಾಶ ವಾಸದ ಪರಿಣಾಮಗಳು
ಬಾಹ್ಯಾಕಾಶದಲ್ಲಿ ಸುದೀರ್ಘ ಸಮಯ ವಾಸ ಮಾಡುವುದರಿಂದ ಹಲವಾರು ಪ್ರಮುಖ ಆರೋಗ್ಯ ಸವಾಲುಗಳು ಕಾಣಿಸಿಕೊಳ್ಳುತ್ತವೆ. ಅವೆಂದರೆ:
ದೀರ್ಘಕಾಲ ತೂಕಾರಾಹಿತ್ಯ ಸ್ಥಿತಿಯಲ್ಲಿ ಇರುವುದರಿಂದ ಸ್ನಾಯುಗಳ ಕುಸಿತ ಮತ್ತು ಮೂಳೆಯ ಸಾಂದ್ರತೆ ನಷ್ಟವಾಗುತ್ತದೆ.
ದೈಹಿಕ ದ್ರವಗಳ ಚಲನೆಯಿಂದ ದೃಷ್ಟಿ ಮತ್ತು ಹೃದಯದ ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ.
ದೇಹದ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಸುನಿತಾ ವಿಲಿಯಮ್ಸ್ ಅವರ ಸುದೀರ್ಘ ಬಾಹ್ಯಾಕಾಶ ವಾಸ ಹೊಸ ವೈದ್ಯಕೀಯ ಮಾಹಿತಿಗಳನ್ನು ಒದಗಿಸಿದ್ದು, ಅವುಗಳು ಡೀಪ್ ಸ್ಪೇಸ್ ಅನ್ವೇಷಣೆಗೆ ಬೇಕಾಗುವ ಆಧುನಿಕ ವ್ಯಾಯಾಮ ಪ್ರಕ್ರಿಯೆಗಳು, ಮತ್ತು ವೈದ್ಯಕೀಯ ಶಿಷ್ಟಾಚಾರಗಳನ್ನು ರೂಪಿಸಲು ನೆರವಾಗಲಿವೆ.
4. ಬಾಹ್ಯಾಕಾಶ ವಿಕಿರಣಗಳ ಅಪಾಯದ ಅರಿಯುವಿಕೆ
ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲಿ ತೆರಳುವ ಗಗನಯಾತ್ರಿಗಳು ಅಪಾರ ಪ್ರಮಾಣದ ವಿಕಿರಣಗಳಿಗೆ ತೆರೆಯಲ್ಪಡುತ್ತಾರೆ. ಇದು ಅವರ ಜೀವಕೋಶಗಳಿಗೆ ಹಾನಿ ಉಂಟುಮಾಡಿ, ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೊಂಚ ಮಟ್ಟಿಗೆ ವಿಕಿರಣಗಳಿಗೆ ತಡೆ ಒಡ್ಡುತ್ತದಾದರೂ, ಇಂತಹ ಬಾಹ್ಯಾಕಾಶ ಯೋಜನೆಗಳು ವಿಜ್ಞಾನಿಗಳಿಗೆ ವಿಕಿರಣ ರಕ್ಷಣಾ ತಂತ್ರಜ್ಞಾನಗಳಲ್ಲಿ ಸಂಶೋಧನೆ ನಡೆಸಿ, ಡೀಪ್ ಸ್ಪೇಸ್ ಯೋಜನೆಗಳಿಗೆ ಸೂಕ್ತ ತಯಾರಿ ನಡೆಸಲು ಅನುಕೂಲ ಮಾಡಿಕೊಡುತ್ತವೆ.
5. ಮಾನಸಿಕ ಸವಾಲುಗಳು ಮತ್ತು ಸಿಬ್ಬಂದಿಗಳ ಸ್ಥಿರತೆ
ಬಾಹ್ಯಾಕಾಶದ ವಾತಾವರಣದಲ್ಲಿ ಅತ್ಯಂತ ಕನಿಷ್ಠ ಪ್ರಮಾಣದ ಪ್ರದೇಶದಲ್ಲಿ ಬಹುತೇಕ ಒಂದು ವರ್ಷ ಕಾಲ ವಾಸಿಸುವುದು ನಿಜಕ್ಕೂ ಗಗನಯಾತ್ರಿಗಳ ಮೇಲೆ ಮಾನಸಿಕ ಪರಿಣಾಮವನ್ನೂ ಬೀರಲಿದೆ. ಸುನಿತಾ ವಿಲಿಯಮ್ಸ್ ಅವರ ಸುದೀರ್ಘ ಬಾಹ್ಯಾಕಾಶ ಯೋಜನೆ ಮಾನಸಿಕ ಆರೋಗ್ಯ ಸಂಪನ್ಮೂಲಗಳು, ಸಿಬ್ಬಂದಿಗಳ ಮನಸ್ಥಿತಿ, ಮತ್ತು ಭೂಮಿಯ ಜೊತೆಗಿನ ಸಂವಹನದ ಅವಶ್ಯಕತೆಯನ್ನು ತೋರಿಸಿದೆ. ಈ ಹೊಳಹುಗಳು ಭವಿಷ್ಯದ ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳಿಗೆ ನೆರವು ನೀಡಲು ಸಹಕಾರಿಯಾಗಲಿವೆ.
6. ಬಾಹ್ಯಾಕಾಶದಿಂದ ವೈಜ್ಞಾನಿಕ ಕೊಡುಗೆಗಳು
ಇಷ್ಟೆಲ್ಲ ಸವಾಲುಗಳ ಹೊರತಾಗಿಯೂ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 150ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದೆ. ಅವುಗಳಲ್ಲಿ ಕೆಲವು ಮುಖ್ಯ ಪ್ರಯೋಗಗಳೆಂದರೆ:
ಸೂಕ್ಷ್ಮ ಗುರುತ್ವಾಕರ್ಷಣೆಗೆ ಮಾನವರ ಹೊಂದಾಣಿಕೆಯ ಕುರಿತು ಜೈವಿಕ ಅಧ್ಯಯನ
ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ನೂತನ ತಂತ್ರಜ್ಞಾನಗಳ ಪರೀಕ್ಷೆ
ಭೂಮಿಯಲ್ಲಿನ ಉದ್ಯಮಗಳಿಗೆ ನೆರವಾಗಬಲ್ಲ ವಸ್ತುಗಳ ಅಧ್ಯಯನ
ಇಂತಹ ಪ್ರಯೋಗಗಳು ಮುಂದಿನ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಬಲ್ಲಂತಹ ಮಾಹಿತಿಗಳನ್ನು ಒದಗಿಸುತ್ತವೆ.
7. ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಬಲವರ್ಧನೆ
ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಅನುಭವ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಗೊಳಿಸಲು ಸ್ಪೇಸ್ಎಕ್ಸ್ ರೀತಿಯ ಖಾಸಗಿ ಸಂಸ್ಥೆಗಳ ಪಾತ್ರವನ್ನು ಪ್ರದರ್ಶಿಸಿದೆ. ಗಗನಯಾತ್ರಿಗಳನ್ನು ಭೂಮಿಗೆ ಕರೆತರಲು ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೆಚ್ಚುವರಿ ಬಾಹ್ಯಾಕಾಶ ನೌಕೆಯಾಗಿ ಬಳಸುವುದು ನಾಸಾ, ವಾಣಿಜ್ಯಿಕ ಬಾಹ್ಯಾಕಾಶ ಹಾರಾಟ ಸಂಸ್ಥೆಗಳು ಮತ್ತು ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಸಹಯೋಗ ಭವಿಷ್ಯದ ಚಂದ್ರ, ಮಂಗಳ ಗ್ರಹಗಳ ಅನ್ವೇಷಣೆಗಳಿಗೆ ಪೂರಕವಾಗಲಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ
8. ಡೀಪ್ ಸ್ಪೇಸ್ ಪ್ರಯಾಣಕ್ಕೆ ಕಾರ್ಯಾಚರಣಾ ಹೊಂದಾಣಿಕೆ
ಯೋಜನೆಗಳ ವೇಳಾಪಟ್ಟಿಯನ್ನು ಸರಿಯಾಗಿ ಹೊಂದಿಸುವುದು, ಸಂಪನ್ಮೂಲಗಳನ್ನು ಸರಿಯಾಗಿ ವಿನಿಯೋಗಿಸುವುದು, ಮತ್ತು ಬಾಹ್ಯಾಕಾಶದಲ್ಲಿ ಸುದೀರ್ಘ ಸಮಯ ಕಳೆಯುವುದು ಈ ಯೋಜನೆಯಿಂದ ಕಲಿತ ಮುಖ್ಯ ಪಾಠವಾಗಿದೆ. ಸುಧಾರಿತ ಯೋಜನಾ ಹೊಂದಾಣಿಕೆಗಳಿಂದ, ಭವಿಷ್ಯದ ಚಂದ್ರ ಮತ್ತು ಮಂಗಳ ಗ್ರಹ ಅನ್ವೇಷಣಾ ಯೋಜನೆಗಳಿಗೆ ಪ್ರಯೋಜನವಾಗಲಿದೆ. ಆ ಮೂಲಕ ಗಗನಯಾತ್ರಿಗಳು ಅನಿರೀಕ್ಷಿತ ತಾಂತ್ರಿಕ ಅಥವಾ ಪಾರಿಸರಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ.
9. ಬಾಹ್ಯಾಕಾಶ ಅನ್ವೇಷಣೆಯ ಮೇಲೆ ಸಾರ್ವಜನಿಕ ಮತ್ತು ನೀತಿಗಳ ಪರಿಣಾಮ
ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ವಾಸ ವಿಸ್ತರಿಸಲ್ಪಟ್ಟು ಸಾರ್ವಜನಿಕರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಕುರಿತು ಆಸಕ್ತಿ ಮತ್ತು ಬಾಹ್ಯಾಕಾಶ ಯೋಜನೆಗಳು ಎದುರಿಸುವ ಸವಾಲುಗಳ ಕುರಿತು ಅರಿವು ಮೂಡಿದೆ. ಚಂದ್ರನ ಮೇಲೆ ಶಾಶ್ವತ ನೆಲೆಯನ್ನು ನಿರ್ಮಿಸಲು ಮತ್ತು ಮಾನವ ಸಹಿತ ಮಂಗಳ ಗ್ರಹ ಯಾನದಂತಹ ಯೋಜನೆಗಳನ್ನು ಕೈಗೊಳ್ಳಲು ಸಂಶೋಧನೆ, ತಂತ್ರಜ್ಞಾನ, ಮತ್ತು ಬಾಹ್ಯಾಕಾಶ ಮೂಲಭೂತ ವ್ಯವಸ್ಥೆಗಳ ಮೇಲೆ ನಿರಂತರವಾಗಿ ಹೂಡಿಕೆ ನಡೆಸುವ ಅವಶ್ಯಕತೆಯನ್ನು ಸುನಿತಾ ವಿಲಿಯಮ್ಸ್ ಅವರ ಯೋಜನೆ ಪ್ರತಿಪಾದಿಸಿದೆ.
ಹೊಂದಾಣಿಕೆ ಮತ್ತು ನಾವೀನ್ಯತೆಗಳಿಗೆ ಸೂಕ್ತ ಉದಾಹರಣೆ
ಐಎಸ್ಎಸ್ ನಲ್ಲಿ ಸುನಿತಾ ವಿಲಿಯಮ್ಸ್ ಸುದೀರ್ಘ ವಾಸ್ತವ್ಯ ನಡೆಸಿರುವುದು ಅವರ ಸ್ಥಿರತೆ, ಹೊಂದಿಕೊಳ್ಳುವಿಕೆ ಮತ್ತು ವೈಜ್ಞಾನಿಕ ಪ್ರಗತಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಮೂಲಕ ಕಲಿತ ಪಾಠಗಳು ಗಗನಯಾತ್ರಿಗಳ ಸುರಕ್ಷತೆಯನ್ನು ಹೆಚ್ಚಿಸಿ, ಯೋಜನಾ ರೂಪಿಸುವಿಕೆಯನ್ನು ಉತ್ತಮಗೊಳಿಸಿ, ಬಾಹ್ಯಾಕಾಶ ನೌಕೆಗಳ ನಂಬಿಕಾರ್ಹತೆಯನ್ನು ಹೆಚ್ಚಿಸಲು ನೆರವಾಗಲಿವೆ.
ಮಾನವ ಜನಾಂಗ ಈಗ ಡೀಪ್ ಸ್ಪೇಸ್ (ಆಳ ಬಾಹ್ಯಾಕಾಶ) ಅನ್ವೇಷಣೆಗಳಿಗೆ ಸಜ್ಜಾಗುತ್ತಿದ್ದು, ಸುನಿತಾ ವಿಲಿಯಮ್ಸ್ ಅವರ ಯೋಜನೆ ಭವಿಷ್ಯದ ಗಗನಯಾತ್ರಿಗಳು, ಇಂಜಿನಿಯರ್‌ಗಳು, ಮತ್ತು ಬಾಹ್ಯಾಕಾಶ ಸಂಸ್ಥೆಗಳಿಗೆ ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳ ಸವಾಲುಗಳನ್ನು ನಿಭಾಯಿಸಲು ನೆರವಾಗಲಿದೆ. ಈ ಅನುಭವ ಬಾಹ್ಯಾಕಾಶ ಯಾನದ ಗಡಿಗಳನ್ನು ವಿಸ್ತರಿಸಲು ಬೇಕಾದ ಬದ್ಧತೆ ಮತ್ತು ನಾವೀನ್ಯತೆಗಳನ್ನು ಒದಗಿಸಲಿದೆ. ಆ ಮೂಲಕ ಭವಿಷ್ಯದಲ್ಲಿ ಚಂದ್ರ, ಮಂಗಳ ಮತ್ತು ಅದರಾಚೆಗಿನ ಬಾಹ್ಯಾಕಾಶ ಅನ್ವೇಷಣೆಗಳನ್ನು ನಡೆಸಲು ಕೊಡುಗೆ ನೀಡಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.